Homeಮುಖಪುಟದಿನಕರ ದೇಸಾಯಿಯವರ ನಂತರ ನಿಜ ನಾಯಕತ್ವದ ಕನವರಿಕೆಯಲ್ಲಿ ದಿಕ್ಕೆಟ್ಟ ಉತ್ತರ ಕನ್ನಡ

ದಿನಕರ ದೇಸಾಯಿಯವರ ನಂತರ ನಿಜ ನಾಯಕತ್ವದ ಕನವರಿಕೆಯಲ್ಲಿ ದಿಕ್ಕೆಟ್ಟ ಉತ್ತರ ಕನ್ನಡ

ದಿನಕರ ದೇಸಾಯರಿಗೆ 70ರ ದಶಕದಲ್ಲಿ ಬಿಡದೇ ಕಾಡಿದ ಅನಾರೋಗ್ಯ ಸಾರ್ವಜನಿಕ ಸೇವೆಯಲ್ಲಿ ಗಟ್ಟಿ ಹೆಜ್ಜೆ ಮೂಡಿಸಲು ಅಡ್ಡಿಪಡಿಸಿತು. ತಮ್ಮ 72ನೇ ವಯಸ್ಸಿಗೇ ಎದ್ದು ಹೋಗಿಬಿಟ್ಟಿದ್ದು ಜಿಲ್ಲೆಯಲ್ಲಿ ಒಂಥರಾ ಶೂನ್ಯವನ್ನೇ ಸೃಷ್ಟಿಸಿಬಿಟ್ಟಿತು.

- Advertisement -
- Advertisement -

“ಸರ್ವರಿಗೆ ಸಮಪಾಲು: ಸರ್ವರಿಗೆ ಸಮಬಾಳು” ಎಂಬ ಬೇಡಿಕೆ ಮುಂದಿಟ್ಟು ಸುಮಾರು ಮೂರೂವರೆ ದಶಕಗಳಷ್ಟು ದೀರ್ಘಕಾಲ ಸಮಾಜವಾದಿ ಆಂದೋಲನ ನಡೆದ ಉತ್ತರ ಕನ್ನಡ ಇವತ್ತು ವರ್ಣವ್ಯವಸ್ಥೆಯ ರಹಸ್ಯ ಕಾರ್ಯಸೂಚಿಯ ಸಂಘಸರದಾರರ ಬಿಗಿಹಿಡಿತಕ್ಕೆ ಸಿಲುಕಿ ಚಡಪಡಿಸುತ್ತಿದೆ! ಸ್ವಾತಂತ್ರ್ಯೋತ್ತರದ ಆರಂಭದಲ್ಲೇ ನಾಯಕತ್ವದ ಕೊರತೆಯಿಂದ ಅನಾಥವಾದ ಜಿಲ್ಲೆಯಲ್ಲಿ ಇವತ್ತಿಗೂ ಪ್ರಭಾವಿ-ಪ್ರಬುದ್ಧ-ಜನಾದರಣೀಯ ನೇತಾರನೊಬ್ಬ ಅವತಾರವೆತ್ತಿಲ್ಲ! ಕವಿ, ರೈತ, ಕೂಲಿಕಾರ ನಾಯಕ ದಿನಕರ ದೇಸಾಯಿಗೆ ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸುವ “ಗುಣಧರ್ಮ ಇತ್ತಾದರೂ ಅವರಿಗೆ ಸಿಕ್ಕಿದ್ದು ಅತ್ಯಲ್ಪ ಅವಧಿಯ ಲೋಕಸಭಾ ಸದಸ್ಯತ್ವವಾಗಿತ್ತು. ದೇಸಾಯರು ಇಡೀ ಜಿಲ್ಲೆಯನ್ನು ಪ್ರಭಾವಿಸುವ ಹೊತ್ತಿಗೆ ಇಳಿವಯಸ್ಸಿನ ಕಾಯಿಲೆಗಳಿಂದ ನೇಪಥ್ಯಕ್ಕೆ ಸರಿಯಬೇಕಾಯಿತು.

