Homeಕಥೆಭಾನುವಾರದ ಓದು; ವಿ ಆರ್ ಕಾರ್ಪೆಂಟರ್ ಹೊಸ ಕಥೆ 'ರೌಡಿಶೀಟರ್'

ಭಾನುವಾರದ ಓದು; ವಿ ಆರ್ ಕಾರ್ಪೆಂಟರ್ ಹೊಸ ಕಥೆ ‘ರೌಡಿಶೀಟರ್’

- Advertisement -
- Advertisement -

‘ಛೇ, ನಾನು ಹೀಗೆ ಮಾಡಬಾರದಿತ್ತು. ನಾನೇ ನಿರೂಪಿಸಿದ ಅದ್ಭುತ ಪಾತ್ರದ ಮೇಲೆಯೇ ಹಲ್ಲೆ ಮಾಡುವುದೆಂದರೆ ಎಷ್ಟು ಸರಿ? ಬಹುಶಃ ನಾನು ಅನಗತ್ಯ ಪ್ರಚೋದನೆಗೊಳಪಟ್ಟುಬಿಟ್ಟೆ. ಆ ಕ್ಷಣದ ನನ್ನ ವರ್‍ತನೆ ಕೂಡ ಸರಿಯಿಲ್ಲ. ಅದನ್ನು ನಾಗರಿಕ ಸಮಾಜ ಎಂದಿಗೂ ಒಪ್ಪುವುದಿಲ್ಲ. ಒಬ್ಬ ಬರಹಗಾರ, ರೌಡಿಯ ಥರ ಇನ್ನೊಬ್ಬ ನಿವೃತ್ತಿಯ ಅಂಚಿನಲ್ಲಿದ್ದ ರೌಡಿಯ ಮೇಲೆ ಹಲ್ಲೆ ಮಾಡುವುದನ್ನು ಈ ಸಮಾಜ ಎಂದಿಗೂ ಒಪ್ಪುವುದಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅವನ ತಪ್ಪು ಏನೇ ಇರಲಿ, ಆದರೆ ವಿದ್ಯಾವಂತನಾದ ಅದರಲ್ಲೂ ಸಮಾಜದ ಹುಳುಕುಗಳನ್ನು ಎತ್ತಿತೋರಿಸುವ ಸೃಜನಶೀಲ ಬರಹಗಾರನಾದ ನಾನು ಈ ರೀತಿ ವರ್‍ತಿಸಿದ್ದು ಅಪರಾಧ ಕೂಡ…’

ಅಂದು ಪ್ರಖ್ಯಾತ ಕಾದಂಬರಿಕಾರ ದೇವರಾಜನ ಮನಸ್ಸಿನಲ್ಲಿ ಸುಳಿದ ಪಾಪಪ್ರಜ್ಞೆಯ ಗಾಢ ಆಲೋಚನೆ ಇದು. ತನ್ನನ್ನು ಪ್ರಖ್ಯಾತಿಯ ಉತ್ತುಂಗಕ್ಕೆ ಏರಿಸಿದ ತನ್ನದೇ ಕಾದಂಬರಿಯ ಪಾತ್ರವಾಗಿ ಮೆರೆದ ನಿಜ ವ್ಯಕ್ತಿಯ ಮೇಲೆ ಕೇವಲ ಒಂದು ತಿಂಗಳ ಹಿಂದೆಯಷ್ಟೇ ಹಲ್ಲೆಮಾಡಿಬಿಟ್ಟಿದ್ದ. ಅದನ್ನು ಹಲ್ಲೆ ಅನ್ನುವುದಕ್ಕಿಂತಲೂ ತನ್ನ ಕೃತಿಗಳನ್ನು ಸಾಹಿತ್ಯದ ಆಚೆಗಿಟ್ಟು ನೋಡುವ ಅಥವಾ ಸಾರಾಸಗಟಾಗಿ ನಿರಾಕರಣೆ ಮಾಡುವ ಕಟು ವಿಮರ್‍ಶೆ ಎಂದು ಅವನಿಗೇ ಅನ್ನಿಸಿಬಿಟ್ಟಿತ್ತು. ಈ ಹಲ್ಲೆಯ ಕುರಿತು ಬಹಳ ಚಿಂತಾಕ್ರಾಂತನಾಗಿದ್ದ. ವಾಶ್‌ರೂಮಿನ ಮೌನದೊಳಗೆ ಕೈಯ್ಯಲ್ಲಿದ್ದ ಸಿಗರೇಟು ಉರಿಯುತ್ತಿತ್ತು.

