ಮಣಿಪುರ ಬಹಳ ಸಮಯದಿಂದ ಸಮಸ್ಯೆಯಲ್ಲಿದೆ, ಪ್ರಧಾನಿ ನರೇಂದ್ರ ಮೋದಿ ಈಗ ಆ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಒಳ್ಳೆಯದು, ಆದರೆ ದೊಡ್ಡ ವಿಷಯವೇನಲ್ಲ. ‘ಮತಗಳ್ಳತನ’ ಪ್ರಸ್ತುತ ದೇಶದ ಮುಂದಿರುವ ಪ್ರಮುಖ ಚರ್ಚೆಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
2023ರಲ್ಲಿ ಜನಾಂಗೀಯ ಸಂಘರ್ಷ ಶುರುವಾದ ಬಳಿಕ ಪ್ರಧಾನಿ ಮೋದಿ ಶನಿವಾರ (ಸೆ.13) ಮೊದಲ ಬಾರಿ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಗುಜರಾತ್ ಕಾಂಗ್ರೆಸ್‌ನ ಜಿಲ್ಲಾ ಮತ್ತು ನಗರ ಘಟಕದ ಅಧ್ಯಕ್ಷರನ್ನು ಉದ್ದೇಶಿಸಿ ಮಾತನಾಡಲು ಮತ್ತು ಹಿರಿಯ ನಾಯಕರೊಂದಿಗೆ ಸಂವಾದ ನಡೆಸಲು ರಾಹುಲ್ ಗಾಂಧಿಯವರು ಶುಕ್ರವಾರ ಜುನಾಗಢಕ್ಕೆ ಭೇಟಿ ನೀಡಿದ್ದರು. ಪಕ್ಷದ 41 ನಗರ ಮತ್ತು ಜಿಲ್ಲಾ ಅಧ್ಯಕ್ಷರಿಗೆ ತರಬೇತಿ ನೀಡಲು ಎರಡು ಗಂಟೆಗಳಿಗೂ ಹೆಚ್ಚು ಸಮಯ ರಾಹುಲ್ ನಗರದಲ್ಲಿದ್ದರು. ಈ ಮೂಲಕ 2027ರ ವಿಧಾನಸಭಾ ಚುನಾವಣೆಗೆ ಈಗಲೇ ತಯಾರಿಗೆ ಪ್ರಾರಂಭಿಸಿದ್ದಾರೆ.
ರಾಹುಲ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಕಳೆದ ಏಳು ತಿಂಗಳಲ್ಲಿ ಐದನೇ ಬಾರಿ ರಾಹುಲ್ ಗಾಂಧಿ ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಇದು ಪಕ್ಷ ಸಂಘಟನೆ ಮತ್ತು ಮುಂದಿನ ಚುನಾವಣೆಯ ತಯಾರಿಗೆ ಈಗಲೇ ಧುಮುಕಿರುವುದನ್ನು ಸೂಚಿಸುತ್ತದೆ.
ಜುಲೈ 26 ರಂದು ಗುಜರಾತ್‌ನ ಆನಂದ್ ರಾಹುಲ್ ಭೇಟಿ ಕೊಟ್ಟಿದ್ದಾಗ ನೀಡಿದ್ದ ಸಂದೇಶಕ್ಕಿಂತ ಈ ಬಾರಿ ಅವರ ಮಾತುಗಳು ತೀಕ್ಷ್ಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜೊತೆ ನೇರಾ ಹಣಾಹಣಿಗೆ ಇಳಿಯಬೇಕು ಮತ್ತು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ದಾಟಿಯಲ್ಲಿ ಇತ್ತು ಎಂದು ವರದಿಗಳು ಹೇಳಿವೆ.