ಸ್ವಾತಂತ್ರ್ಯೊತ್ತರ ದಿನಗಳಲ್ಲಿ ಶ್ರೀನಿವಾಸ ಮಲ್ಯ, ಟಿ.ಎಂ.ಎ. ಪೈ, ರಂಗನಾಥ ಶೆಣೈಗಳಂಥ ಜನಮನ್ನಣೆ ದೂರದೃಷ್ಟಿ ಹೊಂದಿದವರ ಮುಂದಾಳತ್ವ ದಕ್ಷಿಣ ಕನ್ನಡಕ್ಕೆ ಸಿಕ್ಕಿತ್ತು. ಆದರೆ ಅಂಥ ಭಾಗ್ಯ ಉತ್ತರ ಕನ್ನಡಕ್ಕೆ ಇರಲಿಲ್ಲ. ದಕ್ಷಿಣ ಕನ್ನಡದ ಜೋಕಿಂ ಆಳ್ವರನ್ನು ಕಾಂಗ್ರೆಸ್ ಉತ್ತರಕನ್ನಡದ ಮೇಲೆ ಬಲವಂತವಾಗಿ ಹೇರಿತು. ಉತ್ತರ ಕನ್ನಡದ ಪಾಲಿಗೆ ನಿಷ್ಪ್ರಯೋಜಕ ಎನಿಸಿದ್ದ ಆಳ್ವ ಮೂರುಬಾರಿ ಇಲ್ಲಿಂದ ಎಂಪಿಯಾದರು. ಆಳ್ವರನ್ನು ಜಿಲ್ಲೆಯ ಜನ ಅನಿವಾರ್ಯವಾಗಿ ಸಹಿಸಿಕೊಂಡಿದ್ದೇ ಹೊರತು ನಾಯಕನಾಗಿ ಒಪ್ಪಿಕೊಳ್ಳಲೇ ಇಲ್ಲ. ವಲಸೆಗಾರ ಆಳ್ವ ಉತ್ತರ ಕನ್ನಡದ ಎಂಪಿಯಾಗಿ ಸುಖ-ಸೌಭಾಗ್ಯ ಅನುಭವಿಸುವುದಕ್ಕೆ ಜಿಲ್ಲೆಯ ಜನರಿಗೆ ಕಾಂಗ್ರೆಸ್ ಜತೆಗಿದ್ದ ಭಾವನಾತ್ಮಕ ನಂಟೇ ಕಾರಣವಾಗಿತ್ತು.

“ಗಾಂಧಿ ಜಿಲ್ಲೆ ಎಂಬ ಪ್ರತೀತಿ ಕರ್ನಾಟಕದಲ್ಲಿ ಇದ್ದದ್ದು ಉತ್ತರ ಕನ್ನಡಕ್ಕಷ್ಟೇ. “ಕರ್ನಾಟಕದ ಗಾಂಧಿ ಎಂಬ ಪ್ರಸಿದ್ಧಿಯ ಟಿ.ಎಸ್ ನಾಯಕ ಇದೇ ಜಿಲ್ಲೆಯವರು. ಅಸಹಕಾರ ಆಂದೋಲನ, ಉಪ್ಪಿನ ಸತ್ಯಾಗ್ರಹ, ಕರನಿರಾಕರಣೆ ಹೋರಾಟ, ಚಲೇಜಾವ್ ಚಳವಳಿಯಂಥ ಪ್ರಮುಖ ರಾಷ್ಟ್ರೀಯ ಆಂದೋಲನಗಳಲ್ಲಿ ದೇಶಕ್ಕೆ ಮಾದರಿಯೆಂಬಂತೆ ಜಿಲ್ಲೆ ಹೋರಾಡಿತ್ತು! ಹೀಗಾಗಿ ಮಹಾತ್ಮಗಾಂಧಿಯೆಂದರೆ ಕಾಂಗ್ರೆಸ್, ಕಾಂಗ್ರೆಸ್ ಅಂದರೆ ಗಾಂಧೀಜಿ ಎಂಬಂಥ ಅವಿನಾಭಾವ ಹೊಂದಿದ್ದ ಉತ್ತರ ಕನ್ನಡಿಗರ ಪರಮೋಚ್ಚ ನಿಷ್ಠೆ ಕಾಂಗ್ರೆಸ್ ಕಡೆಗಿತ್ತು. ಈ ಭಾವುಕತೆಯನ್ನು ಕಾಂಗ್ರೆಸ್‌ನ ಹಿರಿಯರು ತಮ್ಮ ರಾಜಕಾರಣಕ್ಕೆ ಬೇಕಾದಂತೆ ಬಳಸಿಕೊಂಡರು. ದಕ್ಷಿಣ ಕನ್ನಡದ ಎಂಪಿ ಟಿಕೆಟ್ ಮಲ್ಯರಿಗೆ ಕೊಟ್ಟಿದ್ದ ಕಾಂಗ್ರೆಸ್ ಅಲ್ಲಿಯ ಬಹುಸಂಖ್ಯಾತ ಕ್ರಿಶ್ಚಿಯನ್ನರನ್ನು ಸಮಾಧಾನಿಸಬೇಕಾದ ಸಂದಿಗ್ಧಕ್ಕೆ ಸಿಲುಕಿತ್ತು. ಕ್ರಿಶ್ಚಿಯನ್ ಸಮುದಾಯದ ಜೋಕಿಂ ಆಳ್ವರಿಗೆ ಉತ್ತರ ಕನ್ನಡದಂಥ ಸುರಕ್ಷಿತ ಕ್ಷೇತ್ರ ಬೇರೊಂದಿಲ್ಲವೆಂದು ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆಗೆ ರವಾನಿಸಿತ್ತು.