****

ಅವನು ತನ್ನ ಕೃತಿಗಳಲ್ಲಿ ಮೂಡುವ ಪಾತ್ರಗಳನ್ನು ಬಹಳ ಹಚ್ಚಿಕೊಂಡು ಸಲಹುತ್ತಿದ್ದ. ಮಮಕಾರದಿಂದ ಉತ್ತಮ ಪದಗಳನ್ನು ಉಪಯೋಗಿಸಿ, ತೀವ್ರ ನಿಗಾವಹಿಸಿ ಅಧ್ಯಯನಶೀಲನಾಗಿ ಬರೆಯುತ್ತಿದ್ದ ದೇವರಾಜನು ಅಂದು ವ್ಯಗ್ರನಾಗಿ ವರ್‍ತಿಸಿದ್ದು ಹಲವರಲ್ಲಿ ಅಚ್ಚರಿಯನ್ನು ಮೂಡಿಸಿತ್ತು. ಆ ಘಟನೆಯು, ಹೀಗೆ ಬೀದಿ ಜಗಳಕ್ಕೆ ಬಿದ್ದ ದೇವರಾಜನ ಬಗ್ಗೆ ಇನ್ನಷ್ಟು ನಿರ್‍ಲಕ್ಷ್ಯವನ್ನು ತೋರಿಸುವುದರತ್ತ ಪೂರಕ ವಾತಾವರಣವನ್ನು ನಿರ್‍ಮಿಸಲು ಸಂಚು ಹೂಡಿದಂತೆ ಗೋಚರಿಸುತ್ತಿತ್ತು. ಯಾಕೆಂದರೆ ಪ್ರಖ್ಯಾತ ಸಾಹಿತಿಯಾಗಿದ್ದರೂ, ಊರಿನ ಯಾರೊಬ್ಬರೂ ದೇವರಾಜನ ಸಾಹಿತ್ಯದ ಬಗ್ಗೆ, ಅವನಿಗಿದ್ದ ಪ್ರತಿಭೆಯ ಬಗ್ಗೆ ಮಾತನಾಡಿಕೊಳ್ಳುತ್ತಿರಲಿಲ್ಲ. ’ಏನೋ ಬರೀತನಂತೆ’ ಎಂದು ನಿರ್‍ಭಾವುಕವಾಗಿ ಮಾತಾಡಿಕೊಳ್ಳುತ್ತಿದ್ದರು. ಯಾವುದೇ ಸಾಂಸ್ಕೃತಿಕ ಕಾರ್‍ಯಕ್ರಮಗಳಿಗೆ ಈತನ ಉಪಸ್ಥಿತಿಯನ್ನು ಆ ಊರು ಬಯಸುತ್ತಿರಲಿಲ್ಲ. ಜಗತ್ತಿನ ಎಲ್ಲಾ ವಿಷಯಗಳನ್ನೂ ಚರ್‍ಚಿಸುವ ಜನರಿರುವ ಊರು ತನ್ನ ಬಗ್ಗೆ ಮಾತ್ರ ಇಂಥ ದಿವ್ಯ ನಿರ್‍ಲಕ್ಷ್ಯ ತೋರಿಸುತ್ತಿದ್ದದ್ದು ದೇವರಾಜನಿಗೆ ಅಪಾರವಾದ ಸಿಟ್ಟಿಗೆ ಕಾರಣವಾಗಿತ್ತು. ಅದು ತನಗಾಗುತ್ತಿರುವ ನಿರಂತರ ಅವಮಾನವೆಂದೇ ತಿಳಿದಿದ್ದ. ಈ ಗಲಾಟೆ ನಡೆದ ಸುಮಾರು ಒಂದು ತಿಂಗಳು ತೆಪ್ಪಗಿದ್ದ ದೇವರಾಜನಿಗೆ ಇದ್ದಕ್ಕಿದ್ದಂತೆ ಪಾಪಪ್ರಜ್ಞೆಯೆಂಬುದು ದಿಢೀರನೇ ಆವರಿಸಿಕೊಂಡ ಭೂತದಂತೆ ಗೋಚರಿಸುತ್ತಿತ್ತು. ಅಂದು ಆದದ್ದರ ಬಗ್ಗೆ ತನ್ನೂರು ಏನೊಂದನ್ನೂ ಮುಖತಃ ಹೇಳದಿದ್ದರೂ, ಹಿನ್ನೆಲೆಯಲ್ಲಿ ಆಡುತ್ತಿದ್ದ ಮಾತುಗಳನ್ನು ಕೇಳಿಸಿಕೊಳ್ಳಲಾರದಷ್ಟು ದೇವರಾಜ ಕಿವುಡನಾಗಿರಲಿಲ್ಲ.

ಅಸಲಿಗೆ ಅಂದು ನಡೆದದ್ದು ಇಷ್ಟೇ – ದೇವರಾಜನ ಮಗ ಮತ್ತು ಅವನ ಗೆಳೆಯರು ರೌಡಿಶೀಟರ್ ನಾಗನ ತಾಯಿ ಕೂಡಿಹಾಕಿದ್ದ ಪೊರಕೆಕಡ್ಡಿಗಳ ಕಚ್ಚಾ ಪನ್ನೆಗಳಿಗೆ ಹುಡುಗಾಟಿಕೆಯಲ್ಲಿ ಬೆಂಕಿ ಹಚ್ಚಿದ್ದರ ಪರಿಣಾಮವಾಗಿ ಅಲ್ಲೇ ನಿಲ್ಲಿಸಿದ್ದ ಎಂಟು ಸಾವಿರ ಬೆಲೆಬಾಳುತ್ತಿದ್ದ ಹಳೆಯ ಬಜಾಜ್ ಚೇತಕ್ ಸ್ಕೂಟರ್ ಸುಟ್ಟುಹೋಗಿತ್ತು. ಅವನ ತಾಯಿ ವೆಂಕಟಮ್ಮ ದಿಣ್ಣೆಯನ್ನೆಲ್ಲಾ ಹಾದು, ಕಡ್ಡಿಗೆ ಕಡ್ಡಿ ಎಂಬಂತೆ ಕೂಡಿಸಿ, ಅಂದಾಜು ಸುಮಾರು ಐದಾರು ಸಾವಿರ ಬೆಲೆಬಾಳುವ, ಇನ್ನೂ ಊಗು ಉದುರಿಸದ ಪೊರಕೆಯ ಕಡ್ಡಿಯ ಹತ್ತಾರು ಪನ್ನೆಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಬೂದಿಯಾಗಿದ್ದವು. ಇನ್ನು, ಕಾರ್‍ಬೋರೇಟರ್ ಕೆಟ್ಟುಹೋಗಿದ್ದ ಚೇತಕ್ ಸ್ಕೂಟರ್ ರಿಪೇರಿಗಾಗಿ ಶಿವಾಜಿನಗರದ ಗುಜರಿ ಅಂಗಡಿಗೆ ಸುತ್ತಾಡಿ ಸುಸ್ತಾಗಿದ್ದ ನಾಗ, ಬೇಜಾರಿನಿಂದ ತನ್ನ ಮನೆಯ ಗೋಡೆಗೆ ಅದನ್ನು ಆನಿಸಿ ನಿಲ್ಲಿಸಿದ್ದ. ಅದರ ಪಕ್ಕದಲ್ಲೂ ಅಲ್ಲದೆ, ಅದರ ಎದೆಯ ಮೇಲೂ ವೆಂಕಟಮ್ಮ ಪೊರಕೆಕಡ್ಡಿಯ ಪನ್ನೆಗಳನ್ನು ಪೇರಿಸಿದ್ದಳು. ಈ ಕೃತ್ಯವನ್ನು ದೇವರಾಜನ ಮಗನೇ ಮಾಡಿದ್ದನೆಂಬುದಕ್ಕೆ ಯಾವುದೇ ಪುರಾವೆ ಇರಲಿಲ್ಲ.

