ಪಶ್ಚಿಮ ಬಂಗಾಳ ವಿಧಾನಸಭೆಯು ಮಂಗಳವಾರ (ಜುಲೈ 6) ಭಾರತ ಸಂವಿಧಾನದ 169 ನೇ ವಿಧಿ ಅನ್ವಯ ರಾಜ್ಯದಲ್ಲಿ ವಿಧಾನ ಪರಿಷತ್ ರಚಿಸುವ ನಿರ್ಣಯವನ್ನು ಅಂಗೀಕರಿಸಿದೆ.
ವಿಧಾನಸಭೆಯಲ್ಲಿ ಹಾಜರಿದ್ದ ಒಟ್ಟು 265 ಸದಸ್ಯರಲ್ಲಿ 196 ಶಾಸಕರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, 69 ಮಂದಿ ಇದರ ವಿರುದ್ಧ ಮತ ಚಲಾಯಿಸಿದ್ದಾರೆ.
ಶಾಸಕಾಂಗ ಮಂಡಳಿಯ ರಚನೆಯು ವಿಧಾನಸಭಾ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಕಾಣಿಸಿಕೊಂಡ ಭರವಸೆಗಳಲ್ಲಿ ಒಂದಾಗಿದೆ. ವಿಧಾನಸಭೆ ಚುನಾವಣೆಯ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದರು. ಈ ನಿರ್ಣಯವನ್ನು ಅಂಗೀಕರಿಸಲು ಮತದಾನ ನಡೆದ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸದನದಲ್ಲಿ ಹಾಜರಿರಲಿಲ್ಲ ಎಂಬುದು ವಿಶೇಷ.
ಇದನ್ನೂ ಓದಿ: ಬಂಗಾಳ ರಾಜ್ಯಪಾಲರನ್ನು ಕಿತ್ತು ಹಾಕಲು ಒಕ್ಕೂಟ ಸರ್ಕಾರಕ್ಕೆ ಪತ್ರ ಬರೆದ ಮಮತಾ ಬ್ಯಾನರ್ಜಿ
ವಿರೋಧ ಪಕ್ಷ ನಾಯಕ, ಬಿಜೆಪಿಯ ಸುವೇಂಧು ಅಧಿಕಾರಿಯು ಈ ನಿರ್ಣಯವು ರಾಜ್ಯದಲ್ಲಿ ಆರ್ಥಿಕವಾಗಿ ಸೂಕ್ತವಲ್ಲ ಎಂದು ವಿರೋಧಿಸಿದ್ದಾರೆ. ಜೊತೆಗೆ ಈ ವಿಧಾನ ಪರಿಷತ್ ರಚಿಸುವ ನಿರ್ಣಯದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋತ ಟಿಎಂಸಿ ಅಭ್ಯರ್ಥಿಗಳಿಗೆ, ಮುಖಂಡರಿಗೆ ಅವಕಾಶ ಕಲ್ಪಿಸುವ ಟಿಯಂಸಿಯ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ.
“ದೇಶದ 23 ರಾಜ್ಯಗಳಲ್ಲಿ ವಿಧಾನ ಪರಿಷತ್ ಇಲ್ಲ. ರಾಜ್ಯಗಳ ಆಡಳಿತಕ್ಕೆ ಇದು ಒಳ್ಳೆಯದಲ್ಲ. ಟಿಎಂಸಿಯು ಚುನಾವಣೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ 7 ರಿಂದ 8 ಮಂತ್ರಿಗಳನ್ನು ಕಳೆದುಕೊಂಡಿದೆ. ಅವರನ್ನು ವಿಧಾನ ಪರಿಷತ್ ಮೂಲಕ ರಾಜಕೀಯಕ್ಕೆ ಹಿಂಬಾಗಿಲಿನ ಪ್ರವೇಶ ನೀಡಲು ಟಿಎಂಸಿ ಪ್ರಯತ್ನಿಸುತ್ತಿದೆ” ಎಂದು ಸುವೇಂಧು ಅಧಿಕಾರಿ ಆರೋಪಿಸಿದ್ದಾರೆ. “ಸಂಸತ್ತಿನಲ್ಲಿ ಬಿಜೆಪಿಗೆ ಬಹುಮತವಿದೆ. ಈ ನಿರ್ಣಯವನ್ನು ವಿರೋಧಿಸುವುದು ನಮ್ಮ ನಿರ್ಧಾರ” ಎಂದು ಹೇಳಿದ್ದಾರೆ.
