ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಬುಧವಾರ ಹಲ್ಲೆ ನಡೆದಿದ್ದು, ಇದನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಅವರು ಗುರುವಾರ (ಇಂದು) ರಾಜ್ಯದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ದಾಳಿ ಸಂಭವಿಸಿದೆ ಎನ್ನಲಾಗಿದೆ. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರ ಎಡ ಪಾದದ ಮೂಳೆಗೆ ತೀವ್ರವಾದ ಗಾಯಗಳಾಗಿದ್ದು, ಬಲ ಭುಜ, ಮುಂದೋಳು ಮತ್ತು ಕುತ್ತಿಗೆಗೂ ಗಾಯಗಳಾಗಿದೆ ಎಂದು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿತ್ತು.
ಇದನ್ನೂ ಓದಿ: ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ: ಚುನಾವಣಾ ಆಯೋಗಕ್ಕೆ ದೂರು ನೀಡಲು ಮುಂದಾದ ಬಿಜೆಪಿ
ಇದೀಗ ಆಸ್ಪತ್ರೆಯಿಂದಲೆ ಅವರ ವಿಡಿಯೋ ಸಂದೇಶವನ್ನು ಅವರ ಪಕ್ಷದ ಟ್ವಿಟರ್ ಖಾತೆ ಬಿಡುಗಡೆ ಮಾಡಿದೆ. ಅದರಲ್ಲಿ ಮಮತಾ, “ನಾನು ನಿನ್ನೆ ತೀವ್ರವಾಗಿ ಗಾಯಗೊಂಡಿದ್ದೇನೆ ಎಂಬುದು ನಿಜ. ನನ್ನ ಕೈ, ಕಾಲಿನಲ್ಲಿ ಇನ್ನೂ ನೋವು, ಗಾಯಗಳಿವೆ. ನಿನ್ನೆ, ನನ್ನ ತಲೆ ಮತ್ತು ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಾನು ಪ್ರಾರ್ಥನೆ ಸಲ್ಲಿಸುತ್ತಿದ್ದೆ. ನನ್ನನ್ನು ಜೋರಾಗಿ ತಳ್ಳಲಾಗಿತ್ತು ಮತ್ತು ಇದರಿಂದಾಗಿ ಕಾಲು ಕಾರಿನಲ್ಲಿ ಸಿಲುಕಿಕೊಂಡಿತ್ತು” ಎಂದು ಮಮತಾ ವೀಡಿಯೊದಲ್ಲಿ ಹೇಳಿದ್ದಾರೆ.
“ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸಂಯಮದಿಂದ ವರ್ತಿಸುವಂತೆ ವಿನಂತಿಸುತ್ತಿದ್ದೇನೆ. ಇತರರಿಗೆ ತೊಂದರೆಯಾಗುವಂತೆ ಏನನ್ನೂ ಮಾಡಬೇಡಿ. ಇನ್ನೂ ಎರಡು ಮೂರು ದಿನಗಳಲ್ಲಿ ನನ್ನ ಕೆಲಸಕ್ಕೆ ಮರಳಬಹುದು ಎಂದು ಆಶಿಸುತ್ತೇನೆ. ಕೆಲಸ ಮಾಡಲು ಸ್ವಲ್ಪ ಸಮಸ್ಯೆ ಇದ್ದರೂ ಅದನ್ನು ನಾನು ನಿಭಾಯಿಸುತ್ತೇವೆ. ಯಾವುದೆ ಸಭೆಗಳನ್ನು ರದ್ದು ಮಾಡುವುದಿಲ್ಲ. ಆದರೆ ಬಹುಶಃ ನಾನು ಸ್ವಲ್ಪ ಸಮಯದವರೆಗೆ ಗಾಲಿಕುರ್ಚಿಯಲ್ಲಿ ಉಳಿಯಬೇಕಾಗುತ್ತದೆ. ದಯವಿಟ್ಟು ನನ್ನೊಂದಿಗೆ ಸಹಕರಿಸಿ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಖಾಲಿ ಗೋಡೌನ್‌ಗೆ ಸರ್ಕಾರದಿಂದ ಆರೂವರೆ ಕೋಟಿ ಬಾಡಿಗೆ ಪಡೆದ ಅದಾನಿ!
ಮುಖ್ಯಮಂತ್ರಿಯ ಮೇಲಿನ ದಾಳಿಯನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರು ಸೀಲ್ಡಾ-ಹಸ್ನಾಬಾದ್ ಮಾರ್ಗದ ಕಡಂಬಗಚಿ ನಿಲ್ದಾಣದ ಬಳಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮಮತಾ ಗುರುವಾರ ಆಸ್ಪತ್ರೆಯಲ್ಲಿದ್ದ ಕಾರಣ, ಪಕ್ಷವು ತನ್ನ ಪ್ರಣಾಳಿಕೆ ಬಿಡುಗಡೆಯನ್ನು ಮುಂದೂಡಿದೆ. ಅವರು ಕಾಲಿಘಾಟ್‌ನ ತಮ್ಮ ಮನೆಗೆ ಹಿಂತಿರುಗಿದ ನಂತರ, ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಪಕ್ಷವು ತಿಳಿಸಿದೆ.
দলনেত্রীর @MamataOfficial আবেদন pic.twitter.com/SPoD3m7Iu3
— All India Trinamool Congress (@AITCofficial) March 11, 2021
ಘಟನೆ ಕುರಿತು ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲ್ಲಾಪನ್ ಬಂಡ್ಯೋಪಾಧ್ಯಾಯ, ಅದರ ಸಾಮಾನ್ಯ ವೀಕ್ಷಕ ಅಜಯ್ ನಾಯಕ್ ಮತ್ತು ವಿಶೇಷ ಪೊಲೀಸ್ ವೀಕ್ಷಕ ವಿವೇಕ್ ದುಬೆ ಅವರಿಂದ ವರದಿ ಕೋರಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಏಪ್ರಿಲ್ 1 ರಂದು ನಂದಿಗ್ರಾಮದಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದ್ದು, ಮಾರ್ಚ್ 27 ರಿಂದ ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಮತದಾನ ಪ್ರಾರಂಭವಾಗುತ್ತದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: UAPA ಪ್ರಕರಣಗಳಲ್ಲಿ ತೀವ್ರ ಹೆಚ್ಚಳ: ಐದು ವರ್ಷಗಳಲ್ಲಿ 5,128 ಪ್ರಕರಣ- 7,050 ಜನರ ಬಂಧನ!


