Homeಕರ್ನಾಟಕ‘ಆಳಂದ’ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣ: ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!

‘ಆಳಂದ’ ಕ್ಷೇತ್ರದಲ್ಲಿ ಮತಗಳ್ಳತನ ಪ್ರಕರಣ: ಸಿಐಡಿ ತನಿಖೆಗೆ ಸ್ಪಂದಿಸದ ಚುನಾವಣಾ ಆಯೋಗ!

- Advertisement -
- Advertisement -

ಚುನಾವಣಾ ಆಯೋಗ ಬಿಜೆಪಿ ಜೊತೆ ಶಾಮಿಲಾಗಿ ‘ಮತಗಳ್ಳತನ’ ನಡೆಸುತ್ತಿದೆ ಎಂದು ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರು ಆರೋಪಿಸುತ್ತಿರುವ ನಡುವೆಯೇ, ಈ ಹಿಂದೆ ಕಲಬುರಗಿ ಜಿಲ್ಲೆ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 5,994 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲು ವ್ಯವಸ್ಥಿತ ಪಿತೂರಿ ನಡೆಸಿದ್ದ ಪ್ರಕರಣದ ತನಿಖೆ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಈ ಪ್ರಕರಣವು 2023ರ ವಿಧಾನಸಭಾ ಚುನಾವಣೆಗೆ ಮುನ್ನ ನಕಲು ಫಾರ್ಮ್ 7ರ ಮೂಲಕ ಮತದಾರರ ಹೆಸರುಗಳನ್ನು ತೆಗೆದುಹಾಕಲು ನಡೆಸಿದ್ದ ಪಿತೂರಿಗೆ ಸಂಬಂಧಿಸಿದೆ. ಪ್ರಕರಣದ ಆರೋಪಿಗಳನ್ನು ಬಂಧಿಸಲು ಅಗತ್ಯವಾದ ನಿರ್ಣಾಯಕ ದತ್ತಾಂಶಗಳನ್ನು ಚುನಾವಣಾ ಆಯೋಗ ಇನ್ನೂ ಹಂಚಿಕೊಳ್ಳದ ಕಾರಣ ಪ್ರಕರಣ ಬಹುತೇಕ ಹಳ್ಳಹಿಡಿದಂತೆ ಕಾಣುತ್ತಿದೆ ಎಂದು ದಿ ಹಿಂದೂ ಪತ್ರಿಕೆ ಭಾನುವಾರ (ಸೆ.7) ವಿಸ್ತೃತ ವರದಿ ಪ್ರಕಟಿಸಿದೆ.

ರಾಜ್ಯದ ‘ಅಪರಾಧ ತನಿಖಾ ವಿಭಾಗ’ (ಸಿಐಡಿ) ಪತ್ರಗಳ ಮೇಲೆ ಪತ್ರ ಬರೆದರೂ ಕೆಲವು ಮಹತ್ವದ ದಾಖಲೆಗಳನ್ನು ಚುನಾವಣಾ ಆಯೋಗ ಒದಗಿಸುತ್ತಿಲ್ಲ ಏಕೆ? ಎಂಬ ಪ್ರಶ್ನೆ ಉದ್ಭವಿಸಿದೆ.

2018ರ ಚುನಾವಣೆಯಲ್ಲಿ ಕೇವಲ 697 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಸುಭಾಷ್‌ ಗುತ್ತೇದಾರ್ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಆರ್.ಪಾಟೀಲ್ ಸೋಲನುಭವಿಸಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಗೆದ್ದರು. ಚುನಾವಣೆಗೂ ಮುನ್ನ ಆದ ಬೆಳವಣಿಗೆಯಲ್ಲಿ ಸತ್ಯ ಸಂಗತಿಯೊಂದು ಪಾಟೀಲರ ಗಮನಕ್ಕೆ ಬಂದಿತ್ತು. ‘ಸಾವಿರಾರು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಿರುವುದು ಸ್ವತಃ ಮತದಾರರಿಗೂ ಗೊತ್ತಿಲ್ಲ’ ಎಂಬುದು ದೊಡ್ಡ ಆಘಾತ ತಂದಿತ್ತು.

ಈ ಸಂಬಂಧ ಬಿ.ಆರ್ ಪಾಟೀಲ್ ತಕ್ಷಣ ಚುನಾವಣಾ ಆಯೋಗದಲ್ಲಿ ದೂರು ದಾಖಲಿಸಿದ್ದರು. “ಬೂತ್ ಮಟ್ಟದ ಅಧಿಕಾರಿಯೊಬ್ಬರು [ಬಿಎಲ್‌ಒ] ತಮ್ಮ ಸಹೋದರನ ಹೆಸರನ್ನೇ ಅಳಿಸಿ ಹಾಕಲು ಕೋರಿರುವ ಫಾರ್ಮ್ 7 ಅರ್ಜಿಯನ್ನು ಅನಿರೀಕ್ಷಿತವಾಗಿ ಗಮನಿಸಿದ್ದರು. ಆದರೆ, ಅವರ ಸಹೋದರ ಅರ್ಜಿ ಸಲ್ಲಿಸಿರಲಿಲ್ಲ. ಆ ಬಿಎಲ್‌ಒ ಸಹೋದರನು ನನ್ನ ಬೆಂಬಲಿಗ. ಅದೇ ಹಳ್ಳಿಯ ಇನ್ನೊಬ್ಬ ಮತದಾರರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅವರಿಗೂ ಅದರ ಬಗ್ಗೆ ತಿಳಿದಿರಲಿಲ್ಲ. ಇದು ನಮಗೆ ಮತ ಕಳ್ಳತನದ ಸುಳಿವು ನೀಡಿತ್ತು” ಎನ್ನುತ್ತಾರೆ ಬಿ.ಆರ್ ಪಾಟೀಲ್