ಆಳ್ವ ಈಗಿನ ಪುಂಡ ಪುಢಾರಿಗಳಂತೆ ಭ್ರಷ್ಟ-ದುಷ್ಟ ಅಥವಾ ಮತಾಂಧ ಮಸಲತ್ತುಗಾರನಾಗಿರಲಿಲ್ಲವೇನೋ ನಿಜ. ಆದರೆ ಉತ್ತರ ಕನ್ನಡದ ಭೌಗೋಳಿಕ ಪರಿಜ್ಞಾನವೂ ಇಲ್ಲದ ಆಳ್ವ ಹದಿನೈದು ವರ್ಷಗಳವರೆಗೆ ಕೆಲಸಕ್ಕೆ ಬಾರದ ರಾಜಕಾರಣಿಯಾಗಿ ಕಾಲ ಕಳೆದರೇ ಹೊರತು ಇಲ್ಲಿಯ ಜನಮಾನಸದೊಂದಿಗೆ ಭಾವನಾತ್ಮಕವಾಗಿ ಬೆರೆಯಲೇ ಇಲ್ಲ! ಜಿಲ್ಲೆಯ ಜನರೂ ಆಳ್ವರನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೀಗಾಗಿ ಸ್ವಾತಂತ್ರ್ಯದ ಆರಂಭದ ಕಾಲಘಟ್ಟದಲ್ಲೇ ಉತ್ತರ ಕನ್ನಡ ನಾಯಕತ್ವದ ಅಭಾವ ಎದುರಿಸಬೇಕಾಗಿ ಬಂತು!!

ಈ ಸಂದರ್ಭದಲ್ಲೇ ಜಿಲ್ಲೆಗೊಂದು ನಾಯಕತ್ವ ಕೊಡುವ ಅಷ್ಟೂ ಗುಣಲಕ್ಷಣಗಳಿದ್ದ ಹೋರಾಟಗಾರ ದಿನಕರ ದೇಸಾಯಿ ಮುಖಂಡರಾಗಿ ರೂಪುಗೊಳ್ಳತೊಡಗಿದ್ದರು. ಸ್ವಾತಂತ್ರ್ಯಕ್ಕಿಂತ ಮೊದಲೇ ಜಿಲ್ಲೆಯ ಜನರನ್ನು ವಿಶೇಷವಾಗಿ ರೈತ ಕೂಲಿಕಾರ ಶ್ರಮಜೀವಿಗಳನ್ನು ತಮ್ಮ ಎದೆಗೆ ಹಚ್ಚಿಕೊಂಡು ಅವರಲ್ಲಿ ಸಂಘಟನೆಯ ಛಲ-ಬಲ ಬರುವಂತೆ ಮಾಡಿದವರೇ ದಿನಕರ ದೇಸಾಯಿ ಮತ್ತವರ ಸಂಗಾತಿಗಳಾಗಿದ್ದ ಎಸ್.ವಿ (ಗಿರಿ) ಪಿಕಳೆ ಮತ್ತು ದಯಾನಂದ ನಾಡಕರ್ಣಿ. ಈ ತ್ರಿಮೂರ್ತಿಗಳಲ್ಲಿ ದಿನಕರ ದೇಸಾಯಿಯವರು ಹತ್ತಾರು ಕಾರಣಕ್ಕೆ ಜಿಲ್ಲೆಯಾದ್ಯಂತ ಜನಾಕರ್ಷಣೀಯರಾಗಿದ್ದರು. ಒಬ್ಬ ಜನಸೇವಕ ಕವಿಯೂ ಆಗಿದ್ದಿದ್ದು ಚುಂಬಕ ವ್ಯಕ್ತಿತ್ವ ರೂಢಿಸಿಕೊಳ್ಳಲು ದೇಸಾಯರಿಗೆ ಸಾಧ್ಯವಾಗಿಸಿತ್ತು. ಬೆವರಿನ ಸಂಸ್ಕೃತಿಯ ಮಂದಿಗಾಗಿ ಮಿಡಿಯುವ, ದುಡಿಯುವ ಸ್ವಭಾವದ ದೇಸಾಯರು ಗೋಪಾಲಕೃಷ್ಣ ಗೋಖಲೆ ಕಟ್ಟಿದ್ದ “ಸವೆಂಟ್ಸ್ ಆಫ್ ಇಂಡಿಯಾ ಸೊಸೈಟಿ” (ಭಾರತ ಸೇವಕ ಸಮಾಜ)ಯ ಆಜೀವ ಕಾರ್ಯಕರ್ತನಾಗಿ ಅರ್ಪಿಸಿಕೊಂಡಿದ್ದರು.

