ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಭಾಜಪ ತನ್ನ ಸಿದ್ಧಾಂತವನ್ನು ಪ್ರಚಾರಮಾಡಲು ಅತ್ಯಂತ ಜಾಣ್ಮೆಯಿಂದ ಬಳಸಿಕೊಳ್ಳುತ್ತಿದೆ. ಹೀಗೆ ಪ್ರಶಸ್ತಿ ಪಡೆದವರಲ್ಲಿ ಸಂಘ ಪರಿವಾರದ ಉಗ್ರಹಿಂದುತ್ವವಾದದ ಸಿದ್ಧಾಂತದಲ್ಲಿ ನಂಬಿಕೆ ಉಳ್ಳವರು ಇದ್ದಾರೆ. ಜೊತೆಗೆ ಸ್ವಾತಂತ್ರ್ಯ ಹೋರಾಟವನ್ನು ಗೇಲಿ ಮಾಡಿದವರು ಇದ್ದಾರೆ. ಇಂತಹವರು ದೇಶದ ವೈವಿಧ್ಯತೆ ಮತ್ತು ಸಮಷ್ಠಿಪ್ರಜ್ಞೆಯ ಬಗ್ಗೆ ಅವಜ್ಞೆ ಉಳ್ಳವರೇ ಆಗಿದ್ದಾರೆ. ಇದರ ನಡುವೆ ಕೆಲವು ಅಪವಾದಗಳು ಇದ್ದೇ ಇವೆ. ಕೇಂದ್ರ ಸರ್ಕಾರ ಪ್ರಶಸ್ತಿಗಳನ್ನು ಕೂಡ ‘ರಾಜಕಾರಣದ’ ಒಂದು ಭಾಗವಾಗಿ ತೆಗೆದುಕೊಂಡಂತಿದೆ. ‘ದ್ವೇಷ’ದ ವಿಷವನ್ನು ಕಾರುವ ಕಂಗನಾ ರಣಾವತ್ ಅಂತಹ ನಟಿಗೆ ‘ಪದ್ಮಶ್ರೀ’ ಕೊಟ್ಟಿರುವುದು ಆಘಾತಕಾರಿ ನಡೆವಳಿಕೆಯಾಗಿದೆ. ಇಂತಹ ನಡವಳಿಕೆ ಇದೇ ಪ್ರಥಮವಲ್ಲ. ‘ಪ್ರಶಸ್ತಿ’ ನೀಡುವ ಪರಿಪಾಠ ಆರಂಭ ಆದಾಗಿನಿಂದಲೂ ಇಂತಹ ಬೆಳವಣಿಗೆಗಳು ನಡೆದುಕೊಂಡು ಬಂದಿದೆ.
1988ರಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷ ಎಂಜಿಆರ್ ಪಕ್ಷದೊಂದಿಗೆ ಕೂಡಿ ಮತಗಳಿಸುವ ಅನಿವಾರ್ಯತೆ ರಾಜೀವ್ ಗಾಂಧಿ ಅವರ ಮುಂದಿತ್ತು. ಇದಕ್ಕಾಗಿ ಎಂಜಿಆರ್ ಪಕ್ಷದ ಬೆಂಬಲ ಗಳಿಸಲು ಎಂಜಿಆರ್‌ಗೆ ‘ಭಾರತರತ್ನ’ ನೀಡಲಾಯಿತು. ಆಗ ಸಂಪುಟದ ಕಾರ್ಯದರ್ಶಿಯಾಗಿದ್ದ ಬಿ.ಜಿ. ದೇಶ್‌ಮುಖ್, ತಮ್ಮ ಆತ್ಮಚರಿತ್ರೆಯಲ್ಲಿ ಇದನ್ನು ಬರೆದುಕೊಂಡಿದ್ದಾರೆ. ಮರಣೋತ್ತರ ‘ಭಾರತರತ್ನ’ ನೀಡುವುದರ ಬಗ್ಗೆ ಅಂದು ಸರ್ಕಾರದ ಒಳಗೂ ಮತ್ತು ಹೊರಗೂ ಅತೃಪ್ತಿ ವ್ಯಕ್ತಪಡಿಸಲಾಗಿತ್ತಂತೆ.