ಬಿ.ಆರ್ ಪಾಟೀಲ್ ಮೂಲಕ ಪ್ರಕರಣ ಸದ್ದು ಮಾಡುತ್ತಿದ್ದಂತೆ ತಮ್ಮ ಗುರುತುಗಳನ್ನು ದುರುಪಯೋಗ ಮಾಡಿಕೊಂಡು, ಫಾರ್ಮ್‌ 7ರ ಅರ್ಜಿಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿ ಹಾಕಲು ಯತ್ನಿಸಿರುವ ಸಂಬಂಧ ಅನೇಕ ಮತದಾರರು ತಮ್ಮ ದೂರುಗಳನ್ನು ಆಳಂದ ತಹಶೀಲ್ದಾರ್‌ಗೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 6,018 ಅರ್ಜಿಗಳನ್ನು ಪರಿಶೀಲನೆ ಮಾಡಲಾಗಿತ್ತು.

ಆಳಂದದ ಚುನಾವಣಾಧಿಕಾರಿ ಹಾಗೂ ಕಲಬುರಗಿಯ ಸಹಾಯಕ ಆಯುಕ್ತೆ ಮಮತಾ ದೇವಿ ಅವರು 2023ರ ಫೆಬ್ರವರಿ 21ರಂದು ಆಳಂದ ಪೊಲೀಸರಿಗೆ ದೂರು ನೀಡಿ ಪ್ರಕರಣದ ಸ್ವರೂಪವನ್ನು ವಿವರಿಸಿದ್ದರು. 6,018 ಪ್ರಕರಣಗಳಲ್ಲಿ ಕೇವಲ 24 ಅರ್ಜಿಗಳು ಮಾತ್ರ ಅಸಲಿಯಾಗಿವೆ. ಸದರಿ 24 ಅರ್ಜಿಗಳಿಗೆ ಸಂಬಂಧಿಸಿದ ಮತದಾರರು ತಮ್ಮ ಕ್ಷೇತ್ರವನ್ನು ಬೇರೆಡೆಗೆ ಬದಲಿಸಿದ್ದರಿಂದ ಇಲ್ಲಿನ ಮತದಾರರ ಪಟ್ಟಿಯಲ್ಲಿ ಹೆಸರು ಅಳಿಸಿ ಹಾಕಲು ಕೋರಿರುವುದು ನಿಜ. ಉಳಿದ 5,994 ಮತದಾರರ ಹೆಸರಲ್ಲಿ ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ” ಎಂದು ಮಮತಾ ದೇವಿ ಹೇಳಿದ್ದರು.

ಇಷ್ಟು ದೊಡ್ಡ ಮಟ್ಟದಲ್ಲಿ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸಲ್ಲಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ (26/2023 ಆಳಂದ ಪೊಲೀಸ್ ಠಾಣೆ) ದಾಖಲಾಗಿತ್ತು. ಅಂತಿಮವಾಗಿ, ಈ 5,994 ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿತ್ತು. ಅವರು 2023ರ ಚುನಾವಣೆಯಲ್ಲಿ ಮತ ಚಲಾಯಿಸಿರಬಹುದು ಎನ್ನುತ್ತದೆ ದಿ ಹಿಂದೂ ವರದಿ.

