ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ವಿಚಾರವನ್ನು ಉಲ್ಲೇಖಿಸಿದ ಸಮಾಜಾವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಬುಲ್ಡೋಝರ್ ಕಾರ್ಯಾಚರಣೆ ಯಾವಾಗಾ? ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರ್ಕಾರ ನಾಳೆ ಅಥವಾ ನಾಡಿದ್ದು, ಯಾವಾಗ ಅತ್ಯಾಚಾರಿ ಶಾಸಕನ ಮನೆ ಮೇಲೆ ಬುಲ್ಡೋಝರ್ ಕಾರ್ಯಾಚರಣೆ ನಡೆಸಲಿದೆ? ಎಂದು ಅಖಿಲೇಶ್ ಕೇಳಿದ್ದಾರೆ. ಅಪರಾಧಿ ಶಾಸಕನನ್ನು ವಿಧಾನಸಭೆಯಿಂದ ಅಮಾನತು ಮಾಡದಿರುವುದಕ್ಕೆ ಅವರು ಕಿಡಿ ಕಾರಿದ್ದಾರೆ.
“ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ದುದ್ದಿ (ಸೋನಭದ್ರ) ಶಾಸಕನಿಗೆ 25 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಆದರೂ, ಅವರ ವಿಧಾನಸಭೆಯ ಸದಸ್ಯತ್ವವನ್ನು ರದ್ದುಗೊಳಿಸಲಾಗಿಲ್ಲ. ಬಿಜೆಪಿ ಶಾಸಕ ಎಂಬ ಕಾರಣಕ್ಕೆ ಅವರಿಗೆ ವಿಶೇಷ ಗೌರವ, ವಿನಾಯಿತಿ ನೀಡಲಾಗುತ್ತಿದೆಯೇ? ಬುಲ್ಡೋಜರ್ ಕಾರ್ಯಾಚರಣೆ ಇಂದು ಅಥವಾ ನಾಳೆ ನಡೆಯಲಿದೆಯಾ? ಸಾರ್ವಜನಿಕರು ಕೇಳುತ್ತಿದ್ದಾರೆ” ಎಂದು ಯಾದವ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪ್ರದೇಶದ ದುದ್ಧಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್‌ಗೆ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿದೆ.
ಡಿಸೆಂಬರ್ 12 ರಂದು ಸೋನಭದ್ರಾ ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಶಾಸಕ ಗೊಂಡ್ ತಪ್ಪಿತಸ್ಥ ಎಂದು ಘೋಷಿಸಿತ್ತು. ಆತ 2014 ರಲ್ಲಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವುದು ಸಾಕ್ಷ್ಯಾಧಾರಗಳಿಂದ ರುಜುವಾತಾಗಿದೆ ಎಂದು ತೀರ್ಪು ನೀಡಿತ್ತು. ಶಾಸಕನ ಮೇಲೆ ಐಪಿಸಿ ಸೆಕ್ಷನ್ 376, 506 ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಎರಡು ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯಾದ ಕಾರಣ ರಾಮ್ದುಲರ್ ಗೊಂಡ್‌ಗೆ ಸುಪ್ರೀಂ ಕೋರ್ಟ್ ಆದೇಶದಂತೆ ತನ್ನ ಶಾಸಕ ಸ್ಥಾನ ಕಳೆದುಕೊಳ್ಳಲಿದ್ದಾರೆ. ಸುಪ್ರೀಂ ಕೋರ್ಟ್‌ನ 2013 ರ ತೀರ್ಪಿನ ಪ್ರಕಾರ, ಯಾವುದೇ ಸಂಸದ ಅಥವಾ ಶಾಸಕ ಅಪರಾಧದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ರುಜುವಾತಾಗಿ, ಅವರಿಗೆ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ಘೋಷಣೆಯಾದರೆ ತಕ್ಷಣವೇ ಜಾರಿಗೆ ಬರುವಂತೆ ಅವರು ಸಂಸತ್ ಮತ್ತು ವಿಧಾನಮಂಡಲದ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಸಂತ್ರಸ್ಥೆ ಪರ ವಕೀಲ ಸತ್ಯಪ್ರಕಾಶ್ ಸಖ್ಯ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆಗೆ ಶಿಕ್ಷೆ), ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಶಾಸಕ ತಪ್ಪಿತಸ್ಥ ಎಂದು ರುಜುವಾತಾಗಿದೆ. ಎಂಟು ಪ್ರಾಸಿಕ್ಯೂಷನ್ ಮತ್ತು ಮೂವರು ಡಿಫೆನ್ಸ್ ಸಾಕ್ಷಿಗಳನ್ನು ನ್ಯಾಯಾಲಯವು ಪರಿಶೀಲಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಾಸಕನಿಗೆ ಶಿಕ್ಷೆಯಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಅತ್ಯಾಚಾರ ಸಂತ್ರಸ್ತೆಯ ಸಹೋದರ, ರಾಮ್ದುಲರ್ ಗೊಂಡ್ ಶಾಸಕನಾದ ನಂತರ ಗೊಂಡ್ ನಮ್ಮ ಕುಟುಂಬಕ್ಕೆ ಕಿರುಕುಳ ನೀಡಿದ್ದ. ಪ್ರಕರಣವನ್ನು ಹಿಂಪಡೆಯುವಂತೆ ಒತ್ತಡ ಹೇರಿದ್ದ ಎಂದು ಆರೋಪಿಸಿದ್ದಾರೆ.
ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ, ಆರೋಪಿ ರಾಮ್ದುಲರ್ ಗೊಂಡ್‌ನ ಪತ್ನಿ ಗ್ರಾಮದ ಮುಖ್ಯಸ್ಥರಾಗಿದ್ದರು. ನವೆಂಬರ್ 4,2014 ರ ಸಂಜೆ ಸಂತ್ರಸ್ತೆ ಬಹಿರ್ದೆಸೆಗೆ ಮನೆ ಬಳಿಯ ಹೊಲಕ್ಕೆ ಹೋದಾಗ ಅಪರಾಧಿ ಗೊಂಡ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.
ಬಾಲಕಿ ಘಟನಾ ಸ್ಥಳದಿಂದ ಮನೆಗೆ ಬಂದು ರೈತನಾಗಿದ್ದ ತನ್ನ ಅಣ್ಣನಿಗೆ ವಿಷಯ ತಿಳಿಸಿದ್ದಳು. ಪ್ರಭಾವಿ ವ್ಯಕ್ತಿಯಾಗಿದ್ದ ಆರೋಪಿಯ ಮುಂದೆ ಬಾಲಕಿಯ ಅಣ್ಣ ಏನು ಮಾಡುವಂತೆ ಇರಲಿಲ್ಲ. ಇದನ್ನೇ ಲಾಭ ಮಾಡಿಕೊಂಡ ಆರೋಪಿ ಬಾಲಕಿಯ ಅಣ್ಣನಿಗೆ ಬೆದರಿಕೆ ಹಾಕಿ, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದ. ಆತನ ಕಿರುಕುಳ ತಾಳಲಾರದೆ, ಕೊನೆಗೆ ಬಾಲಕಿಯ ತಂದೆ ಸೋನಭದ್ರಾ ಜಿಲ್ಲೆಯ ಮೈರಪುರ ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಆತ ಬಿಡುಗಡೆಗೊಂಡಿದ್ದ.
ಘಟನೆ ನಡೆದಾಗ ಅಪರಾಧಿ ಶಾಸಕನಾಗಿರಲಿಲ್ಲ. ಬಳಿಕ 2022 ರ ವಿಧಾನಸಭಾ ಚುನಾವಣೆಯಲ್ಲಿ ಆರೋಪಿ ಗೊಂಡ್ ದುದ್ಧಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಮಾಜವಾದಿ ಪಕ್ಷದ ವಿಜಯ್ ಸಿಂಗ್ ಅವರನ್ನು 6,723 ಮತಗಳಿಂದ ಸೋಲಿಸಿ ಶಾಸಕನಾಗಿದ್ದಾನೆ.
ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ 25 ವರ್ಷ ಜೈಲು ಶಿಕ್ಷೆ


