ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದಲ್ಲೇ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬಿಜೆಪಿ ಕಾರ್ಯಕರ್ತರು ಥಳಿಸಿರುವ ಘಟನೆ ನಡೆದಿದೆ.
ಭಾನುವಾರ (ಮಾ.7) ರಾತ್ರಿ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪದ ಗೊಡೌಲಿಯಾದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿದ್ದರು. ಈ ವೇಳೆ ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನದಲ್ಲಿ ಮೂವರು ಆಗಮಿಸಿದ್ದಾರೆ. ಅವರನ್ನು ತಡೆದ ಪೊಲೀಸ್ ಸಿಬ್ಬಂದಿ ನಂಬರ್ ಪ್ಲೇಟ್ ಇಲ್ಲದಿರುವ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಇನ್ನೂ ಕೆಲವರು ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸ್ ಸಿಬ್ಬಂದಿಯೊಂದಿಗೆ ನಾವು ಹಿಂದುತ್ವ ಸಂಘಟನೆಯವರು ಎಂದು ಹೇಳಿದ್ದಾರೆ. ಅಲ್ಲದೆ, ಸಿಬ್ಬಂದಿಯ ಬಟ್ಟೆ ಹಿಡಿದು ಎಳೆದಾಡಿ ಪೊಲೀಸ್ ಬ್ಯಾಡ್ಜ್ ಕಿತ್ತು ತೆಗೆದಿದ್ದಾರೆ. ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ, ಪೊಲೀಸ್ ವಾಹನಕ್ಕೂ ಹಾನಿ ಮಾಡಿದ್ದಾರೆ ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.
ಘಟನೆಯ ವಿಡಿಯೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ” ಪ್ರಧಾನಿಯವರ ಸಂಸದೀಯ ಕ್ಷೇತ್ರವಾದ ವಾರಣಾಸಿಯಲ್ಲಿ ಬಿಜೆಪಿ ಕಾರ್ಯಕರ್ತರು ಸಿಬ್ಬಂದಿಯ ವಿರುದ್ಧ ಹಿಂಸಾತ್ಮಕ ವರ್ತನೆ ತೋರಿರುವುದು ಬಿಜೆಪಿ ಅರಾಜಕತೆಯ ಪರಮಾವಧಿ ಎಂದಿದ್ದು, ಈ ಸಮಾಜ ವಿರೋಧಿಗಳ ಮನೆಗಳ ಮೇಲೆ ಯಾವ ಬುಲ್ಡೋಝರ್‌ಗಳನ್ನು ಹತ್ತಿಸುತ್ತೀರಿ”? ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
देश के प्रधान संसदीय क्षेत्र वाराणसी में भाजपा के कार्यकर्ताओं द्वारा दरोगा के साथ हिंसक व्यवहार भाजपाई अराजकता की पराकाष्ठा है। अब देखते हैं इन असामाजिक तत्वों के घरों पर बुलडोज़र कब चलता है। #नहीं_चाहिए_भाजपा pic.twitter.com/Y07iHg0HAR
— Akhilesh Yadav (@yadavakhilesh) April 8, 2024
“ಪೊಲೀಸರು ಆರೋಪಿಗಳನ್ನು ಘಟನಾ ಸ್ಥಳದಲ್ಲಿ ಬಂಧಿಸಿದ್ದರು. ಆದರೆ, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ವಿಡಿಯೋ ವೈರಲ್ ಆದ ನಂತರ, ಸಿಬ್ಬಂದಿಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ದೂರಿನಲ್ಲಿ ಯಾವುದೇ ರಾಜಕೀಯ ಪಕ್ಷದ ಹೆಸರಿಲ್ಲದಿದ್ದರೂ, ಆರು ವ್ಯಕ್ತಿಗಳನ್ನು ಹೆಸರಿಸಲಾಗಿದೆ. ವೈರಲ್ ವಿಡಿಯೋದಲ್ಲಿ ಕಂಡು ಬರುವ ವ್ಯಕ್ತಿಗಳನ್ನು ಗುರುತಿಸಲಾಗಿದೆ ಮತ್ತು ಅವರ ವಿಳಾಸಗಳನ್ನು ಪತ್ತೆ ಮಾಡಲಾಗುತ್ತಿದೆ” ಎಂದು ಎಸಿಪಿ ದಶಾಶ್ವಮೇಧ ಪ್ರಜ್ಞಾ ಪಾಠಕ್ ತಿಳಿಸಿದ್ದಾರೆ.
“ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಕಾರ್ಯಾಚರಣೆಗಾಗಿ ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳ ಮೇಲೆ ಗಲಭೆ, ಹಲ್ಲೆ, ಕೊಲೆ ಯತ್ನ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಕ್ರಿಮಿನಲ್ ಕಾನೂನು ಕಾಯ್ದೆಯ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ. ಆದರೆ, ಘಟನೆ ನಡೆದು 24 ಗಂಟೆ ಕಳೆದರೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಗಳು ಹೇಳಿವೆ.
ವೈರಲ್ ವಿಡಿಯೋವೊಂದರಲ್ಲಿ ಕಪ್ಪು ಬಣ್ಣದ ಟೀ-ಶರ್ಟ್ ಧರಿಸಿದ್ದ ಯುವಕನೊಬ್ಬ ಪೊಲೀಸ್ ಸಿಬ್ಬಂದಿಯನ್ನು ನೆಲಕ್ಕೆ ತಳ್ಳುವುದು, ಲಾಠಿ ಕಸಿದುಕೊಳ್ಳುವುದು ಮತ್ತು ಕಪಾಳಮೋಕ್ಷ ಮಾಡುವಂತೆ ಸನ್ನೆ ಮಾಡುವು ದೃಶ್ಯವಿದೆ. ಪೊಲೀಸರ ಎದುರೇ ಯುವಕನೊಬ್ಬನಿಗೆ ಥಳಿಸಿದ ದೃಶ್ಯವೂ ವಿಡಿಯೋದಲ್ಲಿದೆ.
ಇದನ್ನೂ ಓದಿ : 370ನೇ ವಿಧಿ ರದ್ದತಿ ನಿಮಗೆ ತೃಪ್ತಿಯಾಗಿದ್ದರೆ ನಮ್ಮ ಪಕ್ಷಕ್ಕೆ ಮತ ಹಾಕಬೇಡಿ: ಫಾರೂಕ್ ಅಬ್ದುಲ್ಲಾ