ಆ ಸೇವಾಸಂಸ್ಥೆಯ ಮುಂಬೈ ಶಾಖೆಯ ಅಧ್ಯಕ್ಷರೂ ಆಗಿದ್ದ ದೇಸಾಯರು ಅದೇ ವೇಳೆಗೆ ಮುಂಬೈ ಕಾರ್ಪೊರೇಷನ್‌ನ ವಿರೋಧ ಪಕ್ಷದ ಮುಂಚೂಣಿ ನಾಯಕರಾಗಿ ಹೊರಹೊಮ್ಮಿದ್ದರು. ಮುಂಬೈನಲ್ಲಿ ಕಡಲ ಕಾರ್ಮಿಕ ಸಂಘವನ್ನು ಪ್ರಾರಂಭಿಸಿ ಬಹುಕಾಲದವರೆಗೆ ಅದರ ಪದಾಧಿಕಾರಿಯಾಗಿ ಕಾರ್ಮಿಕ ಹೋರಾಟದ ಬಗ್ಗೆ ಸ್ಪಷ್ಟ ಪರಿಕಲ್ಪನೆಯೂ ಹೊಂದಿದ್ದರು. ಭಾರತೀಯ ಕಾರ್ಮಿಕ ಸಂಘಗಳ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನಗಳಲ್ಲಿ ಭಾಗವಹಿಸಿ ವಿಶ್ವದ ಗಮನ ಸೆಳೆದಿದ್ದರು. ಅದೇ ಹೊತ್ತಿನಲ್ಲಿ ಇತ್ತ ತಾನು ಹುಟ್ಟಿದ ನೆಲದಲ್ಲಿ ರೈತ ಕೂಲಿಕಾರ ಶ್ರಮಜೀವಿಗಳನ್ನು ಅಂದಿನ ಕೆಂಬಾವುಟದ ಅಡಿಯಲ್ಲಿ ತಂದು ಜನಸಾಮಾನ್ಯರಿಗೆ “ದಿನಬಂಧು” ಆಗಿದ್ದರು. ಶೋಷಕ ಜಮೀನ್ದಾರಿ ವರ್ಗದ ಬಾಯಲ್ಲಿ “ಹಾವಳಿ ಮಂಜ” ಆಗಿದ್ದರು. ಹೀಗಾಗಿ ಸಹಜವಾಗೇ ದೇಸಾಯರಿಗೆ ಜಿಲ್ಲೆಯ ನಾಯಕತ್ವ ವಹಿಸಿಕೊಳ್ಳುವುದಕ್ಕೆ ನಾಲ್ಕೂ ದಿಕ್ಕಿನಲ್ಲಿ ಅನುಕೂಲಗಳಿದ್ದವು.

 

