ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಭಾಷಣ ಮಾಡಿ ಬಂದ ಮರುದಿನವೇ ಭಾನುವಾರ (ಸೆ.14) ಮಣಿಪುರದ ಚುರಚಂದ್‌ಪುರದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ ಎಂದು ವರದಿಯಾಗಿದೆ.
ಪ್ರಧಾನಿ ಭೇಟಿ ಹಿನ್ನೆಲೆ ಮಾಡಲಾಗಿದ್ದ ಅಲಂಕಾರವನ್ನು ಹಾನಿ ಮಾಡಿದ್ದಕ್ಕಾಗಿ ಈ ವಾರದ ಆರಂಭದಲ್ಲಿ ಬಂಧಿಸಲಾದ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆದಿದೆ.
ಭಾನುವಾರ ಮಧ್ಯಾಹ್ನ ಸ್ಥಳೀಯರ ಗುಂಪೊಂದು ಬಂಧಿತ ಇಬ್ಬರು ವ್ಯಕ್ತಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಕುಕಿ-ಝೋ ಸಮುದಾಯ ಹೆಚ್ಚಾಗಿ ವಾಸಿಸುವ ಚುರಚಂದ್‌ಪುರ ಜಿಲ್ಲೆಯ ಕೇಂದ್ರ ಸ್ಥಾನ ಚುರಚಂದ್‌ಪುರ ಪಟ್ಟಣದ ಬೀದಿಗಳಲ್ಲಿ ಪ್ರತಿಭಟನೆ ಪ್ರಾರಂಭಿಸಿತ್ತು.
ಹಿರಿಯ ಭದ್ರತಾ ಅಧಿಕಾರಿಯೊಬ್ಬರ ಪ್ರಕಾರ, ಪ್ರತಿಭಟನಾಕಾರರು ಚುರಚಂದ್‌ಪುರ ಪೊಲೀಸ್ ಠಾಣೆಗೆ ನುಗ್ಗಲು ಪ್ರಯತ್ನಿಸಿದ್ದರು. ಪ್ರತಿಭಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಆರ್‌ಎಎಫ್ ಸಿಬ್ಬಂದಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಂಧಿತರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್, ಭಾನುವಾರ ಸಂಜೆಯ ವೇಳೆಗೆ ಅವರನ್ನು ಬಿಡುಗಡೆ ಮಾಡಲು ಸೂಚಿಸಿದ್ದಾರೆ ಎಂದು ಅಧಿಕಾರಿಗಳನ್ನುಉಲ್ಲೇಖಿಸಿ ವರದಿ ಹೇಳಿದೆ.
“ಪ್ರತಿಭಟನಾ ನಿರತರು ಪೊಲೀಸ್ ಠಾಣೆಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಕಾನೂನು ಮಾರ್ಗಗಳ ಮೂಲಕ ಇಬ್ಬರ ಬಿಡುಗಡೆಗೆ ಪ್ರಯತ್ನಿಸುವಂತೆ ಪ್ರತಿಭಟನಾಕಾರರಿಗೆ ಸೂಚಿಸಿದ್ದಾರೆ. ನಂತರ, ಪ್ರತಿಭಟನಾಕಾರರು ವಕೀಲರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಸಂಜೆಯ ವೇಳೆಗೆ ಇಬ್ಬರಿಗೆ ಜಾಮೀನು ನೀಡಿದ್ದಾರೆ. ಆ ಬಳಿಕ ಪರಿಸ್ಥಿತಿ ಶಾಂತವಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.
ಶನಿವಾರ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮುನ್ನ ಗುರುವಾರ ರಾತ್ರಿ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದಿತ್ತು. ಪ್ರಧಾನಿ ಭೇಟಿ ಹಿನ್ನೆಲೆ ಹಾಕಲಾಗಿದ್ದ ಕೆಲವು ಅಲಂಕಾರಿಕ ವಸ್ತುಗಳನ್ನು ನಾಶ ಮಾಡಿರುವುದು ಈ ಘಟನೆ ಕಾರಣ. ಆಲಂಕಾರಿಕ ವಸ್ತುಗಳನ್ನು ನಾಶ ಮಾಡಿದ್ದಲ್ಲದೆ ಪಿಯರ್ಸನ್‌ಮನ್ ಪ್ರದೇಶದಲ್ಲಿ ಗುಂಪೊಂದು ಬೆಂಕಿ ಹಚ್ಚಿತ್ತು. ಅದನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದರು. ಇದರಿಂದ ಆಕ್ರೋಶಗೊಂಡ ಗುಂಪು ಪೊಲೀಸರೊಂದಿಗೆ ಘರ್ಷಣೆ ನಡೆಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಗುರುವಾರ ರಾತ್ರಿಯ ಉದ್ವಿಗ್ನತೆಯ ನಂತರ, ಚುರಚಂದ್‌ಪುರ ಪಟ್ಟಣದ ವಿವಿಧ ನಾಗರಿಕ ಸಂಘಟನೆಗಳು ಶಾಂತಿಗೆ ಕರೆ ನೀಡಿತ್ತು. ಆ ಬಳಿಕ ಪಟ್ಟಣದಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಪ್ರಧಾನಿಯ ಭೇಟಿಯ ದಿನವಾದ ಶನಿವಾರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.
‘ಸಂಘರ್ಷ ಶಮನಕ್ಕೆ ಯಾವುದೇ ಪರಿಹಾರ ತಿಳಿಸಿಲ್ಲ’: ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ


