ಕಾಂಗ್ರೆಸ್ ನೇತೃತ್ವದ ಒಕ್ಕೂಟವನ್ನು INDIA (ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ಮರುನಾಮಕರಣ ಮಾಡಿರುವುದರ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಟೀಕಿಸಿದ್ದಾರೆ. ಅದಕ್ಕೆ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು INDIAವನ್ನು ಇಷ್ಟಪಡದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ನಾವು ಹೇಳುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
INDIA ಮೈತ್ರಿಕೂಟವನ್ನು ಟೀಕಿಸಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದು, ”ಬ್ರಿಟಿಷರು ದೇಶಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದರು. ಹೀಗಿರುವಾಗ ನಾವು ವಸಾಹತುಶಾಹಿ ಪರಂಪರೆಯಿಂದ ನಮ್ಮನ್ನು ಮುಕ್ತಗೊಳಿಸಲು ಶ್ರಮಿಸಬೇಕು. ನಮ್ಮ ನಾಗರಿಕ ಸಂಘರ್ಷವು ಇಂಡಿಯಾ ಮತ್ತು ಭಾರತದ ಸುತ್ತ ಇದೆ” ಎಂದು ಹೇಳಿದ್ದಾರೆ.
Our civilisational conflict is pivoted around India and Bharat.The British named our country as India. We must strive to free ourselves from colonial legacies. Our forefathers fought for Bharat, and we will continue to work for Bharat .
BJP for BHARAT
— Himanta Biswa Sarma (@himantabiswa) July 18, 2023
”ಬ್ರಿಟಿಷರು ನಮ್ಮ ದೇಶವನ್ನು ಇಂಡಿಯಾ ಎಂದು ಹೆಸರಿಸಿದರು, ಕಾಂಗ್ರೆಸ್ ಅದನ್ನು ಒಪ್ಪಿಕೊಂಡಿತು. ಈ ವಸಾಹತುಶಾಹಿ ಪರಂಪರೆಯಿಂದ ಮುಕ್ತಿ ಹೊಂದಲು ನಾವು ಶ್ರಮಿಸಬೇಕು. ನಮ್ಮ ಪೂರ್ವಜರು ಭಾರತಕ್ಕಾಗಿ ಹೋರಾಡಿದ್ದಾರೆ ಮತ್ತು ನಾವು ಭಾರತಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.
”ಕಾಂಗ್ರೆಸ್ ಫಾರ್ ಇಂಡಿಯಾ ಮತ್ತು ಮೋದಿ ಜಿ ಭಾರತ್” ಎಂದು ಟ್ವೀಟ್ ಮಾಡಿದ್ದು, ನಂತರ ಅದನ್ನು ಡಿಲೀಟ್ ಮಾಡಿ ಹೊಸ ಟ್ವೀಟ್‌ನಲ್ಲಿ ”ಬಿಜೆಪಿ ಫಾರ್ ಭಾರತ್” ಎಂದು ಬದಲಾಯಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿ ಆಡಳಿತಾರೂಢ ಎನ್‌ಡಿಎಯನ್ನು ಎದುರಿಸಲಿರುವ ವಿರೋಧ ಪಕ್ಷದ ಮೈತ್ರಿಯನ್ನು I.N.D.I.A ಎಂದು ಕರೆಯಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಘೋಷಿಸಿದ್ದಾರೆ.
ಬಿಜೆಪಿ ಮತ್ತು ಇತರ ಬಲಪಂಥೀಯ ಸಂಘಟನೆಗಳನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ”ಆದರೆ INDIA ಇಷ್ಟಪಡದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ನಾವು ಹೇಳುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
लेकिन हम नहीं कहेंगे कि जिनको I.N.D.I.A पसंद नहीं वो पाकिस्तान चले जाएँ।
— Pawan Khera 🇮🇳 (@Pawankhera) July 18, 2023
ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಹೆಸರನ್ನು ಸೂಚಿಸಿದ್ದಾರೆ ಎಂದು ಹೇಳಲಾಗಿದೆ. ಭಾರತ ಎಂಬ ಪದದ ಪೂರ್ಣ ಸ್ವರೂಪದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ”ಬಿಜೆಪಿ, ನೀವು INDIAಗೆ ಸವಾಲು ಹಾಕಬಹುದೇ? ನಾವು ನಮ್ಮ ಮಾತೃಭೂಮಿಯನ್ನು ಪ್ರೀತಿಸುತ್ತೇವೆ. ನಾವು ದೇಶದ ದೇಶಭಕ್ತರು, ನಾವು ರೈತರು, ದಲಿತರು, ನಾವು ದೇಶಕ್ಕಾಗಿರುವವರು, ಜಗತ್ತಿಗಾಗಿ ಇರುವವರು. INDIA ಗೆಲ್ಲುತ್ತದೆ, ನಮ್ಮ ದೇಶ ಗೆಲ್ಲುತ್ತದೆ ಮತ್ತು ಬಿಜೆಪಿ ಸೋಲುತ್ತದೆ” ಎಂದು ಬ್ಯಾನರ್ಜಿ ಗುಡುಗಿದ್ದಾರೆ.