ಆಳಂದ ತಾಲೂಕಿನ ಸರಸಂಬಾ ಗ್ರಾಮದ ದ್ವಿಚಕ್ರ ವಾಹನ ಮೆಕ್ಯಾನಿಕ್ ಆಗಿರುವ 42 ವರ್ಷದ ಶ್ರೀಶೈಲ್ ಬರಾಬಾಯಿ ಅವರು ಮತದಾರರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಲು ಅರ್ಜಿ ಬಂದಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ‘ಸ್ಥಳಾಂತವಾಗಿರುವ’ ಕಾರಣ ಹೆಸರು ಡಿಲೀಟ್ ಮಾಡಿ’ ಎಂದು ಅರ್ಜಿ ಸಲ್ಲಿಕೆಯಾಗಿರುತ್ತದೆ. ಇವರ ಹೆಸರನ್ನು ‘ಭಾಗ ಸಂಖ್ಯೆ 71 (ಕ್ರಮ ಸಂಖ್ಯೆ 775)’ರಲ್ಲಿ ಪಟ್ಟಿ ಮಾಡಲಾಗಿತ್ತು. “ನಾನು ಈ ಗ್ರಾಮವನ್ನು ಬಿಟ್ಟು ಹೊರಗಡೆ ಹೋದವನಲ್ಲ. ಆದರೆ ಬಿಎಲ್‌ಒ ಅವರು ಪರಿಶೀಲಿಸಲು ಬಂದಾಗ ಇಂತಹದೊಂದು ಅರ್ಜಿ ಇದೆ ಎಂದು ನನಗೆ ಗೊತ್ತಾಯಿತು. ನನ್ನ ಮತವನ್ನು ಡಿಲೀಟ್ ಮಾಡಲು ಬೇರೆಯವರು ಹೇಗೆ ಅರ್ಜಿ ಸಲ್ಲಿಸಿದರು ಎಂಬುದು ನನಗೆ ತಿಳಿಯಲಿಲ್ಲ” ಎಂದು ಶ್ರೀಶೈಲ್ ಹೇಳಿದ್ದಾಗಿ ದಿ ಹಿಂದೂ ವರದಿಗಾರ, ಹಿರಿಯ ಪತ್ರಕರ್ತ ಆದಿತ್ಯ ಭಾರದ್ವಾಜ್ ವರದಿಯಲ್ಲಿ ವಿವರಿಸಿದ್ದಾರೆ.

‘ಭಾಗ ಸಂಖ್ಯೆ 71(ಕ್ರಮ ಸಂಖ್ಯೆ 563)’ರಲ್ಲಿ ಪಟ್ಟಿ ಮಾಡಲಾದ ಮತ್ತು ಸರಸಂಬಾ ಗ್ರಾಮದ ರೈತ ಕಾಶಿಮ್ ಅಲಿ (48) ಅವರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. “ನಿಮ್ಮ ಹೆಸರನ್ನು ಅಳಿಸಿ ಹಾಕಲು ಅರ್ಜಿ ಹಾಕಿದ್ದೀರಾ? ಎಂದು 2023ರಲ್ಲಿ ಬಿಎಲ್‌ಒ ಕೇಳಿದ್ದರು. ನನ್ನ ಹೆಸರನ್ನು ಅಳಿಸಲಾಗಿದೆ ಎಂದು ಭಾವಿಸಿ 2023ರ ವಿಧಾನಸಭೆ ಮತ್ತು 2024ರ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲಿಲ್ಲ” ಎನ್ನುತ್ತಾರೆ ಕಾಶಿಮ್. ಆದರೆ ಅವರು ಸದರಿ ವಿಳಾಸದಲ್ಲಿಯೇ ಮೊದಲಿನಿಂದ ವಾಸವಿದ್ದಾರೆ ಎಂಬುದನ್ನು ಗಮನಿಸಿರುವ ಅಧಿಕಾರಿಗಳು, ನಕಲಿ ಅರ್ಜಿಯನ್ನು ವಜಾ ಮಾಡಿದ್ದಾರೆ ಎಂದು ಭಾರದ್ವಾಜ್ ತಿಳಿಸಿದ್ದಾರೆ.

ಶ್ರೀಶೈಲ್ ಮತ್ತು ಕಾಶಿಂ ಇಬ್ಬರ ಹೆಸರುಗಳನ್ನು ಅಳಿಸಲು ಫಾರ್ಮ್ 7 ಅರ್ಜಿಗಳನ್ನು ಸೂರ್ಯಕಾಂತ್ ಗೋವಿನ್ (67) ಎಂಬವರ ಹೆಸರಿನಲ್ಲಿ ಸಲ್ಲಿಸಲಾಗಿತ್ತು. ಖಾಸಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಸೂರ್ಯಕಾಂತ್ ಈಗ ಸರಸಂಬಾ ಗ್ರಾಮದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ. ಜೊತೆಗೆ ಅದೇ ‘ಭಾಗ ಸಂಖ್ಯೆ 71 (ಕ್ರಮ ಸಂಖ್ಯೆ 1)’ರಲ್ಲಿ ಮತದಾರರಾಗಿದ್ದಾರೆ. “ಭಾಗ ಸಂಖ್ಯೆ 71 ರಿಂದ ಕೆಲವು ಮತದಾರರನ್ನು ಡಿಲೀಟ್ ಮಾಡಲು ನನ್ನ ಹೆಸರಿನಲ್ಲಿ ಒಂಬತ್ತು ಅರ್ಜಿಗಳನ್ನು ಸಲ್ಲಿಸಲಾಗಿದೆ. ಅಲ್ಲಿ ನಾನು ಸಹ ಮತದಾರನಾಗಿದ್ದೇನೆ. ದುಷ್ಕರ್ಮಿಗಳು ಅದನ್ನು ಹೇಗೆ ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಈ ಎಲ್ಲಾ ಅರ್ಜಿಗಳಲ್ಲಿ, ಮತದಾರರ ಗುರುತಿನ ಚೀಟಿ ಸಂಖ್ಯೆ ಮತ್ತು ಫೋಟೋ ಸೇರಿದಂತೆ ನನ್ನ ಇತರ ವಿವರಗಳು ಸರಿಯಾಗಿದ್ದರೂ, ಪ್ರತಿ ಅರ್ಜಿಯಲ್ಲಿ ಫೋನ್ ನಂಬರ್‌ಗಳು ಬೇರೆಬೇರೆಯಾಗಿವೆ. ಈ ನಂಬರ್‌ಗಳಲ್ಲಿ ಯಾವುದೂ ನನಗೆ ಸೇರಿಲ್ಲ” ಎಂದು ಸೂರ್ಯಕಾಂತ್ ‘ದಿ ಹಿಂದೂ’ಗೆ ಪ್ರತಿಕ್ರಿಯಿಸಿದ್ದಾರೆ.

