Homeಮುಖಪುಟಚುನಾವಣಾ ಬಾಂಡ್‌| ಬಿಜೆಪಿಗೆ 10 ಕೋಟಿ ರೂ. ದೇಣಿಗೆ ನೀಡಿ ಗುಜರಾತ್‌ನ ದಲಿತ ರೈತರಿಗೆ 'ಮೋಸ':...

ಚುನಾವಣಾ ಬಾಂಡ್‌| ಬಿಜೆಪಿಗೆ 10 ಕೋಟಿ ರೂ. ದೇಣಿಗೆ ನೀಡಿ ಗುಜರಾತ್‌ನ ದಲಿತ ರೈತರಿಗೆ ‘ಮೋಸ’: ವರದಿ

ರೈತರ ಭೂ ಸ್ವಾಧೀನ ಪರಿಹಾರ ಹಣದಲ್ಲಿ ಅವರಿಗೇ ಗೊತ್ತಿಲ್ಲದೆ ಚುನಾವಣಾ ಬಾಂಡ್‌ ಖರೀದಿಸಿದ ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಯ ಅಧಿಕಾರಿ

- Advertisement -
- Advertisement -

ಅಕ್ಟೋಬರ್ 11,2023 ರಂದು, ಗುಜರಾತ್‌ನ ಕಚ್ ಜಿಲ್ಲೆಯ ಅಂಜಾರ್‌ನ ದಲಿತ ಕುಟುಂಬದ ಆರು ಸದಸ್ಯರ ಹೆಸರಿನಲ್ಲಿ 11 ಕೋಟಿ 14 ಸಾವಿರ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಲಾಗಿತ್ತು.

ಭಾರತೀಯ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಎಸ್‌ಬಿಐನ ಅಂಕಿ ಅಂಶಗಳ ಪ್ರಕಾರ, ಇವುಗಳಲ್ಲಿ 10 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) 16 ಅಕ್ಟೋಬರ್ 2023 ರಂದು ಮತ್ತು 1 ಕೋಟಿ 14 ಸಾವಿರ ಮೌಲ್ಯದ ಬಾಂಡ್‌ಗಳನ್ನು 18 ಅಕ್ಟೋಬರ್ 2023 ರಂದು ಶಿವಸೇನೆ ನಗದೀಕರಿಸಿಕೊಂಡಿವೆ.

ಇದೀಗ ದಲಿತ ಕುಟುಂಬವು, ಅದಾನಿ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಯಾದ ವೆಲ್‌ಸ್ಪನ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಅಧಿಕಾರಿ ಚುನಾವಣಾ ಬಾಂಡ್‌ಗಳನ್ನು ಖರೀದಿಸುವಂತೆ ಮಾಡಿ ನಮಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದೆ.

2005 ರಲ್ಲಿ, ಅದಾನಿ ಗ್ರೂಪ್ ವೆಲ್‌ಸ್ಪನ್ ನ್ಯಾಚುರಲ್ ರಿಸೋರ್ಸ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಅದಾನಿ ವೆಲ್‌ಸ್ಪನ್ ಎಕ್ಸ್‌ಪ್ಲೋರೇಶನ್ ಲಿಮಿಟೆಡ್ (ಎಡಬ್ಲ್ಯುಇಎಲ್) ಎಂಬ ಜಂಟಿ ಉದ್ಯಮವನ್ನು ಸ್ಥಾಪಿಸಿದೆ. ಅದಾನಿ ಗ್ರೂಪ್‌ನ ಪತ್ರಿಕಾ ಪ್ರಕಟಣೆಯ ಪ್ರಕಾರ, ಎಡಬ್ಲ್ಯುಇಎಲ್ ಮತ್ತು ಅದಾನಿ ಕಂಪನಿಯಲ್ಲಿ 65:35 ಶೇರು ಪಾಲು ಹೊಂದಿದೆ.

