ಜಗದೀಪ್ ಧನಕರ್ ಅವರ ಹಠಾತ್ ರಾಜೀನಾಮೆಯಿಂದ ತೆರವಾದ ಉಪರಾಷ್ಟ್ರಪತಿ ಸ್ಥಾನಕ್ಕೆ ಇಂದು (ಸೆ.9, ಮಂಗಳವಾರ) ಚುನಾವಣೆ ನಡೆಯಲಿದೆ.
ಆಡಳಿತರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರು ಕಣದಲ್ಲಿದ್ದು, ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ (ನಿವೃತ್ತ) ಬಿ. ಸುದರ್ಶನ್ ರೆಡ್ಡಿ ಅವರು ಸ್ಪರ್ಧಿಸಿದ್ದಾರೆ.
ವರದಿಗಳ ಪ್ರಕಾರ, ಎರಡು ಪ್ರಮುಖ ಪಕ್ಷಗಳ ಸುಮಾರು 12 ಸಂಸದರು ಮತದಾನದಿಂದ ದೂರ ಉಳಿಯುವ ಸಾಧ್ಯತೆ ಇದೆ. ಏಳು ಸದಸ್ಯರ ಬಿಜು ಜನತಾದಳ (ಬಿಜೆಡಿ) ಮತ್ತು ನಾಲ್ವರು ಸದಸ್ಯರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ತಟಸ್ಥವಾಗಿರಲು ನಿರ್ಧರಿಸಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನು ಸಂಖ್ಯಾಬಲ ಆಡಳಿತರೂಢ ಎನ್‌ಡಿಎ ಪರವಾಗಿದೆ. ಎನ್‌ಡಿಎ 425 ಸಂಸದರನ್ನು ಹೊಂದಿದ್ದರೆ, ವಿರೋಧ ಪಕ್ಷಕ್ಕೆ 324 ಸಂಸದರ ಬೆಂಬಲ ಇದೆ.
ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಲು ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಮತದಾನದ ಮುನ್ನಾದಿನದಂದು ತಮ್ಮ ತಮ್ಮ ಸಂಸದರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಿವೆ ಮತ್ತು ಅಣಕು ಸಮೀಕ್ಷೆಯನ್ನು ಸಹ ನಡೆಸಿವೆ. ಒಂದೇ ಒಂದು ಮತ ಕೂಡ ವ್ಯರ್ಥ ಮಾಡದೆ ಸರಿಯಾಗಿ ಚಲಾಯಿಸುವಂತೆ ಪ್ರಧಾನಿ ಮೋದಿ ಎನ್‌ಡಿಎ ಸಂಸದರಿಗೆ ಮನವಿ ಮಾಡಿದ್ದಾರೆ.
ಎನ್‌ಡಿ ಅಥವಾ ಇಂಡಿಯಾ ಬಣದ ಭಾಗವಲ್ಲದ ಪಕ್ಷಗಳಲ್ಲಿ, ಸಂಸತ್ತಿನಲ್ಲಿ 11 ಸದಸ್ಯರನ್ನು ಹೊಂದಿರುವ ವೈಎಸ್‌ಆರ್ ಕಾಂಗ್ರೆಸ್ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲು ನಿರ್ಧರಿಸಿದೆ. ಬಿಜೆಡಿ ಮತ್ತು ಬಿಆರ್‌ಎಸ್ ಮತದಾನದಿಂದ ದೂರವಿರಲು ನಿರ್ಧರಿಸಿವೆ.
ಪ್ರಸ್ತುತ ಒಟ್ಟು ಮತಗಳ ಸಂಖ್ಯೆ 781 (ರಾಜ್ಯಸಭೆಯಿಂದ 238 ಮತ್ತು ಲೋಕಸಭೆಯಿಂದ 542) ಇದೆ. ಒಂದು ಲೋಕಸಭೆ ಮತ್ತು ಆರು ರಾಜ್ಯಸಭಾ ಸ್ಥಾನಗಳು ಪ್ರಸ್ತುತ ಖಾಲಿ ಇವೆ. ಹಾಗಾಗಿ, ಬಹುಮತದ ಸಂಖ್ಯೆ 391 ಆಗಿದೆ.
ಎಸ್‌ಎಡಿ ಸದಸ್ಯರೊಬ್ಬರು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಲೋಕಸಭೆಯಲ್ಲಿರುವ ಏಳು ಸ್ವತಂತ್ರ ಸದಸ್ಯರಲ್ಲಿ ಮೂವರು ತಮ್ಮ ನಿಲುವನ್ನು ಇನ್ನೂ ಬಹಿರಂಗಪಡಿಸಿಲ್ಲ. ಮತ್ತೊಂದು ಬೆಳವಣಿಗೆಯೆಂದರೆ, ಆರ್‌ಎಲ್‌ಪಿ ಸಂಸದ ಹನುಮಾನ್ ಬೇನಿವಾಲ್ ಮತ್ತು ಆಜಾದ್ ಸಮಾಜ ಪಕ್ಷದ ಸಂಸದ ಚಂದ್ರಶೇಖರ್ ಆಜಾದ್ ಅವರು ಸೋಮವಾರ ಸಂಜೆ ತಡವಾಗಿ ಇಂಡಿಯಾ ಅಭ್ಯರ್ಥಿ ಸುದರ್ಶನ್ ರೆಡ್ಡಿ ಅವರನ್ನು ಭೇಟಿಯಾಗಿದ್ದಾರೆ. ಹಾಗಾಗಿ, ಅವರ ಬೆಂಬಲ ರೆಡ್ಡಿ ಅವರಿಗೆ ಸಿಗುವ ಸಾಧ್ಯತೆ ಇದೆ.
ಸಂಸದರು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಂಸತ್ ಭವನದಲ್ಲಿ ತಮ್ಮ ಮತ ಚಲಾಯಿಸಲಿದ್ದಾರೆ. ಬಳಿಕ ಫಲಿತಾಂಶ ಪ್ರಕಟಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲ ಮತ ಚಲಾಯಿಸಲಿದ್ದಾರೆ.


