Homeಮುಖಪುಟನಾಗರಿಕ ಸಮರದ ನಡುವೆ ಇದ್ದೇವೆ: ಆದರೆ ಜನ ಸಮೂಹ ಇದನ್ನು ಮುನ್ನಡೆಸುತ್ತಿದೆಯೇ?

ನಾಗರಿಕ ಸಮರದ ನಡುವೆ ಇದ್ದೇವೆ: ಆದರೆ ಜನ ಸಮೂಹ ಇದನ್ನು ಮುನ್ನಡೆಸುತ್ತಿದೆಯೇ?

ಇತಿಹಾಸವನ್ನು ಮರಳಿ ಪಡೆಯುವ ಮೂಲಕ ನಮಗೆ ಲಭ್ಯವಾದ ಎಲ್ಲ ಅವಕಾಶಗಳನ್ನು ರಾಜಕೀಯಗೊಳಿಸುವುದಕ್ಕೆ ಪ್ರಯತ್ನಿಸಬೇಕು ಮತ್ತು ಗಟ್ಟಿಯಾಗಿ ಉಳಿದಿರುವ ಜಾತಿ ಮತ್ತು ವರ್ಗ ಪದ್ಧತಿಯ ಮೇಲೆ ನಿರಂತರವಾಗಿ ದಾಳಿ ನಡೆಸಬೇಕು.

- Advertisement -

“ಹಳೆಯದು ಸಾಯುತ್ತಿದೆ ಮತ್ತು ಹೊಸತು ಹುಟ್ಟುತ್ತಿಲ್ಲ ಎಂಬ ಅಂಶದಲ್ಲಿ ಒಂದು ಖಚಿತವಾದ ಬಿಕ್ಕಟ್ಟಿದೆ. ಈ ಅಂತರದ ಸಮಯದಲ್ಲೇ ಹಲವು ರೀತಿಯ ಅಸ್ವಸ್ಥ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.”
– ಆಂಟೋನಿಯೊ ಗ್ರಾಮ್ಸಿ

ತಾಳೆ ಇಲ್ಲದ ಜನ ಹೋರಾಟಗಳು ಮತ್ತು ರಾಜಕೀಯ ಫಲಿತಗಳು

ಸಿಎಎ ವಿರೋಧಿ, ಎನ್‌ಆರ್‌ಸಿ ವಿರೋಧಿ ಆಂದೋಲನಗಳ ಕಾಲದಿಂದಲೂ ದೇಶವು ಅತಿ ದೊಡ್ಡ ಸರ್ಕಾರ ವಿರೋಧಿ ಹೋರಾಟಗಳಿಗೆ ಸಾಕ್ಷಿಯಾಗುತ್ತಿದೆ. ಈಗ ವಿವಿಧ ಕಾರ್ಮಿಕ ಒಕ್ಕೂಟಗಳ ಬೆಂಬಲದೊಂದಿಗೆ ಐತಿಹಾಸಿಕವೂ ನಿರ್ಣಾಯಕವೂ ಆದ ರೈತ ಹೋರಾಟ ನಡೆಯುತ್ತಿದೆ. ಎನ್‌ಡಿಎ ಮೊದಲ ಅವಧಿಯ ಆಡಳಿತದಲ್ಲಿ ಇಡೀ ದೇಶದ ಮುಸ್ಲಿಂ, ದಲಿತರ ಮೇಲೆ ನಡೆದ ದೌರ್ಜನ್ಯಗಳ ವಿರುದ್ಧ, ಕಾರ್ಮಿಕರು ಮತ್ತು ರೈತರ ಮೇಲಿನ ದಬ್ಬಾಳಿಕೆ ವಿರುದ್ಧ, ಡಿಮಾನಿಟೈಸೇಷನ್ ವಿರುದ್ಧ ಹಲವು ಪ್ರತಿಭಟನೆಗಳು, ಹೋರಾಟಗಳು ನಡೆದದ್ದನ್ನು ನೋಡಿದೆವು. ಅಷ್ಟೇ ಅಲ್ಲ, ಐತಿಹಾಸಿಕವಾದ ಊನಾ ಹೋರಾಟ, ದೇಶದ ಎಲ್ಲ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ತಲೆ ಎತ್ತಿದ ಬ್ರಾಹ್ಮಣ್ಯ ಮತ್ತು ಫ್ಯಾಸಿಸಂ ವಿರುದ್ಧ ಅಂಬೇಡ್ಕರ್ ಅನುಯಾಯಿಗಳಾದ ವಿದ್ಯಾರ್ಥಿಗಳು ನಡೆಸಿದ ಹೋರಾಟ, ಭೀಮ್ ಆರ್ಮಿಯ ಐತಿಹಾಸಿಕ ಬೆಳವಣಿಗೆ ಮತ್ತು ಆರ್‌ಎಸ್‌ಎಸ್ ಮೂಲನೆಲೆಯಲ್ಲೇ ಅದರೊಂದಿಗೆ ಮುಖಾಮುಖಿಯಾಗಿದ್ದು ಇತ್ಯಾದಿಗಳನ್ನು ನಾವು ಕಂಡಿದ್ದೇವೆ.

ಆದರೆ ಆಡಳಿತಾರೂಢ ಬಿಜೆಪಿ ಮತ್ತು ಅತ್ಯಂತ ವ್ಯವಸ್ಥಿತವಾಗಿ ಸ್ಥಾಪಿತವಾಗಿರುವ ಸಂಘ ಪರಿಹಾರದ ಜಾಲವು ತನ್ನ ಶತಮಾನ ಕಾಲ, ಇತಿಹಾಸ-ಸಂಸ್ಕೃತಿ ತಿರುಚುವ, ಸೋಷಿಯಲ್ ಎಂಜಿನಿಯರಿಂಗ್‌ನಂತಹ ಚಟುವಟಿಕೆಗಳ ಮೂಲಕ ತಾತ್ವಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸರ್ಕಾರಿ ವ್ಯವಸ್ಥೆಯಲ್ಲಿ ಎಷ್ಟರಮಟ್ಟಿಗೆ ನುಸುಳಿವೆಯೋ ಅಷ್ಟೇ ಗಟ್ಟಿಯಾಗಿ ಸಮಾಜದಲ್ಲಿ ನೆಲೆ ಕಂಡುಕೊಂಡಿದೆ. ಹಾಗಾಗಿಯೇ ಇಷ್ಟು ತೀವ್ರವಾದ ಪ್ರತಿಭಟನೆಗಳ ನಡುವೆಯೂ ಇನ್ನೂ ಭದ್ರವಾಗಿ ನಿಂತಿದ್ದು, ಚುನಾವಣಾಗಳಲ್ಲೂ ಬಲಿಷ್ಠವಾಗಿ ಕಾಣಿಸಿಕೊಂಡಿವೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ, ಅಂಚಿಗೆ ತಳ್ಳಲ್ಪಟ್ಟ, ತುಳಿತಕ್ಕೆ ಒಳಗಾದ ವರ್ಗಗಳು, ದಲಿತರು, ರೈತರು, ಬಹುಜನರು, ಆದಿವಾಸಿಗಳು, ಶ್ರಮಿಕ ವರ್ಗ ಬಿಜೆಪಿಯತ್ತ ವಾಲಿದೆ ಎಂದು ಚುನಾವಣಾ ವಿಶ್ಲೇಷಣೆಗಳು ಹೇಳುತ್ತವೆ. ಇದು ಏನನ್ನು ಸೂಚಿಸುತ್ತದೆ ಎಂದರೆ, ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಮುಖ್ಯವಾಗಿ ಸಂಘಟನೆಗಳ ನಾಯಕರು ಪ್ರತಿನಿಧಿಸುತ್ತವೆ ಎಂಬುದನ್ನು ಮತ್ತು ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳು, ನಗರದ ಬುದ್ಧಿಜೀವಿಗಳು ಪ್ರಾಬಲ್ಯ ಹೊಂದಿರುವುದಾಗಿ ಬಿಂಬಿಸುವ ಮೂಲಕ ಗ್ರಾಮೀಣ ಹಾಗೂ ನಗರಪ್ರದೇಶಗಳಲ್ಲಿ ನಡೆಯುವ ಹೋರಾಟಗಳ ಉದ್ದೇಶದಲ್ಲಿ ಸಮೂಹದ ಪಾತ್ರವನ್ನು ಸೀಮಿತಗೊಳಿಸಲಾಗುತ್ತಿದೆ.