ಅವರಿವರು ಹೇಳಿದ ಹೇಳಿಕೆ ಮಾತುಗಳನ್ನೇ ಆಧಾರವಾಗಿಟ್ಟುಕೊಂಡು ವೆಂಕಟಮ್ಮ ತನ್ನ ಮಾತೃಭಾಷೆಯಾದ ತೆಲುಗಿನಲ್ಲಿ ’ವಾನಿ ಮಕಾನಿಕಿ ನಾ ಸಾಡು ಪೋಯ್ನಾನಿ’ ಎಂಬ ಇನ್ನಿತರ ಅಸಂಖ್ಯಾತ ಬೈಗುಳಗಳನ್ನು ಸ್ಫುರಿಸುತ್ತಿದ್ದಳು. ಆಕೆ ಬೈಯ್ಯುವುದರಲ್ಲಿ ವಿಶೇಷ ತರಬೇತಿ ಪಡೆದಂತಿದ್ದಳು. ಒಮ್ಮೆ ಒಂದು ಪದವನ್ನು ಉಪಯೋಗಿಸಿ ಬೈದರೆ ಮುಗಿಯಿತು, ಆ ಪದವನ್ನು ಮತ್ತೊಮ್ಮೆ ರಿಪೀಟ್ ಮಾಡದೆ, ನಿರರ್‍ಗಳವಾಗಿ ಬೈಯ್ಯುತ್ತಿದ್ದಳು. ಅದು ದೇವರಾಜನ ಹೆಂಡತಿ ಗಾಯತ್ರಿಯ ಕಣ್ಣುಗಳನ್ನು ಕೆಂಪಗಾಗಿಸಿದ್ದವು.

ಗಾಯತ್ರಿಗೂ ಅಷ್ಟಿಷ್ಟು ತೆಲುಗು ಅರ್‍ಥವಾಗುತ್ತಿದ್ದರ ಪರಿಣಾಮ ತನ್ನ ಗಂಡನಿಗೆ ಸೂಕ್ಷ್ಮವಾಗಿ ಈ ಘಟನೆಯನ್ನು ಪರಿಹರಿಸಲು ಕೇಳಿಕೊಂಡಿದ್ದಳು. ಪ್ರಖರ ಸಾಹಿತ್ಯದ ಪ್ರಭೆಯಿಂದ ನಲುಗುತ್ತಿದ್ದ ದೇವರಾಜನಿಗೆ ಈ ಘಟನೆ ಕಗ್ಗಂಟಾಗಿತ್ತು. ಪರಿಹರಿಸುವ ಕ್ರಮಗಳ ಬಗ್ಗೆ ಬಹಳ ಚಿಂತಿಸುತ್ತಿದ್ದ. ಅವನ ಓದು, ಆಲೋಚನೆ ಕೈಕೊಟ್ಟಂತಿತ್ತು. ಪಾಂಡಿತ್ಯ ಅನಾಥಭಾವ ಅನುಭವಿಸುತ್ತಿತ್ತು. ಹಾಗೆಂದು ಅದನ್ನು ಸುಲಭಕ್ಕೆ ಬಿಡುವಂತೆಯೂ ಇರಲಿಲ್ಲ. ಯಾಕೆಂದರೆ ಇತ್ತೀಚೆಗೆ ಗಾಯತ್ರಿ ಮತ್ತು ದೇವರಾಜನ ದಾಂಪತ್ಯ ಹದಗೆಟ್ಟಿತ್ತು. ವೈಯಕ್ತಿಕ ಕಾರಣಗಳಿಗೆ ಮಲಗುವ ಮಂಚಗಳನ್ನು ಒಂದು ಮಾಡಿಕೊಳ್ಳಲು ಹೆಣಗುತ್ತಿದ್ದ ಇಬ್ಬರಿಗೂ ಈ ಘಟನೆ ಅವಕಾಶವಾಗಿ ಒದಗಿಬಂದಿತ್ತು. ಅಂದು ಬೆಳಗ್ಗೆಯೇ ವೆಂಕಟಮ್ಮ ಬೈಯ್ಯಲು ಶುರುವಿಟ್ಟಿದ್ದಳು. ಎರಡುಮೂರು ದಿನಗಳಿಂದ ಕೇಳಿಕೇಳಿ ಸಾಕಾಗಿದ್ದ ಗಾಯತ್ರಿ ವೆಂಕಟಮ್ಮನೊಂದಿಗೆ ಬೈಗುಳದ ಪೈಪೋಟಿಗೆ ಬಿದ್ದಳು. ಗಾಯತ್ರಿಯ ಬೈಗುಳದ ಪ್ರತಿಭೆಗೆ ದೇವರಾಜ ದಂಗಾಗಿದ್ದ. ಅವಳೊಳಗೆ ಇಷ್ಟು ದಿನ ಸುಪ್ತವಾಗಿ ಅಡಗಿ ಕುಳಿತಿದ್ದ ಪದಪುಂಜಗಳನ್ನು ಕೇಳಿಸಿಕೊಂಡು ಏನು ಮಾಡಬೇಕೆಂದು ತೋಚದೆ ಸುಮ್ಮನೇ ಒಳಗೇ ಕುಳಿತಿದ್ದ. ಪರಸ್ಪರ ಬೈಗುಳಗಳು ತಾರಕಕ್ಕೆ ಏರಿತ್ತು.

ಇದನ್ನು ಬಿಟ್ಟರೆ ಆಗದು ಎಂದು ಹೊರಗೆ ಬಂದ ದೇವರಾಜ ’ಗಾಯಿ, ಏನೇ ನಿನ್ನ ಬಾಯಿ? ಇಷ್ಟೊಂದು ಹಲ್ಕಾ ಮಾತು ಆಡ್ತೀ? ನಡೀ ಒಳಗೆ’ ಎಂದು ಗದರಿದ.

ದೇವರಾಜನ ಗದರಿಕೆ ಕೇಳಿಸಿಕೊಂಡ ನಾಗ ಗಾಯತ್ರಿಗೆ ’ಮೋ ಪೋಮಾ ಲೋಪಲಿಕಿ’ ಅಂದ.

ಅವನ ತಾಯಿಯನ್ನು ಗದರಿಸದೆ ತನ್ನ ಉಸಾಬರಿಗೆ ಬಂದ ನಾಗನ ಮೇಲೆ ಗಾಯತ್ರಿಗೆ ಸಿಟ್ಟು ಬಂದು ’ಏಯ್ ನೀನ್ ಹೋಗಲೇ’ ಎಂದಳು.

ತನಗಿಂತ ಚಿಕ್ಕವಳು ಹೀಗೆ ಬೀದಿಯಲ್ಲಿ ನಿಂತು ’ಹೋಗಲೇ’ ಎಂದಿದ್ದು ನಾಗನಿಗೆ ಕಸಿವಿಸಿ ಎನಿಸಿ, ’ಗುದ್ದ ಮೂಸಿಕೊನಿ ಪೋವೇ’ ಎಂದುಬಿಟ್ಟ.

