ಝೊಮಾಟೊ ಆಹಾರ ಡೆಲಿವರಿ ಮಾಡುವ ಯುವಕನ ಮೇಲೆ ಜಾತಿ ನಿಂದನೆ ನಡೆಸಿ, ಮುಖದ ಮೇಲೆ ಉಗಿದು ಹಲ್ಲೆ ನಡೆಸಿರುವ ಅಮಾನುಷ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ವರದಿಯಾಗಿದೆ.
ಆಹಾರ ಡೆಲಿವರಿ ಮಾಡುವ ಯುವಕನು ಶನಿವಾರ ಸಂಜೆ ಮನೆ ತಲುಪಿದಾಗ ಆತನ ಹೆಸರು ಮತ್ತು ಜಾತಿ ಕೇಳಲಾಗಿದೆ. ಹೆಸರು ಕೇಳಿ ಅಸ್ಪೃಶ್ಯತೆ ಆಚರಿಸಿರುವ ಗ್ರಾಹಕರು ಆಹಾರ ತೆಗೆದುಕೊಳ್ಳಲು ನಿರಾಕರಿಸಿ ಜಾತಿ ನಿಂದನೆ ಮತ್ತು ಹಲ್ಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಸಂತ್ರಸ್ತ ವಿನೀತ್ ಕುಮಾರ್ ನೀಡಿದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
In Lucknow, a SC Zomato delivery boy was spit on by a caste Hindu customer when he knew the delivery boy's caste.
The customer and his relatives beat up the victim posing as a Dalit and refused to take food from his hands. Sick!pic.twitter.com/B4nX74MkZG
— Mission Ambedkar (@MissionAmbedkar) June 20, 2022
“ನಾನು ಮನೆ ತಲುಪಿದಾಗ, ಗ್ರಾಹಕರು ಹೊರಬಂದು ನನ್ನ ಹೆಸರು ಮತ್ತು ಜಾತಿ ಕೇಳಿದರು. ನಾನು ದಲಿತ ಎಂದು ತಿಳಿದೊಡನೆಯೆ ಆಹಾರ ಸ್ವೀಕರಿಸಲು ನಿರಾಕರಿಸಿದರು. ಹಾಗಾದರೆ ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಮನವಿ ಮಾಡಿದೆ. ಆಗ ಕುಪಿತಗೊಂಡ ಅವರು ನನ್ನ ಮುಖದ ಮೇಲೆ ಉಗಿದು, ಜಾತಿನಿಂದನೆ ನಡೆಸಿ ಜೋರಾಗಿ ಗಲಾಟೆ ಮಾಡಿದರು. ಅವರ ಮನೆಯವರೆಲ್ಲ ಹೊರಬಂದು ನನ್ನ ಮೇಲೆ ಹಲ್ಲೆ ನಡೆಸಿದರು. ನನ್ನ ಬೈಕ್ ಅನ್ನು ಸಹ ಕಿತ್ತುಕೊಂಡರು. ನಾನು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಬೈಕ್ ಅನ್ನು ಮರಳಿ ಕೊಡಿಸಿದರು” ಎಂದು ವಿನೀತ್ ಕುಮಾರ್ ಹೇಳಿದ್ದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ನಾನು ಕಳೆದ ನಾಲ್ಕು ವರ್ಷದಿಂದ ಫುಡ್ ಡೆಲಿವರಿ ಮಾಡುವ ಕೆಲಸ ಮಾಡುತ್ತಿದ್ದೇನೆ. ಎಂದೂ ಈ ರೀತಿಯ ಸನ್ನಿವೇಶವನ್ನು ಎದುರಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಕರಣದ ಕುರಿತು ಎಸಿಪಿ ಖಾಸಿಂ ಅಬಿದಿ ಮಾತನಾಡಿ, “ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ಎಫ್‌ಐಆರ್ ಮಾಡಿದ್ದೇವೆ. ಸಂತ್ರಸ್ತ ಮತ್ತು ಆರೋಪಿಗಳ ಹೇಳಿಕೆಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಆ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು” ಎಂದಿದ್ದಾರೆ.
ಈ ಅಮಾನವೀಯ ಘಟನೆಯನ್ನು ಮಿಶನ್ ಅಂಬೇಡ್ಕರ್ ಸಂಘಟನೆ ಮತ್ತು ಹೋರಾಟಗಾರ ಸುರಜ್ ಕುಮಾರ್ ಬುದ್ಧ ಸೇರಿದಂತೆ ಹಲವರು ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿಯವರಿಂದ ಮಾಧ್ಯಮಗಳು ಕಲಿಯುವುದು ಬಹಳಷ್ಟಿದೆ: ಬೆಂಬಲಕ್ಕೆ ನಿಂತ ನಟ ಕಿಶೋರ್