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2015ರಲ್ಲಿ ರೋಹಿತ್ ವೇಮುಲಾ ಕೊಲೆ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಗಳಿಗೂ ಕೆಲವು ತಿಂಗಳು ಮುನ್ನ ರಾಜಸ್ಥಾನದಲ್ಲಿ ಜಾಟ್ ಸಮುದಾಯದ ದೊಡ್ಡ ಗುಂಪಿನಿಂದ ನಾಲ್ಕು ದಲಿತರ ಕೊಲೆ ಮತ್ತು ವೃದ್ಧ ಮಹಿಳೆ, ಮಕ್ಕಳ ಮೇಲೆ ತೀವ್ರವಾದ ಹಲ್ಲೆ ನಡೆದಿತ್ತು. ಇದು ಮಾಧ್ಯಮದ ಮೂಲಕ ರಾಷ್ಟ್ರಿಯ ಸುದ್ದಿಯೂ ಆಗಲಿಲ್ಲ. ಸಂಘಟನೆಗಳೂ ಇದಕ್ಕೆ ಮಹತ್ವ ಕೊಡಲಿಲ್ಲ. ದೇಶಾದ್ಯಂತ ಪ್ರತಿದಿನ ಇಂತಹ ಹಲವಾರು ದೌರ್ಜನ್ಯಗಳು ನಡೆಯುತ್ತಿವೆ. ಆದರೆ ದುರದೃಷ್ಟವಶಾತ್ ಹೆಚ್ಚಿನ ಸಂದರ್ಭಗಳಲ್ಲಿ ಮಾಧ್ಯಮಗಳು ರೋಚಕಗೊಳಿಸುವ ಪ್ರಕರಣಗಳು ಮಾತ್ರ ಪ್ರಾಥಮಿಕ ಸಮಸ್ಯೆಗಳಾಗುತ್ತವೆ ಮತ್ತು ಬೃಹತ್ ಪ್ರತಿಭಟನೆಗಳಾಗಿ ಅನುರಣಿಸುತ್ತವೆ. ಮಾಧ್ಯಮಗಳು ರೋಚಕಗೊಳಿಸಲಿ ಅಥವಾ ಪ್ರತಿಭಟನೆಗಳಿಗೆ ಬೃಹತ್ ಜನಸಮೂಹವಾಗಲಿ ಪಾಲ್ಗೊಳ್ಳುವಂತೆ ಮಾಡಲಿ, ರಾಜಕೀಯ ಫಲಿತಾಂಶಗಳ ಚಿತ್ರಣ ಭಿನ್ನವಾಗಿಯೇ ಇರುತ್ತದೆ.

ಮಹಾರಾಷ್ಟ್ರದಲ್ಲಿ 2019ರಲ್ಲಿ ನಡೆದ 180 ಕಿಲೋಮೀಟರ್ ಉದ್ದದ ರೈತರ ಮೆರವಣಿಗೆಯಲ್ಲಿ ಸುಮಾರು 50,000 ಪಾಲ್ಗೊಂಡರು. ಈ ಜಾಥಾದಲ್ಲಿ ರೈತರು ಅಷ್ಟು ದೊಡ್ಡ ಪ್ರಮಾಣದಲ್ಲಿ ಸಂಘಟಿತರಾಗಿ ತಮ್ಮ ಆಕ್ರೋಶ ಹೊರಹಾಕಿದರು, ಕಡೆಗೆ ಅವರಲ್ಲಿ ಬಹುತೇಕ ಎನ್‌ಡಿಎಗೆ ಮತ ಹಾಕುವುದನ್ನು ಮುಂದುವರೆಸಿದರು. ಇನ್ನು ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಮತಗಳನ್ನು ಹೆಚ್ಚಿಸಿಕೊಂಡಿತು. ಇದೇ ವೇಳೆ ಹಲವು ಟ್ರೇಡ್ ಯೂನಿಯನ್‌ಗಳು ಜಂಟಿಯಾಗಿ ಅಖಿಲ ಭಾರತ ಮಟ್ಟದ ಕಾರ್ಮಿಕರನ್ನು, ಸುಮಾರು 20-25 ಕೋಟಿ ಜನರನ್ನು ಒಟ್ಟುಗೂಡಿಸಿ ಆಂದೋಲನ ನಡೆಸಿತು. ಇದು ಬಹುಶಃ ವಿಶ್ವದ ಅತಿದೊಡ್ಡ ಕಾರ್ಮಿಕರ ಆಂದೋಲನ ಎನ್ನಬಹುದು. ದಲಿತ-ಬಹುಜನ-ಕಾರ್ಮಿಕ ವರ್ಗ-ರೈತ ಪಡೆಗಳ ಇಂತಹ ಐತಿಹಾಸಿಕ ಮತ್ತು ಮಹತ್ವದ ಹೋರಾಟಗಳ ಹೊರತಾಗಿಯೂ, ಭಾರತವು 6-7% ರಷ್ಟು ಮತಗಳ ಹೆಚ್ಚಳದೊಂದಿಗೆ ಅದೇ ಸರ್ಕಾರವನ್ನು ಆಯ್ಕೆ ಮಾಡಿದ್ದಕ್ಕೆ ಜಗತ್ತು ಸಾಕ್ಷಿಯಾಯಿತು. ಆದ್ದರಿಂದ, ಸರಣಿ ಪ್ರತಿಭಟನೆಗಳು ಮತ್ತು ಉಗ್ರ ಘೋಷಣೆಗಳ ರಮ್ಯ ಕಲ್ಪನೆಯಲ್ಲಿ ಮುಳುಗುವುದರ ಬದಲು, ಸಾಮಾಜಿಕ ಜಾಲತಾಣಗಳು ಮತ್ತು ಚಾನೆಲ್‌ಗಳ ಚರ್ಚೆಗಳಿಂದ ಮಾನಸಿಕ ತೃಪ್ತಿಯನ್ನು ಕಂಡುಕೊಳ್ಳುವ ಬದಲು, ತಪ್ಪಿ ಹೋಗಿರುವ ಸಂಪರ್ಕವನ್ನು ಅರ್ಥ ಮಾಡಿಕೊಳ್ಳುವ ಮತ್ತು ಬಹುಶಃ ನಾವೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹುಮುಖ್ಯ ಅಂಶ ಎನಿಸುತ್ತದೆ.

ತನ್ನ ಇಲ್ಲಿಯವರೆಗಿನ ಒಂದೂವರೆ ವರ್ಷದ ಎನ್‌ಡಿಎ-2 ಆಡಳಿತದಲ್ಲಿ, ಪ್ರತಿಭಟನೆಗಳು ಹೆಚ್ಚುತ್ತಿರುವುದನ್ನು ಕಂಡಿದೆ. ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟಗಳು, ಫ್ಯಾಸಿಸ್ಟ್ ವಿರೋಧಿ ಹೋರಾಟಕ್ಕೆ ರಾಷ್ಟ್ರೀಯ ಸ್ವರೂಪವನ್ನು ನೀಡಿದವು. ಸೂಕ್ಷ್ಮವಾಗಿ ವಿಶ್ಲೇಷಿಸಿ ನೋಡಿದರೆ, ಈ ಹೋರಾಟಗಳಲ್ಲಿ ದಲಿತ, ಎಡ, ಲಿಬರಲ್, ಮಧ್ಯ ಮಾರ್ಗದ ವಿವಿಧ ಸಂಘಟನೆಗಳು ಪಾಲ್ಗೊಂಡಿದ್ದವು. ಈ ಜನಸಮೂಹದಲ್ಲಿ ಮುಸ್ಲಿಂ ಸಮುದಾಯದಿಂದ ಬಂದವರೂ ಇದ್ದರು (ದೆಹಲಿಯ ಶಾಹೀನ್ ಭಾಗ್‌ನಲ್ಲಿ 100 ದಿನಗಳ ಕಾಲ ಮಹಿಳೆಯರು ಪ್ರತಿಭಟಿಸಿದ್ದರು, ಬೆಂಗಳೂರಿನ ಬಿಲಾಲ್ ಬಾಗ್‌ನಲ್ಲಿ 75 ದಿನಗಳ ಕಾಲ ಮಹಿಳೆಯರು ಪ್ರತಿಭಟಿಸಿದ್ದರು, ಹೈದರಾಬಾದ್‌ನಲ್ಲಿ ಲಕ್ಷಾಂತರ ಮಂದಿ ಜಾಥಾ ನಡೆಸಿದ್ದರು. ಮಂಗಳೂರು, ಮಾಲೆಗಾಂವ್, ನಾಗ್‌ಪುರ್, ಕಿಷನ್‌ಗಂಜ್, ಮಲೇರ್‌ಕೋಟ್ಲಾ, ಮೈಸೂರು, ಉತ್ತರ ಪ್ರದೇಶ, ಬಿಹಾರದ ವಿವಿಧ ಜಿಲ್ಲೆಗಳಲ್ಲಿ, ರಾಜಸ್ಥಾನದ ಕೋಟಾ ಪಟ್ಟಣದಲ್ಲಿ, ಕೇರಳದಲ್ಲಿ.. ಹೀಗೆ ಪಟ್ಟಿ ಬೆಳೆಯುತ್ತದೆ). ಅಲ್ಲದೆ, ಭಿನ್ನ ಕಾರಣಗಳಿಗಾಗಿ ಈಶಾನ್ಯ ರಾಜ್ಯಗಳಲ್ಲೂ ಜನರು ಪ್ರತಿಭಟನೆ ನಡೆಸಿದ್ದರು. ಈ ಪ್ರಮಾಣದ ಪ್ರತಿಕ್ರಿಯೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ಕಾಯ್ದೆ 370ಯನ್ನು ಹಿಂಪಡೆದಾಗ ವ್ಯಕ್ತವಾಗಲಿಲ್ಲ. ಕಾಶ್ಮೀರ ಜನರ ಬದುಕನ್ನು ಕಿತ್ತುಕೊಂಡಾಗಲೂ ವ್ಯಕ್ತವಾಗಲಿಲ್ಲ.

