Homeಮುಖಪುಟರಾತ್ರಿಯ ಹೊತ್ತಿನಲ್ಲಿ ಸೂರ್ಯಗ್ರಹಣ ಮಾಡಿಸುವ ಮಾಧ್ಯಮಗಳು!

ರಾತ್ರಿಯ ಹೊತ್ತಿನಲ್ಲಿ ಸೂರ್ಯಗ್ರಹಣ ಮಾಡಿಸುವ ಮಾಧ್ಯಮಗಳು!

ಡಿಸೆಂಬರ್ 21ರಂದು ಸೂರ್ಯ ದಕ್ಷಿಣಾಯನದ ತುತ್ತ ತುದಿಯನ್ನು ತಲುಪುವ ದಿನವಾಗಿರುವುದರಿಂದ, ಆ ದಿನವೂ ವರ್ಷದಲ್ಲಿಯೇ ಅತ್ಯಂತ ಹೆಚ್ಚು ಕತ್ತಲಿರುವ ದಿನ ಮತ್ತು ಹಗಲು ಕಡಿಮೆ ಇರುವ ದಿನ!

- Advertisement -
- Advertisement -

2020ರ ವರ್ಷದ ಕೊನೆಯ ಅಮಾವಾಸ್ಯೆಯೆಂದು (ಡಿಸೆಂಬರ್ 14) ಸಂಪೂರ್ಣ ಸೂರ್ಯಗ್ರಹಣವಾಗಿದ್ದು, ದಕ್ಷಿಣ ಅಮೆರಿಕ, ಚಿಲಿ, ಅರ್ಜೆಂಟೀನಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಈ ಗ್ರಹಣವನ್ನು ಕಾಣಬಹುದಾಗಿತ್ತು. ಈ ಗ್ರಹಣವನ್ನು ಭಾರತದ ಯಾವ ಭಾಗದಿಂದಲೂ ನೋಡಲು ಸಾಧ್ಯವಾಗಿಲ್ಲ.

ಗ್ರಹಣ ಎಂಬ ಪದ ಬಂತೆಂದರೆ ಸಾಕು, ಮಾಧ್ಯಮಗಳು ಅದರಲ್ಲಿಯೂ ಟಿವಿ ಮಾಧ್ಯಮಗಳು ಜನರನ್ನು ಭಯಪಡಿಸಿ ದಾರಿ ತಪ್ಪಿಸಲು ಮುಂದಾಗುತ್ತವೆ. ಪುಂಖಾನುಪುಂಖವಾಗಿ, ಗ್ರಹಣ ಎಂಬ ಪದವೆ ಸಮಸ್ಯೆ ಎನ್ನುವ ರೀತಿಯಲ್ಲಿ, ಇಡೀ ಭೂಮಿಗೆ ಏನೋ ಆಗಿಬಿಡುತ್ತದೆ, ನಿಮ್ಮ ಮನೆಗೂ, ಮನೆಯಲ್ಲಿರುವವರಿಗೂ ಅಪಾಯ ಎನ್ನುವ ರೀತಿಯಲ್ಲಿ, ಅವೈಜ್ಞಾನಿಕವಾದ ಕಾರ್ಯಕ್ರಮಗಳನ್ನು ಮಾಡಿಯೇ ತೀರುತ್ತಾರೆ. ಒಂದು ವಿಷಯವನ್ನು ಪ್ರಸಾರ ಮಾಡಬೇಕಾದರೆ, ಅದರ ಆಳ-ಅಗಲ, ಅದರ ಬಗ್ಗೆ ಮೂಡುವ ಪ್ರಶ್ನೆಗಳು, ಆ ಪ್ರಶ್ನೆಗಳಿಗೆ ವಿಷಯ ತಜ್ಞರ ಉತ್ತರಗಳು/ಅಭಿಪ್ರಾಯಗಳು ಮತ್ತು ನಡೆದಿರುವ ಸಂಶೋಧನೆಗಳು, ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಯಾವುದೆಲ್ಲಾ ಪ್ರಸ್ತುತ ಎನ್ನುವ ವಿಷಯಗಳನ್ನು ವೈಜ್ಞಾನಿಕವಾಗಿ, ತರ್ಕಬದ್ಧವಾದ ಚಿಂತನೆಗಳಿಂದ ಕೂಡಿದ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ. ಆದರೆ, ಇಂದಿನ ಟಿವಿ ಕಾರ್ಯಕ್ರಮಗಳಲ್ಲಿ, ಇವನ್ನೆಲ್ಲಾ ಗಾಳಿಗೆ ತೂರಿ, ಬರೀ ಗಾಳಿ-ಸುದ್ದಿಯನ್ನು ಮತ್ತು ಜನರಿಗೆ ಭಯ ಪಡಿಸೋ ಸುದ್ದಿಯನ್ನು ಅತ್ಯಂತ ರಂಜನೀಯವಾಗಿ, ಯುದ್ದೋನ್ಮಾದ ಉಪಮೆ, ರೂಪಕಗಳನ್ನೆಲ್ಲಾ ಸೇರಿಸಿ, ಹಳಸಿದ ವಿವರಣೆಗಳಲ್ಲಿ ಬಿತ್ತರಿಸುವುದು ಸಾಮಾನ್ಯವಾಗಿ ಬಿಟ್ಟಿದೆ.

