ವಯನಾಡ್ ಜಿಲ್ಲೆಯಲ್ಲಿ ವಿವಿಧ ಭಾಗಗಳಲ್ಲಿ ಭೂಕುಸಿತ ಉಂಟಾಗಿ ಸುಮಾರು 100ರಷ್ಟು ಜನರು ಸಾವನ್ನಪ್ಪಿರುವ ಹಿನ್ನೆಲೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎರಡು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆಯನ್ನು ಘೋಷಿಸಿದ್ದಾರೆ.
ಜುಲೈ 30 ಮಂಗಳವಾರ ಮತ್ತು ಜುಲೈ 31 ಬುಧವಾರದಂದು ಕೇರಳ ಸರ್ಕಾರ ಅಧಿಕೃತ ಶೋಕಾಚರಣೆಯನ್ನು ಘೋಷಿಸಿದೆ. ಈ ಸಂದರ್ಭ ರಾಜ್ಯದ ಎಲ್ಲಾ ಕಡೆಗಳಲ್ಲಿ ರಾಷ್ಟ್ರಧ್ವಜ ಅರ್ಧದಲ್ಲಿ ಹಾರಾಡಲಿದೆ. ಈ ಎರಡೂ ದಿನಗಳಂದು ನಡೆಯಬೇಕಿದ್ದ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಮತ್ತು ಇತರ ಆಚರಣೆಗಳನ್ನು ಮುಂದೂಡಲಾಗಿದೆ.
ಈ ಸುದ್ದಿ ಬರೆಯುವ ಹೊತ್ತಿಗೆ ( ಸಂಜೆ 6 ಗಂಟೆ) ವಯನಾಡ್ ದುರಂತದಲ್ಲಿ ಮೃತರ ಸಂಖ್ಯೆ 93ಕ್ಕೆ ತಲುಪಿತ್ತು.128 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು 98 ಮಂದಿ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿತ್ತು.
ವರದಿಗಳ ಪ್ರಕಾರ ಸದ್ಯ ದುರಂತ ನಡೆದ ಸ್ಥಳಗಳಲ್ಲಿ ಒಂದಾದ ಮುಂಡಕ್ಕೈನಲ್ಲಿ ಎನ್‌ಡಿಆರ್‌ಎಫ್‌ನ 20 ಸದಸ್ಯರ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಭೂಕುಸಿತ ಸಂತ್ರಸ್ತರಿಗೆ ಆಹಾರ ಮತ್ತು ಇತರ ಸಾಮಗ್ರಿಗಳ ಪೂರೈಕೆಗೆ ರಾಜ್ಯದ ನಾಗರಿಕ ಸರಬರಾಜು ಇಲಾಖೆ ಕ್ರಮಕೈಗೊಂಡಿದೆ.
ಇದನ್ನೂ ಓದಿ : ಪ್ಯಾರಿಸ್ ಒಲಿಂಪಿಕ್ಸ್ | 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆದ್ದ ಭಾರತದ ಮನು ಭಾಕರ್- ಸರಬ್ಜೋತ್ ಜೋಡಿ