ಆದರೆ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಿಂಸಾತ್ಮಕ ದಾಳಿ ನಡೆಸಿದಾಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಾಧ್ಯಮಗಳು ವಿದ್ಯಾರ್ಥಿಗಳ ಪರವಾಗಿ ಸುದ್ದಿ ಬಿತ್ತರಿಸಿದರು. ವಿರೋಧ ಪಕ್ಷಗಳು, ದಲಿತ-ಬಹುಜನ ಸಂಘಟನೆಗಳು, ಲಿಬರಲ್‌ಗಳು ಮತ್ತು ಬಿಜೆಪಿಯನ್ನು ಪ್ರಬಲವಾಗಿ ಬೆಂಬಲಿಸುವ ಬಲಪಂಥೀಯ ವಿಚಾರಧಾರೆಯ ತಾರೆಗಳು ಕೂಡ ಇದನ್ನು ವಿರೋಧಿಸಿದರು. ದೇಶದ ಉದ್ದಗಲದಲ್ಲಿ ತಿಂಗಳುದ್ದಕ್ಕೂ ನಡೆದ ಪ್ರತಿಭಟನೆ ಮತ್ತು ಹೋರಾಟಗಳು ಫ್ಯಾಸಿಸ್ಟ್ ಸರ್ಕಾರವನ್ನು ಕಟ್ಟಿಹಾಕಿತು. ಆದರೆ ಈ ಹೋರಾಟಗಳು ಆಳದಲ್ಲಿ ದಲಿತ-ಬಹುಜನ-ದುಡಿಯುವ ವರ್ಗ-ಬಡ ಮತ್ತು ಅಂಚಿನಲ್ಲಿರುವ ರೈತ ಸಮೂಹಗಳನ್ನು ಒಳಗೊಂಡಿದ್ದವೆ ಎಂಬುದು ಪ್ರಶ್ನೆ. ನಗರ ಪ್ರದೇಶಗಳಲ್ಲೇ, ದಲಿತ, ಎಡ ಸಂಘಟನೆಗಳು ಅಥವಾ ಟ್ರೇಡ್ ಯೂನಿಯನ್‌ಗಳು ಆಯೋಜಿಸಿದ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಜನಸಮೂಹದಲ್ಲಿ ಎಷ್ಟರ ಮಟ್ಟಿಗೆ ಹೋರಾಟದ ಪ್ರಜ್ಞೆಯನ್ನು ರೂಪಿಸಿವೆ ಎಂಬ ಬಗ್ಗೆ ಅನುಮಾನಗಳಿವೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ರಾಮ ಮಂದಿರವನ್ನು ನಿರ್ಮಿಸುವ ಮಾಸ್ಟರ್ ಸ್ಟ್ರೋಕ್ ಸಂಘ ಪರಿವಾರದ ಸಂಸ್ಥೆಗಳಿಗೆ ಅವಕಾಶಗಳನ್ನು ಸೃಷ್ಟಿಸಿಕೊಟ್ಟಿತು. ಈ ನಡುವೆ, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳಿಂದಾಗಿ ಬಿಜೆಪಿ ಮತ್ತು ಅದರ ದೀರ್ಘಾವಧಿಯ ಮಿತ್ರ ಶಿವಸೇನೆ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಶಿವಸೇನೆ ಹೊರಬಂದು ಹೊಸ ಮೈತ್ರಿಯನ್ನು ರೂಪಿಸಿತು ಮತ್ತು ಮಧ್ಯಮಮಾರ್ಗದ ನೀತಿಗಳನ್ನು ಜಾರಿಗೆ ತರಲು ಪ್ರಾರಂಭಿಸಿತು. ಬಿಹಾರದಲ್ಲಿ, ಬಿಜೆಪಿಯ ಮುಖ್ಯ ಮಿತ್ರ ಜೆಡಿಯು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ (ಇದು ಮೈತ್ರಿಕೂಟದ ಮೇಲೆ ಭವಿಷ್ಯದಲ್ಲಿ ಪರಿಣಾಮಗಳನ್ನು ಬೀರಬಹುದು) ಮತ್ತು ಬಲವಾದ ಬಹುಜನ-ಎಡ ಬಲವು ತಮ್ಮ ನೆಲೆಯನ್ನು ಮರಳಿ ಪಡೆಯುತ್ತಿರುವುದು ಗಮನಿಸಬೇಕಾದ ಮಹತ್ವದ ರಾಜಕೀಯ ಬೆಳವಣಿಗೆಗಳು. ಹಾತ್ರಸ್ ಹತ್ಯೆಯ ವಿರುದ್ಧ ದಲಿತ ಸಮುದಾಯಗಳು ಮತ್ತು ದಲಿತ ಸಂಘಟನೆಗಳು ವ್ಯಾಪಕವಾಗಿ ಹೋರಾಟ ಸಂಘಟಿಸಿದವು. ಅಷ್ಟೇ ಅಲ್ಲ ನೆರೆಯ ರಾಜ್ಯಗಳಲ್ಲಿಯೂ ಸಹ ವಾಲ್ಮೀಕಿ ಸಂಘಟನೆಗಳು ಹಲವು ದಿನಗಳ ಕಾಲ ಹೋರಾಟ ನಡೆಸಿದವು. ಆದರ ನಂತರದಲ್ಲಿ ಕೆಲವೇ ದಿನಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ನಿರಾಯಾಸವಾಗಿ ಗೆದ್ದಿದ್ದನ್ನೂ ನೋಡಿದೆವು. (ಗುಜರಾತ್ ಮತ್ತು ಮಧ್ಯಪ್ರದೇಶ ಚುನಾವಣಾ ಫಲಿತಾಂಶಗಳಿಂದ ಮರೆಯಬಾರದು).