‘ದಿ ಹಿಂದೂ’ ಪತ್ರಿಕೆಯು ಆಳಂದದ ಹಲವಾರು ಮತದಾರರೊಂದಿಗೆ ಮಾತನಾಡಿದ್ದು, ಅವರ ಮತಗಳನ್ನು ಅಳಿಸಲು ಅಥವಾ ಅವರ ಹೆಸರಿನಲ್ಲಿ ನಕಲಿ ಅರ್ಜಿಗಳನ್ನು ಹಾಕಲು ಯತ್ನಿಸಲಾಗಿತ್ತು ಎಂದು ಕಂಡುಕೊಂಡಿದೆ. ಹಲವಾರು ಸಂದರ್ಭಗಳಲ್ಲಿ, ಇಡೀ ಮನೆಯ ಮತದಾರರ ಹೆಸರನ್ನು ಅಳಿಸಲು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಉದಾಹರಣೆಗೆ: ನಿವೃತ್ತ ಪೊಲೀಸ್ ಅಧಿಕಾರಿ ವೀರಣ್ಣ ಹೊನಶೆಟ್ಟಿ, ಅವರ ಪತ್ನಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಸದಸ್ಯೆ ರೇವಮ್ಮ ಅವರ ಹೆಸರು ಸೇರಿದಂತೆ ಅವರ ಕುಟುಂಬದ ಎಂಟು ಹೆಸರುಗಳನ್ನು ಅಳಿಸಲು ಅರ್ಜಿ ಸಲ್ಲಿಸಲಾಗಿತ್ತು ಎಂದು ವರದಿ ಹೇಳಿದೆ.

ಹೀಗೆ ಸಲ್ಲಿಕೆಯಾಗಿರುವ ಅರ್ಜಿಗಳ ಮಾದರಿಯನ್ನು ಸೂಕ್ಷ್ಮವಾಗಿ ಗಮನಿಸಿರುವ ‘ದಿ ಹಿಂದೂ’, “ಭಾಗ ಸಂಖ್ಯೆ ಲೀಸ್ಟ್‌ಗಳಲ್ಲಿ ಉಲ್ಲೇಖಿಸಲಾಗಿರುವ ಮೊದಲ ಮತದಾರ ಅಥವಾ ಅಪರೂಪಕ್ಕೊಮ್ಮೆ ಎರಡನೇ ಮತದಾರನ ಹೆಸರಲ್ಲಿ ಇಂತಹ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ” ಎಂದಿದೆ.

ಈ ಗಂಭೀರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಎರಡೂವರೆ ವರ್ಷಗಳ ಕಾಲ ನಡೆದ ತನಿಖೆಯ ನಂತರ, ಪ್ರಕರಣ ನಿದ್ರಾವಸ್ಥೆಗೆ ಜಾರಿದೆ. ಇಲ್ಲಿಯವರೆಗೆ ನಡೆದ ತನಿಖೆಯು ದೊಡ್ಡ ದೊಡ್ಡ ಕದೀಮರ ಸಂಕೀರ್ಣ ಜಾಲವನ್ನು ಬಯಲು ಮಾಡುವ ಪ್ರಯತ್ನವನ್ನು ಮಾಡಿರುವುದಂತೂ ಸತ್ಯ. ಆದರೆ ಹೆಚ್ಚಿನ ಪರಿಣಾಮಕಾರಿ ತನಿಖೆಗೆ ಚುನಾವಣೆ ಆಯೋಗ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.

ವಿವಾದಕ್ಕೆ ಕಾರಣವಾಗಿರುವ ಫಾರ್ಮ್ 7 ನಕಲಿ ಅರ್ಜಿಗಳನ್ನು ‘ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್’ (NVSP), ‘ಮತದಾರರ ಸಹಾಯವಾಣಿ ಅಪ್ಲಿಕೇಶನ್’ (VHA) ಮತ್ತು ಚುನಾವಣಾ ಆಯೋಗದ ‘ಗರುಡ ಅಪ್ಲಿಕೇಶನ್’ ಮೂಲಕ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.