ದಿ ಕ್ವಿಂಟ್ ಜೊತೆ ಮಾತನಾಡಿರುವ ದಲಿತ ಕುಟುಂಬದ 41 ವರ್ಷದ ಹರೇಶ್ ಸಾವಕಾರ, ” ವೆಲ್‌ಸ್ಪನ್ ಕಂಪನಿಯು ಅಂಜಾರ್‌ನಲ್ಲಿನ ನಮ್ಮ ಕೃಷಿ ಭೂಮಿಯಲ್ಲಿ ಸುಮಾರು 43,000 ಚದರ ಮೀಟರ್ ಅನ್ನು ಪ್ರಾಜೆಕ್ಟ್‌ಗಾಗಿ ಸ್ವಾಧೀನಪಡಿಸಿಕೊಂಡಿತ್ತು. ಇದಕ್ಕೆ ಪರಿಹಾರವಾಗಿ ಕಂಪನಿ ನಮಗೆ ಹಣ ಕೊಡಬೇಕಾಗಿತ್ತು. ಆದರೆ, ಕಂಪನಿಯ ಹಿರಿಯ ಜನರಲ್ ಮ್ಯಾನೇಜರ್ ಮಹೇಂದ್ರಸಿನ್ಹ್ ಸೋಧಾ ಎಂಬವರು, “ಇಷ್ಟೊಂದು ಮೊತ್ತದ ಹಣ ನೀವು ನೇರವಾಗಿ ಸ್ವೀಕರಿಸಿದರೆ ಮುಂದೆ ಆದಾಯ ತೆರಿಗೆ ಇಲಾಖೆಯಿಂದ ಸಮಸ್ಯೆಯಾಗಬಹುದು” ಎಂದು ನಮಗೆ ಚುನಾವಣಾ ಬಾಂಡ್‌ ಖರೀದಿಸುವಂತೆ ಮಾಡಿದ್ದರು. ನಾವು ಚುನಾವಣಾ ಬಾಂಡ್ ಖರೀದಿಸುವಾಗ, “ನಿಮ್ಮ ಹಣ ಮುಂದಿನ ಕೆಲ ವರ್ಷಗಳಲ್ಲಿ 1.5 ಪಟ್ಟು ಹೆಚ್ಚಾಗಲಿದೆ ಎಂದಿದ್ದರು. ನಾವು ಅನಕ್ಷರಸ್ಥರಾದ ಕಾರಣ ನಮಗೆ ಏನೂ ಗೊತ್ತಿರಲಿಲ್ಲ. ಆದರೆ, ಈಗ ಚುನಾವಣಾ ಬಾಂಡ್ ಹಗರಣದ ಬಗ್ಗೆ ಗೊತ್ತಾಗುತ್ತಿದೆ ಎಂದಿದ್ದಾರೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸುವಂತೆ ಮಾಡಿ ಮೋಸ ಮಾಡಲಾಗಿದೆ ಎನ್ನಲಾದ ದಲಿತ ಕುಟುಂಬದ ಆರು ಜನರಲ್ಲಿ ಒಬ್ಬರಾದ ಸಾವಕರ ಮನ್ವರ್ ಅವರ ಮಗನಾಗಿದ್ದಾರೆ ಹರೇಶ್ ಸಾವಕಾರ.

ಸಾವಕರ ಅವರು 18 ಮಾರ್ಚ್ 2024 ರಂದು ಅಂಜಾರ್ ಪೊಲೀಸ್ ಠಾಣೆಯಲ್ಲಿ ತನಗಾದ ಮೋಸದ ಬಗ್ಗೆ ದೂರು ಸಲ್ಲಿಸಿದ್ದಾರೆ.

ದೂರಿನ ಪ್ರತಿಯಲ್ಲಿ ವೆಲ್‌ಸ್ಪನ್ ಕಂಪನಿ ನಿರ್ದೇಶಕರಾದ ವಿಶ್ವನಾಥನ್ ಕೊಲ್ಲೆಂಗೋಡ್, ಸಂಜಯ್ ಗುಪ್ತಾ, ಚಿಂತನ್ ಠಾಕರ್ ಮತ್ತು ಪ್ರವೀಣ್ ಬನ್ಸಾಲಿ ಅವರನ್ನು ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿದೆ, ಜೊತೆಗೆ ಮಹೇಂದ್ರಸಿನ್ಹ್ ಸೋಧಾ (ವೆಲ್‌ಸ್ಪನ್‌ನ ಹಿರಿಯ ಜನರಲ್ ಮ್ಯಾನೇಜರ್), ವಿಮಲ್ ಕಿಶೋರ್ ಜೋಶಿ (ಅಂಜರ್ ಭೂಸ್ವಾಧೀನ ಅಧಿಕಾರಿ ) ಮತ್ತು ಹೇಮಂತ್ ಅಲಿಯಾಸ್ ಡ್ಯಾನಿ ರಜನಿಕಾಂತ್ ಶಾ (ಬಿಜೆಪಿಯ ನಗರ ಸಿಟಿ ಅಧ್ಯಕ್ಷ) ಅವರ ಹೆಸರುಗಳನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಕ್ವಿಂಟ್ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಕೊಳ್ಳಬೇಕಿದೆ. ಪ್ರಕರಣದ ತನಿಖಾಧಿಕಾರಿ ಶೈಲೇಂದ್ರ ಸಿಸೋಡಿಯಾ ಅವರು ದಿ ಕ್ವಿಂಟ್‌ನೊಂದಿಗೆ ಮಾತನಾಡುತ್ತಾ, “ಅವರು ನಮಗೆ ದೂರು ನೀಡಿದ್ದಾರೆ. ನಾವು ಅದನ್ನು ಇನ್ನೂ ಪರಿಶೀಲಿಸುತ್ತಿದ್ದೇವೆ. ಒಮ್ಮೆ ಪರಿಶೀಲನೆ ಪೂರ್ಣಗೊಂಡು ಪ್ರಕರಣವು ಎಫ್‌ಐಆರ್‌ಗೆ ಅರ್ಹವಾಗಿದ್ದರೆ, ನಾವು ಎಫ್‌ಐಆರ್‌ ದಾಖಲಿಸುತ್ತೇವೆ ಎಂದಿದ್ದಾರೆ.

ಅಂಜಾರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗೆ ನೀಡಿದ ದೂರಿನಲ್ಲಿ, ದೂರುದಾರರು ಆಗಸ್ಟ್ 2023 ರಲ್ಲಿ ತಮ್ಮ ಕೃಷಿ ಭೂಮಿಯನ್ನು ವೆಲ್‌ಸ್ಪನ್ ಕಂಪನಿಗೆ 16,61,21,877 (ಹದಿನಾರು ಕೋಟಿ ಅರವತ್ತೊಂದು ಲಕ್ಷದ ಇಪ್ಪತ್ತೊಂದು ಸಾವಿರ ಎಂಟುನೂರ ಎಪ್ಪತ್ತೇಳು ರೂಪಾಯಿ)ಗೆ ಮಾರಾಟ ಮಾಡಲು ಅನುಮತಿ ಒಪ್ಪಿದ್ದೆವು.

ಇದರಲ್ಲಿ 2,80,15,000 (ಎರಡು ಕೋಟಿ ಎಂಬತ್ತು ಲಕ್ಷದ ಹದಿನೈದು ಸಾವಿರ) ಮುಂಗಡವಾಗಿ ಪಾವತಿಸಲಾಗಿತ್ತು. ಉಳಿದ 13,81,09,877 (ಹದಿಮೂರು ಕೋಟಿ ಎಂಬತ್ತೊಂದು ಲಕ್ಷದ ಒಂಬತ್ತು ಸಾವಿರದ ಎಂಟು ನೂರ ಎಪ್ಪತ್ತೇಳು) ಅನ್ನು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರವಾಗಿ ಏಳು ಜಂಟಿ ಖಾತೆದಾರರಿಗೆ ವರ್ಗಾಯಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಕ್ಟೋಬರ್ 1, 2023 ಮತ್ತು 8 ಅಕ್ಟೋಬರ್ 2023ರ ನಡುವೆ, ಸ್ವಾಧೀನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ವೆಲ್‌ಸ್ಪನ್ ಉದ್ಯೋಗಿ ಮಹೇಂದ್ರಸಿನ್ಹ್ ಸೋಧಾ, ಹೆಚ್ಚು ಹಣ ಇಟ್ಟುಕೊಳ್ಳುವುದರಿಂದ ಆದಾಯ ತೆರಿಗೆ ಸಮಸ್ಯೆ ಮತ್ತು ಚುನಾವಣಾ ಬಾಂಡ್‌ನ ಲಾಭಗಳ ಬಗ್ಗೆ ಕಂಪನಿಯ ಕಾಂಪೌಂಡ್‌ನಲ್ಲಿರುವ ವೆಲ್‌ಸ್ಪನ್‌ನ ಅತಿಥಿ ಗೃಹದಲ್ಲಿ ಸಾವಕಾರ ಮತ್ತು ಅವರ ಮಗ ಹರೇಶ್ ಅವರೊಂದಿಗೆ ನಾಲ್ಕು ಸಭೆಗಳನ್ನು ನಡೆಸಿ ಹಣ ಹೂಡಿಕೆ ಮಾಡಲು ಮನವರಿಕೆ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

“ದಲಿತ ಕುಟುಂಬದರ ಸದಸ್ಯರ ಖಾತೆಗಳಿಗೆ ಮೊದಲು ಹಣವನ್ನು ಜಮಾ ಮಾಡಿದ ದಿನಾಂಕಗಳ ವಿವರಗಳನ್ನು ದೃಢೀಕರಿಸಲು ಬ್ಯಾಂಕ್ ರಸೀದಿಗಳನ್ನು ನಾವು ನೋಡಿದ್ದೇವೆ ಮತ್ತು ನಂತರ ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ ಅದನ್ನು ನಗದೀಕರಿಸಿಕೊಂಡಿರುವುದನ್ನು ತಿಳಿದುಕೊಂಡಿದ್ದೇವೆ. ಮಾಡಲಾಗಿದೆ. ಕುಟುಂಬದವರು ಖರೀದಿಸಿದ ಬಾಂಡ್‌ಗಳ ಪ್ರತಿಗಳನ್ನು ಸಹ ನಾವು ನೋಡಿದ್ದೇವೆ” ಎಂದು ಕ್ವಿಂಟ್ ಹೇಳಿದೆ.

ಬಿಜೆಪಿ ಅಂಜಾರ್ ನಗರ ಅಧ್ಯಕ್ಷ ಹೇಮಂತ್ ರಜನಿಕಾಂತ್ ಶಾ ಈ ಸಭೆಗಳಲ್ಲಿ ಭಾಗಿಯಾಗಿದ್ದರು ಎಂದು ಸಾವಕಾರ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ, ಕ್ವಿಂಟ್ ಜೊತೆ ಮಾತನಾಡಿರುವ ಶಾ ಅವರು ಈ ಪ್ರಕರಣದ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ : ಚುನಾವಣಾ ಬಾಂಡ್‌ ಹಗರಣದ ಕುರಿತು ಸುಪ್ರೀಂಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಂಯುಕ್ತ ಕಿಸಾನ್ ಮೋರ್ಚಾ ಆಗ್ರಹ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...