Homeಮುಖಪುಟಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

ಉತ್ತರ ಕನ್ನಡ: ಪರಿಸರ ಪರಾಕ್ರಮಿ ಆಶೀಸರ ಮಾಣಿಯ ಗೂಟದ ಕಾರಿನ ಗಲಾಟೆ

- Advertisement -

| ಶುದ್ಧೋಧನ |

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಶಿರಸಿಯ ‘ಸು’ಪ್ರಸಿದ್ಧ ಸ್ವಯಂಘೋಷಿತ ಪರಿಸರ ಪರಾಕ್ರಮಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ-ಮಂಡಳಿ ಹುದ್ದೆ ದಕ್ಕುತ್ತಿದೆ. ಅಂಥದೊಂದು ಗದ್ದುಗೆ ಏರುವ ಯಾವ ಯೋಗ್ಯತೆ ಇಲ್ಲದಿದ್ದರೂ ಆಶೀಸರ ಮಾಣಿಗೆ ಯೋಗ ಖುಲಾಯಿಸುತ್ತಿರುವುದು ಪಕ್ಕಾಚೆಡ್ಡಿ ಚಮತ್ಕಾರದಿಂದಷ್ಟೇ! ತಾನೊಬ್ಬ ಹುಟ್ಟಾ ಸಂಘಿ ಸರದಾರನೆಂತಲೂ ಪರಿಸರ ಬಚಾವಾಗಿರುವುದೇ ತನ್ನ ಮೂರೂವರೆ ದಶಕದ ಹಗಲಿರುಳಿನ ಹಾರಾಟದಿಂದೆಂತಲೂ ಎಂಬಂತೆ ಆರೆಸ್ಸೆಸ್‍ನ ಆಯಕಟ್ಟಿನ ರಿಂಗ್‍ಮಾಸ್ಟರ್‍ಗಳೆದುರು ಅದ್ಭುತ ಪ್ರದರ್ಶನ ಕೊಡಬಲ್ಲ ಆಶೀಸರ್ ಗೂಟದ ಕಾರು ಪಟಾಯಿಸುತ್ತಿದ್ದಾನೆ. ಬಿಜೆಪಿ-ಆರೆಸ್ಸೆಸ್‍ನ ಬ್ರಾಹ್ಮಣ ಲಾಬಿ 2008ರಲ್ಲಿ ಆಶೀಸರ್‍ಗೆ ಬಳುವಳಿಯಾಗಿ ಕೊಟ್ಟಿತ್ತು. ಈಗ ಅದೇ ಆಶೀಸರ್‍ಗೆ ಅದೇ ಕೇಸರಿ ಜನಿವಾರ ಕೂಟ ಜೀವ ವೈವಿಧ್ಯ ಮಂಡಳಿಯಲ್ಲಿ “ಪುನರ್ವಸತಿ” ಕಲ್ಪಿಸಿದೆ!