ಆದರೆ ದೇಸಾಯರಿಂದ ಮೊದಲೆರಡು ಮಹಾಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಹೋಗಲಾಗಲಿಲ್ಲ. ಜಿಲ್ಲೆಯ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಗ್ರಹಿಸಿದ ದೇಸಾಯರು, ಜಿಲ್ಲೆಯನ್ನು ದಿಲ್ಲಿಯಲ್ಲಿ ಪ್ರತಿನಿಧಿಸುವ ಬಹುಮತದ ಜನಾದೇಶ ಇಲ್ಲವೆಂದು ಬೆವರಿನ ವರ್ಗದ ಸಂಘಟನೆಗೆ ಗಮನ ಕೇಂದ್ರೀಕರಿಸಿದರು; ಶಿಕ್ಷಣ ಮತ್ತು ಸಾಮಾಜಿಕ ರಂಗಕ್ಕಷ್ಟೇ ಒಡ್ಡಿಕೊಂಡರು. ಅದುವರೆಗೆ ರೈತ ಸಭೆಯನ್ನಷ್ಟೇ ಪ್ರತಿನಿಧಿಸುತ್ತಿದ್ದ ದೇಸಾಯರನ್ನು 1967ರಲ್ಲಿ ಉತ್ತರ ಕನ್ನಡದ ಜನರು ಲೋಕಸಭೆಗೆ ಕಳಿಸಿಕೊಟ್ಟರು! ಆದರೆ ಅವಧಿಗೆ ಮೊದಲೇ ಮಧ್ಯಂತರ ಚುನಾವಣೆ ಘೋಷಿಸಿದ್ದ ಇಂದಿರಾಗಾಂಧಿಯ “ಗರೀಬಿ ಹಠಾವೋ” ಗಾಳಿಯಲ್ಲಿ ಕೊಚ್ಚಿಹೋದ ಹಲವು ಅತಿರಥ ಮಹಾರಥರಲ್ಲಿ ದೇಸಾಯರೂ ಒಬ್ಬರಾದರು. ಈ ನಾಲ್ಕು ವರ್ಷದ ಹೊರತಾಗಿ ಮತ್ಯಾವ ಸಂದರ್ಭದಲ್ಲೂ ದೇಸಾಯರು ರಾಜ್ಯ ಅಥವಾ ಕೇಂದ್ರದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿಲ್ಲ. ದೇಸಾಯರಿಗೂ ಪೂರ್ಣಾವಧಿ ರಾಜಕಾರಣಿಯಾಗಿರಲಾಗದ ಇತಿಮಿತಿಯ ಬಂಧನವಿತ್ತು. ಸವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಆಜೀವ ಕಾರ್‍ಯಕರ್ತರು ರಾಜಕೀಯ ಪಕ್ಷದ ಸಕ್ರಿಯ ಸದಸ್ಯನಾಗಿರಕೂಡದೆಂಬ ಷರತ್ತಿತ್ತು. ಹೀಗಾಗಿ ದೇಸಾಯರು ಚುನಾವಣಾ ಕಣದಲ್ಲೂ ಸ್ವತಂತ್ರ ಅಭ್ಯರ್ಥಿಯೆಂದು ಘೋಷಿಸಿಕೊಂಡು ಸಮಾಜವಾದಿ ಪಕ್ಷದ ಬೆಂಬಲ ಪಡೆದಿದ್ದರು. ನಾಯಕತ್ವದ ಅಷ್ಟೂ ಅರ್ಹತೆಗಳಿದ್ದರೂ ರಾಜಕೀಯ ಚರಿಷ್ಮಾ ಇಲ್ಲದ ದೇಸಾಯರು ಎಲ್ಲ ಕಾಲಕ್ಕೂ, ಎಲ್ಲ ವರ್ಗಕ್ಕೂ ನಾಯಕರಾಗಲು ಸಾಧ್ಯವಾಗಲಿಲ್ಲ. ಆ ವಿಷಯದಲ್ಲವರು ಅಸಹಾಯಕರಾಗಿದ್ದರು.

