ಚುನಾವಣೆಗಳಲ್ಲಿ ‘ಮತಗಳ್ಳತನ’ ನಿಲ್ಲುವವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ. ಯುವಜನರು ‘ಉದ್ಯೋಗ ಕಳ್ಳತನ’ ಮತ್ತು ‘ಮತ ಕಳ್ಳತನ’ವನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಅವರು, “ನಿರುದ್ಯೋಗವು ಭಾರತದಲ್ಲಿ ಯುವಕರು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾಗಿದ್ದು, ಅದು ನೇರವಾಗಿ ಮತಗಳ್ಳತನದೊಂದಿಗೆ ಸಂಬಂಧ ಹೊಂದಿದೆ ಎಂದಿದ್ದಾರೆ.
ಒಂದು ಸರ್ಕಾರ ಜನರ ವಿಶ್ವಾಸಗಳಿಸಿ ಅಧಿಕಾರಕ್ಕೆ ಬಂದಾಗ, ಅದರ ಮೊದಲ ಕರ್ತವ್ಯ ಯುವಕರಿಗೆ ಉದ್ಯೋಗ ಮತ್ತು ಅವಕಾಶಗಳನ್ನು ಒದಗಿಸುವುದು ಆಗಿರುತ್ತದೆ. ಆದರೆ, ಬಿಜೆಪಿ ಪ್ರಾಮಾಣಿಕವಾಗಿ ಚುನಾವಣೆಗಳನ್ನು ಗೆಲ್ಲುವುದಿಲ್ಲ. ಅವರು ಮತಗಳನ್ನು ಕದಿಯುವ ಮೂಲಕ ಮತ್ತು ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ ಅಧಿಕಾರದಲ್ಲಿ ಉಳಿಯುತ್ತಾರೆ” ಎಂದು ಆರೋಪಿಸಿದ್ದಾರೆ.
“ಈ ಕಾರಣಕ್ಕೆ ದೇಶದಲ್ಲಿ ನಿರುದ್ಯೋಗ 45 ವರ್ಷಗಳಲ್ಲಿ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗವಕಾಶಗಳು ಕಡಿಮೆಯಾಗುತ್ತಿವೆ. ನೇಮಕಾತಿ ಪ್ರಕ್ರಿಯೆಗಳು ಕುಸಿದಿವೆ. ಯುವಕರ ಭವಿಷ್ಯ ಅಪಾಯಕ್ಕೆ ಸಿಲುಕುತ್ತಿದೆ. ಪ್ರತಿಯೊಂದು ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪ್ರತಿಯೊಂದು ನೇಮಕಾತಿಯು ಭ್ರಷ್ಟಾಚಾರದ ಕಥೆಗಳೊಂದಿಗೆ ಸಂಬಂಧ ಹೊಂದಿದೆ” ಎಂದು ಹೇಳಿದ್ದಾರೆ.
“ದೇಶದ ಯುವಕರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಕನಸು ಕಾಣುತ್ತಾರೆ ಮತ್ತು ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಾರೆ. ಆದರೆ, ಮೋದಿ ತಮ್ಮ ಪಿಆರ್, ಸೆಲೆಬ್ರಿಟಿಗಳು ತಮ್ಮನ್ನು ಹೊಗಳುವಂತೆ ಮಾಡುವುದು ಮತ್ತು ಕೋಟ್ಯಾಧಿಪತಿಗಳ ಲಾಭದ ಮೇಲೆ ಮಾತ್ರ ಗಮನಹರಿಸಿದ್ದಾರೆ. ಯುವಕರ ಭರವಸೆಗಳನ್ನು ಛಿದ್ರಗೊಳಿಸುವುದು ಮತ್ತು ಅವರನ್ನು ನಿರಾಶೆಗೊಳಿಸುವುದು ಸರ್ಕಾರದ ಗುರುತಾಗಿದೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಈಗ ಪರಿಸ್ಥಿತಿ ಬದಲಾಗುತ್ತಿದೆ. ಭಾರತದ ಯುವಕರು ನಿಜವಾದ ಹೋರಾಟ ಕೇವಲ ಉದ್ಯೋಗಗಳಿಗಾಗಿ ಅಲ್ಲ, ಮತ ಕಳ್ಳತನದ ವಿರುದ್ಧ ಎಂದು ಅರ್ಥಮಾಡಿಕೊಂಡಿದ್ದಾರೆ. ಏಕೆಂದರೆ, ಎಲ್ಲಿಯವರೆಗೆ ಮತಗಳ್ಳತನ ನಡೆಯುತ್ತದೆಯೋ, ಅಲ್ಲಿಯವರೆಗೆ ನಿರುದ್ಯೋಗ ಮತ್ತು ಭ್ರಷ್ಟಾಚಾರ ಹೆಚ್ಚುತ್ತಲೇ ಇರುತ್ತದೆ” ಎಂದಿದ್ದಾರೆ.
“ಯುವಜನರು ಇನ್ನು ಮುಂದೆ “ಉದ್ಯೋಗ ಕಳ್ಳತನ” ಅಥವಾ “ಮತ ಕಳ್ಳತನ”ವನ್ನು ಸಹಿಸುವುದಿಲ್ಲ. ಈಗ ಅಂತಿಮ ದೇಶಭಕ್ತಿ ಭಾರತವನ್ನು ನಿರುದ್ಯೋಗ ಮತ್ತು ಮತ ಕಳ್ಳತನದಿಂದ ಮುಕ್ತಗೊಳಿಸುವುದರಲ್ಲಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಉದ್ಯೋಗಕ್ಕಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ದೃಶ್ಯ ಹಾಗೂ ಇನ್ನೊಂದೆಡೆ ಪ್ರಧಾನಿ ಮೋದಿ ಸಸಿಗಳನ್ನು ನೆಡುವುದು, ನವಿಲುಗಳಿಗೆ ಆಹಾರ ನೀಡುವುದು ಮತ್ತು ಯೋಗಾಭ್ಯಾಸ ಮಾಡುತ್ತಿರುವ ದೃಶ್ಯಗಳಿರುವ ವಿಡಿಯೋವನ್ನು ರಾಹುಲ್ ಗಾಂಧಿ ತಮ್ಮ ಪೋಸ್ಟ್ ಜೊತೆ ಹಂಚಿಕೊಂಡಿದ್ದಾರೆ.