‘ಭಾರತರತ್ನ’, ‘ಪದ್ಮವಿಭೂಷಣ’, ‘ಪದ್ಮಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಯನ್ನು ಪ್ರಧಾನಿಯ ಸಲಹೆ ಮತ್ತು ಶಿಫಾರಸ್ಸಿನ ಮೇರೆಗೆ ರಾಷ್ಟ್ರಪತಿಗಳು ಪ್ರಧಾನ ಮಾಡುತ್ತಾರೆ. ‘ಭಾರತರತ್ನ’, ‘ಪದ್ಮವಿಭೂಷಣ’, ‘ಪದ್ಮಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಯನ್ನು 1954ರಲ್ಲಿ ಸ್ಥಾಪಿಸಲಾಯಿತು. ಸ್ಥಾಪನೆಯಾಗಿ ಮರು ವರ್ಷವೇ ಅಂದರೆ 1955ರಲ್ಲಿ ಅಂದಿನ ಪ್ರಧಾನಿ ನೆಹರು ಅವರಿಗೆ ‘ಭಾರತರತ್ನ’ವನ್ನು ಕೊಡಲಾಯಿತು. 1971ರಲ್ಲಿ ಇಂದಿರಾ ಗಾಂಧಿ ಅವರಿಗೆ ‘ಭಾರತರತ್ನ’ ನೀಡಲಾಯಿತು. ಹಾಗೆಯೇ ಸತ್ಯೇಂದ್ರನಾಥ್ ಬೋಸ್, ನಂದಲಾಲ್ ಬೋಸ್, ಜಾಕೀರ್ ಹುಸೇನ್, ಬಾಳಾಸಾಹೇಬ್ ಗಂಗಾಧರ ಖೇರ್, ವಿ.ಕೆ. ಕೃಷ್ಣ ಮೆನನ್, ಜಿಗ್ಮೆ ದೋರ್ಜಿ ವಾಂಗ್ಟುಕ್ ಅವರಿಗೆ ‘ಪದ್ಮವಿಭೂಷಣ’ ನೀಡಲಾಯಿತು. ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮಹನೀಯರನ್ನು ಗುರುತಿಸಿ ನೀಡುವ ನಾಲ್ಕನೇ ಅತಿದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ.’ ಈ ಎಲ್ಲ ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಹಿಂದೆಯೂ ಅಸಮಾಧಾನ ಕೇಳಿ ಬಂದಿತ್ತು. 1978, 1979, 1993 ಮತ್ತು 1997ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ಹಂಚಿಕೆ ಮಾಡಿರುವುದಿಲ್ಲ.
ಇಲ್ಲಿ ದುಃಖದ ವಿಚಾರ ಏನೆಂದರೆ, ಸಂವಿಧಾನದ ನಿರ್ಮಾತೃ ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೆ ‘ಭಾರತರತ್ನ’ ಕೊಟ್ಟು ಪುರಸ್ಕರಿಸಬೇಕೆಂಬ ಮನಸ್ಸೇ ಹಲವು ಸರ್ಕಾರಗಳಿಗೆ ಬರಲಿಲ್ಲ. ಹೀಗೆಯೇ ದೇಶದ 560 ರಾಜರನ್ನು ದೇಶದೊಳಗಡೆ ತಂದು ಏಕೀಕೃತ ಭಾರತವನ್ನು ನಿರ್ಮಾಣ ಮಾಡಿದ ಸರ್ದಾರ್ ವಲ್ಲಭಬಾಯಿ ಪಟೇಲರಿಗೂ ‘ಭಾರತರತ್ನ’ ನೀಡಿದ್ದು ಎಷ್ಟೋ ವರ್ಷಗಳ ನಂತರ. ದೂರದ ಜರ್ಮನಿಯಿಂದ ಸಹಕಾರಿ ಬೀಜವನ್ನು ತಂದು ನಮ್ಮ ದೇಶದಲ್ಲಿ ಬಿತ್ತಿದ ಸಿದ್ದನಗೌಡ ಪಾಟೀಲರಿಗೂ, ಭೂಮಿಯ ಸಂಪತ್ತನ್ನು ಪುನರ್ ಹಂಚಿಕೆ ಮಾಡಿದ ದೇವರಾಜ ಅರಸರಿಗೂ ‘ಭಾರತರತ್ನ’ ನೀಡಬೇಕೆಂಬ ಆಲೋಚನೆ ಇನ್ನೂ ಯಾರೂ ಮಾಡಿಲ್ಲ. ಆದರೆ ರಾಜೀವ್ ಗಾಂಧಿ ಅವರು 1991ರಲ್ಲಿ ಹತ್ಯೆಯಾದ ತರುವಾಯ ‘ಭಾರತರತ್ನ’ ಪುರಸ್ಕಾರಕ್ಕೆ ಒಳಗಾಗಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮೇಧಾವಿಗೆ ‘ಭಾರತರತ್ನ’ ನೀಡಲು 1990ರಲ್ಲಿ ವಿ.ಪಿ. ಸಿಂಗ್ ಪ್ರಧಾನಿ ಆಗಬೇಕಾಯಿತು.