ಇನ್ನು, ಪಶ್ಚಿಮ ಬಂಗಾಳ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದರೂ, ಪರಿಷತ್ ಸ್ಥಾಪಿಸುವ ಸಲುವಾಗಿ, ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಬೇಕಾಗುತ್ತದೆ. ಈ ವಿಷಯದಲ್ಲಿ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರದ ಪಾತ್ರ ನಿರ್ಣಾಯಕವಾಗಲಿದೆ.
ಇದನ್ನೂ ಓದಿ: ನಿಯಂತ್ರಿಸಲು ಸಾಧ್ಯವಾಗದ ಎಲ್ಲವನ್ನೂ ಮೋದಿ ಸರ್ಕಾರ ಧ್ವಂಸ ಮಾಡುತ್ತಿದೆ: ಮಮತಾ ಬ್ಯಾನರ್ಜಿ
ಗಮನಾರ್ಹವಾಗಿ, ಈ ಮೊದಲು ಪಶ್ಚಿಮ ಬಂಗಾಳದಲ್ಲಿ 1952 ರಲ್ಲಿ ಮೇಲ್ಮನೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ರಾಜ್ಯ ವಿಧಾನಸಭೆಯಲ್ಲಿ ವಿಧಾನ ಪರಿಷತ್ ರದ್ದುಗೊಳಿಸುವ ನಿರ್ಣಯವನ್ನು ಮಾರ್ಚ್ 21, 1969 ರಂದು ಅಂಗೀಕರಿಸಲಾಗಿತ್ತು.
ಪ್ರಸ್ತುತ ಆಂಧ್ರ ಪ್ರದೇಶ, ಬಿಹಾರ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಪ್ರದೇಶ ಸೇರಿ ದೇಶದ ಒಟ್ಟು ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಪರಿಷತ್ ಇದೆ. ಉಳಿದ ಕಡೆ ಜನರಿಂದ ನೇರವಾಗಿ ಆಯ್ಕೆಯಾದರೆ ಮಾತ್ರ ಶಾಸಕಾಂಗದಲ್ಲಿ ಸ್ಥಾನ ಪಡೆಯಬಹುದಾಗಿದೆ.
ಚುನಾವಣಾ ಆಯೋಗ ಕೊರೊನಾ ಹೆಸರಲ್ಲಿ ಯಾವುದೆ ಉಪಚುನಾವಣೆ ನಡೆಸಲು ಮುಂದೆ ಬರುತ್ತಿಲ್ಲ. ಹಾಗಾಗಿ ಮಮತಾ ಬ್ಯಾನರ್ಜಿ ಆರು ತಿಂಗಳೊಳಗೆ ಶಾಸಕಿಯಾಗದಿದ್ದಲ್ಲಿ ಉತ್ತರಾಖಂಡದ ಮಾದರಿಯಲ್ಲಿ ರಾಜೀನಾಮೆ ನೀಡಬೇಕು ಎಂಬುದು ಬಿಜೆಪಿ ಒತ್ತಾಯ. ಆ ಮೂಲಕ ಅವರಿಗೆ ಮುಖಭಂಗ ಮಾಡಲು ಬಿಜೆಪಿ ಉತ್ತರಾಖಂಡದಲ್ಲಿ ತಿರತ್ ಸಿಂಗ್ ರಾವತ್‌ರನ್ನು ಕೆಳಗಿಳಿಸಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ಬಿಜೆಪಿಗೆ ತಿರುಗೇಟು ನೀಡಲು ಮುಂದಾಗಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ವಿಧಾನ ಪರಿಷತ್ ರಚನೆಗೆ ಮುಂದಾಗಿದೆ.
ಇದನ್ನೂ ಓದಿ: Explainer: ಬಿಜೆಪಿಯು ಉತ್ತರಾಖಂಡ ಸಿಎಂ ಬದಲಿಸಿದ್ದು ಮಮತಾ ಬ್ಯಾನರ್ಜಿಯನ್ನು ಕೆಳಗಿಳಿಸಲೇ?