ಗುಜರಾತ್‌ನಲ್ಲಿ ಪಕ್ಷಕ್ಕೆ ಮೇಜರ್ ಸರ್ಜರಿ ಮಾಡುವ ಸೂಚನೆಯನ್ನೂ ಕಾಂಗ್ರೆಸ್ ಹೈಕಮಾಂಡ್ ನೀಡಿದೆ. ಒಂಬತ್ತು ಜಿಲ್ಲಾಧ್ಯಕ್ಷರನ್ನು ‘ನಿಷ್ಕ್ರಿಯ’ ಎಂದು ಕರೆದಿದೆ. ಅವರನ್ನು ‘ಕೊಳೆತ ಮಾವಿನಹಣ್ಣು’ಗಳಿಗೆ ಹೋಲಿಸಿದೆ. ಈ ಮೂಲಕ ಸರಿಯಾಗಿ ಕಾರ್ಯನಿರ್ವಹಿಸದವರನ್ನು ತೆಗೆದುಹಾಕಲಾಗುವುದು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
2022ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ವಿರೋಧ ಪಕ್ಷದ ಮತಗಳನ್ನು ವಿಭಜಿಸಿ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟಾಗ ಪಕ್ಷ ಅನುಭವಿಸಿದ ಅವಮಾನಕರ ಸೋಲಿನಿಂದ ಈಗ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ಕಳೆದ ಐದು ವರ್ಷಗಳಲ್ಲಿ, ಎಎಪಿ ಗುಜರಾತ್‌ನಲ್ಲಿ ತನ್ನ ಹೆಜ್ಜೆಗುರುತನ್ನು ಸ್ಥಿರವಾಗಿ ವಿಸ್ತರಿಸಿದೆ. ಬಿಜೆಪಿ ವಿರೋಧಿ ಮತಗಳನ್ನು ಪಡೆಯುವಲ್ಲಿ ಕಾಂಗ್ರೆಸ್‌ಗೆ ಗಂಭೀರ ಸವಾಲಾಗಿ ಹೊರಹೊಮ್ಮಿದೆ ಎಂದು ವರದಿಗಳು ಹೇಳಿವೆ.
ಬಿಜೆಪಿಯನ್ನು ನೇರವಾಗಿ ಎದುರಿಸಲು ಪ್ರತಿಜ್ಞೆ ಮಾಡಿರುವ ರಾಹುಲ್ ಗಾಂಧಿ, ಪಕ್ಷ ಸಂಘಟನೆ ಅಭಿಯಾನ, ನಾಯಕತ್ವ ಪುನರ್‌ರಚನೆ ಮತ್ತು ಹೊಸ ಶಕ್ತಿಯನ್ನು ತುಂಬುವ ಮೂಲಕ ರಾಜ್ಯ ಘಟಕದ ಪ್ರಮುಖ ಪುನರುಜ್ಜೀವನಕ್ಕೆ ನಿರ್ದೇಶನ ನೀಡಿದ್ದಾರೆ. ಇತ್ತೀಚಿನ ತರಬೇತಿ ಅವಧಿಯು ಸ್ಥಳೀಯ ನಾಯಕರನ್ನು ಸ್ಪಷ್ಟ ಕಾರ್ಯತಂತ್ರದೊಂದಿಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. ಇದು ಪಕ್ಷದ 2027ರ ದೊಡ್ಡ ದೃಷ್ಟಿಕೋನಕ್ಕೆ ತಳಮಟ್ಟದ ಸಜ್ಜುಗೊಳಿಸುವಿಕೆ ಎಂದು ವರದಿಗಳು ವಿವರಿಸಿವೆ.
ಬಿಜೆಪಿ ದೃಢವಾಗಿ ಬೇರೂರಿರುವ ಮತ್ತು ಎಎಪಿ ತನ್ನ ಮತಗಳನ್ನು ಕೈ ತಪ್ಪುವಂತೆ ಮಾಡುತ್ತಿರುವ ಹಿನ್ನೆಲೆ, ರಾಹುಲ್ ಗಾಂಧಿಯವರ ಗುಜರಾತ್ ಕಸರತ್ತು ಮಹತ್ವ ಪಡೆದುಕೊಂಡಿದೆ. ಆಂತರಿಕವಾಗಿ ಕಾಂಗ್ರೆಸ್ ಮನೆಯನ್ನು ಸ್ವಚ್ಛಗೊಳಿಸುವುದು ಮತ್ತು ಪಕ್ಷವನ್ನು ಒಗ್ಗೂಡಿಸುವ ಮೂಲಕ ಎದುರಾಳಿಗಳ ವಿರುದ್ಧ ಹೋರಾಟವನ್ನು ನಡೆಸುವುದರ ಮೇಲೆ ಗುಜರಾತ್‌ನಲ್ಲಿ ಕಾಂಗ್ರೆಸ್ ಭವಿಷ್ಯ ಅವಲಂಬಿತವಾಗಿದೆ. ಈ ಎಲ್ಲಾ ವಿಷಯಗಳನ್ನು ರಾಹುಲ್ ಗಾಂಧಿ ಅರ್ಥ ಮಾಡಿಕೊಂಡಂತಿದೆ.