ಅಂದು ವಿ.ಪಿ. ಸಿಂಗ್ ಸರ್ಕಾರವನ್ನು ಬೆಂಬಲಿಸಿದ್ದು ಭಾಜಪ. ಇಷ್ಟೊಂದು ಸುದೀರ್ಘ ಕಾಲಾವಧಿಗೆ, ದೇಶ ಕಟ್ಟುವುದರಲ್ಲಿ ಅಪಾರ ಕೊಡುಗೆ ನೀಡಿದ್ದ ಡಾ|| ಬಿ.ಆರ್. ಅಂಬೇಡ್ಕರ್ ಅವರನ್ನೇಕೆ ‘ಭಾರತರತ್ನ’ದಿಂದ ದೂರವಿಟ್ಟು ಅವಗಣನೆಗೆ ಮಾಡಲಾಯಿತೆಂಬುದು ಹಲವು ವರ್ಷಗಳ ಕಾಲ ನನ್ನನ್ನು ಕಾಡಿದ ಪ್ರಶ್ನೆ. ಸತ್ಯ ಏನೆಂದರೆ ಅಂದು ನೆಹರು ಕುಟುಂಬವನ್ನು ಧಿಕ್ಕರಿಸಿ ಮುಂದುವರೆಯುವ ಅಥವಾ ತೀರ್ಮಾನ ತೆಗೆದುಕೊಳ್ಳುವುದು ಯಾವ ಪ್ರಧಾನಿಗೂ ಸುಲಭವಿರಲಿಲ್ಲ.
2004ರಲ್ಲಿ ಭಾಜಪ ಟಿಕೆಟ್‌ನಡಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಸ್ಸಾಮಿ ಗಾಯಕ ಭೂಪೇನ್ ಹಜಾರಿಕಾಗೆ ಮತ್ತು ಭಾರತೀಯ ಜನಸಂಘದ ನಾಯಕ ನಾನಾಜಿ ದೇಶ್‌ಮುಖ್ ಅವರುಗಳಿಗೆ 2019ರಲ್ಲಿ ‘ಭಾರತರತ್ನ’ ಪ್ರಶಸ್ತಿಯನ್ನು ದಯಪಾಲಿಸಲಾಗಿದೆ. ಇಲ್ಲಿ ಇನ್ನೊಂದು ಅಚ್ಚರಿಯ ಆಯ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಅವರಿಗೂ ಅದೇ ವರ್ಷದಲ್ಲಿ ‘ಭಾರತರತ್ನ’ ನೀಡಲಾಗಿದೆ. ಇವರ ಆಯ್ಕೆಗೆ ಪ್ರಧಾನಿಯನ್ನು ‘ರಾಜನೀತಿಜ್ಞ’ ಎಂಬ ಬಣ್ಣನೆಯೂ ವ್ಯಕ್ತವಾಯಿತು. ನಾನಿಲ್ಲಿ ಪ್ರಣಬ್ ಮುಖರ್ಜಿ ಅವರ ಅನುಭವ, ಮುತ್ಸದ್ಧಿತನವನ್ನು ಒಪ್ಪುವೆ. ಆದರೆ ಇವರು ರಾಜಕೀಯ ಭವಿಷ್ಯ ಕಟ್ಟಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಬದಿಗೆ ಸರಿಸಿ, ಆರ್‌ಎಸ್‌ಎಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದಕ್ಕೆ ‘ಭಾರತರತ್ನ’ ಒಲಿದಿದೆ ಎಂಬ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ಇದು ರಾಜಕೀಯ ಕಾರ್ಯತಂತ್ರದ ಭಾಗ ಎಂಬುದು ಎಲ್ಲರಿಗೂ ಅರ್ಥವಾಗುವ ಸರಳಸತ್ಯ. ಜೊತೆಗೆ ನೆಹರು ಮತ್ತು ಗಾಂಧಿ ಪರಂಪರೆಯನ್ನು ವಿರೋಧಿಸುವ ಷಡ್ಯಂತರವೂ ಇದಾಗಿದೆ. ಇದರ ಮುಂದುವರೆದ ಭಾಗವಾಗಿಯೇ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಆರಾಧನೆ ಆರಂಭವಾಯಿತು.

“ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಭಗತ್‌ಸಿಂಗ್ ಅವರನ್ನು ಸಾಯಲು ಬಿಟ್ಟರು. ಸುಭಾಷ್‌ಚಂದ್ರ ಬೋಸ್‌ರನ್ನು ಬೆಂಬಲಿಸಲಿಲ್ಲ. ಅವರು ಪುಕ್ಕಲ ಮತ್ತು ಅಧಿಕಾರದಾಹಿ. ದಬ್ಬಾಳಿಕೆ ವಿರುದ್ಧ ಹೋರಾಡಲಾಗದವರು. ಸ್ವಾತಂತ್ರ್ಯ ಹೋರಾಟಗಾರರನ್ನು ಬ್ರಿಟಿಷರ ಕೈಗೆ ಒಪ್ಪಿಸಿದರು. ಅವರೆಲ್ಲಾ ಅಧಿಕಾರದಾಹಿಗಳು ಮತ್ತು ಕುತಂತ್ರಿಗಳು” ಎಂದು ಜರೆದಿದ್ದಲ್ಲದೆ, “1947ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ, ಭಿಕ್ಷೆ. 2014ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯ ಎಂದು ವಿಷ ಉಗುಳುವ ನಟಿ ಕಂಗನಾ ರಣಾವತ್ ಅವರಿಗೂ ‘ಪದ್ಮಶ್ರೀ’ ನೀಡಲಾಗಿದೆ. ಈಕೆಗೆ ಗೊತ್ತಿಲ್ಲ, 1947 ಆಗಸ್ಟ್ 15ರಂದು ನಾವು ಗಳಿಸಿದ ಸ್ವಾತಂತ್ರ್ಯ ಚಿನ್ನದ ತಟ್ಟೆಯಲ್ಲಿಟ್ಟು ಕೊಟ್ಟ ಕೊಡುಗೆಯಲ್ಲ. ಇದರ ಹಿಂದೆ ತ್ಯಾಗ-ಬಲಿದಾನಗಳ ರೋಚಕ ಕಥೆ ಇದೆ. ದೇಶದ ಇತಿಹಾಸ ಅರಿಯದೆ, ಇವರುಗಳೆಲ್ಲರ ತ್ಯಾಗ-ಬಲಿದಾನವನ್ನು ಅವಮಾನಿಸುತ್ತಿರುವ ಕಂಗನಾ ಎಂಬ ಇತ್ತೀಚಿನ ನಟಿಗೆ ‘ಪದ್ಮಶ್ರೀ’ ಕೊಟ್ಟು ಹಿರಿಯ ಚೇತನಗಳನ್ನು ಅಗೌರವಿಸಿದಂತಾಗಿದೆ. ಹೀಗಾಗಿ ಇವರಿಗೆ ಕೊಟ್ಟಿರುವ ‘ಪದ್ಮಶ್ರೀ’ಯನ್ನು ಹಿಂಪಡೆಯಬೇಕೆಂದು ಪಕ್ಷಭೇದವಿಲ್ಲದೆ ರಾಜಕೀಯ ನಾಯಕರು ಖಂಡಿಸಿದ್ದಾರೆ.
