ವಯನಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಭೂಕುಸಿತ, ಜಲಪ್ರಳಯ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 100 ದಾಟಿದೆ. ಈ ಸುದ್ದಿ ಬರೆಯುವ ಹೊತ್ತಿಗೆ (7:30pm) ಮೃತರ ಸಂಖ್ಯೆ 106ಕ್ಕೆ ಏರಿಕೆಯಾಗಿತ್ತು. 130ಕ್ಕೂ ಅಧಿಕ ಗಾಯಾಳುಗಳನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಜೆ ಸುದ್ದಿಗೋಷ್ಠಿ ನಡೆಸಿ ದುರಂತದ ಬಗ್ಗೆ ಮಾಹಿತಿ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ “ಇದುವರೆಗೆ 34 ಮೃತದೇಹಗಳನ್ನು ಗುರುತಿಸಿದ್ದು, 18 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ವಯನಾಡ್‌ನ ಪೋತುಕಲ್ ಗ್ರಾಮದ ಚಾಲಿಯಾರ್ ನದಿಯಿಂದ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ” ಎಂದು ತಿಳಿಸಿದ್ದಾರೆ.
ರಾತ್ರಿ 2 ಗಂಟೆಯ ಸುಮಾರಿಗೆ ಭೂಕುಸಿತ ಸಂಭವಿಸಿದೆ. ಅದು ಮುಂಜಾನೆ 4:30ರ ವೇಳೆಗೆ ತೀವ್ರ ಸ್ವರೂಪ ಪಡೆದು ಹಲವರು ಸಂಕಷ್ಟದಲ್ಲಿ ಸಿಲುಕುವಂತಾಗಿದೆ ಎಂದು ಸಿಎಂ ಹೇಳಿದ್ದಾರೆ.
ಜನರು ಮಲಗಿದ್ದ ವೇಳೆ ದುರಂತ ನಡೆದಿರುವುದರಿಂದ ಅಪಾಯದ ಮುನ್ಸೂಚನೆ ತಿಳಿಯಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಹೆಚ್ಚಿ ಸಾವು, ನೋವುಗಳು ಸಂಭವಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ವಯನಾಡ್ ಜಿಲ್ಲೆಯಲ್ಲಿ 45 ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 3,069 ಜನರಿಗೆ ಪುನರ್ವಸತಿ ಕಲ್ಪಿಸಲಾಗಿದೆ ಎಂದಿರುವ ಸಿಎಂ, ದುರಂತದಿಂದ ನಿರಾಶ್ರಿತರಾದ ಜನರಿಗೆ ಪುನರ್ವಸತಿ ಕಲ್ಪಿಸಲು ಮತ್ತು ಇತರ ವ್ಯವಸ್ಥೆಗಳನ್ನು ಮಾಡಿ ಕೊಡಲು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ (ಸಿಎಂಡಿಆರ್‌ಎಫ್) ಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ವಯನಾಡ್ ಭೂಕುಸಿತ ದುರಂತ : ಕೇರಳದಲ್ಲಿ 2 ದಿನ ಶೋಕಾಚರಣೆ ಘೋಷಿಸಿದ ಸಿಎಂ ಪಿಣರಾಯಿ ವಿಜಯನ್