ಮಾರ್ಗರೇಟ್ ಆಳ್ವ

ದೇಸಾಯರ ರೈತಕೂಟದಲ್ಲೂ 1960ರ ದಶಕದಲ್ಲಿ ಬಿರುಕುಂಟಾಗುತ್ತದೆ. ದುರ್ಬಲ ವರ್ಗದ ಹಿತಚಿಂತನೆಯಲ್ಲಿ ದೇಸಾಯರಿಗಿಂತ ಒಂದು ಹೆಜ್ಜೆ ಮುಂದಿದ್ದ ನಿಷ್ಠೂರವಾದಿ ಗಿರಿ ಪಿಕಳೆ ಸೈದ್ಧಾಂತಿಕವಾಗಿ ಸಿಡಿದೇಳುತ್ತಾರೆ. ರೈತ ಹೋರಾಟದ ಒಂದು ಭಾಗವಾಗಿಯೇ ತಲೆಯೆತ್ತಿದ್ದ “ಕೆನರಾ ವೆಲ್‌ಫೇರ್ ಟ್ರಸ್ಟ್”ನ ವಿದ್ಯಾಸಂಸ್ಥೆಗಳಿಗೆ ದೇಸಾಯರು ಬಂಡವಾಳಶಾಹಿಗಳಿಂದ ವಂತಿಗೆ ತರುವುದನ್ನು ಪಿಕಳೆ ಪ್ರಬಲವಾಗಿ ವಿರೋಧಿಸುತ್ತಾರೆ; ದೇಸಾಯರು ಟ್ರಸ್ಟ್‌ನಿಂದ ಪಿಕಳೆಯವರನ್ನು ವಜಾ ಮಾಡುತ್ತಾರೆ. ಇಬ್ಬರು ಪ್ರತ್ಯೇಕ ಸೇವಾಸಂಸ್ಥೆ ಕಟ್ಟಿಕೊಂಡು ಸಮಾಜಸೇವೆ ಮಾಡುತ್ತಾರೆ. ಕೊನೆಯವರೆಗೂ ಈ ಇಬ್ಬರು ಒಂದೇ ವೇದಿಕೆ ಬರುವುದೇ ಇಲ್ಲ! ಒಂದುವೇಳೆ ದೇಸಾಯಿ, ಪಿಕಳೆ ಮತ್ತು ನಾಡಕರ್ಣಿ ಒಂದು ನಿರ್ದಿಷ್ಟ ಗುರಿಯೊಂದಿಗೆ ಜಿಲ್ಲೆಯ ಎಲ್ಲ ವರ್ಗದ ಬೇಕು-ಬೇಡಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸೇವೆ ಮುಂದುವರಿಸಿದ್ದೇ ಆಗಿದ್ದರೆ ಖಂಡಿತವಾಗಿ ಈ ತ್ರಿಮೂರ್ತಿಗಳು ಜಿಲ್ಲೆಗೆ ನಾಯಕತ್ವ ಕೊಡಬಲ್ಲವರಾಗಿದ್ದರು. ಇಷ್ಟಿದ್ದರೂ ಉತ್ತರ ಕನ್ನಡ ಇವತ್ತಿಗೂ ಆರಾಧನೆ ಮತ್ತು ಕೃತಜ್ಞತಾಭಾವನೆಯಿಂದ ಸ್ಮರಿಸುವುದು ದೇಸಾಯಿ ಮತ್ತು ಪಿಕಳೆಯವರನ್ನೇ!

ದಿನಕರ ದೇಸಾಯರಿಗೆ 70ರ ದಶಕದಲ್ಲಿ ಬಿಡದೇ ಕಾಡಿದ ಅನಾರೋಗ್ಯ ಸಾರ್ವಜನಿಕ ಸೇವೆಯಲ್ಲಿ ಗಟ್ಟಿ ಹೆಜ್ಜೆ ಮೂಡಿಸಲು ಅಡ್ಡಿಪಡಿಸಿತು. ತಮ್ಮ 72ನೇ ವಯಸ್ಸಿಗೇ ಎದ್ದು ಹೋಗಿಬಿಟ್ಟಿದ್ದು ಜಿಲ್ಲೆಯಲ್ಲಿ ಒಂಥರಾ ಶೂನ್ಯವನ್ನೇ ಸೃಷ್ಟಿಸಿಬಿಟ್ಟಿತು. ಇತರೇ ವರ್ಗದ ಜನರೂ ಕೂಡ 70ರ ದಶಕದಲ್ಲಿ ದೇಸಾಯರ ಹತ್ತಿರಕ್ಕೆ ಬಂದು ನಾಯಕನಾಗಿ ಒಪ್ಪಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಅವರೇ ಇರಲಿಲ್ಲ.