ಡಿಸೆಂಬರ್ 14ರಂದು ನಡೆದ ಸಂಪೂರ್ಣ ಸೂರ್ಯ ಗ್ರಹಣದ ವಿಷಯವಾಗಿ ಬಿತ್ತರವಾದ ಇಂತದ್ದೇ ಹಲವು ಕಾರ್ಯಕ್ರಮಗಳಲ್ಲಿ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎಂಬ ಅರಿವು ಎಷ್ಟೋ ಮಾಧ್ಯಮಗಳಿಗೆ ಇರಲಿಲ್ಲ. ಒಂದು ಮಾಧ್ಯಮವಂತು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಸಂಪೂರ್ಣ ಸೂರ್ಯ ಗ್ರಹಣ ಭಾರತದ ಕಾಲಮಾನದ ಪ್ರಕಾರ ಡಿಸೆಂಬರ್ 13 & 14ರ ರಾತ್ರಿಯಲ್ಲಿ ಭಾರತದಲ್ಲಿ ಗೋಚರಿಸುತ್ತದೆ ಎಂದು ಘಂಟಾಘೋಷವಾಗಿ ಹೇಳಿತು! ಸೂರ್ಯ ಗ್ರಹಣ ಬೆಳಗಿನ ದಿನದ ಹೊತ್ತಿನಲ್ಲೇ ಕಾಣುವುದು, ರಾತ್ರಿಯ ಹೊತ್ತಿನಲ್ಲಿ ಅಲ್ಲ ಎನ್ನುವ ಸಣ್ಣ ಅರಿವು ಇಲ್ಲ ಇವರಿಗೆಲ್ಲ.