ಗಾಯತ್ರಿಗೆ ಅಳುವಿನ ಸಿಟ್ಟಿನಲ್ಲಿ ಕುದಿಯುತ್ತಿದ್ದಳು. ಈ ಮಾತು ಕೇಳಿ ದೇವರಾಜನೂ ತನ್ನ ತಾಳ್ಮೆ ಕಳೆದುಕೊಂಡ. ಅದೂಅಲ್ಲದೆ ಬೀದಿಯಲ್ಲಿ ತನ್ನ ಹೆಂಡತಿಯನ್ನು ಹಾಗೆ ಅಂದಿದ್ದು ಅವನಿಗೆ ತಡೆಯಲು ಆಗಲಿಲ್ಲ. ಓಡಿಹೋಗಿ ಎಡಗೈಲಿ ನಾಗನ ಕೊಳ್ಳಪಟ್ಟಿ ಹಿಡಿದು, ಬಲಗೈ ಮುಷ್ಠಿ ಮಾಡಿ ಮೂತಿಗೆ ಗುದ್ದಿಬಿಟ್ಟ. ಚಿಲ್ಲನೇ ರಕ್ತ ಚಿಮ್ಮಿತು. ನಾಗನ ಎರಡು ಹಲ್ಲುಗಳು ಉದುರಿ ನೆಲಕ್ಕೆ ಬಿದ್ದವು.

ಈ ಅನಿರೀಕ್ಷಿತ ದಾಳಿಯಿಂದ ಕಂಗೆಟ್ಟ ನಾಗ ಕೆಳಗೆ ಬಿದ್ದಿದ್ದ ಹಲ್ಲುಗಳನ್ನು ಎತ್ತಿಕೊಂಡು ಸ್ಟೇಷನ್ನಿಗೆ ಓಡಿದ. ನಾಗನ ಪೂರ್‍ವಾಪರಗಳ ಅರಿವಿದ್ದ ಪೊಲೀಸರು ಅವನನ್ನೇ ಬೈದು ಸಾಗಹಾಕಿದ್ದರು.

ಕೆಲವೇಕೆಲವು ವರ್‍ಷಗಳ ಹಿಂದೆ ನಾಗ ಹೀಗೆ ಜುಜುಬಿ ವ್ಯಕ್ತಿಗಳ ಕೈಲಿ ವದೆ ತಿನ್ನುವ ಆಸಾಮಿಯಾಗಿರಲಿಲ್ಲ. ಸಾರಾಯಿ ವೆಂಡರ್‌ನನ್ನು ಕೇವಲ ನೂರೈವತ್ತು ರೂಪಾಯಿಗಳಿಗೆ ಕೊಲೆ ಮಾಡಿ ಜೈಲು ನೋಡಿಬಂದಿದ್ದ. ಜೈಲಿಂದ ಬಂದವನೇ ತನ್ನದೇ ಒಂದಷ್ಟು ಗ್ಯಾಂಗ್ ಕಟ್ಟಿಕೊಂಡು ಬಿಎಸ್‌ಎಫ್, ಸಿಆರ್‌ಪಿಎಫ್ ಅಲ್ಲದೆ, ವೆಂಕಟಾಲದ ಭುವನ್ ಐಟಿಐನಲ್ಲಿ ಓದುತ್ತಿದ್ದ ಹೊರರಾಜ್ಯದ ವಿದ್ಯಾರ್‍ಥಿಗಳನ್ನು ಸುಲಿದು ಆರಾಮವಾಗಿ ಜೀವಿಸುತ್ತಿದ್ದ. ಸಾರಾಯಿ ವೆಂಡರ್ ಕೊಲೆಯನ್ನು ಆಕಸ್ಮಿಕವಾಗಿ ಮಾಡಿಮುಗಿಸಿ ಜೈಲು ಅನುಭವಿಸಿದ್ದರೂ, ಆನಂತರದ ರಾಬರಿಗಳು ಅವನ ಗುಂಡಿಗೆತನಕ್ಕೆ ಸವಾಲು ಒಡ್ಡಿದ್ದವು.

ಒಮ್ಮೆ ಬಾಗಲೂರು ಕ್ರಾಸಿನ ಚೇತನ್ ಡಾಬಾದ ಮುಂದೆ ಅವನನ್ನು ಅಮೃತಹಳ್ಳಿಯ ಗ್ಯಾಂಗಿನವರು ಅಮರಿಕೊಂಡರು. ಅಂದು ಅವನ ಅದೃಷ್ಟಕ್ಕೆ ಅವನ ಬೆನ್ನಲ್ಲಿ ಲಾಂಗ್ ಕೂಡಾ ಇತ್ತು. ಅದನ್ನು ಎಳೆಯುವ ರಭಸದಲ್ಲಿ ಪ್ಯಾಂಟ್ ಹರಿದುಹೋಗಿತ್ತು, ತನ್ನನ್ನು ಅಟ್ಯಾಕ್ ಮಾಡಲು ಬಂದ ಗ್ಯಾಂಗಿನ ಮುಂದೆ ಬೆತ್ತಲಾಗಿಬಿಟ್ಟ! ಅಷ್ಟೇ ಸಾಕಾಗಿತ್ತು… ಆ ಗ್ಯಾಂಗಿನ ಕಿತ್ಬಿಯೊಬ್ಬನಿಗೆ ನಾಗನ ಶಿಶ್ನದ ಮೇಲೆ ಆಗಿರುವ ಹಳೆಯ ಕುರುಪೊಂದು ಕಣ್ಣಿಗೆ ಬಿತ್ತು! ಅವನು ಗೊಳ್ ಎಂದು ನಗಲು ಶುರುವಿಟ್ಟು, ತನ್ನ ಗ್ಯಾಂಗಿನ ಎಲ್ಲರಿಗೂ ಗೊತ್ತುಮಾಡಿದ. ಅಂದಿನಿಂದ ಆತ ತೊಲ್ಡೇಟ್ ನಾಗ ಎಂದು ಹೆಸರುವಾಸಿಯಾದ!