ನಂತರ, ಉತ್ತರ ಕನ್ನಡದಲ್ಲಿ ಜಿಲ್ಲೆಯನ್ನು ಮುನ್ನಡೆಸಬಲ್ಲ ಮುಖಂಡರಿಗೇನೂ ಕೊರತೆಯಿರಲಿಲ್ಲ. ಆದರೆ ಇವರಲ್ಲಿ ರಾಜಕೀಯ ಇಚ್ಛಾಶಕ್ತಿ, ಸಾಮಾಜಿಕ ಬದ್ಧತೆ ಇರಲಿಲ್ಲ. ರಾಮಕೃಷ್ಣ ಹೆಗಡೆ, ಎಸ್.ಎಂ. ಯಾಹ್ಯಾ, ದೇವರಾಯ ನಾಯ್ಕ್, ಆರ್.ವಿ ದೇಶಪಾಂಡೆ, ಮಾರ್ಗರೆಟ್ ಆಳ್ವ, ಅನಂತಕುಮಾರ್ ಹೆಗಡೆ ಹೀಗೆ ಹಲವರಿಗೆ ಜಿಲ್ಲೆಗೊಂದು ಗಟ್ಟಿ ನಾಯಕತ್ವ ಕೊಡುವ ಅವಕಾಶವಿತ್ತು. ಆದರೆ ಇವರೆಲ್ಲ ಸ್ವಾರ್ಥ ಸಾಧಿಸಿಕೊಂಡು ಚರಿತ್ರೆ ಸೇರಿದ್ದಾರೆ. ಮಹಾಮೇಧಾವಿಯೆಂದು ರಾಷ್ಟ್ರಮಟ್ಟದಲ್ಲೇ ಭ್ರಮೆ ಬಿತ್ತಿದ್ದ ರಾಮಕೃಷ್ಣ ಹೆಗಡೆ ಮನಸ್ಸು ಮಾಡಿದ್ದರೆ ಜಿಲ್ಲೆಗೊಂದು ನಿರ್ವಾಜ್ಯ ನಾಯಕತ್ವ ಕೊಡಬಹುದಿತ್ತು. ಶಾಸಕನಿಂದ ಮುಖ್ಯಮಂತ್ರಿವರೆಗೆ, ರಾಜ್ಯಸಭಾ ಸದಸ್ಯತ್ವದಿಂದ ಕೇಂದ್ರ ಮಂತ್ರಿ ಯೋಜನಾ ಆಯೋಗದ ಉಪಾಧ್ಯಕ್ಷನತನಕ ಮಹತ್ವದ ಸ್ಥಾನಕ್ಕೇರಿದ್ದ ಹೆಗಡೆಜೀ ಲಾಗಾಯ್ತಿನಿಂದಲೂ ಹೆತ್ತೂರಿಗೆ ಬೆನ್ನುಹಾಕಿಯೇ ಕುಂತಿದ್ದರು! ದಿನಕರ ದೇಸಾಯರ ಸಮಾಜವಾದಿ ಮೂಸೆಯಲ್ಲಿ ಮೂಡಿಬಂದಿದ್ದ ಹಿಂದುಳಿದ ವರ್ಗದ ದೀವರು(ಈಡಿಗ) ಜಾತಿಯ ದೇವರಾಯ ನಾಯ್ಕ್ 15 ವರ್ಷ ಎಂಪಿಯಾಗಿ ವ್ಯರ್ಥ ಕಳೆದರು. ತಾವೂ ಬೆಳೆಯಲಿಲ್ಲ ಜಿಲ್ಲೆಗೂ ನೆರವಾಗಲಿಲ್ಲ. ನಾಲ್ಕೂವರೆ ವರ್ಷ ಎಂಪಿಯಾಗಿದ್ದ ಮ್ಯಾಗಿ (ಮಾರ್ಗರೆಟ್ ಆಳ್ವ) ಅಭಿವೃದ್ಧಿ ಕೆಲಸ ನಾಯಕತ್ವ ಕೊಡುವ ಪ್ರಯತ್ನ ಮಾಡಿದ್ದರಾದರೂ ಸ್ವಪಕ್ಷದ ದೇಶಪಾಂಡೆ ಮಸಲತ್ತಿಗೆ ಬಲಿಯಾದರು.

