ಉತ್ತರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಒಮ್ಮೆ ಕೋವ್ಯಾಕ್ಸಿನ್, ಒಮ್ಮೆ ಕೋವಿಶೀಲ್ಡ್ ಮಿಶ್ರ ಪ್ರಮಾಣದ ಲಸಿಕೆಗಳನ್ನು ನೀಡಲಾಗಿದೆ. ನೇಪಾಳ ಗಡಿಯ ಸಮೀಪವಿರುವ ಸಿದ್ಧಾರ್ಥನಗರ ಜಿಲ್ಲೆಯ ಸುಮಾರು 20 ಗ್ರಾಮಸ್ಥರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡನ್ನೂ ನೀಡಲಾಗಿದೆ.
ಲಸಿಕೆ ಮಿಶ್ರಣದಿಂದ ಯಾರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿಲ್ಲ ಮತ್ತು ಈ ಘಟನೆಗೆ ಕಾರಣವಾದವರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ರಾಜಧಾನಿ ಲಕ್ನೋದಿಂದ 270 ಕಿ.ಮೀ ದೂರದಲ್ಲಿರುವ ಬಹುಮಟ್ಟಿಗೆ ಗ್ರಾಮೀಣ ಜಿಲ್ಲೆಯಾದ ಸಿದ್ಧಾರ್ಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಆಘಾತ ಸಂಭವಿಸಿದೆ. ಗ್ರಾಮಸ್ಥರಿಗೆ ಏಪ್ರಿಲ್ ಮೊದಲ ವಾರದಲ್ಲಿ ಕೋವಿಶೀಲ್ಡ್ ಚುಚ್ಚುಮದ್ದು ನೀಡಲಾಗಿತ್ತು. ನಂತರ ಮೇ 14 ರಂದು ಕೋವ್ಯಾಕ್ಸಿನ್ ಅವರ ಎರಡನೇ ಡೋಸ್ ಆಗಿ ನೀಡಲಾಗಿದೆ.
ಇದನ್ನೂ ಓದಿ: ಮೊದಲ ಸಲ ಕೋವ್ಯಾಕ್ಸಿನ್, ಎರಡನೆ ಸಲ ಕೋವಿಶೀಲ್ಡ್ ಲಸಿಕೆ ಪಡೆದರೆ ಅಡ್ಡ ಪರಿಣಾಮ ಆಗುತ್ತವೆಯೇ?
“ಇದು ಖಂಡಿತವಾಗಿಯೂ ಅಜಾಗರೂಕತೆಯಾಗಿದೆ. ಲಸಿಕೆಗಳನ್ನು ಹೀಗೆ ನೀಡಲು ಸರ್ಕಾರದಿಂದ ಯಾವುದೇ ಸೂಚನೆಯಿರಲಿಲ್ಲ. ಆದ್ದರಿಂದ ಇದು ಒಂದು ಅಜಾಗರೂಕತೆಯಾಗಿದೆ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ. ತಪ್ಪಿತಸ್ಥರಿಂದ ನಾನು ವಿವರಣೆಯನ್ನು ಕೇಳಿದ್ದೇನೆ. ಕ್ರಮ ಕೈಗೊಳ್ಳುತ್ತೇವೆ ”ಎಂದು ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಹೇಳಿದ್ದಾರೆ.
ಇಂತಹ ಅವಘಡ ಸಂಭವಿಸಿದ್ದರೂ, “ನಮ್ಮ ತಂಡಗಳು ಲಸಿಕೆಯನ್ನು ಪಡೆದ ಎಲ್ಲರೊಂದಿಗೆ ಮಾತನಾಡಿದ್ದಾರೆ. ಎರಡನೆಯ ಡೋಸ್ ತಪ್ಪಾಗಿ ತೆಗೆದುಕೊಂಡಿರುವ ಎಲ್ಲರನ್ನು ಭೇಟಿ ಮಾಡಿದ್ದಾರೆ. ಅವರೆಲ್ಲರೂ ಆರೋಗ್ಯವಂತರಾಗಿದ್ದು, ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿಲ್ಲ” ಎಂದು ಚೌಧರಿ ಹೇಳಿದ್ದಾರೆ.
ಆದರೆ, ಇಲಾಖೆಯಿಂದ ಇಲ್ಲಿಯವರೆಗೂ ಯಾರು ಬಂದು ಭೇಟಿಯಾಘಿ ಪರೀಕ್ಷಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. “ನನಗೆ ಕೋವ್ಯಾಕ್ಸಿನ್ ನೀಡಲಾಗಿದೆ ಎಂದು ಗೊತ್ತಿದೆ. ಲಸಿಕೆ ನೀಡುವಾಗ ಏನೋ ತಪ್ಪು ಸಂಭವಿಸಿದೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ಯಾರೂ ನಮ್ಮನ್ನು ಪರೀಕ್ಷಿಸಲು ಬಂದಿಲ್ಲ.” ಎಂದು ಗ್ರಾಮಸ್ಥ ವೃದ್ಧ ರಾಮ್ ಸೂರತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇತ್ತಿಚೆಗೆ ಲಸಿಕೆ ನೀಡಲು ಗ್ರಾಮಕ್ಕೆ ಬಂದ ಆರೋಗ್ಯ ಕಾರ್ಯಕರ್ತರ ಗುಂಪನ್ನು ನೋಡಿ ಹೆದರಿದ ಜನ ನದಿಗೆ ಹಾರಿರುವ ಘಟನೆ ಉತ್ತರ ಪ್ರದೇಶದ ಬಾರಬಂಕಿಯ ಸಿಸೌರ್ಹಾ ಗ್ರಾಮದಲ್ಲಿ ನಡೆದಿದೆ. ಲಸಿಕೆಯನ್ನು ವಿಷಕಾರಿ ಚುಚ್ಚುಮದ್ದು ಎಂದು ತಿಳಿದ ಗ್ರಾಮಸ್ಥರುಸರಯೂ ನದಿಗೆ ಹಾರಿದ್ದರು. ಈಗಾಗಲೇ ಲಸಿಕೆ ಬಗ್ಗೆ ಅನೇಕ ಅಪನಂಬಿಕೆಗಳಿವೆ. ಇಂತಹ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕಾದ ಆರೋಗ್ಯ ಕಾರ್ಯಕರ್ತರು ಅವಘಡಗಳನ್ನು ಮಾಡಿದರೇ ಜನರಲ್ಲಿ ಲಸಿಕೆ ಬಗ್ಗೆ ಮತ್ತಷ್ಟು ಭಯ ಮೂಡುತ್ತದೆ.
ಇದನ್ನೂ ಓದಿ: ’ಮಾಸ್ಟರ್‌ಸ್ಟ್ರೋಕ್’: ಪ್ರಧಾನಿ ಮೋದಿ ಬಗ್ಗೆ ’ನಿರುದ್ಯೋಗಿ ಭಕ್ತ’ನ 56 ಪುಟಗಳ ಖಾಲಿ ಪುಸ್ತಕ!