ಅವನಿಗೆ ಆ ಭಾಗದಲ್ಲಿ ಪೆಟ್ಟು ಆದದ್ದು ಇನ್ನೊಂದು ಕಥೆ. ಒಮ್ಮೆ ಒಬ್ಬಳ ಸಂಗ ಮಾಡಿದ ಮೇಲೆ ದುಡ್ಡು ಕೊಡದೆ ಸಾಲ ಹೇಳಿದನಂತೆ. ಆಗ ಅವಳು ’ನೀ ಡಬ್ಬೇಮಿ ವದ್ದು, ನುವ್ವು ಬಾಗ ಚೇಸ್ತಾವು, ಇಂಕೊಕ ತಡವ ಚೆಯ್ಯಿ’ ಎಂದು ಆಹ್ವಾನ ಕೊಟ್ಟಳಂತೆ! ಅವಳ ಆಹ್ವಾನವನ್ನು ಸ್ವೀಕರಿಸಿ ಗಮ್ಮತ್ತಿನಲ್ಲಿ ಇರುವಾಗ ಬ್ಲೇಡ್ ತೆಗೆದುಕೊಂಡು ಕುರುಪು ಹಾಕಿದಳಂತೆ! ಅಲ್ಲಿಂದ ಯಾವೊಬ್ಬಳ ಸಹವಾಸಕ್ಕೂ ಬೀಳದೆ ತನ್ನತನವನ್ನು ಕಾಪಾಡಿಕೊಂಡಿದ್ದ.

ಮತ್ತೊಂದು ಸಾರಿ ಅಗ್ರಹಾರ ಲೇಔಟ್‌ನ ಬಸ್ಟಾಂಡಿನಲ್ಲಿ ಒಂದಷ್ಟು ಹುಡುಗರು ನಾಗನನ್ನು ಸುತ್ತುವರೆದರು. ಆಗ ನಾಗನ ಹತ್ತಿರ ಯಾವುದೇ ಟೂಲ್ ಇರಲಿಲ್ಲ. ತಪ್ಪಿಸಿಕೊಳ್ಳಲು ಆಸ್ಪದವೇ ಇಲ್ಲದಂತೆ ತಡಕಾಡುತ್ತಿದ್ದ. ಕಡೆಗೂ ತಲೆ ಓಡಿಸಿ, ’ನಾನಕಿ ಪುಟ್ಟಿನೋಡು ನಾ ಮೀದ ಚೆಯ್ಯಿ ಎತ್ತೇಲ್ದು’ ಎಂದ. ಇವನ ಮಾತಿಂದ ಇನ್ನಷ್ಟು ಕೆರಳಿದ ಹುಡುಗರು ಮುಖಾಮೂತಿ ನೋಡದೆ ಚಚ್ಚಿ ಕಳಿಸಿದ್ದರು. ಒಬ್ಬನಂತೂ ಅಲ್ಲಿದ್ದ ಹಾಲೋಬ್ರಿಕ್ ಕಾಂಪೌಂಡಿಗೆ ಅವನ ತಲೆಯನ್ನು ಉಜ್ಜಿಬಿಟ್ಟ. ಅದರ ಪರಿಣಾಮವಾಗಿ ಮುಂದಲೆಯ ಕೂದಲು ಚರ್‍ಮ ಸಮೇತ ಕಿತ್ತುಬಂತು. ಆನಂತರ ಆ ಭಾಗದಲ್ಲಿ ಕೂದಲು ಬೆಳೆಯದೇ ಆಫ್‌ಬೋಡ ನಾಗನಾದ! ಅದನ್ನು ಮರೆಮಾಚಲು ಟೋಪಿ ಧರಿಸಿ ಟೋಪಿ ನಾಗನೂ ಆದ!

ಇಂಥ ಖತರ್‌ನಾಕ್ ನಾಗ ದೇವರಾಜನನ್ನು ಊರಿನ ಯಥಾರ್‍ಥದಂತೆ ಮೆತ್ತಗಿನ ವ್ಯಕ್ತಿಯೆಂದೇ ಬಗೆದಿದ್ದ. ಯಾವಾಗಲೂ ಯಾವುದೋ ಪುಸ್ತಕವನ್ನು ಓದುತ್ತಾ, ಇಲ್ಲವೇ ಖಾಲಿ ಹಾಳೆಯಲ್ಲಿ ಮುಖ ಹುದುಗಿಸಿರುವ ಸಲೀಸು ಗ್ರಾಮಲೆಕ್ಕಿಗನಂತೆ ನಾಗನಿಗೆ ಕಾಣಿಸುತ್ತಿದ್ದ. ಸ್ವಲ್ಪ ತಿಳಿವಳಿಕೆ ಉಳ್ಳವರಿಗೆ ಪತ್ರಿಕೆಗಳಲ್ಲಿ ಬರುವ ಅವನ ಕವಿತೆ-ಕತೆ-ಸಂದರ್‍ಶನವನ್ನೋ ಮತ್ತು ಫೋಟೋವನ್ನೋ ತೋರಿಸುತ್ತಾ, ’ಇದು ನಾನು ಆ ಹಿನ್ನೆಲೆಯಲ್ಲಿ ಬರೆದದ್ದು, ಅವರು ಈ ರೀತಿಯ ಪ್ರಶ್ನೆಯನ್ನು ಕೇಳಿದಾಗ ಹೀಗೆ ಉತ್ತರಿಸಿ ಅವರನ್ನೇ ದಂಗು ಬಡಿಸಿದೆ’ ಎನ್ನುತ್ತಾ ರ್‍ಯಾಂಕ್ ಪಡೆಯಲು ತುದಿಗಾಲಲ್ಲಿ ನಿಂತ ವಿದ್ಯಾರ್‍ಥಿಯಂತೆಯೂ ಭಾಸವಾಗುತ್ತಿದ್ದ. ವಯಸ್ಸಿನಲ್ಲಿ ನಾಗ ದೇವರಾಜನಿಗಿಂತ ದೊಡ್ಡವನು. ಅಕ್ಕಪಕ್ಕದ ಮನೆಯಾದ್ದರಿಂದ, ಚಿಕ್ಕಂದಿನಿಂದಲೂ ಒಂದು ರೀತಿಯ ಸಲುಗೆ ಇತ್ತಾದ್ದರಿಂದ ಹೋಗೋ ಬಾರೋ ಎನ್ನುವಷ್ಟು ಸಂಬಂಧವಿತ್ತು. ಆದರೆ ನಾಗನ ಕೊಲೆಗಿಲೆ ಮುಂತಾದ ಚಟುವಟಿಕೆಗಳು ದೇವರಾಜನ ಸಾಹಿತ್ಯದ ವ್ಯಕ್ತಿತ್ವಕ್ಕೆ ಒಗ್ಗದೆ ಸಂಬಂಧದ ಸರಪಳಿ ತುಂಡಾಗಿ ಬಹಳ ಕಾಲಗಳೇ ಸಂದಿದ್ದವು.

ಮದುವೆಯಾದ ಹೊಸತರಲ್ಲಿ ದೇವರಾಜನಲ್ಲಿ ಅಕ್ಷರ ಕುಶಲತೆ ಬಿಟ್ಟು ಬೇರೆ ಏನೇನೂ ಇರಲಿಲ್ಲ. ಸಾಹಿತ್ಯದ ಸೋಂಕಿಗೆ ತುತ್ತಾಗಿ ಸರಳ ಜೀವನವನ್ನು ಅನಿವಾರ್‍ಯವಾಗಿ ಒಗ್ಗಿಸಿಕೊಂಡುಬಿಟ್ಟಿದ್ದ. ಅದನ್ನು ಗಾಂಧಿವಾದಕ್ಕೆ ಹೋಲಿಸಿ ಎಲ್ಲಕಡೆಗೂ ಸಿಂಪತಿ ಗಿಟ್ಟಿಸಲೂ ಹೇಸದವನಂತೆ ವಾದಿಸುತ್ತಿದ್ದ. ಹಣದ ಪ್ರಾಮುಖ್ಯತೆಯನ್ನು ಪ್ರಸ್ತಾಪ ಮಾಡುವವರಿಗೆ ಟಾಲ್ಸ್‌ಟಾಯ್‌ನ ’ಮನುಷ್ಯನಿಗೆಷ್ಟು ಭೂಮಿ ಬೇಕು?’ ಕತೆಯ ಸಾರಾಂಶವನ್ನು ಹೇಳಿ ಬಾಯಿ ಮುಚ್ಚಿಸುತ್ತಿದ್ದ. ಸರಳವಾಗಿ ಬದುಕು ನಡೆಸುವ ಗಣ್ಯರ ಉದಾಹರಣೆಗಳನ್ನು ಕೊಟ್ಟು ಸವಾಲಾಗುತ್ತಿದ್ದ. ತಾನಾಗೇ ಎಲ್ಲವೂ ಹುಡುಕಿಕೊಂಡು ಬರುತ್ತದೆ ಎಂಬಂತೆ ದಾರಿ ಕಾಯುವಂತೆಯೂ ತನಗೆ ತಾನೇ ಕಾಣಿಸುತ್ತಿದ್ದ.

ಇಂಥ ದೇವರಾಜನ ಮದುವೆ ಸಮಯದಲ್ಲಿ ನಾಗ ಸಹಾಯಕ್ಕೆ ಬಂದು, ಸಂಬಂಧದ ಸರಪಳಿ ಮತ್ತೆ ಕೂಡಿಕೊಂಡಿತ್ತು. ಅದೇ ಸಲುಗೆಯಿಂದ ದೇವರಾಜ ತನ್ನ ಹೆಂಡತಿಯ ತವರಿಗೆ ಹೋಗಿಬರಲು ನಾಗನ ಚೇತಕ್ ಸ್ಕೂಟರ್ ಅನ್ನೇ ಬಳಸುತ್ತಿದ್ದ. ನಾಗ ಯಾವುದೇ ತಕರಾರು ಮಾಡದೆ ಚೇತಕ್ ಕೊಟ್ಟು ಸಹೃದಯತೆ ಮೆರೆಯುತ್ತಿದ್ದ. ಹೊಸಹೊಸಾ ಮಾದರಿಯ ಬೈಕ್‌ಗಳು ಬಂದಿರುವ ಈ ಕಾಲಘಟ್ಟದಲ್ಲೂ ಈ ಚೇತಕ್ ಸ್ಕೂಟರ್ ಏರಿಬರುವ ದೇವರಾಜನ್ನು ಕಂಡು ಗಾಯತ್ರಿಯ ತವರಿನವರು ಎರಡು ಕನಸು ಚಿತ್ರದ ರಾಜಕುಮಾರ್ ಅವರನ್ನು ನೆನಪಿಸಿ ಕಿಚಾಯಿಸುತ್ತಿದ್ದರು. ಶುದ್ಧ ಸಾಹಿತಿಯಾಗಬೇಕೆಂದು ತೀರ್‍ಮಾನ ಮಾಡಿಕೊಂಡಂತಿದ್ದ ದೇವರಾಜನಿಗೆ ಸಿನಿಮಾ ನಟರೆಂದರೆ ಅಷ್ಟಕ್ಕಷ್ಟೇ. ಸಿನಿಮಾ ನಟರಿಗೆ ಬಹಳ ಸುಲಭವಾಗಿ ದಕ್ಕಿಬಿಡುವ ಗೌರವ, ಹೆಸರು, ಐಶ್ವರ್‍ಯಗಳ ಬಗ್ಗೆ ದೇವರಾಜನಿಗೆ ತೀವ್ರವಾದ ಅಸಮಾಧಾನವಿತ್ತು. ಒಂದು ಚಿತ್ರದ ಬರಹಗಾರನಿಗೆ ಸಿಗಲಾರದ ಗೌರವ, ಹಣ ಆ ಕತೆಯ ಪಾತ್ರವನ್ನು ನಟಿಸಿದ ನಟನಿಗೆ ಸಿಗುವ ಬಗ್ಗೆ ಅನೇಕ ವೇದಿಕೆಗಳಲ್ಲಿ ತನ್ನ ಅಸಮಾಧಾನವನ್ನು ದೇವರಾಜ ಹೊರಹಾಕುತ್ತಿದ್ದ. ಅದರ ಕಾರಣದಿಂದ ಸಾಕಷ್ಟು ಬಾರಿ ನಟನ ಅಭಿಮಾನಿಗಳಿಂದ ವಿರೋಧವನ್ನೂ ಎದುರಿಸಿದ್ದ. ಹಲ್ಲೆ ಯತ್ನಗಳೂ ಆಗಿದ್ದವು!

ತನ್ನನ್ನು ಎರಡು ಕನಸು ಚಿತ್ರದ ರಾಜಕುಮಾರನಿಗೆ ಹೋಲಿಸಿದ್ದರ ಬಗ್ಗೆ ಗಾಯತ್ರಿ ಒಂದು ಸಾರಿ ಪ್ರಸ್ತಾಪಿಸಿದಳು. ’ನಿನಗೆ ನಿನ್ನ ಗಂಡನ ಪ್ರತಿಭೆಯೇ ಗೊತ್ತಿಲ್ಲ. ನನ್ನಂಥ ಒಬ್ಬ ಲೇಖಕ ಇಂತಹ ಸಾವಿರ ರಾಜಕುಮಾರರನ್ನು ಸೃಷ್ಟಿಸಿಬಿಡಬಲ್ಲ; ಅದು ಬರವಣಿಗೆಯ ಶಕ್ತಿ. ನಾನೇನು, ನನ್ನ ಬರವಣಿಗೆ ಏನೆಂದು ನಿನ್ನ ಊರಿನವರಿಗೆ ತಿಳಿಹೇಳು’ ಎಂದು ರೇಗಿದ.