ಸಿಐಡಿ ಮತ್ತು ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ (CEO) ನಡುವೆ ನಡೆದಿರುವ ಪತ್ರ ವ್ಯವಹಾರಗಳ ಪ್ರಕಾರ, “ಈ ನಕಲಿ ಅರ್ಜಿಗಳನ್ನು ಎಲ್ಲಿಂದ ತುಂಬಲಾಗಿದೆ? ಯಾವ ಮಷಿನ್ ಬಳಸಲಾಗಿದೆ? ಐಪಿ ಅಡ್ರೆಸ್ [ಇಂಟರ್ನೆಟ್ ಪ್ರೋಟೋಕಾಲ್ ಲಾಗ್‌ಗಳು] ಏನು? ದಿನಾಂಕ, ಸಮಯ, ಡೆಸ್ಟಿನೇಶನ್ ಐಪಿಗಳು, ಡೆಸ್ಟಿನೇಶನ್ ಪೋರ್ಟ್‌ಗಳು ಏನು?- ಈ ವಿವರಗಳನ್ನು ಚುನಾವಣಾ ಆಯೋಗ ನೀಡಬೇಕು” ಎಂದು ಸಿಐಡಿ ವಿನಂತಿಸಿತ್ತು. ಆದರೆ, ಪದೇಪದೇ ಪತ್ರಗಳನ್ನು ಬರೆದರೂ ಆಯೋಗ ಪೂರ್ಣಪ್ರಮಾಣದಲ್ಲಿ ಸ್ಪಂದಿಸಿಲ್ಲ ಎನ್ನಲಾಗಿದೆ.

ಈ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ ಏಳು ಪತ್ರಗಳನ್ನು, ಈ ಹಿಂದೆ ಐದು ಪತ್ರಗಳನ್ನು ಸಿಐಡಿ ಅಧಿಕಾರಿಗಳು ಚುನಾವಣಾ ಆಯೋಗಕ್ಕೆ ಕಳುಹಿಸಿದ್ದಾರೆ. ಮತ್ತದೇ ಮನವಿಗಳನ್ನು ಪುನರಾವರ್ತನೆ ಮಾಡಿದ್ದಾರೆ.

“ತನಿಖೆಯ ಸಮಯದಲ್ಲಿ, ಐಪಿ ಲಾಗ್‌ಗಳನ್ನು ಒದಗಿಸಲಾಗಿದೆ. ಡೆಸ್ಟಿನೇಶನ್ ಐಪಿ ಮತ್ತು ಡೆಸ್ಟಿನೇಶನ್ ಪೋರ್ಟ್ ಸಿಕ್ಕಿಲ್ಲ. ಆದ್ದರಿಂದ, ಸಂಬಂಧಪಟ್ಟವರಿಗೆ ಇವುಗಳನ್ನು ಒದಗಿಸಲು ನಿರ್ದೇಶಿಸುವಂತೆ ವಿನಂತಿಸುತ್ತೇವೆ” ಎಂದು ಪತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಈ ನಿರ್ದಿಷ್ಟ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಡೆಸ್ಟಿನೇಶನ್ ಐಪಿಗಳು ಮತ್ತು ಡೆಸ್ಟಿನೇಶನ್ ಪೋರ್ಟ್‌ಗಳಿಲ್ಲದೆ ತನಿಖೆ ಸ್ಥಗಿತಗೊಂಡಿದೆ ಎಂದು ವರದಿ ಹೇಳಿದೆ.

5,700ಕ್ಕೂ ಹೆಚ್ಚು ಫಾರ್ಮ್ 7 ನಕಲಿ ಅರ್ಜಿಗಳ ದತ್ತಾಂಶವನ್ನು ಚುನಾವಣಾ ಆಯೋಗ ಹಂಚಿಕೊಂಡಿದೆ ಎಂದು 2023ರ ಸೆಪ್ಟೆಂಬರ್‌ನಲ್ಲಿ ಸಿಐಡಿ ಮೂಲಗಳು ಹೇಳಿದ್ದವು. 4,400ಕ್ಕೂ ಹೆಚ್ಚು ಅರ್ಜಿಗಳ ಬಗ್ಗೆ ಸಾಕಷ್ಟು ದತ್ತಾಂಶ ಇದ್ದರೂ, ಉಳಿದವು ಅಪೂರ್ಣ ವಿವರಗಳನ್ನು ಹೊಂದಿದ್ದವು. ಆಯೋಗದ ಮೂರು ಅಪ್ಲಿಕೇಶನ್‌ಗಳಲ್ಲಿ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ರಚಿಸಲು ದುಷ್ಕರ್ಮಿಗಳು ಬಳಸಿರುವ ಮೊಬೈಲ್ ಸಂಖ್ಯೆಗಳನ್ನು ಆಯೋಗ ಒದಗಿಸಿದೆ. ಇವುಗಳ ಮೂಲಕ ಎಲ್ಲಾ ನಕಲಿ ಫಾರ್ಮ್ 7ಗಳನ್ನು ಸಲ್ಲಿಸಲಾಗಿದೆ.