ದೇಶದಲ್ಲೇ ಅತಿ ಹೆಚ್ಚು ಸಂಶೋಧನಾ ಕೇಂದ್ರಗಳು ಇರುವ ಸ್ಥಳ ಬೆಂಗಳೂರು. ಎರಡು ಕಿಲೋಮೀಟರ್‌ನ ಅಂತರದಲ್ಲಿ, ಯಾವುದಾದರೊಂದು ಸಂಶೋಧನಾ ಕೇಂದ್ರ ಸಿಕ್ಕೇ ಸಿಗುತ್ತೆ. ಅದರಲ್ಲೂ ಭಾರತೀಯ ಭೌತ ವಿಜ್ಞಾನ ಸಂಸ್ಥೆ, ಭಾರತೀಯ ವಿಜ್ಞಾನ ಸಂಸ್ಥೆ, ರಾಮನ್ ಸಂಶೋಧನಾ ಸಂಸ್ಥೆ ಹಾಗೂ ಇಸ್ರೋದಂತಹ ಹಲವು ಪ್ರತಿಷ್ಠಿತ ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲೆ. ಇದಲ್ಲದೆ, ಹಲವು ಹವ್ಯಾಸಿ ಖಗೋಳ ವೀಕ್ಷಣಾ ಸಂಸ್ಥೆಗಳು ಮತ್ತು ತಾರಾಲಯಗಳಿವೆ. ಇವರೆಲ್ಲರೂ, ಗ್ರಹಣದ ಸಮಯದಲ್ಲಿ ಅಧ್ಯಯನ ನಡೆಸುವ, ವೀಕ್ಷಿಸುವ, ಇತರರಿಗೂ ವೀಕ್ಷಣೆಗೆ ಅನುವು ಮಾಡಿಕೊಡುವ ಮತ್ತು ಇವೆಲ್ಲಕ್ಕೂ ಮಿಗಿಲಾಗಿ ಗ್ರಹಣದ ಸಮಯದ ಮೂಢನಂಬಿಕೆಗಳನ್ನು ನಿವಾರಿಸಲು ವೈಜ್ಞಾನಿಕ ವಿವರಣೆ ನೀಡುವ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿರುತ್ತಾರೆ. ಮಾಧ್ಯಮಗಳು ಇಂತಹ ವಿಷಯಾಧಾರಿತ ಸಂಕಥನಗಳಿಗೆ ಒತ್ತು ಕೊಡುವುದು ಬಿಟ್ಟು, ಗ್ರಹಣ ಬಂತೆಂದರೆ, ತಮ್ಮನ್ನು ತಾವೇ ದೇವಮಾನವರೆಂದು ಕರೆದುಕೊಳ್ಳುವ ಪುಣ್ಯ(?) ವ್ಯಕ್ತಿಗಳಿಂದ, ಗ್ರಹಣಗಳ ವಿವರಣೆಯನ್ನು ಪ್ರಸಾರ/ ಪ್ರಚಾರ ಮಾಡುತ್ತಾರೆ. ಆಗಸದಲ್ಲಿ ನಡೆಯುವ ಗ್ರಹಣಗಳು ಬೆಳಕು ನೆರಳಿನ ವಿದ್ಯಮಾನದ ಬಗೆಗಿನ ವೈಜ್ಞಾನಿಕ ಮಾಹಿತಿಯನ್ನು ಬೇಕಂತಲೇ ಮರೆಮಾಚುತ್ತಾರೆ. ಕೆಲವು ಮಾಧ್ಯಮಗಳು ಗ್ರಹಣಗಳ ಬಗ್ಗೆ ಸಣ್ಣ ಪ್ರಮಾಣದಲ್ಲಿ ವಿವರಿಸಿದರೂ, ಕೊನೆಗೆ ಗ್ರಹಣದ ಪರಿಹಾರಕ್ಕೆ ಹೆಚ್ಚು ಒಲವು, ಒತ್ತು ಕೊಟ್ಟು ಅಧಿಕಾರಯುತ ಭಾಷೆಯಲ್ಲಿ ಜನಗಳನ್ನು ಭಯಪಡಿಸುತ್ತಾರೆ.

ಈ ದೇಶದ ಸಂವಿಧಾನದಲ್ಲಿ, ಮೂಲಭೂತ ಕರ್ತವ್ಯಗಳ ಕಲಂ 51 ಎ(ಹೆಚ್)ರಲ್ಲಿ, ದೇಶದ ಎಲ್ಲ ಜನರು, ವೈಜ್ಞಾನಿಕ ಮನೋಭಾವನೆ, ಮಾನವೀಯತೆ, ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿಗಳನ್ನು ಬೆಳೆಸಿ ಬಿತ್ತಬೇಕೆಂದಿದೆ. ಬಹುಶಃ ಇದು, ಇಂದಿನ ಮಾಧ್ಯಮಗಳಿಗೆ ಅರ್ಥವಾಗಿಲ್ಲವೇನೋ, ಅರ್ಥವಾಗಿದ್ದರೂ, ಅವರ ಹುನ್ನಾರವೇ ಬೇರೆ ಇರಬಹುದು! ಏನೇ ಇರಲಿ, ಇಂದಿನ ದಿನಗಳಲ್ಲಿ ಜನಗಳ ಎದೆಗೆ ಅಕ್ಷರ ಬಿತ್ತುವ ಬದಲು ವಿಷ ಬಿತ್ತುವ ಕೆಲಸ ಬಹಳ ಕಳವಳಕಾರಿಯಾಗಿದೆ.