ಅನಂತಕುಮಾರ ಹೆಗಡೆ

ಯಾರನ್ನು ಕಂಡರೂ ದೇಶದ್ರೋಹಿ ಎನ್ನುವ ಸಂಘ ಪರಿವಾರಕ್ಕೆ ಸೇರಿದ ಸಂಸದ ಅನಂತಕುಮಾರ್ ಹೆಗಡೆ ಆರು ಬಾರಿ ಗೆದ್ದರೂ ಮೂರು ಬಿಲ್ಲೆ ಪ್ರಯೋಜನ ಜಿಲ್ಲೆಗಾಗಿಲ್ಲ. ತಮಾಷೆಯೆಂದರೆ ಹಿಂದುತ್ವದ ಉದ್ದುದ್ದ ವ್ಯಾಖ್ಯಾನ ಬಿಗಿಯುವ ಈತನಿಂದ ಜಿಲ್ಲೆಯ ಹಿಂದೂಗಳಿಗೆ ನ್ಯಾಯ-ನಾಯಕತ್ವ ಕೊಡಲಾಗಿಲ್ಲ. ಕಳೆದ ಮೂರುಮುಕ್ಕಾಲು ದಶಕದಿಂದ ಆಯಕಟ್ಟಿನ ಅಧಿಕಾರ ಅನುಭವಿಸುತ್ತ ಬಂದಿರುವ ಆರ್.ವಿ ದೇಶಪಾಂಡೆ ಸುದೀರ್ಘ ಕಾಲ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಜಿಲ್ಲಾ ಮುಖಂಡನಾಗಿ ಬೆಳೆಯಲೇ ಇಲ್ಲ. ಅಧಿಕಾರ ಇದ್ದಾಗಷ್ಟೇ ದೇಶಪಾಂಡೆಯ ವರ್ಚಸ್ಸು! ಪ್ರಖರ ಸ್ವಾತಂತ್ರ್ಯ ಹೋರಾಟ, ಸಮತಾವಾದದ ಆಂದೋಲನದ ಹೆಗ್ಗಳಿಕೆಯ ಉತ್ತರ ಕನ್ನಡದಲ್ಲೀಗ ಹೊಡಿ-ಬಡಿ-ಕಡಿ-ಕೊಚ್ಚು ಸಂಸ್ಕೃತಿಯ ಸಂಘಿಗಳ, ಅವರನ್ನು ಕಾಪಾಡುವ ಎಂಪಿ, ಎಮ್ಮೆಲ್ಲೆ ಮಂತ್ರಿಗಳದೇ ಹಾವಳಿ. ಇವರ ಹಿಂದುತ್ವದ ಸಿದ್ಧಾಂತವೇನೇ ಇರಲಿ ಇವರಲ್ಲಾದರೂ ಜಿಲ್ಲೆ ಉದ್ಧರಿಸುವ ನಾಯಕನಾಗಬಲ್ಲವನಿದ್ದಾನಾ ಎಂದು ನೋಡಿದರೆ ಅಲ್ಲೂ ಇರುವುದು “ದಂಡ” ನಾಯಕರದೇ ದಂಡು!! ಮಂತ್ರಿಗಿರಿ ಯಲ್ಲಾಪುರಕ್ಕಷ್ಟೇ ಸೀಮಿತ ಮಾಡಿಕೊಂಡಿರುವ ಶಿವರಾಮ ಹೆಬ್ಬಾರರಿಗೆ ಜಿಲ್ಲಾ ನಾಯಕನಾಗುವ ಯೋಗ್ಯತೆಯೇ ಇಲ್ಲ.

ಅನೇಕ ಜ್ವಲಂತ ಸಮಸ್ಯೆಗಳನ್ನು ಸೆರಗಲ್ಲಿ ಕಟ್ಟಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಗೆ ಎಲ್ಲ ಅರ್ಥದಲ್ಲೂ “ಇವನೇ ನಮ್ಮ ನಾಯಕ” ಎನ್ನುವಂಥ ನಂಬಿಗಸ್ಥನ(ಳ) ಅಗತ್ಯ ಅನಿವಾರ್ಯತೆ ಇದೆ. ದುರಂತವೆಂದರೆ ಅಂಥ ನಿಜನಾಯಕತ್ವ ಕೊಡಬಲ್ಲ ವ್ಯಕ್ತಿ ಯಾವ ಪಕ್ಷದಲ್ಲೂ ಇದ್ದಾನೆಂದೆನಿಸುವುದಿಲ್ಲ. ನಾಯಕತ್ವವನ್ನು ದುಡ್ಡು-ಧರ್ಮ-ಅಧಿಕಾರ ಬಲದಿಂದ ಪಡೆದುಕೊಳ್ಳುವೆನೆಂದು ಭಾವಿಸುವುದೇ ಮೂರ್ಖತನ. ಪಕ್ಷ-ಪಂಗಡ ಮೀರಿ ಯೋಚಿಸುವ, ಜಾತಿ-ಧರ್ಮ ಮೀರಿ ನಿಲ್ಲುವ, ಸಮಗ್ರ ಜಿಲ್ಲೆಯ ಭೌಗೋಳಿಕ, ಸಾಮಾಜಿಕ, ಆರ್ಥಿಕ ಪರಿಕಲ್ಪನೆಯುಳ್ಳ, ರಾಜಕೀಯವಾಗಿಯೂ ಎಲ್ಲವನ್ನೂ ನಿಭಾಯಿಸುವ, ದ್ವೇಷ ರಾಜಕೀಯ ಪಾತಕ ಮಾಡದ, ದೂರದೃಷ್ಟಿಯ ಸಮಚಿತ್ತದ ನಿಸ್ಪೃಹ ನಾಯಕನಿಗಾಗಿ ಉತ್ತರಕನ್ನಡ ಹಸಿದು ಹಂಬಲಿಸುತ್ತಿದೆ!!

ಶುದ್ದೋಧನ


ಇದನ್ನೂ ಓದಿ: ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವಿಸರ್ಜನೆಯತ್ತ ರಾಯಚೂರು ಜಿ.ಪಂ: ಇದು ನಿಮ್ಮೂರಿನ ಪರಿಸ್ಥಿತಿಯು ಆಗಿರಬಹುದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...