ಇಷ್ಟೆಲ್ಲಾ ಆಗಿಯೂ ಬಹುಶಃ ಸರ್ಕಾರಕ್ಕೆ ಬಹುದೊಡ್ಡ ಆಘಾತವನ್ನು ನೀಡಿದ್ದು ಈಗ ನಡೆಯುತ್ತಿರುವ ರೈತರ ಅತಿ ದೊಡ್ಡ ಹೋರಾಟ. ದೇಶದ 22 ರಾಜ್ಯಗಳಿಂದ ವಿವಿಧ ಕಡೆಗಳಲ್ಲಿ ಸುಮಾರು 50 ಲಕ್ಷ ಹೋರಾಟಗಾರರು (ಕಾರ್ಮಿಕರು ಮತ್ತು ಇತರೆ ವರ್ಗದವರ ಬೆಂಬಲವೂ ಇದೆ) ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಹಲವು ರಾಜ್ಯಗಳಲ್ಲಿ ಯಶಸ್ಸನ್ನು ಕಂಡಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ನಿಯಂತ್ರಣ ಹೇರಲಾಗಿದೆ. ಈ ಹೋರಾಟ ಕೆಲವು ಎನ್‌ಡಿಎ ಮೈತ್ರಿ ಪಕ್ಷಗಳಿಗೆ ಬೆಂಬಲ ಹಿಂತೆಗೆದುಕೊಳ್ಳುವುದಕ್ಕೆ ಒತ್ತಡ ಹಾಕಿದ್ದರೆ, ಇನ್ನು ಕೆಲವು ಕಡೆಗೆ ಮೈತ್ರಿ ಸಂಬಂಧಕ್ಕೆ ಪೆಟ್ಟು ನೀಡಿವೆ. ಹಿಂದಿನ ಎಲ್ಲ ಹೋರಾಟಗಳಿಗೆ ಹೋಲಿಸಿದರೆ, ಅತ್ಯಂತ ಪ್ರಬಲವಾದ ಹೋರಾಟ ಇದಾಗಿದ್ದು, ದಲಿತ-ಬಹುಜನ, ಭೂಹೀನ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆದಿವಾಸಿಗಳು ಇದರಲ್ಲಿ ಒಗ್ಗಟ್ಟಾಗಿ ಭಾಗಿಯಾದರೆ, ಹೊಸ ಜನಸಮೂಹ ಕ್ರಾಂತಿ ಹೊರಹೊಮ್ಮಲಿದ್ದು, ಅದು ಬ್ರಾಹ್ಮಣ ವಿರೋಧಿ, ಹಿಂದುತ್ವ ವಿರೋಧಿ, ಕಾರ್ಪೋರೆಟ್ ವಿರೋಧಿ ಹಾಗೂ ಸಾಮ್ರಾಜ್ಯಶಾಹಿವಿರೋಧಿ ಶಕ್ತಿಯಾಗಲಿದೆ.

ಬ್ರಾಹ್ಮಣ್ಯದ ಅಂತಿಮ ಘಟ್ಟವೇ ಹಿಂದುತ್ವ

ಭಾರತದ ಜನಸಮೂಹ ಯಾವುದು? ಭಾರತದಲ್ಲಿ ಜನಸಮೂಹ ಬಹುಮುಖ್ಯವಾಗಿ ರೈತರು ಮತ್ತು ಕಾರ್ಮಿಕರು. ರೈತರು ಎಂದರೆ ಬಡ ಹಾಗೂ ಸಣ್ಣ ರೈತರು ಮತ್ತು ಕಾರ್ಮಿಕರು ಎಂದರೆ ಅಸಂಘಟಿತ, ಕೃಷಿ ಮತ್ತು ಕೈಗಾರಿಕೆಗಳ ನೀಲಿ ಕಾಲರಿನ ದುಡಿಯುವ ವರ್ಗ. ಜೊತೆಗೆ ದೇಶದ ದಲಿತ-ಬಹುಜನ ಸಮುದಾಯ. ಈ ಒಟ್ಟು ದುಡಿಯುವ ವರ್ಗದಲ್ಲಿ ಶೇ.10%ರಷ್ಟು ಅಥವಾ ಅದಕ್ಕಿಂತ ಕಡಿಮೆ ಮಂದಿ ಟ್ರೇಡ್ ಯೂನಿಯನ್‌ಗಳಲ್ಲಿ ಸಂಘಟಿತರಾಗಿದ್ದಾರೆ. ಇವರೆಲ್ಲರನ್ನೂ ಸಂಘಟಿಸುವುದು ಬಹು ದೊಡ್ಡ ಶ್ರಮ. ಆದರೆ ದುಡಿಯುವ ಮತ್ತು ವಾಸಿಸುವ ಸ್ಥಳಗಳಲ್ಲಿ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯವಾದ ಪಾಲ್ಗೊಳ್ಳುವಿಕೆ ಎಂಬುದು ಬಹಳ ಮುಖ್ಯ ಮತ್ತು ಇದು ಹೋರಾಟವನ್ನು ಕೇವಲ ಆರ್ಥಿಕತೆ ಆಯಾಮಕ್ಕೆ ಸೀಮಿತಗೊಳಿಸಿದೆ, ಸಾಮಾಜಿಕ ಮತ್ತು ರಾಜಕೀಯ ಆಯಾಮಕ್ಕೆ ವಿಸ್ತರಿಸುತ್ತದೆ.

ಸಂಘ ಪರಿಹಾರ ಇಂದು ತಾನು ತಲುಪಿರುವ ಸ್ಥಾನಕ್ಕೆ ಕಾರಣ, ಅವರ ಬಳಿ ಇರುವ ಅಗಾಧವಾದ ಆರ್ಥಿಕ ಸಂಪನ್ಮೂಲದ ಬಳಕೆಯಿಂದ ಮಾತ್ರವಲ್ಲ. ಬದಲಿಗೆ ಭಾರತದ ಸ್ಥಿತಿಗತಿಯ ವಾಸ್ತವಿಕ ವಿಶ್ಲೇಷಣೆಯನ್ನು ಆಧರಿಸಿ, ಪರಿಣಾಮಕಾರಿಯಾಗಿ, ನಿಶ್ಚಿತ ರೂಪದಲ್ಲಿ ಅದನ್ನು ವಿನಿಯೋಗಿಸಿತ್ತು. ಇದು ಇನ್ನಾರಿಂದಲೂ ಸಾಧ್ಯವಾಗಿರಲಿಲ್ಲ. ಪ್ರತಿ ರಾಜ್ಯದಲ್ಲಿ ಜಾತಿ ಮತ್ತು ವರ್ಗ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಚೆನ್ನಾಗಿ ಅರಿತಿತ್ತು ಮತ್ತು ಸಂಘವನ್ನು ಸಂಘಟಿಸುವಲ್ಲಿ ಮತ್ತು ಚುನಾವಣೆಯಲ್ಲಿ ಭಿನ್ನ ತಂತ್ರಗಾರಿಕೆಯನ್ನು ಅನುಸರಿಸಿತು. ಉತ್ತರ ಪ್ರದೇಶದಲ್ಲಿ ಠಾಕೂರ್ ಮಾರ್ಗ ಅನುಸರಿಸಿದರೆ, ಗುಜರಾತ್‌ನಲ್ಲಿ ಪಟೇಲ್, ದಕ್ಷಿಣ ಕನ್ನಡಕ್ಕೆ ಬಂದರೆ, ಇದು ಬಂಟ್-ಬಿಲ್ಲವ-ಮೊಗವೀರ ಸಮುದಾಯಗಳನ್ನು ಗುರಿಯಾಗಿಸಿಕೊಂಡಿತು. ಇನ್ನು ತಿರುವನಂತಪುರ ಮತ್ತು ಕೇರಳದ ಬಹುಭಾಗದಲ್ಲಿ ನಾಯರ್ ಮಾರ್ಗ ಬಳಕೆಯಾಯಿತು.