’ಅಯ್ಯೋ, ಅವರ ಕಲ್ಪನೆಯಲ್ಲಿ ನೀನು ಹಾಗೆ ಕಾಣಿಸುವುದು ಅವರ ತಪ್ಪೇ? ಅವರಿಗೆ ಮನರಂಜನೆಯಷ್ಟೇ ಮುಖ್ಯ, ನಿನ್ನ ಗಂಭೀರ ಸಾಹಿತ್ಯವನ್ನು ಇಟ್ಟುಕೊಂಡು ಅವರಿಗೆ ಏನೂ ಆಗಬೇಕಾಗಿಲ್ಲ. ಬೆಳಗ್ಗೆಯಿಂದ ಕಷ್ಟಪಟ್ಟು ದುಡಿಯುವವರಿಗೆ ಸಂಜೆ ಒಂದು ಚಲನಚಿತ್ರ ಕೊಡುವ ಸುಖ, ನಿನ್ನ ಕತೆಯಾಗಲೀ ಕಾದಂಬರಿಯಾಗಲೀ ನೀಡುವುದಿಲ್ಲ.’ ಎಂದಳು ಗಾಯತ್ರಿ.

ಮುಖಕ್ಕೆ ಹೊಡೆದಂತೆ, ಕಟು ವಿಮರ್‍ಶಕನೊಬ್ಬನ ವಿಮರ್‍ಶಾ ಧಾಟಿಯಂತಿದ್ದ ಗಾಯತ್ರಿಯ ಮಾತುಗಳು ದೇವರಾಜನಲ್ಲಿ ದೊಡ್ಡ ಗಾಯವನ್ನು ಮಾಡಲು ಹೊಂಚುಹಾಕುತ್ತಿತ್ತು. ಆದರೂ, ತನ್ನ ಎಂದಿನ ಸಂಯಮವನ್ನು ಕಳೆದುಕೊಳ್ಳುವ ವ್ಯಕ್ತಿತ್ವ ದೇವರಾಜನದ್ದಲ್ಲ. ಯಾಕೆಂದರೆ, ಇದಕ್ಕಿಂತಲೂ ಕಟುವಾದ ಮಾತುಗಳನ್ನು ಅನೇಕ ವೇದಿಕೆಗಳಲ್ಲಿ, ಸಂವಾದಗಳಲ್ಲಿ ಎದುರಿಸಿ ಬಂದಿದ್ದ. ಅಂದಿನಿಂದ ಅವಳನ್ನು, ಅವಳ ಊರನ್ನು ಸಮಯ ಸಿಕ್ಕಾಗಲೆಲ್ಲಾ ತನ್ನ ಪದ ಪಾಂಡಿತ್ಯವನ್ನು ಬಳಸಿ ತೆಗಳುತ್ತಿದ್ದ. ತನ್ನಂತ ಒಬ್ಬ ಪ್ರತಿಭಾವಂತನನ್ನು ನೀಡದ ಊರು ಊರೇ ಅಲ್ಲ ಎಂದು ವಾದಿಸುತ್ತಿದ್ದ. ಅವಳೂ ಕೂಡ ಅವನನ್ನು ಅಷ್ಟೇ ನಿರ್‍ಲಕ್ಷ್ಯ ಮಾಡಲು ಶುರುವಿಟ್ಟಳು. ದಾಂಪತ್ಯ ನೀರಸವಾಗತೊಡಗಿತು. ಹೀಗಿರುವ ವೇಳೆಯಲ್ಲಿ ಆ ಘಟನೆಯು ಇಬ್ಬರಿಗೂ ಪೂರಕವಾಗಿ ಒದಗಿ ಬಂದಿತ್ತು. ತನ್ನ ಮಾನ ಕಾಪಾಡಿದ ಗಂಡನ ಮೇಲೆ, ಆತನ ಸಾಹಿತ್ಯದ ಮೇಲೆ ಗಾಯತ್ರಿಗೆ ಆಸಕ್ತಿ ಮೂಡತೊಡಗಿತು. ದೇವರಾಜನ ಸಾಹಿತ್ಯ ಪ್ರಭೆ ಮತ್ತಷ್ಟು ಪ್ರಖರವಾಗುತ್ತಿತ್ತು. ನಾಳೆಯೋ ನಾಳಿದ್ದೋ ಜ್ಞಾನಪೀಠ ಹುಡುಕಿಕೊಂಡು ಬರುತ್ತದೆಂಬಂತೆ ಬರೆಯತೊಡಗಿದ. ಹೊಸಹೊಸ ಪಾತ್ರಗಳನ್ನು ಕುರಿತು ಯೋಚಿಸಿ, ಬರೆದು ಓದುಗರನ್ನು ಬೆಚ್ಚಿಬೀಳಿಸಿದರೆ ಹೇಗೆಂದು ಕಲ್ಪಿಸಿಕೊಂಡು ರೋಮಾಂಚನಗೊಳ್ಳುತ್ತಿದ್ದ.