ಈಗ ಈ ವಾರದ ಆಕಾಶ ವೀಕ್ಷಣೆಗೆ ಬರೋಣ

ಜಮಿನಾಯ್ಡ್ಸ್ ಉಲ್ಕಾಪಾತ

ಜಮಿನಾಯ್ಡ್ಸ್ ಉಲ್ಕಾಪಾತವನ್ನು ಡಿಸೆಂಬರ್ 13 ಮತ್ತು 14ರ ರಾತ್ರಿಯಂದು ನೊಡಿರುತ್ತೀರಿ ಅಂದುಕೊಂಡಿರುವೆ. ವರ್ಷದ ಅತ್ಯಂತ ಪ್ರಕಾಶಮಾನವಾದ ಉಲ್ಕಾಪಾತವಾಗಿರುವುದರಿಂದ ಇನ್ನೂ ನೋಡಿಲ್ಲವಾದರೆ, ಡಿಸೆಂಬರ್ 20ರ ವರೆಗೂ ನಸುಕಿನಲ್ಲಿ (ರಾತ್ರಿ 1 ಗಂಟೆಯಿಂದ 3 ಗಂಟೆಯವರೆಗೆ) ಕಾಣಿಸುತ್ತದೆ. ಎಲ್ಲರೂ ನೋಡಿ ಉಲ್ಕಾಪಾತವನ್ನು ಕಣ್ತುಂಬಿಕೊಳ್ಳಿ.

ಗುರು ಮತ್ತು ಶನಿಯ ಮಹಾ ಸಂಯೋಗ (ಸಂಯುತಿ) (Jupiter and Saturn Great Conjunction)

ಖಗೋಳ ಭಾಷೆಯಲ್ಲಿ, ಆಗಸದಲ್ಲಿ ಎರಡು ಗ್ರಹಗಳು ಒಟ್ಟಿಗೆ ಒಂದೇ ದಿಕ್ಕಿನಲ್ಲಿ, ಹತ್ತಿರವಾಗಿ ಕಾಣುವುದನ್ನು ಸಂಯೋಗ (ಸಂಯುತಿ) (Conjunction) ಎಂದು ಕರೆಯುತ್ತಾರೆ. ಈಗ ಗುರು ಮತ್ತು ಶನಿ ಗ್ರಹದ ಸಂಯೋಗವನ್ನು ಆಗಸದಲ್ಲಿ ಕಾಣಬಹುದು. ಗುರು ಮತ್ತು ಶನಿ ಗ್ರಹವನ್ನು ಆಕಾಶದಲ್ಲಿ ಗುರುತಿಸುವುದನ್ನು ಈಗಾಗಲೇ ತಿಳಿದಿದ್ದೀರಿ. ಸೂರ್ಯ ಮುಳುಗಿದ ನಂತರ, ಪಶ್ಚಿಮ ಮತ್ತು ದಕ್ಷಿಣ ದಿಕ್ಕಿನ ಮಧ್ಯಭಾಗದಲ್ಲಿ, ಪ್ರಕಾಶಮಾನವಾಗಿ ಹತ್ತಿರದಲ್ಲಿ ಬೆಳಗುವ ಎರಡು ಚುಕ್ಕಿಗಳೇ ಗುರು ಮತ್ತು ಶನಿ. ಹೆಚ್ಚು ಪ್ರಕಾಶಮಾನವಾಗಿರುವ ಚುಕ್ಕಿ ಗುರು, ಕಡಿಮೆ ಪ್ರಕಾಶ ಮಾನವಾಗಿರುವ ಚುಕ್ಕಿ ಶನಿ. ಹೀಗೆ ಎರಡೂ ಗ್ರಹಗಳು ಬಹಳ ಹತ್ತಿರವಾಗಿ ಆಗಸದಲ್ಲಿ ಗೊಚರಿಸಿದರೆ ಅದನ್ನು ಸಂಯೋಗ ಎಂದು ಕರೆಯುತ್ತೇವೆ. ಗುರು ಮತ್ತು ಶನಿ ಗ್ರಹದ ಸಂಯೋಗ 20 ವರ್ಷಗಳಿಗೊಮ್ಮೆ ನೋಡಬಹುದಾಗಿದೆ. ಕಳೆದ ಬಾರಿ 2000ರಲ್ಲಿ ಈ ಸಂಯೋಗ ನಡೆದಿತ್ತು. ಆದರೆ, ಆಗ, ಗುರು ಮತ್ತು ಶನಿ ಸೂರ್ಯನ ಪಕ್ಕದಲ್ಲಿದ್ದರಿಂದ ಕಾಣಿಸಿರಲಿಲ್ಲ. ಎಲ್ಲಾ ಸಂಯೋಗದಲ್ಲೂ, ಗುರು ಮತ್ತು ಶನಿ ನಡುವಿನ ಅಂತರ ಒಂದೇ ಇರದೆ, ಬೇರೆ ಬೇರೆಯಾಗಿರುತ್ತದೆ.