ಒಟ್ಟಾರೆಯಾಗಿ ಬ್ರಾಹ್ಮಣ-ಬನಿಯಾ (ವ್ಯಾಪಾರಿ)ಗಳ ಪಕ್ಷವಾಗಿ ಉಳಿದ ಬಿಜೆಪಿ, ಸ್ಥಳೀಯವಾಗಿದ್ದ ಬ್ರಾಹ್ಮಣ ವಿರೋಧಿ ಬಹು ಸಂಸ್ಕೃತಿಗಳನ್ನು ಪರಿಣಾಮಕಾರಿಯಾಗಿ ಬ್ರಾಹ್ಮಣೀಕರಿಸಿದ್ದಷ್ಟೇ ಅಲ್ಲದೆ, ಸುಳ್ಳು ಇತಿಹಾಸಗಳನ್ನು ಸೃಷ್ಟಿಮಾಡುತ್ತಾ, ಕೇಡರ್ ಆಧರಿತ ಸಂಘಟನೆಯನ್ನು ಬಲಗೊಳಿಸುವುದಕ್ಕೆ ಶ್ರಮಿಸಿತು. ಇವುಗಳನ್ನು ಕೇವಲ ಸೋಷಿಯಲ್ ಮಿಡಿಯಾ, ಸರಳವಾದ ಬೌದ್ಧಿಕ ಚರ್ಚೆಗಳು ಅಥವಾ ಮುಖ್ಯವಾಹಿನಿಯ ಉಗ್ರ ಫ್ಯಾಸಿಸ್ಟ್ ವಿರೋಧಿ ನಿಲುವುಗಳಿಂದ ಎದುರಿಸಲಾಗುವುದಿಲ್ಲ. ಭಾಷಣ, ಸೆಮಿನಾರ್ ಅಥವಾ ಲೇಖನಗಳ ಮೂಲಕವಲ್ಲದೆ, ಜನಸಮೂಹದ ದೈನಂದಿನ ಜೀವನ ಮತ್ತು ಸಂಸ್ಕೃತಿಯಲ್ಲಿ ಭಾಗಿಯಾಗುವ ಮೂಲಕ ತಳಮಟ್ಟದಲ್ಲಿ ಬ್ರಾಹ್ಮಣ್ಯವಿರೋಧಿ ಸಮಜೋಸಾಂಸ್ಕೃತಿಕವಾದ ಪ್ರಬಲ ಪ್ರತಿರೋಧ ಕಟ್ಟುವ ದೀರ್ಘಕಾಲದ ಪಾಲ್ಗೊಳ್ಳುವಿಕೆಯೊಂದಿಗೆ ಈ ಪರಿಸ್ಥಿತಿಯನ್ನು ಬದಲಿಸಬಹುದು.

ಆರ್‌ಎಸ್‌ಎಸ್‌ನಿಂದ ನಾವು ಕಲಿಯಬೇಕಾದದ್ದು, ತಾಳ್ಮೆ. ಬ್ರಾಹ್ಮಣ್ಯ ವಿರೋಧಿಯಾದ ಬಹುಜನ ಸಂಸ್ಕೃತಿ ತೀವ್ರವಾಗಿ ತನ್ನ ಸಂಘಟನೆ ಕಟ್ಟಿಕೊಳ್ಳುತ್ತಿದ್ದಂತಹ ಸವಾಲಿನ ಕಾಲಘಟ್ಟವನ್ನು ಎದುರಿಸುತ್ತಲೇ ಸುಮಾರು ಒಂದು ಶತಮಾನ ಕಾಲ ತನ್ನ ಪಾಡಿಗೆ ಕೆಲಸ ಮಾಡುತ್ತಾ ಬಂದಿದೆ. ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಬಹುಜನಸಂಸ್ಕೃತಿಯನ್ನು ಬ್ರಾಹ್ಮಣ್ಯದ ಪ್ರಾಬಲ್ಯದಿಂದ ಬಿಡಿಸಿ ಮರಳಿ ಪಡೆಯಬೇಕಿದೆ. ಜಾತ್ಯತೀತ ಸಂಘಟನೆಗಳು ಅರ್ಥಮಾಡಿಕೊಳ್ಳಬೇಕಾದುದೇನೆಂದರೆ, ಸ್ವಾತಂತ್ರ್ಯೋತ್ತರ ಭಾರತದಲ್ಲಿ ರಾಜಕೀಯ ಪಕ್ಷಗಳು ಬೆಳೆಸಿದ ಸಂಘ ಪರಿವಾರ ಮತ್ತು ಅದು ಪ್ರತಿಪಾದಿಸುವ ಹಿಂದುತ್ವವು ಬ್ರಾಹ್ಮಣ್ಯದ ಉನ್ನತ ಘಟ್ಟ. ಸಂಘ ಪರಿವಾರ ಜನರ ಮನಸ್ಸಿನಲ್ಲಿ ಹೊಸದಾದ ಸುಳ್ಳು ಅಸ್ಮಿತೆಗಳನ್ನು ಮತ್ತು ಸುಳ್ಳು ಶತ್ರುಗಳನ್ನು ತುಂಬಿದೆ. ಇದನ್ನು ತೊಡೆದು ಹಾಕುವುದಕ್ಕೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ದೀರ್ಘ ಕಾಲ ಶ್ರಮಿಸಬೇಕಾಗಿದ್ದು, ಅದು ಈ ಕೂಡಲೇ ಆರಂಭವಾಗಬೇಕು. ನಮಗೆ ತಿಳಿದಿರುವಂತೆ ದುಡಿಯುವ ವರ್ಗದ ಒಂದು ಭಾಗ ಮಾತ್ರ ಸಂಘಟಿತವಾಗಿ, ಸ್ವಚ್ಛತಾಕರ್ಮಿಗಳು, ಕೃಷಿ ಕಾರ್ಮಿಕರು, ತೋಟದ ಕೂಲಿಗಳು ಇತ್ಯಾದಿಗಳು ಅಸಂಘಟಿತವಾಗಿಯೇ ಉಳಿದಿದ್ದು, ಸಣ್ಣ ಗುಡಿಸಲುಗಳಲ್ಲಿ, ಕೊಳಗೇರಿಗಳಲ್ಲಿ ವಾಸಿಸುತ್ತಿದ್ದಾರೆ.

ಇತಿಹಾಸವನ್ನು ಮರಳಿ ಪಡೆಯುವ ಮೂಲಕ ನಮಗೆ ಲಭ್ಯವಾದ ಎಲ್ಲ ಅವಕಾಶಗಳನ್ನು ರಾಜಕೀಯಗೊಳಿಸುವುದಕ್ಕೆ ಪ್ರಯತ್ನಿಸಬೇಕು ಮತ್ತು ಗಟ್ಟಿಯಾಗಿ ಉಳಿದಿರುವ ಜಾತಿ ಮತ್ತು ವರ್ಗ ಪದ್ಧತಿಯ ಮೇಲೆ ನಿರಂತರವಾಗಿ ದಾಳಿ ನಡೆಸಬೇಕು. ಇದು ಸಾಧ್ಯವಾಗಬೇಕಾದರೆ ಭಾರತ ಸಮಾಜ ಹೇಗಿದೆ ಎಂಬುದನ್ನು ವಾಸ್ತವಿಕ ನೆಲೆಗಟ್ಟಿನ್ಲಲಿ ಅರ್ಥ ಮಾಡಿಕೊಳ್ಳಬೇಕು. ಆಗ ಇಸ್ಲಾಮಾಫೋಬಿಯಾ, ಲಿಂಗ-ಲಿಂಗತ್ವ, ಕಾಶ್ಮೀರ, ಈಶಾನ್ಯ ರಾಜ್ಯಗಳ ಮೇಲೆ ಅಧಿಕಾರಶಾಹಿ ಪ್ರಾಬಲ್ಯ ವಿರುದ್ಧ ರಾಜಕೀಕರಣಗೊಳಿಸುವುದು ಸುಲಭ ಸಾಧ್ಯ.

