ಉತ್ತರಾಖಂಡದಲ್ಲಿ ಸರ್ಕಾರ ಉದ್ಯೋಗ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ಬುಧವಾರ (ಸೆ.24) ಬೃಹತ್ ಪ್ರತಿಭಟನೆ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ‘ನಕಲ್ ಜಿಹಾದ್’ ಅಥವಾ ‘ವಂಚನೆ ಜಿಹಾದ್’ ಕೃತ್ಯ ಎಂದು ಹೇಳಿದ್ದಾರೆ.
‘ಉತ್ತರಾಖಂಡ ಅಧೀನ ಸೇವಾ ಆಯ್ಕೆ ಆಯೋಗ’ದ ಪರೀಕ್ಷೆಯು ಭಾನುವಾರ (ಸೆ.21) ನಡೆದಿದೆ. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಮೂರು ಪುಟಗಳು ಆನ್‌ಲೈನ್‌ನಲ್ಲಿ ಹರಿದಾಡಿವೆ ಎಂದು ವರದಿಯಾಗಿದೆ. ಆ ಬಳಿಕ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳು ಕೇಳಿಬಂದಿವೆ.
ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ದ ನೂರಾರು ಮಂದಿ ಭಾನುವಾರದಿಂದಲೇ ಡೆಹ್ರಾಡೂನ್‌ನ ಪರೇಡ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲಿಗೆ ರಾಜ್ಯದ ಎಲ್ಲಾ ಭಾಗಗಳಿಂದ ಪ್ರತಿಭಟನಾ ಮೆರವಣಿಗೆ ನಡೆಸುವಂತೆ ‘ಉತ್ತರಾಖಂಡ್ ಬೆರೋಝ್‌ಗರ್ ಸಂಘಟನ್’ ಮತ್ತು ಇತರ ಗುಂಪುಗಳು ಜನರಿಗೆ ಕರೆ ನೀಡಿದ್ದವು.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಲಿದ್ ಮಲಿಕ್ ಮತ್ತು ಆತನ ಸಹೋದರಿ ಸಬಿಯಾ ಎಂಬ ಇಬ್ಬರು ವ್ಯಕ್ತಿಗಳನ್ನು ಮಂಗಳವಾರ (ಸೆ.23) ಪೊಲೀಸರು ಬಂಧಿಸಿದ್ದಾರೆ. ಹರಿದ್ವಾರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಮಲಿಕ್, ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸಹೋದರಿ ಸಬಿಯಾ ಜೊತೆ ಹಂಚಿಕೊಂಡಿದ್ದ. ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಸಬಿಯಾ ಅದನ್ನು ಮಲಿಕ್‌ನ ಸ್ನೇಹಿತ ಸುಮನ್‌ಗೆ ಕಳುಹಿಸಿದ್ದರು ಎಂದು ಆರೋಪಿಸಲಾಗಿದೆ.
“ಪ್ರಾಧ್ಯಾಪಕ ಸುಮನ್ ಅವರು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡಿದ್ದರು. ಆದರೆ, ಅದನ್ನು ಸಬಿಯಾಗೆ ವಾಪಸ್ ಕಳುಹಿಸಿರಲಿಲ್ಲ. ಬದಲಾಗಿ, ಸ್ಥಳೀಯ ರಾಜಕಾರಣಿ ಬಾಬಿ ಪನ್ವಾರ್ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪನ್ವಾರ್ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ” ಎಂದು ಡೆಹ್ರಾಡೂನ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಿಂಗ್ ಹೇಳಿದ್ದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಗೆ ಮಲಿಕ್ ಮತ್ತು ಸಬಿಯಾ ಮಾತ್ರ ಕಾರಣರಲ್ಲ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆ ನಡೆದ ಕಾಲೇಜಿನ ಪ್ರಾಂಶುಪಾಲ ಧರ್ಮೇಂದ್ರ ಚೌಹಾನ್ ಆಡಳಿತಾರೂಢ ಬಿಜೆಪಿಯ ಹರಿದ್ವಾರ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದಾರೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಚೌಹಾನ್ ಪ್ರಕಾರ, ಪರೀಕ್ಷೆಯ ಸಮಯದಲ್ಲಿ ಬಳಸಲಾದ 18 ಕೊಠಡಿಗಳಲ್ಲಿ ಕೇವಲ 15 ಕೊಠಡಿಗಳಲ್ಲಿ ಮಾತ್ರ ಮೊಬೈಲ್ ಸಿಗ್ನಲ್‌ಗಳನ್ನು ತಡೆಯಲು ಜಾಮರ್‌ಗಳನ್ನು ಅಳವಡಿಸಲಾಗಿತ್ತು. ಖಾಲಿದ್ ಜಾಮರ್ ಇಲ್ಲದ ಕೊಠಡಿಯಲ್ಲಿ ಇದ್ದರು.