ಈ ಬಾರಿಯ ವಿಶೇಷವೇನೆಂದರೆ, ಗುರು ಮತ್ತು ಶನಿ ಗ್ರಹದ ಸಂಯೋಗದ ಅಂತರ ಅತ್ಯಂತ ಕಡಿಮೆ (0.1 ಡಿಗ್ರಿ)! ಇಂತಹ, ಸಂಯೋಗ ಸುಮಾರು 400 ವರ್ಷಗಳ ಹಿಂದೆ (1623 ರಲ್ಲಿ) ನಡೆದಿತ್ತು. ಅಂದಿಗೆ ಜಗತ್ತು ಕಂಡ ಪ್ರಖ್ಯಾತ ಖಗೋಳ ವಿಜ್ಞಾನಿ ಮತ್ತು ಆಧುನಿಕ ಭೌತ ವಿಜ್ಞಾನದ ಪಿತಾಮಹ ಎಂದೆನಿಸಿದ ಗೆಲಿಲಿಯೋ ಗೆಲಿಲಿ ಬದುಕಿದ್ದರು! ಆದುದರಿಂದ ಇದನ್ನು ’ಮಹಾ ಸಂಯೋಗ’ (Great Conjunction) ಎಂದು ವ್ಯಾಖ್ಯಾನಿಸಲಾಗಿದೆ. ಡಿಸೆಂಬರ್ 21ರ ರಾತ್ರಿಯಂದು ಗುರು ಮತ್ತು ಶನಿ ಗ್ರಹಗಳನ್ನು ಎರಡು ಚುಕ್ಕಿಗಳಾಗಿ ಆಗಸದಲ್ಲಿ ನೋಡಲು ಅಸಾಧ್ಯವಾಗಬಹುದು ಎಂದು ಗ್ರಹಿಸಲಾಗಿದೆ. ನೀವು ಎರಡೂ ಗ್ರಹಗಳನ್ನು ಡಿಸೆಂಬರ್ 21ರ ಸಂಜೆಯ ಆಕಾಶದಲ್ಲಿ ನೊಡಿ ಕಣ್ತುಂಬಿಕೊಳ್ಳಿ.

ಗುರು ಮತ್ತು ಶನಿ ಗ್ರಹಗಳು ಸೂರ್ಯನ ಸುತ್ತ ತಮ್ಮದೆ ಆದ ಕಕ್ಷೆಯಲ್ಲಿ ಸುತ್ತುತ್ತಿವೆ, ಈ ಕಕ್ಷೆಗಳ ನಡುವಿನ ಅಂತರ ಸುಮಾರು 64 ಕೋಟಿ ಕಿಲೋಮೀಟರ್. ವಾಸ್ತವವಾಗಿ ಈ ಎರಡೂ ಗ್ರಹಗಳ ಹತ್ತಿರಕ್ಕೆ ಬರುವುದೇ ಇಲ್ಲ. ಭೂಮಿಯಿಂದ ನೋಡಿದಾಗ, ಒಂದೇ ದಿಕ್ಕಿನಲ್ಲಿ ಕಾಣುವುದರಿಂದ, ಹತ್ತಿರವಾಗಿ ಇರುವಂತೆ ಗೋಚರಿಸುತ್ತವೆಯಷ್ಟೇ!