ಆರ್ಥಿಕತೆಯ ಚೌಕಟ್ಟು ಮೀರಿದ ಸಂಘಟನೆ

ಅಸಂಘಟಿತವಾಗಿರುವ ದೊಡ್ಡ ಸಮೂಹವೊಂದಿದೆ. ಇದನ್ನು ಆರ್ಥಿಕತೆಯ ಮಾನದಂಡದಲ್ಲಿ ಗುರಿಯಾಗಿಟ್ಟುಕೊಂಡ ಹೋರಾಟವಾಗಿ ಪರಿವರ್ತಿಸುವ ಬದಲು, ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಹೋರಾಟವನ್ನಾಗಿ ರೂಪಿಸುವುದು ಅಗತ್ಯ. ಸ್ಥಳೀಯ, ದೈನಂದಿನ ಸಮಸ್ಯೆಗಳ ವಿರುದ್ಧ ಸಂಘಟಿಸುವ ಮೂಲಕ ಇದನ್ನು ಆರಂಭಿಸುವುದು ಅತ್ಯಗತ್ಯ. ಇಲ್ಲಿ ಸದಾ ಗುಪ್ತವಾಗಿಯೇ ಉಳಿಯುವ ಜಾತಿ ಸಂಘರ್ಷಗಳನ್ನು ಮುನ್ನಲೆಗೆ ತರುವಂತಾಗಬೇಕು. ಹಾಗೆಯೇ ಲಿಂಗ, ಭಾಷೆ, ಪ್ರದೇಶ, ಮೂಲನಿವಾಸಿಗಳಿಗೆ ಸಂಬಂಧಿಸಿದ ಸಂಘರ್ಷಗಳು ಮುನ್ನಲೆಗೆ ಬರಬೇಕು. ಈ ಮೂಲಕ ಎಲ್ಲವೂ ರಾಜಕೀಯಗೊಳ್ಳುವ ಪ್ರಕ್ರಿಯೆಗೆ ಒಳಪಡುತ್ತದೆ ಮತ್ತು ಪ್ರಾಮಾಣಿಕವಾದ ಒಗ್ಗಟ್ಟು ರೂಪುಗೊಳ್ಳುತ್ತದೆ. ಇದು ಇಂದಿನ ಹೋರಾಟಗಳನ್ನು ಇನ್ನೊಂದು ಹಂತಕ್ಕೆ ಒಯ್ಯಬಲ್ಲದು.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟಗಳನ್ನೇ ನೋಡಿ. ಟ್ರೇಡ್ ಯೂನಿಯನ್‌ಗಳನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಹೋರಾಟವನ್ನು ಸಂಘಟಿಸಿದವು. ಅದರಲ್ಲಿ ಸಿಎಎ-ಎನ್‌ಆರ್‌ಸಿ ಸಮಸ್ಯೆಯನ್ನೂ ಒಳಗೊಂಡವು. ಆದರೆ ಈ ರಾಜಕೀಯ ಹೋರಾಟದಲ್ಲಿ ಮುಂಚೂಣಿ ಶಕ್ತಿಯಾಗಿ ಬೆಳೆಯುವಲ್ಲಿ ವಿಫಲವಾದವು ಮತ್ತು ಕಾರ್ಮಿಕರನ್ನು ರಾಜಕೀಕರಣಗೊಳಿಸುವಲ್ಲಿಯೂ ವಿಫಲವಾದವು. ನಂತರದಲ್ಲಿ ನಡೆದ ಪ್ರತಿಭಟನೆಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದ್ದನ್ನು, ಮುಸ್ಲಿಮೇತರ ಹಾಗೂ ಈಶಾನ್ಯ ರಾಜ್ಯಗಳ ಹೊರತಾದ ಜನರು ಪಾಲ್ಗೊಳ್ಳದೇ ಹೋಗಿದ್ದನ್ನು ಕಂಡೆವು. ಇದಕ್ಕೆ ಟ್ರೇಡ್ ಯೂನಿಯನ್ ಮತ್ತು ರೈತ ಸಂಘಗಳ ಸಂಘಟನಾ ಸ್ವರೂಪವೇ ಕಾರಣವಾಗಿತ್ತು. ಅವು ಲಿಖಿತರೂಪದಲ್ಲಿ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಯನ್ನು ಅಳವಡಿಸಿಕೊಂಡಿದ್ದರೂ, ಪ್ರಜಾಸತ್ತಾತ್ಮಕವಾಗಿ ಇನ್ನೂ ಬೆಳೆದಿಲ್ಲ ಎಂಬುದನ್ನು ಗಮನಿಸಬೇಕು.

ಟ್ರೇಡ್ ಯೂನಿಯನ್‌ಗಳನ್ನು ಪ್ರಜಾಸತ್ತಾತ್ಮಕಗೊಳಿಸುವುದು ಮತ್ತು ರಾಜಕೀಕರಣ

ಈ ಟ್ರೇಡ್ ಯೂನಿಯನ್‌ಗಳ ರಚನೆ ಮೂಲಭೂತವಾಗಿ ವ್ಯಕ್ತಿಗತವಾದ ನಾಯಕತ್ವ ಅಥವಾ ನಾಯಕರ ಪ್ರಾಬಲ್ಯದಿಂದ ಕೂಡಿರುತ್ತದೆ. ಇಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಕಾರ್ಯಕಾರಿಗಳು ಅಥವಾ ಆಡಳಿತ ಮಂಡಳಿ ಒಳಗೊಂಡ ಸಂಘಟಿತ ನಾಯಕತ್ವ ಇಲ್ಲಿ ಕಾಣಿಸುವುದಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಶೋಷಿತ ಅಥವಾ ತುಳಿತಕ್ಕೆ ಒಳಗಾದ ಸಮುದಾಯಗಳು ತಮ್ಮ ದೈನಂದಿನ ಕೆಲಸಗಳಲ್ಲೇ ಕಳೆದು ಹೋಗುವುದರಿಂದ ಸಂಘಟನೆಯ ಚಟುವಟಿಕೆಗಳಲ್ಲಿ ಅಂದರೆ ನಾಯಕತ್ವ ವಹಿಸಿಕೊಳ್ಳುವ ಮತ್ತು ರಾಜಕೀಯ ಬೆಳವಣಿಗೆಗಾಗಿ ಸಮಯ ವಿನಿಯೋಗಿಸುವುದು ಕಷ್ಟವಾಗುತ್ತದೆ. ಇದರರ್ಥ ಅವರಿಗೆ ರಾಜಕೀಯ ತಿಳಿದಿಲ್ಲ ಎಂದಲ್ಲ. ಆದರೆ ಜೀವನದ ಸ್ಥಿತಿಯಿಂದಾಗಿ ರಾಜಕೀಯ ವಿಶ್ಲೇಷಣೆಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಮಯ ಹೊಂದಿಸಿಕೊಳ್ಳುವುದು ಅಸಾಧ್ಯವಾಗಿರುತ್ತದೆ. ಇನ್ನೊಂದು ಬಹುಮುಖ್ಯವಾದ ಸಮಸ್ಯೆ ಎಂದರೆ ಜಾತಿ. ಇದು ಪದ್ಧತಿಯೇ ಆಗಿದ್ದು, ಭಾರತೀಯ ಸಮಾಜದ ರಚನೆಯ ಆಳದಲ್ಲಿದ್ದು, ದೈನಂದಿನ ಜೀವನದಲ್ಲಿ ಜೀವಂತವಾಗಿದ್ದು, ಹೋರಾಟಗಳಲ್ಲಿ ನಿಜವಾದ ಒಗ್ಗಟ್ಟನ್ನು ಸಾಧ್ಯವಾಗಿಸುವುದಕ್ಕೆ ಅಡ್ಡಿಯಾಗುತ್ತದೆ. ಈ ವಿಷಯವಾಗಿ ಗೋಪಾಲ್ ಗುರು ಅವರ ಹೇಳಿರುವ ಮಾತು: “ಮೇಲ್ಜಾತಿಯ ಕಾರ್ಮಿಕರು ತಮ್ಮ ಜಾತಿ ಗುರುತಿನ ನಿರಂತರ ಪ್ರಜ್ಞೆಯನ್ನು ಎತ್ತಿ ಹಿಡಿಯಲು ವ್ಯಕ್ತಿನಿಷ್ಠವಾಗಿ ಒಲವು ತೋರುತ್ತಾರೆ, ಇದು ಸಾಮಾಜಿಕ ಶ್ರೇಷ್ಠತೆಯ ಸಾರವನ್ನು ಆಧರಿಸಿದೆ” ಎನ್ನುತ್ತಾರೆ. (ಗೋಪಾಲ್ ಗುರು: ಶಿಫ್ಟಿಂಗ್ ಕೆಟಗರೀಸ್ ಇನ್ ದಿ ಡಿಸ್‌ಕೋರ್ಸ್ ಆನ್ ಕ್ಯಾಸ್ಟ್ ಅಂಡ್ ಕ್ಲಾಸ್ -ಇಪಿಡಬ್ಲ್ಯೂ). ಜಾತಿಯ ಕಾರಣಕ್ಕೆ ಸಂಘಟನೆಯ ಒಳಗೇ, ದುಡಿಯುವ ಜಾಗ ಅಥವಾ ಪ್ರತಿಭಟನೆಯ ಆಚೆಗೆ ಒಂದು ಒಗ್ಗಟ್ಟು ಇಲ್ಲದೇ ಹೋಗುತ್ತದೆ.

ಇಂತಹ ಸಂದರ್ಭದಲ್ಲಿ ಕಾರ್ಮಿಕರು ಅಥವಾ ರೈತರು ತಮ್ಮನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಮುನ್ನಡೆಸುವ ನಾಯಕನನ್ನು ಅರಸುತ್ತಾರೆ. ಹಾಗಾಗಿ ಟ್ರೇಡ್ ಯೂನಿಯನ್ ಒಳಗೆ ಸಣ್ಣ ಸಮಸ್ಯೆಗಳಿಂದ ಹಿಡಿದು ದೊಡ್ಡ ರಾಜಕೀಯ ಸಮಸ್ಯೆಗಳವರೆಗೆ ಎಲ್ಲ ರೀತಿಯ ವಿಷಯಗಳ ಬಗ್ಗೆ ಮುಕ್ತ ಚರ್ಚೆಗೆ ಅವಕಾಶವಾಗುವ ಪ್ರಜಾಸತ್ತಾತ್ಮಕ ಪರಿಸರವನ್ನು ರೂಪಿಸುವುದ ನಾಯಕತ್ವದ ಮೊದಲ ಜವಾಬ್ದಾರಿ.

