ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಅವರೊಂದಿಗೆ ಮಂಗಳವಾರ (ಮಾ.10) ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಪಶ್ಚಿಮ ಏಷ್ಯಾದ ಬೆಳವಣಿಗೆಗಳು ಮತ್ತು ಹಾರ್ಮುಝ್ ಜಲಸಂಧಿಯಲ್ಲಿ ಹಡಗು ಭದ್ರತೆಯ ಬಗ್ಗೆ ಇರುವ ಕಳವಳಗಳನ್ನು ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಎಸ್.ಜೈಶಂಕರ್ ಅವರು, “ಇಂದು ಸಂಜೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ಇತ್ತೀಚಿನ ಬೆಳವಣಿಗೆಗಳ ಕುರಿತು ವಿಸ್ತೃತ ಚರ್ಚೆ ನಡೆಸಿದೆವು. ನಾವು ನಿರಂತರವಾಗಿ ಸಂಪರ್ಕದಲ್ಲಿರಲು ಸಮ್ಮತಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯ ಕೂಡ ಜೈಶಂಕರ್ ಅವರ ಜೊತೆ ಅರಘ್ಚಿ ಚರ್ಚೆ ಮಾಡಿರುವ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ಹೆಚ್ಚಿನ ಮಾಹಿತಿಯನ್ನು ನೀಡಿದೆ.
ಇರಾನ್ ಮತ್ತು ಭಾರತದ ವಿದೇಶಾಂಗ ಸಚಿವರು ದೂರವಾಣಿ ಮೂಲಕ ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿಸಿದೆ.
“ಈ ದೂರವಾಣಿ ಚರ್ಚೆಯಲ್ಲಿ ಇರಾನ್ ವಿದೇಶಾಂಗ ಸಚಿವರು ಕಳೆದ 11 ದಿನಗಳಲ್ಲಿ ಇರಾನ್ ರಾಷ್ಟ್ರದ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ಆಡಳಿತವು ಎಸಗಿರುವ ಅಪರಾಧಗಳನ್ನು ವಿಸ್ತೃತವಾಗಿ ವಿವರಿಸಿದ್ದಾರೆ. ಇದರಲ್ಲಿ ಯುದ್ಧದ ಮೊದಲ ದಿನದಂದೇ ಮಿನಾಬ್‌ನ ಬಾಲಕಿಯರ ಪ್ರಾಥಮಿಕ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿ ಮತ್ತು ತದನಂತರ ನಾಗರಿಕ ಪ್ರದೇಶಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳ ಮೇಲೆ ನಡೆದ ವ್ಯಾಪಕ ದಾಳಿಗಳು ಸೇರಿವೆ. ಇರಾನ್‌ನ ಸಮಗ್ರತೆಯನ್ನು ಸಮಗ್ರವಾಗಿ ರಕ್ಷಿಸುವ ತನ್ನ ದೃಢಸಂಕಲ್ಪವನ್ನು ಅವರು ಇದೇ ವೇಳೆ ಒತ್ತಿಹೇಳಿದ್ದಾರೆ” ಎಂದು ವಿವರಿಸಿದೆ.
“ಅಮೆರಿಕ ಮತ್ತು ಇಸ್ರೇಲ್ ಆಡಳಿತದ ಈ ಆಕ್ರಮಣಕಾರಿ ಕ್ರಮವು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಮೂಲಭೂತ ತತ್ವಗಳು ಹಾಗೂ ನಿಯಮಗಳ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಈ ಮಿಲಿಟರಿ ಆಕ್ರಮಣ ಮತ್ತು ಬಹಿರಂಗ ಕಾನೂನು ಉಲ್ಲಂಘನೆಯನ್ನು ಖಂಡಿಸುವುದು ಎಲ್ಲಾ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ” ಎಂದು ಬರೆದುಕೊಂಡಿದೆ.
“ಇರಾನ್ ಮತ್ತು ಭಾರತದ ವಿದೇಶಾಂಗ ಸಚಿವರು ಅಮೆರಿಕ ಮತ್ತು ಇಸ್ರೇಲ್ ಆಡಳಿತದ ಮಿಲಿಟರಿ ಆಕ್ರಮಣದಿಂದ ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಹಡಗು ಮತ್ತು ನೌಕೆಗಳ ಸಂಚಾರದ ಭದ್ರತೆಯ ಮೇಲಾಗುವ ಪರಿಣಾಮಗಳ ಕುರಿತು ಚರ್ಚಿಸಿದ್ದಾರೆ” ಎಂದು ತಿಳಿಸಿದೆ.
“ಪರ್ಷಿಯನ್ ಕೊಲ್ಲಿಯಲ್ಲಿ ಹಡಗು ಸಂಚಾರದ ಭದ್ರತೆಯನ್ನು ಕಾಪಾಡುವಲ್ಲಿ ಇರಾನ್‌ನ ತತ್ವಬದ್ಧ ನಿಲುವನ್ನು ಉಲ್ಲೇಖಿಸಿದ ವಿದೇಶಾಂಗ ಸಚಿವರು, ಪರ್ಷಿಯನ್ ಕೊಲ್ಲಿಯಲ್ಲಿ ಹಡಗು ಸಂಚಾರಕ್ಕೆ ಉಂಟಾಗಿರುವ ಅಸುರಕ್ಷಿತ ಸ್ಥಿತಿ ಮತ್ತು ಸಮಸ್ಯೆಗಳು ಅಮೆರಿಕದ ಆಕ್ರಮಣಕಾರಿ ಮತ್ತು ಅಸ್ಥಿರಗೊಳಿಸುವ ಕ್ರಮಗಳ ಫಲಿತಾಂಶವಾಗಿದೆ ಎಂದು ನೆನಪಿಸಿದ್ದಾರೆ. ಈ ಪರಿಸ್ಥಿತಿಗೆ ಅಂತಾರಾಷ್ಟ್ರೀಯ ಸಮುದಾಯವು ಅಮೆರಿಕವನ್ನೇ ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ” ಎಂದಿದೆ.
“ಭಾರತದ ವಿದೇಶಾಂಗ ಸಚಿವರು, ಟೆಹ್ರಾನ್ (ಇರಾನ್) ಮತ್ತು ನವದೆಹಲಿ (ಭಾರತ) ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸುವ ಮತ್ತು ಬಲಪಡಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ. ಇದರೊಂದಿಗೆ, ಈ ಪ್ರದೇಶದಲ್ಲಿ ಸ್ಥಿರತೆಯನ್ನು ಮರುಸ್ಥಾಪಿಸಲು ಉಭಯ ದೇಶಗಳ ನಡುವೆ ನಿರಂತರ ಸಮಾಲೋಚನೆ ನಡೆಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು” ಎಂದು ಇರಾನ್ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.


