ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ವಾಗತಕೋರಿ ಹಾಕಲಾಗಿದ್ದ ಕಮಾನಿನಲ್ಲಿ ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ರುದ್ರಗೌಡ ಪಾಟಿಲ ಅಲಿಯಾಸ್ ಆರ್.ಡಿ. ಪಾಟಿಲ ಅವರ ಚಿತ್ರ ಕಾಣಿಸಿಕೊಂಡಿದೆ. ಸ್ವಾಗತ ಕಮಾನಿನ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ರಾಜ್ಯ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಕಲಬುರಗಿ ಜಿಲ್ಲೆಯ ದೇವಲ ಗಾಣಗಾಪುರದಲ್ಲಿ ಕೋಲಿ ಸಮಾಜದ ನಾಯಕ ದಿವಂಗತ ವಿಠ್ಠಲ ಹೇರೂರ ಅವರ ಕಂಚಿನ ಮೂರ್ತಿ ಅನಾವರಣ ಕಾರ್ಯಕ್ರಮ ಮಂಗಳವಾರ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭಾಗವಹಿಸಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ಸ್ವಾಗತಕೋರಿ ಆರ್.ಡಿ.ಪಾಟೀಲ ಚಿತ್ರವಿರುವ ಸ್ವಾಗತ ಕಮಾನು ಕಾಣಿಸಿಕೊಂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸ್ವಾಗತ ಕಮಾನಿನಲ್ಲಿ ಪಿಎಸ್‌ಐ ಆರೋಪಿ ಆರ್.ಡಿ. ಪಾಟಿಲ ಮತ್ತು ಅವರ ಸಹೋದರ ಮಹಾಂತೇಶ ಪಾಟೀಲ ಅವರ ಚಿತ್ರಗಳನ್ನು ಹಾಕಲಾಗಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸುತ್ತಿರುವುದಾಗಿ ತಮ್ಮ ಫೇಸ್‌ಬುಕ್‌ನಲ್ಲಿ ಶನಿವಾರ ಘೋಷಿಸಿಕೊಂಡಿದ್ದರು.
ಘಟನೆ ಬಗ್ಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, “PSI ಹಗರಣದ ಆರೋಪಿ ಆರ್.ಡಿ ಪಾಟೀಲ್ ಸಿಎಂ ಸ್ವಾಗತಿಸುವ ಫ್ಲೆಕ್ಸ್ ಹಾಕಿದ್ದಾನೆ. ಈ ಮೂಲಕ ಆತನಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಶ್ರೀರಕ್ಷೆ ಇದೆ ಎನ್ನುವುದು ಸ್ಪಷ್ಟವಾಗಿದೆ. ಚುನಾವಣೆಗೂ ಸ್ಪರ್ದಿಸುತ್ತಾನಂತೆ, ಬಿಜೆಪಿ ಟಿಕೆಟ್ ನೀಡುವುದು ಖಚಿತವಿರಬಹುದು! ಆತ ಬಿಜೆಪಿಗರ ಹೆಸರು ಬಾಯಿ ಬಿಡದಿರುವುದಕ್ಕೆ ‘ಟಿಕೆಟ್’ ಉಡುಗೊರೆಯೇ” ಎಂದು ಪ್ರಶ್ನಿಸಿದೆ.
PSI ಹಗರಣದ ಆರೋಪಿ ಆರ್.ಡಿ ಪಾಟೀಲ್ ಸಿಎಂ ಸ್ವಾಗತಿಸುವ ಫ್ಲೆಕ್ಸ್ ಹಾಕಿದ್ದಾನೆ.
ಈ ಮೂಲಕ ಆತನಿಗೆ @BSBommai ಅವರ ಶ್ರೀರಕ್ಷೆ ಇದೆ ಎನ್ನುವುದು ಸ್ಪಷ್ಟವಾಗಿದೆ.ಚುನಾವಣೆಗೂ ಸ್ಪರ್ದಿಸುತ್ತಾನಂತೆ, ಬಿಜೆಪಿ ಟಿಕೆಟ್ ನೀಡುವುದು ಖಚಿತವಿರಬಹುದು!
ಆತ ಬಿಜೆಪಿಗರ ಹೆಸರು ಬಾಯಿ ಬಿಡದಿರುವುದಕ್ಕೆ 'ಟಿಕೆಟ್' ಉಡುಗೊರೆಯೇ @BJP4Karnataka? pic.twitter.com/MdHkgBroPL
— Karnataka Congress (@INCKarnataka) January 24, 2023
ಪತ್ರಿಕೆಗಳಲ್ಲಿ ಘಟನೆಯ ಬಗ್ಗೆ ಸುದ್ದಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ವಾಗತ ಕಮಾನನ್ನು ಅಲ್ಲಿಂದ ತೆರವುಗೊಳಿಸಲಾಗಿದೆ ಎಂದು ನಾನುಗೌರಿ.ಕಾಂಗೆ ಮೂಲಗಳು ತಿಳಿಸಿವೆ.