ಅಷ್ಟೇ ಅಲ್ಲ, ಅವರ ಜೀವನ, ಸ್ಥಳೀಯ ಸಮಸ್ಯೆಗಳು, ರಾಜ್ಯ ಅಥವಾ ದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಅವರ ಕಾಳಜಿ, ಅವರ ಅನುಮಾನ, ಅಭಿಪ್ರಾಯಗಳಿಗೆ ವೇದಿಕೆ ಕಲ್ಪಿಸಬೇಕು. ಅವರ ಅಭಿವ್ಯಕ್ತಿಗೆ ಅವಕಾಶ ಕೊಡಬೇಕು. ಇದು ಅವರಲ್ಲಿ ರಾಜಕೀಯ ವಿಶ್ಲೇಷಣಾ ಸಾಮರ್ಥ್ಯವನ್ನು ಬೆಳೆಸುತ್ತದೆ. ಜೊತೆಗೆ ನಾಯಕರು ಮತ್ತು ಕಾರ್ಮಿಕರು, ಜಾತಿ, ಲಿಂಗತ್ವದ ಬಗ್ಗೆ ಸಂವೇದನಾಶೀಲರಾಗಬೇಕು ಕೂಡ. ಈ ರೀತಿಯಲ್ಲಿ ಮೇಲಿನಿಂದ ಕೆಳಗಿನವರೆಗೆ ಪ್ರಜಾಸತ್ತಾತ್ಮಕಗೊಳ್ಳುವ ಮತ್ತು ರಾಜಕೀಕರಣ ಕಾರ್ಮಿಕರನ್ನು ಬಲಗೊಳಿಸುತ್ತದೆ. ಇದು ಕಾರ್ಮಿಕರು ಮತ್ತು ರೈತರ ಐಕ್ಯತೆ ಸಾಧ್ಯವಾಗಿಸುತ್ತದೆ. ಮತ್ತು ಜಾತಿ, ಲಿಂಗ, ಧರ್ಮ, ಲೈಂಗಿಕತೆ ಮುಂತಾದ ವಿಚಾರಗಳಲ್ಲಿರುವ ಸಂಘರ್ಷ, ವೈರುಧ್ಯಗಳ ಬಗ್ಗೆ ಮೂಕವಾಗಿರದೆ ಮುಕ್ತವಾಗಿ ಚರ್ಚೆಸುವಂತೆ ಮಾಡುತ್ತದೆ.

ಇಂತಹ ಪ್ರಜಾಸತ್ತಾತ್ಮಕವಾಗುವಿಕೆ ಮತ್ತು ರಾಜಕೀಕರಣ ರೈತ ಸಂಘಟನೆಗಳಲ್ಲಿ ಸಾಧ್ಯವಾಗದೆ ಇರಬಹುದು. ಏಕೆಂದರೆ ಜಾತಿ ಇಲ್ಲಿನ ವಾಸ್ತವವಾಗಿದ್ದು, ರೈತರನ್ನು ಒಗ್ಗೂಡಿಸುವುದು ಇಲ್ಲಿ ಅಸಾಧ್ಯವೆ. ಬಹುತೇಕ ರೈತ ಸಂಘಗಳನ್ನು ಮುನ್ನಡೆಸುತ್ತಿರುವ ಮಧ್ಯ ಅಥವಾ ಶ್ರೀಮಂತ ರೈತರು. ಇವರು ಶೂದ್ರರು ಅಥವಾ ಕ್ಷತ್ರಿಯರಾಗಿದ್ದು, ದಲಿತ ಅಥವಾ ಕೆಳಜಾತಿಗಳನ್ನು ನೇರವಾಗಿ ಶೋಷಿಸುವವರು ಇವರೇ ಆಗಿರುತ್ತಾರೆ. ಆದರೂ ಬಡ, ಅವಕಾಶ ವಂಚಿತ ರೈತರು, ಸಣ್ಣ ಹಿಡುವಳಿದಾರರು, ಮಧ್ಯಮ ಹಿಡುವಳಿದಾರರು ರೈತ ಸಂಘಗಳಲ್ಲಿ ಒಗ್ಗಟ್ಟು ಸಾಧಿಸಲು ಸಾಧ್ಯವಾದರೆ ಶ್ರೀಮಂತರ ರೈತರ ಬದಲು ತಾವೇ ನಾಯಕತ್ವವನ್ನು ವಹಿಸಿಕೊಳ್ಳಬಹುದು.

ಬಹಳ ಮುಖ್ಯವಾದ ಅಂಶವೆಂದರೆ, ಈ ಪ್ರಜಾಸತ್ತಾತ್ಮಕವಾಗುವಿಕೆ ಹಾಗೂ ರಾಜಕೀಕರಣಗೊಳಿಸುವ ಪ್ರಕ್ರಿಯೆ ಕಾರ್ಮಿಕರು ಮತ್ತು ರೈತರನ್ನು ರಾಷ್ಟ್ರವ್ಯಾಪಿ ಅಥವಾ ರಾಜ್ಯವ್ಯಾಪಿ ಒಂದು ದಿನದ ಹೋರಾಟದ ಕರೆಗಳಿಗೆ ಸೀಮಿತಗೊಳಿಸಬಾರದು. ಇದು ತಾವು ದುಡಿಯುವ, ವಾಸಿಸುವ ಜಾಗಗಳಲ್ಲಿ, ತಮ್ಮ ಖಾಸಗಿಯಾದ, ಸಾಂಸ್ಕೃತಿಕವಾದ ಬದುಕುಗಳಿಗೂ ವಿಸ್ತರಿಸಬೇಕು. ಸಂಘಟನೆ ಮತ್ತು ಅದರ ಪದಾಧಿಕಾರಿಗಳು ಯಾವುದೇ ಸ್ಥಳೀಯ ಮಟ್ಟದ ರಾಜಕೀಯ ಹೋರಾಟಗಳಲ್ಲಿ ಪಾಲ್ಗೊಳ್ಳಬೇಕು, ದಲಿತ-ಆದಿವಾಸಿ-ಬಹುಜನರ-ಮಹಿಳೆ-ಲೈಂಗಿಕ ಅಲ್ಪಸಂಖ್ಯಾತ ಸಂಘಟನೆಗಳೊಂದಿಗೆ ಕೈ ಜೋಡಿಸಬೇಕು. ವಲಸಿಗ ಹಾಗೂ ಅಸಂಘಟಿತ ಕಾರ್ಮಿಕರೊಂದಿಗೆ ಭ್ರಾತೃತ್ವ ಸಾಧಿಸಬೇಕು. ಆದರೆ ಇದನ್ನು ಇತರೆ ಹೋರಾಟಗಳ ಮೇಲೆ ತನ್ನ ಪ್ರಾಬಲ್ಯವನ್ನು ಹೇರದೆ ಪ್ರಜಾಸತ್ತಾತ್ಮಕವಾಗಿ ಒಳಗೊಳ್ಳುವ ಮೂಲಕ ಸಾಧ್ಯವಾಗಿಸಬೇಕು. ದಾರಿ ದೂರವಿದೆ. ಆದರೆ ಪ್ರಯತ್ನಗಳು ಆರಂಭವಾಗಬೇಕಿದ್ದು, ಇದು ನಮ್ಮನ್ನು ತಿದ್ದಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಬಹುದು.

ಕಡೆಯದಾಗಿ..

