2007ರಲ್ಲಿ ದಾಖಲಾದ ಪ್ರಕರಣವೊಂದರಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಂಸದ ಅಫ್ಜಲ್ ಅನ್ಸಾರಿ ಮತ್ತು ಅವರ ಸಹೋದರ ಮುಖ್ತಾರ್ ಅನ್ಸಾರಿ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಉತ್ತರ ಪ್ರದೇಶದ ‘ಗ್ಯಾಂಗ್‌ಸ್ಟರ್ ಮತ್ತು ಸಾಮಾಜಿಕ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ’ಯಡಿ ಘಾಜಿಪುರ ಜಿಲ್ಲೆಯ ಮುಹಮ್ಮದಾಬಾದ್ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗ್ಯಾಂಗ್‌ಸ್ಟರ್-ರಾಜಕಾರಣಿಯಾಗಿರುವ ಮುಖ್ತಾರ್ ಅನ್ಸಾರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಮತ್ತು ಅಫ್ಜಲ್ ಅನ್ಸಾರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ನ್ಯಾಯಾಲಯವು ಮುಖ್ತಾರ್ ಅನ್ಸಾರಿಗೆ 5 ಲಕ್ಷ ರೂಪಾಯಿ ಮತ್ತು ಅಫ್ಜಲ್ ಅನ್ಸಾರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಈ ತೀರ್ಪು, ಅಫ್ಜಲ್ ಅನ್ಸಾರಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗಬಹುದು. ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 8(3)ರ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾದ ಶಾಸಕರನ್ನು ಶಿಕ್ಷೆಯ ದಿನಾಂಕದಿಂದ ಆರು ವರ್ಷಗಳ ಅವಧಿಯವರೆಗೆ ಅನರ್ಹಗೊಳಿಸಲಾಗುತ್ತದೆ.
ಬಹುಜನ ಸಮಾಜ ಪಕ್ಷದ ನಾಯಕನಿಗೆ ಶಿಕ್ಷೆಯಾದ ಮೊದಲ ಪ್ರಕರಣ ಇದಾಗಿದೆ.
ಮೌ ಪಟ್ಟಣದಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾದ ಮುಖ್ತಾರ್ ಅನ್ಸಾರಿ 2005ರಿಂದ ಜೈಲಿನಲ್ಲಿದ್ದರು. ಜೈಲರ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಮತ್ತು ಅವನತ್ತ ಬಂದೂಕನ್ನು ತೋರಿಸಿದ್ದಕ್ಕಾಗಿ ಅನ್ಸಾರಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ವಿಧಿಸಲಾಯಿತು.
ಇಬ್ಬರು ಸಹೋದರರ ಪರ ವಕೀಲ ಲಿಯಾಕತ್ ಅಲಿ ಅವರು ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಮುಖ್ತಾರ್ ಅನ್ಸಾರಿ ಸದ್ಯ ಬಂದಾ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ನ್ಯಾಯಾಲಯವು ಈ ಆದೇಶವನ್ನು ಪ್ರಕಟಿಸಿದ ನಂತರ ಶನಿವಾರ ಅಫ್ಜಲ್ ಅನ್ಸಾರಿಯನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಂಡರು.