“ನೀಡಲಾದ ದಾಖಲೆಗಳಲ್ಲಿ ಒಂಬತ್ತು ಮೊಬೈಲ್ ಸಂಖ್ಯೆಗಳನ್ನು ನಾವು ಪತ್ತೆಹಚ್ಚಿದ್ದೇವೆ. ಅವರು ಹೆಚ್ಚಾಗಿ ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದವರಾಗಿದ್ದಾರೆ. ಈ ಮೊಬೈಲ್‌ ಸಂಖ್ಯೆಗಳ ಮಾಲೀಕರು, ಚುನಾವಣಾ ಆಯೋಗದ ಯಾವುದೇ ಅಪ್ಲಿಕೇಶನ್‌ಗಳಲ್ಲಿ ಈ ಖಾತೆಗಳನ್ನು ಎಂದಿಗೂ ರಚಿಸಿಲ್ಲ ಎಂದು ಹೇಳಿಕೊಂಡಿದ್ದಾರೆ. ಇವರಲ್ಲಿ ಹಲವರು ಡಿಜಿಟಲ್ ಅನಕ್ಷರಸ್ಥರು” ಎಂದು ಹಿರಿಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಹೇಳಿದೆ.

ಟೆಲಿಕಾಂ ಸೇವಾ ಪೂರೈಕೆದಾರರಿಗೆ (TSPs) ಪತ್ರ ಬರೆದಿರುವ ಸಿಐಡಿ, ಐಪಿವಿ 4 ಸ್ವರೂಪದ ಐಪಿ ವಿಳಾಸಗಳನ್ನು ಹೊಂದಿರುವ ‘ಸಾರ್ವಜನಿಕ ಇಂಟರ್ನೆಟ್ ಪ್ರೋಟೋಕಾಲ್ ವಿವರ ದಾಖಲೆ’ (ಐಪಿಡಿಆರ್) ಪಡೆದುಕೊಂಡಿದ್ದಾರೆ. ಪ್ರತಿ ಐಪಿ ಅಡ್ರೆಸ್‌ಗೆ ಡೈನಾಮಿಕ್ ಐಪಿ ಅಡ್ರೆಸ್‌ಗಳ ರೂಪದಲ್ಲಿ 200ಕ್ಕೂ ಹೆಚ್ಚು ಬಳಕೆದಾರರನ್ನು ಲಗತ್ತಿಸಲಾಗಿದೆ ಎಂದು ವರದಿಯಾಗಿದೆ. ಅಂದರೆ ಎಂಟು ಲಕ್ಷಕ್ಕೂ ಹೆಚ್ಚು ಸಾಧನಗಳನ್ನು ಪರಿಶೀಲಿಸಿ, ತನಿಖೆ ಮಾಡುವುದೇ ಇದರ ಉದ್ದೇಶ ಎನ್ನುತ್ತವೆ ಮೂಲಗಳು.

ಇಂಟರ್ನೆಟ್‌ನಲ್ಲಿರುವ ಯಾವುದೇ ಮಷಿನ್‌ನ ಐಪಿ ಅಡ್ರೆಸ್, ಅದರ ಡಿಜಿಟಲ್ ವಿಳಾಸವಾಗಿರುತ್ತದೆ. ನಿರ್ದಿಷ್ಟ ವಹಿವಾಟು ಮಾಡಿದ ಮಷಿನ್‌ಅನ್ನು ಟ್ರ್ಯಾಕ್ ಮಾಡಲು ಇದನ್ನು ಬಳಸಬಹುದು. ಆದಾಗ್ಯೂ, ಐಪಿಗಳು ಯಾವಾಗಲೂ ಸ್ಥಿರವಾಗಿರುವುದಿಲ್ಲ. ಡೈನಾಮಿಕ್ ಐಪಿ ಎಂದರೆ ಸರ್ವರ್‌ನಿಂದ ಮಷಿನ್‌ಗೆ ನಿಯೋಜಿಸಲಾದ ತಾತ್ಕಾಲಿಕ ಅಡ್ರೆಸ್ ಆಗಿರುತ್ತದೆ.

ಹುಡುಕಾಟವನ್ನು ಕಡಿಮೆ ಮಾಡಲು ಉದ್ದೇಶಿಸಿರುವ ಸಿಐಡಿ, “ಡೆಸ್ಟಿನೇಷನ್ ಐಪಿಗಳು ಮತ್ತು ಡೆಸ್ಟಿನೇಷನ್ ಪೋರ್ಟ್‌ಗಳನ್ನು ಹಂಚಿಕೊಳ್ಳಿ” ಎಂದು ಚುನಾವಣಾ ಆಯೋಗದ ಬಳಿ ಕೇಳುತ್ತಿದೆ. ಡೆಸ್ಟಿನೇಷನ್‌ ಐಪಿ ಸಿಕ್ಕರೆ ಆರೋಪಿಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಆಯೋಗ ಇವುಗಳನ್ನು ಒದಗಿಸುತ್ತಿಲ್ಲ ಎನ್ನಲಾಗಿದೆ.

