ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಮತ ಹೊಗೆಯಾಡುತ್ತಿದೆ. ಕೋವಿಡ್ ನಿರ್ವಹಣೆಯಲ್ಲಿ ಆದಿತ್ಯನಾಥ್ ಸಂಪೂರ್ಣ ವಿಫಲರಾಗಿದ್ದಾರೆ ಎಂಬ ಆರೋಪಗಳಿಂದ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ನಾಯಕತ್ವ ಬದಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ವದಂತಿಗಳ ಹಿನ್ನೆಲೆಯಲ್ಲಿಯೇ ಬಿ.ಎಲ್ ಸಂತೋಷ್ ಮತ್ತು ಉತ್ತರಪ್ರದೇಶ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಅವರು ರಾಜ್ಯಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೆ ಸಿಎಂ ಯೋಗಿ ಆದಿತ್ಯನಾಥ್ ದೆಹಲಿಗೆ ಭೇಟಿ ನೀಡಿ ಪಿಎಂ ಮೋದಿ, ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆ ಸಭೆಯ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ..
ಇದೆಲ್ಲದರ ನಡುವೆ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಯೋಗಿ ಆದಿತ್ಯನಾಥ್‌ರವರನ್ನು ಹೊಗಳಿ ಟ್ವೀಟ್ ಮಾಡಿದ್ದಾರೆ. “ಉತ್ತರ ಪ್ರದೇಶದ ಹಿರಿಯ ನಾಗರಿಕರ ಕುರಿತು ಕಾಳಜಿ ವಹಿಸುವ ಹೆಲ್ಫ್‌ಲೈನ್ ಅನ್ನು ಸಿಎಂ ಯೋಗಿ ಆದಿತ್ಯನಾಥ್ ದೇಶದಲ್ಲಿ ಮೊದಲ ಬಾರಿಗೆ ಆರಂಭಿಸಿದ್ದಾರೆ” ಎಂದು ಎಬಿಪಿ ಲೈವ್ ಪ್ರಕಟಿಸಿದ ಲೇಖನವನ್ನು ಟ್ವೀಟ್ ಮಾಡಿರುವ ಮೋದಿ, ತುಂಬಾ ಒಳ್ಳೆಯ ಉಪಕ್ರಮ! ಎಂದು ಮೋದಿ ಬರೆದಿದ್ದಾರೆ.
Very good initiative! @myogiadityanath https://t.co/Wl9thDO9Wk
— Narendra Modi (@narendramodi) June 13, 2021
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಗಂಗಾ ನದಿಯಲ್ಲಿ ಹೆಣಗಳು ತೇಲಿ ಬಂದಿದ್ದು, ನದಿ ತೀರಗಳು ಸಾಮೂಹಿಕ ಚಿತಾಗಾರಗಳಾಗಿ ಬದಲಾಗಿದ್ದು ದೇಶ-ವಿದೇಶದ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಗೆ ಆಸ್ಪದ ನೀಡಿದ್ದವು. ಅದೇ ಸಮಯದಲ್ಲಿ ಯುಪಿ ಬಿಜೆಪಿ ಪಕ್ಷದ ಶಾಸಕರೆ ಯೋಗಿ ಆದಿತ್ಯನಾಥ್ ವಿರುದ್ಧ ದನಿಯೆತ್ತಿದ್ದರು. ಕೋವಿಡ್ ಪರಿಸ್ಥಿತಿಯನ್ನು ಪ್ರಶ್ನಿಸಿದರೆ ನನಗೆ ದೇಶದ್ರೋಹಿಯ ಪಟ್ಟ ಕಟ್ಟಬಹುದು ಎಂದು ಬಿಜೆಪಿ ಶಾಸಕ ಆತಂಕ ವ್ಯಕ್ತಪಡಿಸಿದ್ದರು.
ಅದೇ ಸಮಯದಲ್ಲಿ ಯುಪಿ ಸಚಿವ ಸಂಪುಟ ವಿಸ್ತರಣೆಯಲ್ಲಿಯೂ ಭಿನ್ನಾಭಿಪ್ರಾಯ ತಲೆದೋರಿತ್ತು. ಮೋದಿಯವರ ಆಪ್ತ ಎನ್ನಲಾದ ಮಾಜಿ ಅಧಿಕಾರಿ ಎ.ಕೆ. ಶರ್ಮಾ ಅವರಿಗೆ ರಾಜ್ಯ ಸರ್ಕಾರದಲ್ಲಿ ಪ್ರಮುಖ ಪಾತ್ರ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಇದು 2022ರ ವಿಧಾನಸಭಾ ಚುನಾವಣೆಯ ಮೇಲೆ ನಕರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕಗಳು ಬಿಜೆಪಿಯನ್ನು ಕಾಡಿದ್ದವು.
ಈಗ ಸ್ವತಃ ನರೇಂದ್ರ ಮೋದಿಯವರೆ ಯೋಗಿ ಹೊಗಳಿ ಟ್ವೀಟ್ ಮಾಡುವ ಮೂಲಕ ಭಿನ್ನಮತ ಶಮನಕ್ಕೆ ಮುಂದಾಗಿದ್ದಾರೆ. ಇದು ಎಷ್ಟರಮಟ್ಟಿಗೆ ಪ್ರಯೋಜನವಾಗಲಿದೆ ಎಂಬುದು ಸದ್ಯದಲ್ಲಿಯೇ ತಿಳಿಯಲಿದೆ.
ಇದನ್ನೂ ಓದಿ: ಉತ್ತರಪ್ರದೇಶ ಬಿಜೆಪಿಯಲ್ಲಿ ಭಿನ್ನಮತ: ಯೋಗಿ ಬದಲಾವಣೆಯೇ? ಸಂಪುಟ ವಿಸ್ತರಣೆಯೇ?