ಇಷ್ಟೊಂದು ಟೀಕೆಗಳು ಎದ್ದಾಗಲೂ, “1947ರಲ್ಲಿ ಯುದ್ಧ ನಡೆದಿತ್ತೇ ಹೇಳಿ? ಉತ್ತರ ದೊರಕಿದರೆ ‘ಪದ್ಮಶ್ರೀ’ ಪ್ರಶಸ್ತಿಯನ್ನು ಹಿಂತಿರುಗಿಸುವೆ” ಎಂಬ ಸವಾಲನ್ನು ಕಂಗನಾ ಎಸೆದಿದ್ದಾರೆ. ಈಕೆ ಒಂದೇಒಂದು ಪ್ರಶಸ್ತಿಗಾಗಿ ದೇಶದ ವಿಮೋಚನೆಯ, ತ್ಯಾಗ-ಬಲಿದಾನಗಳನ್ನು ಅವಮಾನಿಸಿದ್ದಾರೆ. ಹೀಗಾಗಿಯೇ ಕಂಗನಾ ಸದೃಢರಾಗಿ ಕಾಣುತ್ತಿಲ್ಲ. ಈಕೆಗೆ ನೀಡಬೇಕಿರುವುದು ಚಿಕಿತ್ಸೆಯನ್ನೇ ಹೊರತು ‘ಪದ್ಮಶ್ರೀ’ಯನ್ನಲ್ಲ ಎಂದು ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ರಾಷ್ಟ್ರಪತಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಇದೇನೇ ಇರಲಿ, ಗಾಯಕ ಭೂಪೇನ್ ಹಜಾರಿಕಾ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಆರ್‌ಎಸ್‌ಎಸ್ ಕಟ್ಟಾಳು ನಾನಾಜಿ ದೇಶ್‌ಮುಖ್ ಅವರುಗಳಿಗೆ 2019ರಲ್ಲಿ ‘ಭಾರತರತ್ನ’ ಪ್ರದಾನ ಮಾಡಿರುವುದಕ್ಕೆ ಯಾವ ಕಾರಣ ನೀಡಿದರೂ, ಅತೃಪ್ತಿಯನ್ನಂತೂ ಮೂಡಿಸಿಬಿಟ್ಟಿದೆ. ಗ್ರಾಮೀಣ ಸ್ವಾವಲಂಬನೆಯಂತಹ ಪರಿಕಲ್ಪನೆ ಮತ್ತು ಕೃಷಿ ಕ್ಷೇತ್ರದ ಸುಧಾರಣೆಯಲ್ಲಿ ಶ್ರಮಿಸಿದ್ದಕ್ಕಾಗಿ ನಾನಾಜಿ ದೇಶ್‌ಮುಖ್‌ಗೆ ‘ಭಾರತರತ್ನ’ ಕೊಟ್ಟಿರಬಹುದು. ಇಲ್ಲಿ ವಿಷಯ ಇದಲ್ಲ. ಇಷ್ಟು ವರ್ಷಗಳ ಕಾಲ ಗುರುತಿಸದೆ ಈಗ ಕೆಲವು ವರ್ಷಗಳ ಹಿಂದೆ ನೀಡಿದ್ದು ಅವರ ಸಂಘ ಪರಿವಾರದ ಸಖ್ಯದ ಕಾರಣಕ್ಕಲ್ಲವೇ?
