ಕಳೆದ ನಾಲ್ಕು ದಿನಗಳ ಹಿಂದೆ ಪೊಲೀಸ್ ಠಾಣೆಯೊಂದರಲ್ಲಿ ಇಬ್ಬರು ಪೊಲೀಸರು 9 ಮಂದಿಯನ್ನು ಅಮಾನವೀಯವಾಗಿ ಥಳಿಸುತ್ತಿರುವ ವಿಡಿಯೋವನ್ನು ಉತ್ತರ ಪ್ರದೇಶದ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ ತಮ್ಮ ಟ್ವಿಟ್ಟರ್‌ನಲ್ಲಿ “ಗಲಭೆಕೋರರಿಗೆ ರಿಟರ್ನ್ ಗಿಫ್ಟ್” ಎಂದು ಹಂಚಿಕೊಂಡಿದ್ದರು. ಆದರೆ ಇದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ವರದಿಗಳ ಪ್ರಕಾರ, ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಇಬ್ಬರು ಮಾಜಿ ಬಿಜೆಪಿ ವಕ್ತಾರರ ವಿರುದ್ಧ ಶುಕ್ರವಾರದ ಪ್ರಾರ್ಥನೆಯ ನಂತರ ಪ್ರತಿಭಟನೆಗಳು ಮತ್ತು ಘರ್ಷಣೆಗಳು ಭುಗಿಲೆದ್ದಿರುವ ಯುಪಿಯ ಸಹರಾನ್‌ಪುರದ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿತ್ತು.
ಘಟನೆಯ ವಿಡಿಯೋ ವೈರಲ್ ಆಗಿ ನಾಲ್ಕು ದಿನಗಳಾದರೂ ಕೂಡ , ಘಟನೆ ನಡೆದಿರುವ ಸಹರಾನ್‌ಪುರದ ಪೊಲೀಸರು ತಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಕುರಿತು ಯಾರೂ ದೂರು ನೀಡಿಲ್ಲ. ಹೀಗಾಗಿ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ, ಇಬ್ಬರು ಪೊಲೀಸರು 9 ಜನರನ್ನು ಲಾಠಿಯಿಂದ ಅಮಾನವೀಯವಾಗಿ, ಮನಬಂದಂತೆ ಥಳಿಸುತ್ತಿದ್ದಾರೆ. ಒಂಬತ್ತು ಮಂದಿ ಕೈ ಮುಗಿದ್ದು ಬೇಡಿಕೊಂಡರು ಬಿಡದೆ ಲಾಠಿಯಿಂದ ಥಳಿಸಲಾಗುತ್ತಿದೆ. ಪೊಲೀಸರ ವರ್ತನೆಗೆ ಜನರು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ಯುಪಿ: 9 ಜನರ ಮೇಲೆ ಪೊಲೀಸರ ಅಮಾನವೀಯ ಹಲ್ಲೆ, ರಿಟರ್ನ್ ಗಿಫ್ಟ್ ಎಂದ ಬಿಜೆಪಿ ಶಾಸಕ
ವಿಡಿಯೋದಲ್ಲಿರುವ ಯುವಕರಲ್ಲಿ ಒಬ್ಬರಾದ ಮೊಹಮ್ಮದ್ ಅಲಿ ಸಹರಾನ್‌ಪುರದ ಪಿರ್ ಗಲಿಯಲ್ಲಿ ವಾಸಿಸುತ್ತಿದ್ದಾರೆ. ಕೈ ಮುರಿಯುತ್ತದೆ ಹೊಡೆಯಬೇಡಿ ಎಂದು ಬೇಡಿಕೊಳ್ಳುತ್ತಿರುವ ಮಗನ ವಿಡಿಯೋ ನೋಡಿ ಆತನ ತಾಯಿ ಅಸ್ಮಾ ಕಣ್ಣೀರಿಟ್ಟಿದ್ದಾರೆ. ಇನ್ನು ವಿಡಿಯೋದಲ್ಲಿ ಹಲ್ಲೆಗೊಳಗಾಗುತ್ತಿರುವ ಮೊಹಮ್ಮದ್ ಸೈಫ, ಮೊಹಮ್ಮದ್ ಸಫಾಜ್, ರಾಹತ್ ಅಲಿ ಮತ್ತು ಇಮ್ರಾನ್ ಕೂಡ ಸಹರಾನ್‌ಪುರದವರು ಎಂದು ಕುಟುಂಬದವರು ದೃಢಪಡಿಸಿದ್ದಾರೆ.
ಈ ವ್ಯಕ್ತಿಗಳನ್ನು ಥಳಿಸಿ ನಾಲ್ಕು ದಿನಗಳು ಕಳೆದರೂ ಸಹಾರನ್‌ಪುರದಲ್ಲಿ ಇನ್ನೂ ಯಾವುದೇ ತನಿಖೆ ನಡೆದಿಲ್ಲ, ಈ ವಿಡಿಯೋ ಮತ್ತು ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ತಮಗೆ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳು ಪೊಲೀಸರನ್ನು ಎದುರಿಸಲು, ಲಿಖಿತ ದೂರು ದಾಖಲಿಸಲು ತುಂಬಾ ಹೆದರುತ್ತಿದ್ದಾರೆ. ಉತ್ತರ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಲಾಕಪ್ ಡೆತ್‌ಗಳಲ್ಲಿ ಮೊದಲ ಸ್ಥಾನದಲ್ಲಿದೆ.
बलवाइयों को “रिटर्न गिफ़्ट” !! pic.twitter.com/6qQo74SNUj
— Dr. Shalabh Mani Tripathi (@shalabhmani) June 11, 2022
ಇದನ್ನೂ ಓದಿ: ಮಧ್ಯಪ್ರದೇಶ: ಪಿಜ್ಜಾ ಡೆಲಿವರಿ ಯುವತಿಯ ಮೇಲೆ ನಾಲ್ವರು ಯುವತಿಯರಿಂದ ಅಮಾನವೀಯ ಹಲ್ಲೆ