*****

ಈ ಘಟನೆಯಾಗಿ ತಿಂಗಳು ಕಳೆದಿತ್ತು. ಅಂದು ಟಿವಿಯಲ್ಲಿ ದೇವರಾಜನ ಬದುಕು ಮತ್ತು ಸಾಹಿತ್ಯದ ಕುರಿತು ಸಂದರ್‍ಶನ ನಡೆಯುತ್ತಿತ್ತು, ಅದೂ ಲೈವ್ ಪ್ರೋಗ್ರಾಂ ಆದ್ದರಿಂದ ಅವನ ಓದುಗರು ನೇರವಾಗಿ ಪ್ರಶ್ನೆಗಳನ್ನು, ಪ್ರಶಂಸೆ ಮತ್ತು ಸುವಿಮರ್‍ಶೆ ಮಾಡುತ್ತಿದ್ದರು. ಅದರಲ್ಲಿ ಬಂದ ಒಂದು ಪ್ರಶ್ನೆ ದೇವರಾಜನಿಗೆ ಪಾಪಪ್ರಜ್ಞೆಗೆ ಕಾರಣವಾಯಿತು. ಪ್ರಶ್ನೆ ಸರಳವಾಗಿಯೂ, ಸ್ಪಷ್ಟವಾಗಿಯೂ ಇದ್ದರೂ ಅದು ಅವನ ಅಂತರಂಗವನ್ನು, ಅವನ ಸಾಹಿತ್ಯದ ಬದುಕನ್ನೇ ಕೆಣಕುವಂತಿತ್ತು. ಪ್ರಶ್ನೆ ಇಷ್ಟೇ – ’ಸರ್, ನೀವು ನಿಮ್ಮ ಕೃತಿಗಳಲ್ಲಿ ಬರುವ ಪಾತ್ರಗಳನ್ನು ಹೇಗೆ ಪೋಷಿಸುತ್ತೀರಿ? ಅವು ಕಾಲ್ಪನಿಕವಾಗಿರುತ್ತವೆಯೋ? ಅಥವಾ ನಿಮ್ಮ ಸುತ್ತಲಿನ ವ್ಯಕ್ತಿಗಳನ್ನೇ ಪಾತ್ರಗಳನ್ನಾಗಿ ಚಿತ್ರಿಸುತ್ತೀರೋ? ಅಂಥ ನಿಜ ಜೀವನದ ಪಾತ್ರಗಳು ನಿಮ್ಮ ಕೃತಿಗಳಲ್ಲಿ ಹೇಗೆಲ್ಲಾ ಬದುಕಬೇಕೆಂಬುದು ನಿಮ್ಮ ಅಭಿಲಾಷೆಯಾಗಿರುತ್ತದೆ?’ – ಈ ಪ್ರಶ್ನೆ ಎದುರಾದ ಗಳಿಗೆ ದೇವರಾಜ ಎರಡು ಲೋಟ ನೀರು ಕುಡಿದ, ದೇವರಾಜನ ಆತಂಕವನ್ನು ಅರಿತ ನಿರೂಪಕರು ಸಣ್ಣ ಬ್ರೇಕ್ ಘೋಷಿಸಿ, ಸುಧಾರಿಸಿಕೊಳ್ಳಲು ಕಾಲಾವಕಾಶ ಕೊಟ್ಟರು.

ತನಗೆ ತೊಡಿಸಿದ್ದ ಕಾಲರ್ ಮೈಕ್ ತೆಗೆದಿಟ್ಟು ವಾಶ್‌ರೂಮಿಗೆ ಹೋಗಿ, ದೀರ್‍ಘ ನಿಟ್ಟುಸಿರು ಬಿಟ್ಟು ಕಮೋಡ್ ಮೇಲೆ ಸುಮ್ಮನೇ ಕುಳಿತ. ಜೇಬಿನಲ್ಲಿದ್ದ ಕಿಂಗ್ ಸಿಗರೇಟ್ ಪ್ಯಾಕ್‌ನಿಂದ ಒಂದು ಸಿಗರೇಟ್ ಎಳೆದು ಹಚ್ಚಿದ. ಅಲಾರಂ ಹೊಡೆದುಕೊಳ್ಳತೊಡಗಿತು. ಸೆಕ್ಯೂರಿಟಿ ಬಂದು ವಾಶ್ ರೂಮಿನ ಬಾಗಿಲು ತಟ್ಟಿದ. ದೇವರಾಜ ಬಾಗಿಲು ತೆಗೆದೊಡನೆ, ’ಸರ್ ಇದು ನೋ ಸ್ಮೋಕಿಂಗ್ ಝೋನ್, ಪ್ಲೀಸ್ ಆರಿಸಿ’ ಎಂದು ನಿಂತ. ಅವನು ತನ್ನ ಎದೆಯ ಮೇಲೆಯೇ ನಿಂತಿದ್ದಾನೆಂದೆನಿಸಿತು. ಹೃದಯಬಡಿತ ಅವನಿಗೇ ಕೇಳಿಸುವಂತೆ, ಅಲಾರಂನ ಸದ್ದನ್ನೂ ಮೀರಿಸುವಂತಿತ್ತು. ಅಸಹನೆಯಿಂದ ಸಿಗರೇಟ್‌ಅನ್ನು ನೆಲಕ್ಕೆಸೆದು ಬಾಗಿಲು ತಳ್ಳಿ ಸೆಕ್ಯೂರಿಟಿಯನ್ನು ದುರದುರನೇ ನೋಡಿ ಸ್ಟುಡಿಯೋಗೆ ಹೋದ. ಅಷ್ಟರಲ್ಲಾಗಲೇ ಟಿವಿ ಪರದೆಯ ಮೇಲೆ ಪ್ರಖರ ಸಾಹಿತಿ ದೇವರಾಜ ನಾಗನ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಪ್ರಸಾರವಾಗುತ್ತಿತ್ತು. ದೇವರಾಜನ ಕಣ್ಣುಗಳು ಕಣ್ಣೀರಿನಿಂದ ಮಂಜಾದವು. ಸೆಕ್ಯೂರಿಟಿ ದೇವರಾಜ ಬಿಸಾಡಿಹೋಗಿದ್ದ ಸಿಗರೇಟನ್ನು ಎತ್ತಿ ಕಮೋಡಿಗೆ ಎಸೆದು ಫ್ಲಶ್ ಮಾಡಿದ.

ವಿ.ಆರ್.ಕಾರ್ಪೆಂಟರ್

ವಿ.ಆರ್.ಕಾರ್ಪೆಂಟರ್
ಯಲಹಂಕ ಸಮೀಪದ ವೆಂಕಟಾಲದವರಾದ ವಿ ಆರ್ ಕಾರ್ಪೆಂಟರ್ ಕವಿ, ಕಥೆಗಾರ ಮತ್ತು ಕಾದಂಬರಿಕಾರ. ’ಅಪ್ಪನ ಪ್ರೇಯಸಿ’ ಮತ್ತು ’ನೀಲಿಗ್ರಾಮ’ ಕಾದಂಬರಿಗಳು. ’ಬ್ರಾಹ್ಮಿನ್ ಕಫೆ’ ಅವರ ಕಥಾಸಂಕಲನ. ಸದ್ಯ ಅವರದ್ದೇ ಕಥೆಯಾಧಾರಿತ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.


ಇದನ್ನೂ ಓದಿ: ಅನುವಾದಿತ ಕತೆ; ಗಮಾರನೊಬ್ಬ ಅಧಿಕಾರಿಗಳನ್ನು ಸಾಕಿದ್ದು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...