ಕಿಂಗ್ ಫಿಶರ್ ಏರ್‌ಲೈನ್ಸ್‌ಗೆ ಸಂಬಂಧಿಸಿದ ಸಾಲ ವಸೂಲಾತಿ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿ ಸಂಬಂಧ ಸಾಲ ವಸೂಲಾತಿ ನ್ಯಾಯ ಮಂಡಳಿಯ ವಸೂಲಾತಿ ಅಧಿಕಾರಿಗಳು, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿ 10 ಬ್ಯಾಂಕ್‌ಗಳಿಗೆ ಕರ್ನಾಟಕ ಹೈಕೋರ್ಟ್ ಬುಧವಾರ (ಫೆ.5) ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ.
ಅರ್ಜಿ ವಿಚಾರಣೆ ವೇಳೆ ವಿಜಯ್ ಮಲ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಾಜನ್ ಪೂವಯ್ಯ, 6,200 ಕೋಟಿ ರೂಪಾಯಿ ಸಾಲ ಕೊಡಬೇಕಿತ್ತು. 14,000 ಕೋಟಿ ರೂಪಾಯಿ ವಸೂಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ. ಸಾಲ ವಸೂಲಾತಿ ಅಧಿಕಾರಿ 10,200 ಕೋಟಿ ರೂಪಾಯಿ ವಸೂಲಾಗಿದೆ ಎಂದಿದ್ದಾರೆ. ಸಂಪೂರ್ಣ ಸಾಲ ತೀರಿದ್ದರೂ ಈಗಲೂ ಪ್ರಕ್ರಿಯೆ ಮುಂದುವರಿಸಲಾಗುತ್ತಿದೆ. ಹೀಗಾಗಿ ಸಾಲ ವಸೂಲಿಯಾದ ಲೆಕ್ಕಪತ್ರ ನೀಡುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಂದುವರಿದು, ಹಣ ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರಾಥಮಿಕ ಸಾಲವನ್ನು ಪಾವತಿಸಲಾಗಿದೆಯೇ ಅಥವಾ ಇಲ್ಲವೇ ಎಂಬುವುದರ ಬಗ್ಗೆ ಯಾವುದೇ ಆದೇಶ ಮಾಡಲಾಗಿಲ್ಲ. ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಿದ್ದಾರೆ.
ವಾದ ಆಲಿಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಏಕಸದಸ್ಯ ಪೀಠ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ಮುಂದೂಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಚೆನ್ನೈನ ಸಾಲ ವಸೂಲಾತಿ ನ್ಯಾಯಮಂಡಳಿಯ ವಸೂಲಾತಿ ಅಧಿಕಾರಿಗಳು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ದಿ ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್ ಲಿಮಿಟೆಡ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯುಕೊ ಬ್ಯಾಂಕ್, ಜೆ ಎಂ ಫೈನಾನ್ಶಿಯಲ್ ಅಸೆಟ್ ರಿಕನಸ್ಟ್ರಕ್ಷನ್ ಕಂಪನಿ ಪ್ರೈ.ಲಿ., ಯುಬಿಎಚ್‌ಎಲ್‌ನ ಅಧಿಕೃತ ಲಿಕ್ವಿಡೇಟರ್‌ಗೆ ನ್ಯಾಯಾಲಯ ತುರ್ತು ನೋಟಿಸ್ ಜಾರಿ ಮಾಡಿದೆ ಎಂದು ವರದಿ ಹೇಳಿದೆ.
ಸೌಜನ್ಯ : ಬಾರ್ & ಬೆಂಚ್