ಡೈನಾಮಿಕ್ ಐಪಿಗಳೊಂದಿಗೆ ಯಂತ್ರದ ಜಿಯೋಲೋಕಲೈಸೇಶನ್ ಸವಾಲಿನದ್ದಾಗಿರುವುದರಿಂದ, ಡೆಸ್ಟಿನೇಶನ್ ಐಪಿಗಳು ಮತ್ತು ಡೆಸ್ಟಿನೇಶನ್ ಪೋರ್ಟ್‌ಗಳು ಹುಡುಕಾಟವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಈ ನಕಲಿ ಅಪ್ಲಿಕೇಶನ್‌ಗಳನ್ನು ಮಾಡಲು ಬಳಸುವ ಸಾಧನಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಹಗರಣದ ಹಿಂದಿನ ಅಪರಾಧಿಗಳನ್ನು ಗುರುತಿಸಲು ತನಿಖೆಯನ್ನು ಮತ್ತಷ್ಟು ಮುಂದಿನ ಮಟ್ಟಕ್ಕೆ ಕೊಂಡೊಯ್ಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಇಸಿಐ ಇಲ್ಲಿಯವರೆಗೆ ಈ ಡೇಟಾವನ್ನು ಹಂಚಿಕೊಂಡಿಲ್ಲ.

“ಇದು ಅತ್ಯಂತ ಅತ್ಯಾಧುನಿಕ ಕಾರ್ಯಾಚರಣೆಯಾಗಿದ್ದು, ಅಪರಾಧಿಗಳು ಮೂರು ಪದರಗಳ ಅಸ್ಪಷ್ಟತೆಯ ಹಿಂದೆ ಅಡಗಿಕೊಂಡಿದ್ದಾರೆ. ಮೂರು ಇಸಿಐ ಅಪ್ಲಿಕೇಶನ್‌ಗಳಲ್ಲಿ ಒಂದರಲ್ಲಿ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ರಚಿಸಲು ಬಳಸುವ ಮೊಬೈಲ್ ಸಂಖ್ಯೆಗಳ ಮಾಲೀಕರಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ. ಈ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ಬಳಸಿಕೊಂಡು ಮಾಡಲಾದ ಸಾವಿರಾರು ನಕಲಿ ಫಾರ್ಮ್ 7 ಅರ್ಜಿಗಳು ಡೈನಾಮಿಕ್ ಐಪಿಗಳನ್ನು ಬಳಸುತ್ತವೆ ಮತ್ತು ಪ್ರತಿ ಅರ್ಜಿಯು ಇತರ ಮತದಾರರ ರುಜುವಾತುಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ, ಆದರೆ ಮೊಬೈಲ್ ಸಂಖ್ಯೆಗಳು ಮಾತ್ರ ವಿಭಿನ್ನವಾಗಿವೆ, ”ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ದಿ ಹಿಂದೂ ವರದಿ ವಿವರಿಸಿದೆ.

ಒಟಿಪಿ ಪರಿಶೀಲನೆಯ ಕುರಿತ ಪ್ರಶ್ನೆಗಳು

ಚುನಾವಣಾ ಆಯೋಗದ ಮೂರು ಅಪ್ಲಿಕೇಶನ್‌ಗಳ ಸುರಕ್ಷತೆ ಮತ್ತು ದೃಢೀಕರಣದ ಬಗ್ಗೆ ಕಾರ್ಯಾಚರಣೆಯ ವಿಧಾನದ ವಿಶ್ಲೇಷಣೆಯು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಕರ್ನಾಟಕದ ಸಿಇಒಗೆ ಬರೆದ ಪತ್ರಗಳಲ್ಲಿ, ಸಿಐಡಿ ‘ಮತದಾರ/ಸಾರ್ವಜನಿಕ ದೃಷ್ಟಿಕೋನದಿಂದ ಎನ್‌ವಿಎಸ್‌ಪಿ, ವಿಹೆಚ್‌ಪಿ ಮತ್ತು ಗರುಡ ಅಪ್ಲಿಕೇಶನ್‌ಗಳ ಹಂತ-ಹಂತದ ಬಳಕೆಯ ಪ್ರಸ್ತುತಿಯನ್ನು ಕೋರಿದೆ ಮತ್ತು ಮೂರು ಪ್ರಶ್ನೆಗಳನ್ನು ಕೇಳಿದೆ:

ಎನ್‌ವಿಎಸ್‌ಪಿ ಮತ್ತು ವಿಹೆಚ್‌ಪಿ ಅಪ್ಲಿಕೇಶನ್‌ಗಳು, ಪ್ಲಾಟ್‌ಫಾರ್ಮ್‌ಗಳಲ್ಲಿ ಒಟಿಪಿ/ಮಲ್ಟಿಫ್ಯಾಕ್ಟರ್ ದೃಢೀಕರಣ ಸೌಲಭ್ಯವನ್ನು ಅಳವಡಿಸಲಾಗಿದೆಯೇ? ಅರ್ಜಿಗಳನ್ನು ಅಪ್‌ಲೋಡ್ ಮಾಡಲು ಅದೇ ರೀತಿ ವಿಸ್ತರಿಸಲಾಗಿದೆಯೇ? ಒಟಿಪಿಯಂತಹ ದೃಢೀಕರಣ ಅಸ್ತಿತ್ವದಲ್ಲಿದೆಯೇ ಮತ್ತು ಒಟಿಪಿ ಅನ್ನು ಲಾಗಿನ್‌ಗಾಗಿ ಬಳಸುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆಯೇ ಅಥವಾ ಅರ್ಜಿದಾರರು ಫಾರ್ಮ್‌ನಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿದೆಯೇ ಅಥವಾ ಎರಡಕ್ಕೂ ಕಳುಹಿಸಲಾಗಿದೆಯೇ?” ಈ ಅಂಶಗಳ ಬಗ್ಗೆಯೂ ಇಸಿಐಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿಐಡಿ ಮೂಲಗಳು ಹೇಳಿವೆ ಎಂದು ವರದಿ ತಿಳಿಸಿದೆ. 