ಪ್ರತಿಭಟನೆಗಳು ಮತ್ತು ಬಡ-ಅವಕಾಶವಂಚಿತ- ಮಧ್ಯಮ ರೈತರು, ಕಾರ್ಮಿಕ ಮತ್ತು ದಲಿತ ಬಹುಜನರ ಸಂಘಟನೆಗಳ ನಡುವಿನ ಒಗ್ಗಟ್ಟು ಕೆಲ ಕಾಲ ಮುಂದುವರೆಯಬಹುದು. ಆದರೆ ಇದು ವಿವಿಧ ಹಂತಗಳಿಗೆ ರೂಪಾಂತರವಾಗಬೇಕು. ಹಿಂದೆಂದಿಗಿಂತ ಇದು ಹೆಚ್ಚು ಫಲವತ್ತಾದ ಸಮಯ, ಐತಿಹಾಸಿಕ ಸಂದರ್ಭ. ಹಾಗಾಗಿ ಸಂಘಟನೆಗಳು ಜನರನ್ನು ಸಂಘಟಿಸುವುದರಲ್ಲಿ ಮತ್ತು ಟಿವಿ ಚಾನೆಲ್, ಸೋಷಿಯಲ್ ಮೀಡಿಯಾ, ವೆಬಿನಾರ್‌ಗಳಲ್ಲೇ ಸಿಲುಕಿ ತೃಪ್ತರಾಗಬಾರದು. ಸಮಾಜೋ ಸಾಂಸ್ಕೃತಿಕ ದಬ್ಬಾಳಿಕೆಗೆ ಪ್ರತಿರೋಧವನ್ನು ಕಟ್ಟುವ ಮತ್ತು ಸಂಘಟನೆಗಳನ್ನು ಪ್ರಜಾಸತ್ತಾತ್ಮಕಗೊಳಿಸುವ ಮತ್ತು ಸಂಘದ ಪದಾಧಿಕಾರಿಗಳನ್ನು ರಾಜಕೀಕರಣಗೊಳಿಸುವ ಕಾಲ. ಈ ಕೆಲಸವನ್ನು ಮಾಡುವುದಕ್ಕೆ ಜನರ ಕೊರತೆ ಇದ್ದಲ್ಲಿ, ಮಾತೃ ಸಂಘಟನೆಗಳಿಂದ ಅಗತ್ಯ ಬೆಂಬಲ ಪಡೆದುಕೊಳ್ಳಬೇಕು. ಕೊಳಗೇರಿಗಳಿಗೆ, ದಲಿತರ ಗುಡಿಸಲುಗಳಿಗೆ, ಆದಿವಾಸಿಗಳ ಊರುಗಳಿಗೆ ತೆರಳಬೇಕು, ಅವರುಗಳನ್ನು ಪೋಷಿಸುವ ಉಮೇದಿ ತೋರದೆ, ಅವರುಗಳ ಚೈತನ್ಯವನ್ನು ಅರಿತುಕೊಳ್ಳಬೇಕು. ಇಲ್ಲಿ ದ್ವಿಮುಖ ಕಲಿಕಾ ಪ್ರಕ್ರಿಯೆ ಸಾಧ್ಯವಾಗಬೇಕು. ಅಂದರೆ ಸಂಘಟನೆಯ ನಾಯಕ ಕೂಡ ಪರಿಸ್ಥಿತಿಗಳಿಂದ ಕಲಿಯುವಂತಾಗಬೇಕು. ಜನಸಮುದಾಯದಿಂದ ಕಲಿಯುವಂತಾಗಬೇಕು.

ಹಾಗಾಗಿ ಕಡೆಯ ಪಕ್ಷ ಈಗಲಾದರೂ ಕೊಳಗೇರಿ, ಆದಿವಾಸಿ ಪ್ರದೇಶಗಳು, ಕೆಳ ಮಧ್ಯಮ ವರ್ಗದ ಪ್ರದೇಶಗಳು, ದುಡಿಯುವ ವರ್ಗದ ಪ್ರದೇಶಗಳು, ವಲಸಿಗ ಕಾರ್ಮಿಕರು ವಾಸಿಸುವ ಪ್ರದೇಶಗಳಿಗೆ ಹೋಗಬೇಕು. ಅತ್ಯಂತ ಅನುಕೂಲಕವಾಗಿರುವ ಮತ್ತು ಸೋಷಿಯಲ್ ಮಿಡಿಯಾ, ಟೆಲಿವಿಷನ್ ಚರ್ಚೆ, ವೆಬಿನಾರ್‌ಗಳಿಗೆ ವಿನಿಯೋಗಿಸುವ ಸಮಯವನ್ನು ಮತ್ತು ಲಿಬರಲ್ ಮತ್ತು ಉಗ್ರ ಮಧ್ಯಮ ವರ್ಗದ ಸ್ನೇಹಿತರು ಮತ್ತು ಕಾಮ್ರೆಡ್‌ಗಳೊಂದಿಗೆ ಚರ್ಚೆ ಕಡಿಮೆ ಮಾಡಬೇಕಿದೆ. ಅವರು ಹೇಗಿದ್ದರೂ ಸೋಷಿಯಲ್ ಮೀಡಿಯಾ ಮತ್ತು ನಗರದ ಎನ್‌ಜಿಒಗಳ ರೀತಿಯ ಕೆಲಸ ಮಾಡುವುದನ್ನು ಮುಂದುವರೆಸುತ್ತಾರೆ. ಇವರು ತಮ್ಮ ಸುತ್ತಲೂ ರಮ್ಯವಾದ ಅಧ್ಯಾತ್ಮಿಕ ಕ್ರಾಂತಿಯ ಸ್ವರ್ಗ ಸೃಷ್ಟಿಸಿಕೊಳ್ಳುವುದೇ ಜೀವನಕ್ಕೆ ಅರ್ಥ ನೀಡುವುದು ಎಂದು ಭಾವಿಸುತ್ತಾರೆ. ವಾಸ್ತವಿಕ ಸ್ಥಿತಿಯನ್ನು ಅರಿಯದೇ, ಜಾತಿ, ವರ್ಗ, ಬಂಡವಾಳ-ಬಾಹ್ಮಣ್ಯದ ಪ್ರಾಬಲ್ಯವನ್ನು ಅರಿಯದೇ ತಮಗೆ ತಾವೇ ಫ್ಯಾಸಿಸ್ಟ್ ವಿರೋಧಿ ಹೋರಾಟವನ್ನು ಮುನ್ನಡೆಸುವವರು ಎಂದು ಕಲ್ಪಿಸಿಕೊಂಡಿರುತ್ತಾರೆ.

  • ನಿಧಿನ್
    (ಕನ್ನಡಕ್ಕೆ: ಕುಮಾರ್ ಎಸ್)

ನಿಧಿನ್ ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರು. ಜಾತಿ ಮತ್ತು ವರ್ಗ ಕುರಿತ ಸಮಸ್ಯೆಗಳಿಗೆ ಹೊಸ ರಾಜಕೀಯ ದೃಷ್ಟಿಕೋನವನ್ನು ನೀಡುವ ಚಿಂತನೆಗಳನ್ನು ತಮ್ಮ ಬರಹಗಳ ಮೂಲಕ ದಾಖಲಿಸಿದ್ದಾರೆ.


ಇದನ್ನೂ ಓದಿ: ರೈತರ ಹಕ್ಕೊತ್ತಾಯ ಬಗೆಹರಿಸುವ ಸ್ವತಂತ್ರ ಸಮಿತಿಯಲ್ಲಿ ಪಿ.ಸಾಯಿನಾಥ್, ಬಿಕೆಯು ಪ್ರತಿನಿಧಿಗಳು ಇರಲಿ: ಸುಪ್ರೀಂ ಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಸೀದಿ ಒಡೆಯುವ ಮಾತುಗಳು: ‘ಮುತಾಲಿಕ್‌’ ಮುಂದುವರಿದ ಭಾಗ ‘ಕಾಳಿ ಸ್ವಾಮೀಜಿ’ ಪ್ರಕರಣ

ಕೋಮು ಪ್ರಚೋದನೆ ಮಾಡಿರುವ ರಿಷಿ ಕುಮಾರ ಸ್ವಾಮೀಜಿ (ಕಾಳಿ ಸ್ವಾಮೀಜಿ) ಈಗ ಸುದ್ದಿಯಲ್ಲಿದ್ದಾರೆ. ಮಸೀದಿ ಒಡೆಯಬೇಕೆಂದು ಕರೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಬಾಬ್ರಿ ಮಸೀದಿ ರೀತಿಯಲ್ಲಿ ಶ್ರೀರಂಗಪಟ್ಟಣದ ಮಸೀದಿ ಕೆಡವಬೇಕೆಂದು ಕಾಳಿ...
Wordpress Social Share Plugin powered by Ultimatelysocial