ಇದು ಉತ್ತರ ಕನ್ನಡ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರನ್ನು ಕಿಚಾಯಿಸುತ್ತಿದೆ. ಸಹಜವಾಗೇ ಪಕ್ಷಕಟ್ಟಿದ ಹಿಂದುಳಿದ ವರ್ಗದ ಎರಡನೇ ಸ್ತರದ ಮರಿಮುಖಂಡರು ಕೆರಳಿದ್ದಾರೆ; ಪಕ್ಷಕ್ಕಾಗಿ ತಮ್ಮನ್ನು ದುಡಿಸಿಕೊಂಡು ಮಹತ್ವದ ಲಾಭದ ಸ್ಥಾನ-ಮಾನವೆಲ್ಲ ಬ್ರಾಹ್ಮಣರಿಗೆ ಕೊಡಬೇಕಾಗುತ್ತಿದೆ ಎಂಬ ಅಸಮಾಧಾನ ಭುಗಿಲೆದ್ದಿದೆ. ಎಂಪಿ ಅನಂತ್ಮಾಣಿ, ಸ್ಪೀಕರ್ ಕಾಗೇರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಮೀಸಲಿಡಲ್ಪಟ್ಟಿರುವ “ಅನರ್ಹ” ಶಿವರಾಮ ಹೆಬ್ಬಾರ್ ಮತ್ತು ನಿಗಮ-ಮಂಡಳಿಗೆ ವಕ್ಕರಿಸಿರುವ ಆಶೀಸರ ಎಲ್ಲರೂ ಹವ್ಯಕ ಬ್ರಾಹ್ಮಣ ಸಮುದಾಯದವರು. ಜಿಲ್ಲಾ ಬಿಜೆಪಿ ಅಧ್ಯಕ್ಷತೆ ಕೊಂಕಣಿ ಬ್ರಾಹ್ಮಣ ಹಳಿಯಾಳದ ಮಾಜಿ ಶಾಸಕ ಸುನಿಲ್ ಹೆಗ್ಡೆಗೆ ಕೊಡಲು ರಹಸ್ಯ ತಯಾರಿ ಮತ್ತೊಂದೆಡೆ ನಡೆದಿದೆ. ಒಟ್ಟಿನಲ್ಲಿ ಬ್ರಾಹ್ಮಣರ ಹಿಂದೂತ್ವದ ಅಧಿಕಾರ ರಾಜಕಾರಣದ ಯುದ್ಧದಲ್ಲಿ ದೀವರು, ಮೀನುಗಾರರು, ಹಾಲಕ್ಕಿ ಒಕ್ಕಲಿಗರೇ ಮುಂದಾದ ಶೂದ್ರರು ಬರೀ ಕಾಲಾಳುಗಳು ಮಾತ್ರ.

ಶೂದ್ರರ ಕೈಲಿ ಲಾಠಿಕೊಟ್ಟು ಶೀಟಿ ಊದುತ್ತಾ ಬೇಳೆ ಬೇಯಿಸಿಕೊಳ್ಳುವ ಜನಿವಾರ ಪಡೆಯ ತೆರೆಮರೆ ತಂತ್ರಗಾರರಲ್ಲಿ ಆಶೀಸರನೂ ಒಬ್ಬನೆಂಬುದಕ್ಕೆ ಅನುಮಾನವೇ ಇಲ್ಲ. ಸ್ವಜಾತಿ ಅನಂತ್ಮಾಣಿಗೇ ಟಾಂಗುಕೊಟ್ಟು ಎಂಪಿಗಿರಿ ಟಿಕೆಟ್ ಪಡೆಯಲು ಈತ ಚೆಡ್ಡಿ ಬಿಡಾರದಲ್ಲಿ ವಶೀಲಿ ಕಾರ್ಯಾಚರಣೆ ಮಾಡಿದ್ದೂ ಇದೆ. ಹಾಗಂತ ಉತ್ತರ ಕನ್ನಡ ಬಿಜೆಪಿಗೆ ಈತನಿಂದ ನಯಾಪೈಸೆ ಫಾಯ್ದೆಯಿಲ್ಲ. ಬ್ರಾಹ್ಮಣೇತರ ಕಾರ್ಯಕರ್ತರು ಕಟ್ಟಿದ ಹುತ್ತದಲ್ಲಿ ಸದ್ದಿಲ್ಲದೆ ಸೇರಿಕೊಳ್ಳುವ ಘಟಸರ್ಪವೆಂಬ ಚರ್ಚೆ ಸ್ಥಳೀಯ ಬಿಜೆಪಿಯಲ್ಲೀಗ ಜೋರಾಗಿದೆ. ಈತನ ಪರಿಸರ ಧೋರಣೆಯೂ ಇಬ್ಬಂದಿ ಸ್ವಜಾತಿ ಅಡಿಕೆ ತೋಟಿಗರಿಗೆ ಸರ್ಕಾರಿ ಯೋಜನೆಗಳಿಂದ ತೊಂದರೆ ಆಗುತ್ತದೆಂದಾಗ ಆಶೀಸರ್‍ನಲ್ಲಿ ಅತ್ಯುಗ್ರ ಪರಿಸರ ಕಾಳಜಿ ಶುರುಹೊಡೆಯುತ್ತದೆ! ಉತ್ತರ ಕನ್ನಡದ ಅಭಿವೃದ್ಧಿಯ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಆಶೀಸರ್ ನೇತೃತ್ವದ ಪರಿಸರವಾಧಿ ತಂಡ ಕಲ್ಲು ಹಾಕುತ್ತಲೇ ಬಂದಿದೆ!!