ಉತ್ತರಾಯಣ(ನ) ಮತ್ತು ಡಿಸೆಂಬರ್ 21!

ಡಿಸೆಂಬರ್ ತಿಂಗಳು ಚಳಿಗಾಲ. ಈ ಚಳಿಗಾಲದಲ್ಲಿ, ಬೇಗ ಕತ್ತಲಾಗುತ್ತಿರುವುದನ್ನು ನೀವು ಗಮನಿಸಿರಬಹುದು. ಏಕೆ ಹೀಗಾಗುತ್ತದೆ ಎಂದು ಪ್ರಶ್ನೆ ಮಾಡಿಕೊಂಡಿರಬಹುದು. ಸಾಮಾನ್ಯವಾಗಿ ಸಿಗುವ ಉತ್ತರ ಎಂದರೆ, ದಕ್ಷಿಣಾಯನದ ಕಾಲದಲ್ಲಿ ಕತ್ತಲು ಬೇಗ ಆಗುತ್ತದೆ, ಸೂರ್ಯ ಉತ್ತರಾಯನಕ್ಕೆ ಚಲಿಸಲು ಪ್ರಾರಂಭಿಸಿದಾಗ ಹೆಚ್ಚು ಬೆಳಕಿರುತ್ತದೆ ಮತ್ತು ಬೇಸಿಗೆ ಕಾಲ ಹತ್ತಿರ ಬರುತ್ತದೆ ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಇದು ಸರಿ ಕೂಡ.

ನಾವು ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ ಎಂದು ಸಾಮಾನ್ಯವಾಗಿ ಅಂದುಕೊಳ್ಳುತ್ತೇವೆ. ವಾಸ್ತವದಲ್ಲಿ, ಸೂರ್ಯ ಕರಾರುವಾಕ್ಕಾಗಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವುದು ವರ್ಷದಲ್ಲಿ ಎರಡೇ ದಿನ! ಈ ದಿನಗಳನ್ನು ಈಕ್ವಿನಾಕ್ಸ್ (Equinox: March 21 & September 23) ಅಂತ ಕರೆಯುತ್ತೇವೆ. ಈಕ್ವಿನಾಕ್ಸ್ ದಿನಗಳಲ್ಲಿ ಮಾತ್ರ 12 ಗಂಟೆ ಹಗಲು ಮತ್ತು 12 ಗಂಟೆ ರಾತ್ರಿಯ ಸಮಯ ಇರುತ್ತದೆ! ಮತ್ತು ಅಂದು ಸೂರ್ಯ ಹುಟ್ಟುವ ದಿಕ್ಕುಗಳೇ ಕರಾರುವಾಕ್ಕಾದ ಪೂರ್ವದ ಬಿಂದು ಮತ್ತು ಪಶ್ಚಿಮದ ಬಿಂದು. ಇನ್ನುಳಿದ ದಿನಗಳಲ್ಲಿ, ಹಗಲು ಹೆಚ್ಚಿದ್ದರೆ, ರಾತ್ರಿಯ ಸಮಯ ಕಡಿಮೆ ಇರುತ್ತದೆ (ಬೇಸಿಗೆ ಕಾಲ); ರಾತ್ರಿ ಹೆಚ್ಚಿದ್ದರೆ ಹಗಲಿನ ಸಮಯ ಕಡಿಮೆ ಇರುತ್ತದೆ (ಚಳಿಗಾಲ). ಒಂದು ವರ್ಷದಲ್ಲಿ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವುದು ಎರಡೇ ದಿನವಾದುದರಿಂದ, ಉಳಿದ ದಿನಗಳಲ್ಲಿ ಪೂರ್ವದಿಂದ ಬಲಕ್ಕೆ ಮತ್ತು ಎಡಕ್ಕೆ ಹುಟ್ಟಿ, ಪಶ್ಚಿಮದ ಬಲ ಮತ್ತು ಎಡಕ್ಕೆ ಮುಳುಗುತ್ತಾನೆ. ಇದರಿಂದ, ಒಂದು ವರ್ಷದಲ್ಲಿ, ಸೂರ್ಯ ದಕ್ಷಿಣದಿಂದ ಉತ್ತರಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಚಲಿಸುತ್ತಿರುತ್ತಾನೆ.