ಈಶಾನ್ಯ ರಾಜ್ಯಗಳ ನಡುವಿನ ಸಾಂಸ್ಕೃತಿಕ ಕಂದರವನ್ನು ಯಶಸ್ವಿಯಾಗಿ ಕಡಿಮೆ ಮಾಡಲು ಶ್ರಮಿಸಿದವರು ಭೂಪೇನ್ ಹಜಾರಿಕಾ ಎಂಬ ಮಾತಿದೆ. ಅಲ್ಲದೆ ‘ರಾಷ್ಟ್ರೀಯ ಐಕ್ಯತೆ’ ಮತ್ತು ‘ಸಮಗ್ರತೆ’ಗೆ ತಮ್ಮ ಸಂಗೀತದ ಮೂಲಕ ಪ್ರಮುಖ ಕೊಡುಗೆ ನೀಡಿದ್ದಾರೆಂದು ಸರ್ಕಾರದ ಮೂಲಗಳು ತಿಳಿಸುತ್ತವೆ. ಇದೇ ರೀತಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಉತ್ತಮ ‘ರಾಜತಾಂತ್ರಿಕ ಗುಣ’ವನ್ನು ಹೊಂದಿದ್ದಾರೆ. 2012ರಿಂದ 2017ರ ವರೆಗೂ ರಾಷ್ಟ್ರಪತಿಯಾಗಿದ್ದವರು.
ಇದಕ್ಕಿಂತಲೂ ಅಚ್ಚರಿ ಏನೆಂದರೆ, ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಸಹೋದರಿ ಗೀತಾ ಮೆಹ್ತಾ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. ಚುನಾವಣಾ ವರ್ಷದಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಪಡೆಯುವುದರಿಂದ ತಪ್ಪು ಚರ್ಚೆಗಳಿಗೆ ಅವಕಾಶ ನೀಡಲಾಗುತ್ತದೆ. ಅಲ್ಲದೆ, ಅರ್ಹತೆಗಿಂತ ರಾಜಕಾರಣ ಪ್ರಶಸ್ತಿ ಗಳಿಸಲು ಪ್ರಮುಖ ಕಾರಣ ಎಂದು ಜನ ಭಾವಿಸಬಾರದೆಂದು ಆಕೆ ‘ಪದ್ಮಶ್ರೀ’ಯನ್ನು ನಿರಾಕರಿಸಿದರು. ಇಲ್ಲಿ ಭಾಜಪ, ನವೀನ್ ಪಟ್ನಾಯಕ್ ಅವರನ್ನು ಓಲೈಸಲು ಮುಂದಾಗಿತ್ತು ಎಂಬುದು ರಹಸ್ಯವಾಗಿ ಉಳಿದಿಲ್ಲ.
ದೇಶದ ಏಕತೆಯ ಶಿಲ್ಪಿ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ 1991ರಲ್ಲಿ ‘ಭಾರತರತ್ನ’ ಕೊಟ್ಟಿದ್ದು ಚಂದ್ರಶೇಖರ್ ಅವರ ಕಾಂಗ್ರೆಸ್ಸೇತರ ಸರ್ಕಾರ. ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಮರಣೋತ್ತರ ‘ಭಾರತರತ್ನ’ ಕೊಡಬೇಕೆಂಬ ಸಲಹೆ ನೀಡಿದ್ದು ಅಂದಿನ ಪ್ರಧಾನಿ ಚಂದ್ರಶೇಖರ್ ಎಂದು ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಅವರು ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇತ್ತು ಎಂದು ಬರೆದುಕೊಂಡಿದ್ದಾರೆ. 1991ರ ಜೂನ್‌ನಲ್ಲಿ ಚಂದ್ರಶೇಖರ್ ಅವರ ಸರ್ಕಾರ ದೇಶದ ಮೊದಲ ಗೃಹ ಸಚಿವರಾಗಿದ್ದ ಸರ್ದಾರ್ ವಲ್ಲಭಬಾಯಿ ಪಟೇಲರಿಗೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೂ ಮರಣೋತ್ತರ ‘ಭಾರತರತ್ನ’ ನೀಡುವ ಇಂಗಿತವನ್ನು ಅಂದಿನ ಪ್ರಧಾನಿ ಚಂದ್ರಶೇಖರ್ ವ್ಯಕ್ತಪಡಿಸಿದ್ದರು. ಇದಕ್ಕೆ ಅಂದಿನ ರಾಷ್ಟ್ರಪತಿ ವೆಂಕಟರಾಮನ್ ಅವರು ಕೂಡ ಸಮ್ಮತಿ ಸೂಚಿಸಿದ್ದರು. ಹಾಗೆಯೇ, ಮೊರಾರ್ಜಿ ದೇಸಾಯಿ ಅವರು ಕೂಡ ತಮ್ಮ 90ನೇ ವಯಸ್ಸಿನಲ್ಲಿ ‘ಭಾರತರತ್ನ’ವನ್ನು 1991ರಲ್ಲಿ ಪಡೆಯುವಂತಾಯಿತು.
ಪ್ರಜಾಪ್ರಭುತ್ವ ಪುನರ್ ಸ್ಥಾಪನೆಗಾಗಿ ಹಗಲಿರುಳು ಶ್ರಮಿಸಿ, ಜೆ.ಪಿ. ಚಳವಳಿ ಎಂಬ ಜನಾಂದೋಲನವನ್ನೇ ಹುಟ್ಟುಹಾಕಿದ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರಿಗೆ ‘ಭಾರತರತ್ನ’ ಕೊಡಬೇಕೆಂಬ ಚಿಂತನೆಯೂ ಹಲವು ಸರ್ಕಾರಗಳಿಗೆ ಬರಲೇ ಇಲ್ಲ. ಇವರಿಗೆ 1999ರಲ್ಲಿ ವಾಜಪೇಯಿ ಸರ್ಕಾರ ‘ಭಾರತರತ್ನ’ ನೀಡಿತು.

ಎಲ್ಲಿಯವರೆಗೂ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಸಣ್ಣತನದ ರಾಜಕೀಯ ಮಾಡಿ ಹಂಚಿಕೆ ಮಾಡಲಾಗುತ್ತದೋ ಅಲ್ಲಿಯವರೆಗೂ ಪ್ರಶಸ್ತಿಯ ಆಯ್ಕೆ ಸಮಸ್ಯೆ ಬಗೆಹರಿಯುವುದಿಲ್ಲ. ದೇಶದ ಸಂವಿಧಾನವನ್ನೇ ವಿರೋಧಿಸುತ್ತಾ, ದ್ವೇಷದ ರಾಜಕಾರಣ ಮಾಡುವವರೇ ಇಂದು ರಾಜಕೀಯ ಮೇಲುಗೈ ಪಡೆಯುತ್ತಿದ್ದಾರೆ. 1988ರಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್.ಗೆ ‘ಭಾರತರತ್ನ’ವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ಪ್ರದಾನ ಮಾಡಿ ರಾಜಕೀಯ ಮಾಡಿದಂತೆಯೇ, 2014ರ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಾವು ಸರ್ಕಾರ ರಚಿಸಿದರೆ, ಮದನ್‌ಮೋಹನ್ ಮಾಳವೀಯ ಅವರಿಗೆ ‘ಭಾರತರತ್ನ’ ನೀಡುವುದಾಗಿ ಎನ್‌ಡಿಎ ನೇತೃತ್ವ ವಹಿಸಿದ್ದ ಪಕ್ಷದ ನಾಯಕರು ಘೋಷಿಸಿದ್ದರು. ಅಧಿಕಾರಕ್ಕೆ ಬಂದೊಡನೆ ನೀಡಿದ್ದ ವಾಗ್ದಾನ ನೆರವೇರಿಸಿದರು.
