ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ, ಹತ್ಯೆ ಪ್ರಕರಣಗಳಲ್ಲಿ ನೊಂದ ಕುಟುಂಬಗಳ ನೋವು ಆಲಿಸಿ, ಅವರಿಗೆ ಬೆಂಬಲ ಸೂಚಿಸಲು ಮತ್ತು ಪ್ರಕರಣಗಳ ತನಿಖೆಗೆ ಆಗ್ರಹಿಸಿ ಹಮ್ಮಿಕೊಂಡಿರುವ ‘ನೊಂದವರೊಂದಿಗೆ ನಾವು –ನೀವು’ ಎಂಬ ಸಾರ್ವಜನಿಕ ಸಂವಾದ ಮತ್ತು ಆಂದೋಲನಕ್ಕೆ ಇಂದು (ಸೆ.16) ಬೆಂಗಳೂರಿನಲ್ಲಿ ಚಾಲನೆ ದೊರೆಯಲಿದೆ.
‘ಕೊಂದವರು ಯಾರು?- Who Killed the Women in Dharmasthala?’ ಎಂಬ ಶೀರ್ಷಿಕೆಯಲ್ಲಿ ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಇಡೀ ದಿನ ಕಾರ್ಯಕ್ರಮ ನಡೆಯಲಿದ್ದು, ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಹಿಳೆಯರನ್ನು ಕೊಂದವರು ಯಾರು? ಅತ್ಯಾಚಾರ, ಕೊಲೆ, ಅನುಮಾನಾಸ್ಪದ ಸಾವುಗಳು ಬಗೆಹರಿದಿಲ್ಲ ಏಕೆ? ಸರ್ಕಾರ ಎಸ್ಐಟಿ ತನಿಖೆಗೆ ಪೂರ್ಣ ಅಧಿಕಾರ ನೀಡಬೇಕಲ್ಲವೇ ಎಂಬ ಪ್ರಶ್ನೆಗಳ ಸುತ್ತ ಸಂತ್ರಸ್ತರೊಂದಿಗೆ ಸಂವಾದ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಅಲ್ಲದೆ, ನೊಂದ ಕುಟುಂಬಗಳ ಜೊತೆಗೆ ‘ಸಹೋದರಿಯರಿಗೆ ಒಂದು ಮನವಿ’ (ಅಪೀಲ್ ಲೆಟರ್) ಬಿಡುಗಡೆ, ನೊಂದ ಕುಟುಂಬಗಳ ಸದಸ್ಯರ ಜೊತೆಗೆ ಸಂವಾದ, ಖ್ಯಾತ ರಂಗ ಕಲಾವಿದೆ ಮಾಯಾರಾವ್ ಅವರ ಕಿರುನಾಟಕ, ಕಾನೂನು ಪರಿಣತರ ಮಾತು ಮತ್ತು ಶಶಿಕಾಂತ್ ಯಡಹಳ್ಳಿ ನಿರ್ದೇಶನದ ಕೊಂದವರು ಯಾರು? ನಾಟಕ ಪ್ರದರ್ಶನ ಇರಲಿದೆ ಎಂದು ಹೇಳಿದ್ದಾರೆ.
ಅಭಿಯಾನವು ರಾಜ್ಯದ ಎಲ್ಲ ಮಹಿಳೆಯರು ಯುವತಿಯರು, ಮತ್ತು ಹೆಣ್ಣು ಮಕ್ಕಳಿಗೆ ನ್ಯಾಯ ಘನತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸಲು ಬದ್ಧವಾಗಿದೆಯೆಂದು ತಿಳಿಸಿದ್ದಾರೆ.
ನಾಡಿನ ಹಲವಾರು ಮಹಿಳಾ ಸಂಘಟನೆಗಳು, ಕಾನೂನು ತಜ್ಞರು, ಮಹಿಳೆಯರ ಪರ ಕಾಳಜಿಯಿರುವ ನಾಗರಿಕರು, ಹಲವು ಸಾಹಿತಿಗಳು, ರಂಗಕರ್ಮಿಗಳು, ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಪ್ರಶ್ನಿಸಿ ಪ್ರತಾಪ್ ಸಿಂಹ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್