ಇದನ್ನು ಆಯನ ಅಂತ ಕರೆಯುತ್ತೇವೆ. ಅಂದರೆ, ಉತ್ತರಾಯನ ಮತ್ತು ದಕ್ಷಿಣಾಯನ ಎಂದು. ಪ್ರಸ್ತುತ ಸೂರ್ಯ ದಕ್ಷಿಣಾಯನದಲ್ಲಿದ್ದು, ಡಿಸೆಂಬರ್ 21 ರಂದು ದಕ್ಷಿಣಾಯನದ ತುತ್ತ ತುದಿಯನ್ನು ತಲುಪಿ, ತನ್ನ ದಿಕ್ಕನ್ನು ಬದಲಿಸಿ, ಉತ್ತರ ದಿಕ್ಕಿಗೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ಉತ್ತರಾಯನದ ಪ್ರಾರಂಭದ ಸಮಯ ಮತ್ತು ಚಳಿಗಾಲ ಮುಗಿದು ಬೇಸಿಗೆ ಕಾಲದ ಮುನ್ಸೂಚನೆ ನೀಡುವ ಬದಲಾವಣೆ. ಹಾಗಾಗಿ ಡಿಸೆಂಬರ್ 21ರಂದು ಸೂರ್ಯ ದಕ್ಷಿಣಾಯನದ ತುತ್ತ ತುದಿಯನ್ನು ತಲುಪುವ ದಿನವಾಗಿರುವುದರಿಂದ, ಆ ದಿನವೂ ವರ್ಷದಲ್ಲಿಯೇ ಅತ್ಯಂತ ಹೆಚ್ಚು ಕತ್ತಲಿರುವ ದಿನ ಮತ್ತು ಹಗಲು ಕಡಿಮೆ ಇರುವ ದಿನ! ಅಂದಹಾಗೆ ನಾವು ಉತ್ತರಾಯಣ ಕಾಲವನ್ನು ಮಕರ ಸಂಕ್ರಾಂತಿ ಎಂದು ಜನವರಿಯಲ್ಲಿ ಹಬ್ಬವಾಗಿ ಆಚರಿಸುತ್ತೇವೆ. ಆದರೆ, ಉತ್ತರಾಯಣದ ಪ್ರಾರಂಭ, ಡಿಸೆಂಬರ್ 21ರಲ್ಲಿಯೇ ಆಗಿರುತ್ತದೆ!

(ಸೂಚನೆ: ಈ ವಿವರಣೆ ಭೂಮಿಯ ಉತ್ತರಗೋಳಕ್ಕೆ ಮಾತ್ರ ಅನ್ವಯಿಸುತ್ತದೆ, ದಕ್ಷಿಣಗೋಳಕ್ಕೆ ಉತ್ತರ ಗೋಳದ ವಿರುದ್ಧವಾದ ಕಾಲಗಳು, ದಿನಗಳು ಮತ್ತು ಸಮಯಗಳು ಅನ್ವಯಿಸುತ್ತವೆ).


ಇದನ್ನೂ ಓದಿ: ಆಕಾಶ ವೀಕ್ಷಣೆ: ದಿಗುವಳಯದಲಿ ಧೂಮಕೇತುಗಳೊಗೆದವೆನಲುತ್ಪಾತ ಕೋಟಿ…
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...