ಪಿಎಸ್‌ಐ ಹಗರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಆರ್.ಡಿ. ಪಾಟೀಲ ಅವರನ್ನು ಮತ್ತೆ ಬಂಧಿಸಲು ಗುರುವಾರ ಕಲಬುರಗಿಯಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದ ಕರ್ನಾಟಕ ಅಪರಾಧ ತನಿಖಾ ಇಲಾಖೆ (ಸಿಐಡಿ) ಅಧಿಕಾರಿಗಳಿಂದ ಅವರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ ಎಂದು ಕಲಬುರಗಿ ಪೊಲೀಸರು ತಿಳಿಸಿದ್ದರು.
ಸ್ಥಳದಿಂದ ಪರಾರಿಯಾಗುವ ವೇಳೆ ಆರ್.ಡಿ.ಪಾಟೀಲ ಅವರನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದ ಸಿಐಡಿ ಅಧಿಕಾರಿಗಳನ್ನು ತಳ್ಳಿದ್ದರು ಎಂದು ವರದಿಯಾಗಿದೆ. ಈ ಘಟನೆ ನಡೆದ ನಂತರ ಆರ್.ಡಿ.ಪಾಟೀಲ ಫೇಸ್‌ಬುಕ್‌ನಲ್ಲಿ ವೀಡಿಯೊ ಬಿಡುಗಡೆ ಮಾಡಿದ್ದರು.
ಇದರ ನಂತರ ಆರೋಪಿ ಆರ್.ಡಿ.ಪಾಟೀಲ ಸೋಮವಾರ ಸಂಜೆ ನ್ಯಾಯಾಲಯದ ಎದುರು ಹಾಜರಾಗಿದ್ದರು. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರ್.ಡಿ ಪಾಟೀಲ್‌ಗೆ ಸಿಐಡಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೂ, ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ, ಸೋಮವಾರ ಬೆಳಗ್ಗೆ ಮತ್ತೊಂದು ನೋಟಿಸ್ ನೀಡಿದ್ದ ಅಧಿಕಾರಿಗಳು ಸಂಜೆಯೊಳಗೆ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದರು.
ಕೊನೆಗೂ ಸೋಮವಾರ ಸಂಜೆ ಕಲಬುರಗಿಯ 5ನೇ ಜೆಎಂಎಫ್‌ಸಿ ನ್ಯಾಯಲಯದ ಮುಂದೆ ಹಾಜರಾದ್ದರು. ನ್ಯಾಯಾಲಯವು ಅವರಿಗೆ ಫೆಬ್ರವರಿ 6 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಆರ್.ಡಿ.ಪಾಟೀಲ ಅವರನ್ನು ಈ ಹಿಂದೆ 2022ರ ಏಪ್ರಿಲ್‌ನಲ್ಲಿ ಬಂಧಿಸಲಾಗಿತ್ತು. ನಂತರ ಅವರನ್ನು ಡಿಸೆಂಬರ್‌ನಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಆದರೆ ಜಾಮೀನು ಷರತ್ತುಗಳನ್ನು ಅನುಸರಿಸಲು ವಿಫಲವಾದ ಕಾರಣ, ಸಿಐಡಿ ಅಧಿಕಾರಿಗಳು ಗುರುವಾರ ಸಂಜೆ 5.30 ರ ಸುಮಾರಿಗೆ ಬಂಧನ ವಾರಂಟ್‌ನೊಂದಿಗೆ ಅವರ ಮನೆಗೆ ತಲುಪಿದ್ದರು. ಅದೇ ದಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡವೂ ಪಾಟೀಲ್ ಅವರ ನಿವಾಸದಲ್ಲಿ ವಿಚಾರಣೆ ನಡೆಸಿತ್ತು.
ಕರ್ನಾಟಕ ಸಿಐಡಿ ಪೊಲೀಸರು ಆರ್.ಡಿ.ಪಾಟೀಲ ವಿರುದ್ಧ ಕಲಬುರಗಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಆರೋಪಿಯನ್ನು ವಶಕ್ಕೆ ಪಡೆಯಲು ನಿವಾಸಕ್ಕೆ ತೆರಳಿದಾಗ ನಮ್ಮನ್ನು ತಳ್ಳಿ ಪರಾರಿಯಾಗಿದ್ದಾರೆ” ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದರು.
ಇದನ್ನೂ ಓದಿ: ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ ಪಿಎಸ್‌ಐ ಹಗರಣದ ಆರೋಪಿ ರುದ್ರಗೌಡ ಪಾಟಿಲ ಅಲಿಯಾಸ್ ಆರ್.ಡಿ. ಪಾಟೀಲ!