ಮೋದಿ ಮಣಿಪುರ ಭೇಟಿ
2023ರಲ್ಲಿ ಜನಾಂಗೀಯ ಸಂಘರ್ಷ ಶುರುವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಶನಿವಾರ (ಸೆ.13) ಮೊದಲ ಬಾರಿಗೆ ಮಣಿಪುರಕ್ಕೆ ಭೇಟಿ ನೀಡುತ್ತಿದ್ದಾರೆ.
ಮಣಿಪುರದಲ್ಲಿ ಮೇ 3, 2023ರಿಂದ ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ ಕನಿಷ್ಠ 260 ಸಾವುಗಳು ಸಂಭವಿಸಿವೆ. ಅಧಿಕೃತ ಸರ್ಕಾರಿ ದತ್ತಾಂಶ ಮತ್ತು ವಿಶ್ವಾಸಾರ್ಹ ಮೂಲಗಳ ವರದಿಗಳ ಪ್ರಕಾರ, ಎರಡೂ ಕಡೆಯ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ಬಂಡುಕೋರರು ಸಾವಿಗೀಡಾದವರಲ್ಲಿ ಒಳಗೊಂಡಿದ್ದಾರೆ.
ಸಂಘರ್ಷ ಆರಂಭವಾದಾಗಿನಿಂದ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ಕಾಂಗ್ರೆಸ್ ಆದಿಯಾಗಿ ವಿರೋಧ ಪಕ್ಷಗಳು ಮತ್ತು ಇತರ ನಾಗರಿಕ ಸಂಘಟನೆಗಳು ಒತ್ತಾಯ ಮಾಡುತ್ತಲೇ ಬಂದಿವೆ. ಅಲ್ಲದೆ, ಸಂಸತ್ತಿನಲ್ಲಿಯೂ ಪ್ರಧಾನಿ ಈ ಬಗ್ಗೆ ಮಾತನಾಡುವಂತೆ ಆಗ್ರಹಿಸಿವೆ. ಆದರೆ, ಪ್ರಧಾನಿಯಿಂದ ಸೂಕ್ತವಾದ ಪ್ರತಿಕ್ರಿಯೆ ಬಂದಿರಲಿಲ್ಲ.
ವರದಿಗಳ ಪ್ರಕಾರ, ಪ್ರಧಾನಿ ಮೋದಿಯವರ ಭೇಟಿ ವಿರೋಧಿಸಿ 6 ಬಂಡುಕೋರ ಸಂಘಟನೆಗಳು ಮಣಿಪುರ ಬಂದ್‌ಗೆ ಕರೆ ಕೊಟ್ಟಿವೆ. ಮೋದಿ ಮಣಿಪುರಕ್ಕೆ ಭೇಟಿ ನೀಡಿ ನಿರ್ಗಮಿಸುವವರೆಗೆ ಬಂದ್ ನಡೆಸುವಂತೆ ಮನವಿ ಮಾಡಿವೆ.
ಕಾಂಗ್ಲೇಪಾಕ್ ಕಮ್ಯುನಿಸ್ಟ್ ಪಕ್ಷ (ಕೆಸಿಪಿ),ಕಾಂಗ್ಲೇಯ್ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್), ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೇಪಾಕ್ (ಪಿಆರ್‌ಇಪಿಎಕೆ), ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್ (ಯುನೆಎನ್‌ಎಲ್‌ಎಫ್) ಮತ್ತು ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಗಳು ಬಂದ್ ಕರೆ ಕೊಟ್ಟ ಸಂಘಟನೆಗಳಲ್ಲಿ ಸೇರಿವೆ.
ನಾಳೆ (ಸೆ.13) ಮಣಿಪುರಕ್ಕೆ ಪ್ರಧಾನಿ ಭೇಟಿ: 6 ಬಂಡುಕೋರ ಸಂಘಟನೆಗಳಿಂದ ಮೋದಿ ಬಂದು-ನಿರ್ಗಮಿಸುವವರೆಗೂ ಬಂದ್‌ಗೆ ಕರೆ