ಈ ರೈಲು ಹಳಿಯಿಂದ ಅರಣ್ಯ ನಾಶವಾಗುತ್ತದೆ, ವನ್ಯ ಪ್ರಾಣಿಗಳಿಗೆ ಗಂಡಾಂತರ, ಪರಿಸರ ಸರ್ವನಾಶವಾಗುತ್ತದೆಂದು ಬೊಬ್ಬಿರಿವ ಆಶೀಸರ್‍ಗೆ ತನ್ನ ಸಮುದಾಯಕ್ಕೆ ಅನುಕೂಲವಾಗುವ ಹಾವೇರಿ-ಶಿರಸಿ ರೈಲು ಮಾರ್ಗದ ಪರಿಸರ ಹಾನಿ ಗೌಣ! ಕುಮಟಾ-ಶಿರಸಿ ರಸ್ತೆ ಅಗಲಗೊಂಡು ರಾಷ್ಟ್ರೀಯ ಹೆದ್ದಾರಿಯಾದರೆ ಜೀವ ವೈವಿಧ್ಯಕ್ಕೆ ಧಕ್ಕೆ ಎಂಬ ವಾದ ಈ ಪರಿಸರ “ತಜ್ಞ”ನದು. ಆನರ ಬಹುಬೇಡಿಕೆಯ ಜಿಲ್ಲೆಯ ಮಹತ್ವದ ಯೋಜನೆಯಿದು. ಆಶೀಸರ್ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷನಾಗುತ್ತಲೇ ಶಿರಸಿ-ಕುಮಟಾ ರಸ್ತೆ ಅಗಲೀಕರಣ ಯೋಜನೆಗೆ ಎಳ್ಳು-ನೀರು ಬಿಟ್ಟಂತಾಗಿದೆ!! ಪರಿಸರ ಸಂರಕ್ಷಣೆ ಕುರಿತು ಉದ್ದುದ್ದ ಭಾಷಣ ಬಿಗಿಯುವ ಈ ಪರಿಸರ ದುರಂಧರ ಎಕರೆಗಟ್ಟಲೆ ಅರಣ್ಯ ಕಬಳಿಸಿ ಸಮೃದ್ಧ ಅಡಿಕೆ ತೋಟ ಮಾಡಿಕೊಂಡಿರುವ ಅಪವಾದಕ್ಕೆ ತುತ್ತಾಗಿರುವುದು ವಿಪರ್ಯಾಸವೇ ಸರಿ!!

ಕಾಡು ನುಂಗಿರುವ “ಕ್ಯಾತಿ”ಯ ಆಶೀಸರ ಸ್ವರ್ಣವಲ್ಲಿ ಮಠದ ಹುಸಿ ಹಸಿರು ಸ್ವಾಮಿಯ ಆಸ್ಥಾನದ ಪರಿಸರ ಪಂಡಿತ. ಕಾವಿ-ಚೆಡ್ಡಿ ಪ್ರಭಾವದಿಂದ ರಾಜ್ಯ ಬಿಜೆಪಿಯ ಪರಮೋಚ್ಚ ನಾಯಕ ಸಂತೋಷ್‍ಜೀ ಕೃಪಾಕಟಾಕ್ಷಕ್ಕೆ ಪಾತ್ರನಾಗಿರುವ ಆಶೀಸರ್ ಮಾಣಿಗೆ ರಾಜ್ಯ ಜೀವ ವೈವಿಧ್ಯ ಮಂಡಳಿ ಪಡೆಯುವುದಕ್ಕೆ ತ್ರಾಸೇನೂ ಆಗಿಲ್ಲ! ಆಶೀಸರ್ ನೇಮಕಾತಿ ಘೋಷಣೆ ಆಗುತ್ತಲೇ ಉತ್ತರ ಕನ್ನಡ ಬಿಜೆಪಿ ಬಣ ಬಡಿದಾಟಕ್ಕೆ ಬಣ್ಣ ಬಂದುಬಿಟ್ಟಿದೆ. ಎಂಪಿ ಅನಂತ್ಮಾಣಿಗೆ ಮಂಡಳಿ ಅಧ್ಯಕ್ಷತೆ ಆಶೀಸರ್‍ಗೆ ಕೊಟ್ಟಿರುವುದು ಇಷ್ಟವಾಗಿಲ್ಲ. ಅನಂತ್ಮಾಣಿ ಎದುರಾಳಿ ಸ್ಪೀಕರ್ ಕಾಗೇರಿ- “ಪಾಪ, ಆಶೀಸರ್‍ಗೆ ಗೂಟದ ಕಾರೊಂದು ಕೊಡೋದ್ರಿಂದ ತೊಂದ್ರೆಂತದೂ ಇಲ್ಲೆ” ಎಂದು ಸಮಾಧಾನ ಮಂತ್ರ ಪಠಿಸುತ್ತಿದ್ದಾರೆ. ಆಶೀಸರ್ ನೇಮಕಾತಿಯನ್ನ ದೊಡ್ಡದೊಂದು ವರ್ಗ ಬಲವಾಗಿ ವಿರೋಧಿಸುತ್ತಿದೆ.

ಪಕ್ಷಕ್ಕಾಗಿ ಹಲವು ವರ್ಷದಿಂದ ನಿಷ್ಠೆಯಿಂದ ದುಡಿದ ಶೂದ್ರರನ್ನು ಕಡೆಗಣಿಸಿ ಜನಿವಾರ ಲಾಬಿ ಮಾಡೋರಿಗೆ ಅವಕಾಶ ಕೊಡುವ ಹೈಕಮಾಂಡ್ ವಿರುದ್ಧ ಕೂಗೆದ್ದಿದೆ. ಆಶೀಸರ್ ನೇಮಕಾತಿ ರದ್ದು ಮಾಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್‍ಗೆ ಲಗ್ಗೆ ಹಾಕಲು ಕಾರ್ಯಕರ್ತರು ಸ್ಕೆಚ್ ಹಾಕುತ್ತಿದ್ದಾರೆ. ಅಸಮಾನಿತರ ಬೆನ್ನಿಗೆ ಅನಂತ್ಮಾಣಿ ಬಲವಿರುವುದರಿಂದ ಆಶೀಸರ್ ಮುಖ ಸಪ್ಪಗಾಗಿದೆ. ಬಿಜೆಪಿಯ ಗ್ಯಾಂಗ್‍ವಾರ್ ಬೀದಿಗೆ ಬರುವ ಸೂಚನೆಗಳು ಗೋಚರಿಸುತ್ತಿವೆ. ತನ್ನ ಎಂಪಿ ಸೀಟಿಗೇ ಕೈಹಾಕಿದ್ದ, ಮುಂದೂ ಹಾಕಲಿರುವ ಆಶೀಸರ್‍ಗೆ ಅನಂತ್ಮಾಣಿ ಸುಮ್ಮನೆ ಬಿಡಲು ಸಾಧ್ಯವಾ?!

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ: 2.55 ಲಕ್ಷ ಹೊಸ ಕೇಸ್‌ಗಳು

0
ದೇಶದಲ್ಲಿ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡು ಬಂದಿದೆ. ಕಳೆದ ಐದು ದಿನಗಳಿಂದ ವರದಿಯಾಗುತ್ತಿದ್ದ ಮೂರು ಲಕ್ಷಕ್ಕೂ ಹೆಚ್ಚು ಪ್ರಕರಣಗಳ ಸರಣಿ ಮುಗಿದೆ. ಕಳೆದ 24 ಗಂಟೆಗಳಲ್ಲಿ 2,55,874 ಹೊಸ ಪ್ರಕರಣಗಳು ದಾಖಲಾಗಿವೆ. ಇದು...
Wordpress Social Share Plugin powered by Ultimatelysocial
Shares