ಹೀಗಾಗಿಯೇ ಬಹುತೇಕ ಜನ ದೇಶದ ಅತ್ಯುನ್ನತ ಗೌರವ ಪ್ರಶಸ್ತಿಯಲ್ಲಿ ‘ಅತಿಯಾದ ರಾಜಕೀಯ ಪಾತ್ರ’ ಕುರಿತಂತೆ ಚರ್ಚಿಸಲು ಮುಂದಾಗಿದ್ದಾರೆ. ಒಟ್ಟಾರೆ ‘ಭಾರತರತ್ನ’, ‘ಪದ್ಮವಿಭೂಷಣ’, ‘ಪದ್ಮಭೂಷಣ’, ‘ಪದ್ಮಶ್ರೀ’ ಪ್ರಶಸ್ತಿಯ ಇತಿಹಾಸವನ್ನು ಶೋಧಿಸುತ್ತಾ ಸಾಗಿದರೆ, ನೆಹರು ಕುಟುಂಬ ತಮಗೆ ತಾವೇ ಪ್ರಶಸ್ತಿ ಕೊಟ್ಟುಕೊಂಡ ಪರಂಪರೆ ಕಾಣುತ್ತದೆ. ದೇಶ ನಿರ್ಮಾಣದಲ್ಲಿ ತೊಡಗಿದ್ದ ಬಾಬಾಸಾಹೇಬ್ ಅಂಬೇಡ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ ಅವರಂತಹ ಮಹಾನ್ ವ್ಯಕ್ತಿಗಳನ್ನು ಗೌರವಿಸುವುದಕ್ಕಾಗಿ ಕಾಂಗ್ರೆಸ್ಸೇತರ ಸರ್ಕಾರ ಬರಬೇಕಾಯಿತೆಂಬುದು ಕೂಡ ದಿಟವಾಗಿದೆ. ಹಾಗೆಯೇ, ನಮ್ಮೆಲ್ಲರನ್ನೂ ದಾಸ್ಯದ ಸಂಕೋಲೆಯಿಂದ ಬಿಡಿಸಲು ಬಲಿದಾನಗೊಂಡ ಹಿರಿಯ ಚೇತನಗಳನ್ನು ಅವಮಾನಿಸುತ್ತಿರುವ ಕಂಗನಾ ಅವರಂತಹ ನಟಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಲು ಭಾಜಪ ನೇತೃತ್ವದ ಸರ್ಕಾರ ಬಂದಿತೆಂಬುದು ಕೂಡ ವಾಸ್ತವವಾಗಿದೆ.
ನೆಹರು ಕುಟುಂಬ ಕೆಲವು ಸಂದರ್ಭಗಳಲ್ಲಿ ತಾವು ತಮ್ಮದೇ ಪಕ್ಷದಲ್ಲಿದ್ದು, ದೇಶಕ್ಕಾಗಿ ಶ್ರಮಿಸಿದ ಕೊಲ್ಲೂರು ಮಲ್ಲಪ್ಪ, ದೇವರಾಜ ಅರಸು, ಚೆಲ್ಲಯ್ಯ ನಾಡಾರ್, ಸಿದ್ದನಗೌಡ ಪಾಟೀಲ ಅವರಂತಹವರ ಸೇವೆ ಪರಿಗಣನೆಗೆ ತೆಗೆದುಕೊಂಡಿರುವುದೇ ಇಲ್ಲ.
‘ಭಾರತರತ್ನ’, ‘ಪದ್ಮವಿಭೂಷಣ’, ‘ಪದ್ಮಭೂಷಣ’, ‘ಪದ್ಮಶ್ರೀ’ ಪ್ರಶಸ್ತಿಯನ್ನು ದೇಶದ ವಿವಿಧ ಕ್ಷೇತ್ರಗಳ ಬೆಳೆವಣಿಗೆಗೆ ಅಪಾರ ಕೊಡುಗೆ ನೀಡಿದ ಅಪರೂಪದ ಪ್ರಜೆಗಳಿಗೆ ನೀಡಬೇಕೇ ಹೊರತು ದೇಶದ ಇತಿಹಾಸ ಅರಿಯದ, ಪಕ್ವತೆ ಇಲ್ಲದ, ದೇಶದ ಬಹುತ್ವದ ಪರಂಪರೆಯ ಬಗ್ಗೆ ನಂಬಿಕೆ ಇಲ್ಲದ ಕಂಗನಾಳಂತಹ ನಟಿಗೆ ‘ಪದ್ಮಶ್ರೀ’ಯಂತಹ ಅತ್ಯುನ್ನತ ಪ್ರಶಸ್ತಿ ಕೊಟ್ಟು ಪುರಸ್ಕರಿಸುವುದು ಕೆಟ್ಟ ಪರಿಪಾಠಕ್ಕೆ ದಾರಿಯಾಗುವುದರಲ್ಲಿ ಸಂಶಯವಿಲ್ಲ.

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.
ಇದನ್ನೂ ಓದಿ: ಹುತಾತ್ಮ ರೈತರ ಸ್ಮಾರಕ ನಿರ್ಮಿಸಲು ಭೂಮಿ ನೀಡಲು ಮುಂದಾದ ಅನಿವಾಸಿ ಭಾರತೀಯ