ಧರ್ಮೇಂದ್ರ ಚೌಹಾನ್ ಹೇಳಿಕೆಯ ಪ್ರಕಾರ, ಉತ್ತರಾಖಂಡ ನೇಮಕಾತಿ ಆಯೋಗವು ಪರೀಕ್ಷೆಯ ಸಮಯದಲ್ಲಿ ಕೊಠಡಿಗಳ ಒಳಗಿನ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಲು ಸೂಚಿಸಿತ್ತು ಮತ್ತು ಕೇವಲ ಕಾಲೇಜಿನ ಮುಖ್ಯದ್ವಾರ ಹಾಗೂ ನಿಯಂತ್ರಣ ಕೊಠಡಿಯಲ್ಲಿ ಮಾತ್ರ ಕ್ಯಾಮರಾಗಳನ್ನು ಇರಿಸಲಾಗಿತ್ತು. ಇದರಿಂದ ಪರೀಕ್ಷಾ ಕೊಠಡಿಗಳ ಒಳಗಿನ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿರಲಿಲ್ಲ.
ಬುಧವಾರ ಬಿಜೆಪಿಯ ಹೊಸ ಕಾರ್ಯಕರ್ತರೊಂದಿಗೆ ಮಾತನಾಡಿದ ಸಿಎಂ ಧಾಮಿ, “ಕೆಲವು ವ್ಯಕ್ತಿಗಳು ಒಗ್ಗಟ್ಟಾಗಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಷಡ್ಯಂತ್ರ ರೂಪಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೋಚಿಂಗ್ ಮತ್ತು ವಂಚನೆ ಮಾಫಿಯಾದಲ್ಲಿ ತೊಡಗಿರುವ ಗುಂಪುಗಳು ಒಟ್ಟಾಗಿ ರಾಜ್ಯದಲ್ಲಿ ‘ನಕಲ್ ಜಿಹಾದ್’ ನಡೆಸುತ್ತಿವೆ. ಈ ಕೃತ್ಯಗಳ ಮೂಲಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಾಫಿಯಾಗಳು ಮತ್ತು ತಪ್ಪಿತಸ್ಥರನ್ನು ಸಂಪೂರ್ಣವಾಗಿ ನಾಶಮಾಡುವವರೆಗೆ ತಾವು ವಿಶ್ರಮಿಸುವುದಿಲ್ಲ ಎಂದು ಧಾಮಿ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಸೂರ್ಯಕಾಂತ್ ಧಸಾಮಾ ಅವರು ಸಿಎಂ ಧಾಮಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸರ್ಕಾರದ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಕೋಮುವಾದವನ್ನು ಒಂದು ಸುಲಭ ಮಾರ್ಗವಾಗಿ ಬಳಸುತ್ತಿದೆ ಎಂದಿದ್ದಾರೆ.
ಪರೀಕ್ಷೆಗೆ ಒಂದು ದಿನ ಮೊದಲು ವಂಚಕ ಎನ್ನಲಾದ ಹಕಮ್ ಸಿಂಗ್‌ನನ್ನು ಬೇರೊಂದು ಪ್ರಕರಣದಲ್ಲಿ ಬಂಧಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವಾರು ಹೆಸರುಗಳು ಬಹಿರಂಗವಾಗಿವೆ. ಆದರೆ, ಸಿಎಂ ಧಾಮಿ ಇಬ್ಬರು ಮುಸ್ಲಿಂ ಆರೋಪಿಗಳ ಹೆಸರುಗಳನ್ನು ಮಾತ್ರ ಉಲ್ಲೇಖಿಸಿ ಪ್ರಕರಣವನ್ನು ‘ಜಿಹಾದ್’ ಎಂದು ಕರೆದಿದ್ದಾರೆ ಎಂದು ಧಸಾಮಾ ಕಿಡಿಕಾರಿದ್ದಾರೆ.
ಪರೀಕ್ಷೆಯಲ್ಲಿ ಪಾಸ್ ಮಾಡಿಸುವ ಭರವಸೆ ನೀಡಿ ಆರು ಅಭ್ಯರ್ಥಿಗಳಿಂದ 12 ಲಕ್ಷದಿಂದ 15 ಲಕ್ಷ ರೂಪಾಯಿಗಳವರೆಗೆ ಹಣ ವಸೂಲಿ ಮಾಡಲು ಪ್ರಯತ್ನಿಸಿದ ಆರೋಪದ ಮೇಲೆ ಪೊಲೀಸರು ಹಕಮ್ ಸಿಂಗ್ ಮತ್ತು ಪಂಕಜ್ ಗೌರ್ ಎಂಬವರನ್ನು ಬಂಧಿಸಿದ್ದಾರೆ ಎಂದು ವರದಿಗಳು ಹೇಳಿವೆ.