ಆಗಸ್ಟ್ 29ರಂದು ದಿ ಹಿಂದೂ ಪತ್ರಿಕೆಯು ಸಿಇಒಗೆ ಇಮೇಲ್ ಕಳುಹಿಸಿದ್ದು, ಸಿಐಡಿ ಕೋರಿದ ಡೇಟಾವನ್ನು ಒದಗಿಸಲಾಗಿದೆಯೇ ಮತ್ತು ಇಸಿಐ ಅಪ್ಲಿಕೇಶನ್‌ಗಳ ಮೂಲಕ ಇತರ ಮತದಾರರ ರುಜುವಾತುಗಳನ್ನು ದುರುಪಯೋಗಪಡಿಸಿಕೊಂಡು ಮತ ಅಳಿಸುವಿಕೆಗೆ ಯಾರಾದರೂ ಹೇಗೆ ಅರ್ಜಿ ಸಲ್ಲಿಸಬಹುದು ಎಂದು ಕೇಳಿದೆ. ಸೆಪ್ಟೆಂಬರ್ 4 ರಂದು ಜ್ಞಾಪನೆ ಇಮೇಲ್ ಕಳುಹಿಸಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವರದಿ ಹೇಳಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ 10,348 ಮತಗಳಿಂದ ಗೆದ್ದಿರುವ ಬಿ.ಆರ್ ಪಾಟೀಲ್, “ನಾವು ಈ ಅರ್ಜಿಗಳ ವಿಷಯವನ್ನು ದೊಡ್ಡದು ಮಾಡಿರದಿದ್ದರೆ ಮತದಾರರ ಹೆಸರು ಅಳಿಸಿಹೋಗುತ್ತಿದ್ದವು” ಎಂದು ಹೇಳಿದ್ದಾರೆ. ಹೆಸರು ಅಳಿಸಲು ಪಿತೂರಿ ಮಾಡಿದ್ದ ಹೆಚ್ಚಿನ ಮತದಾರರು ಕಾಂಗ್ರೆಸ್‌ನವರು ಎಂದು ಪಾಟೀಲ್  ತಿಳಿಸಿದ್ದಾರೆ.

“ನಾನು ಈ ವಿಷಯವನ್ನು ಎತ್ತಿ ತೋರಿಸಿದ ನಂತರ, ಚುನಾವಣಾ ಯಂತ್ರವು ಶ್ರದ್ಧೆಯಿಂದ ಪ್ರತಿಕ್ರಿಯಿಸಿತು. ಸಕಾಲಿಕ ಹಸ್ತಕ್ಷೇಪ ಮಾಡಲು ನಮಗೆ ಸಹಾಯ ಮಾಡಿತು ಮತ್ತು ಈ ಮತಗಳನ್ನು ಉಳಿಸಿತು. ಆದರೆ, ಇಸಿಐ ತನಿಖಾಧಿಕಾರಿಗಳೊಂದಿಗೆ ತಾಂತ್ರಿಕ ಡೇಟಾವನ್ನು ಹಂಚಿಕೊಳ್ಳದ ಕಾರಣ ತನಿಖೆಗೆ ಅಡ್ಡಿಯಾಗಿದೆ ಎಂಬುದು ಕಳವಳಕಾರಿ ವಿಷಯವಾಗಿದೆ. ಪಿತೂರಿಯ ಹಿಂದಿನ ಜನರನ್ನು ಬಹಿರಂಗಪಡಿಸಲು ಇಸಿಐ ಸಹಾಯ ಮಾಡಬೇಕು. ಪ್ರಜಾಪ್ರಭುತ್ವವನ್ನು ಉಳಿಸಲು ಇದು ಮುಖ್ಯವಾಗಿದೆ” ಬಿ.ಆರ್ ಪಾಟೀಲ್ ಹೇಳಿದ್ದಾರೆ.

ಮಾಹಿತಿ ಕೃಪೆ : thehindu.com

ಅದಾನಿ ಬಗ್ಗೆ ‘ಮಾನಹಾನಿಕರ’ ವರದಿಗಳನ್ನು ಪ್ರಕಟಿಸದಂತೆ ಪತ್ರಕರ್ತರು, ವೆಬ್‌ಸೈಟ್‌ಗಳಿಗೆ ನಿರ್ಬಂಧ ವಿಧಿಸಿದ ದೆಹಲಿ ನ್ಯಾಯಾಲಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -