ಬೇಜವಾಬ್ದಾರಿ ಕೋಮುವಾದಿ, ಮೂಲಭೂತವಾದಿ ಶಕ್ತಿಗಳು, ‘ಅದು ಸರಿಯಿಲ್ಲ, ಇದು ಸರಿಯಿಲ್ಲ’ ಎಂದು ಹೇಳಿ, ಧಮ್ಕಿ ಹಾಕಿದ ಕೂಡಲೇ ಸರ್ಕಾರ ಅದಕ್ಕೆ ಬೆದರಿ ಕಾರ್ಯಕ್ರಮ ರದ್ದು ಮಾಡುವುದು ಅಂದರೆ ಏನರ್ಥ? ಸರ್ಕಾರ ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕೆ ಅಥವಾ ಇಂತಹ ಶಕ್ತಿಗಳಿಗೆ ಶರಣಾಗಬೇಕೆ? ಇದು ದುರದೃಷ್ಟಕರ ಘಟನೆ. ಇಂತಹ ಸರ್ಕಾರಗಳು ಅಧಿಕಾರದಲ್ಲಿ ಮುಂದುವರೆಯುವುದಕ್ಕೆ ಲಾಯಕ್ಕಿದೆಯೆ? ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಥಮ ಪ್ರಕಾಶನ ಬೆಂಗಳೂರು ಪ್ರಕಟಿಸಿದ್ದ “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಮಲ್ಲತಹಳ್ಳಿಯ ಕಲಾಗ್ರಾಮದಲ್ಲಿ ಯೋಜಿಸಲಾಗಿತ್ತು. ಆದರೆ ಸಂಘಪರಿವಾರದಿಂದ ವಿರೋಧ ವ್ಯಕ್ತವಾದ್ದರಿಂದ ನಿಗದಿಪಡಿಸಲಾಗಿದ್ದ ಸ್ಥಳ ಬದಲಾಯಿಸಿ, ಲೇಖಕರ ಮನೆಯಲ್ಲಿಯೇ ಗುರುವಾರ ಸಂಜೆ ಬಿಡುಗಡೆಗೊಳಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬಗ್ಗೆ ನಾನುಗೌರಿ.ಕಾಂ ಜೊತಗೆ ಮಾತನಾಡಿದ ಜಸ್ಟಿಸ್ ನಾಗಮೋಹನದಾಸ್, “ನಾವು ಯಾವುದೇ ಕಾರಣಕ್ಕೂ ಇಂತಹ ಬೆದರಿಕೆಗೆ ಶರಣಾಗಬಾರದು. ಕೆಲವೇ ಜನರಿದ್ದರೂ ಸರಿ, ಇದರ ವಿರುದ್ಧ ನಾವು ಧ್ವನಿ ಎತ್ತಬೇಕು. ಇಂತಹದ್ದಕ್ಕೆಲ್ಲಾ ಶರಣಾಗುತ್ತಾ ಹೋದರೆ ನಮ್ಮ ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಳ್ಳುತ್ತೇವೆ. ಅಭಿವ್ಯಕ್ತಿ ಸ್ವಾತಂತ್ಯ್ರವನ್ನು ಕಳೆದುಕೊಂಡದರೆ ಪ್ರಜಾಪ್ರಭುತ್ವವನ್ನು ಕಳೆದುಕೊಳ್ಳುತ್ತೇವೆ. ಪ್ರಜಾಪ್ರಭುತ್ವ ಕಳೆದುಕೊಂಡರೆ ನಾವು ಸಂವಿಧಾನ ಕಳೆದುಕೊಳ್ಳುತ್ತೇವೆ. ಈ ಪರಿಸ್ಥಿತಿ ಬಂದರೆ ನಾವು ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಗುಲಾಮರಂತೆ ಬದುಕಬೇಕಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಸಂಘಪರಿವಾರದ ವಿರೋಧದ ನಡುವೆಯು ‘ಇಮ್ರಾನ್ ಖಾನ್ ಒಂದು ಜೀವಂತ ದಂತಕತೆ’ ಪುಸ್ತಕ ಬಿಡುಗಡೆ
“ಇಮ್ರಾನ್ ಖಾನ್ ರಾಜಕೀಯ ನಿಲುವುಗಳ ಬಗ್ಗೆ ನನ್ನ ಗಟ್ಟಿ ವಿರೋಧವಿದೆ. ಅಷ್ಟಕ್ಕೆ ಅವರ ವಿರುದ್ಧ ದ್ವೇಷ ಅಸೂಯೆ, ಅಸಹನೆಯನ್ನು ಬೆಳೆಸಿಕೊಳ್ಳಬೇಕೆ? ಇದು ಎಲ್ಲಿಗೆ ಕೊನೆಯಾಗುತ್ತದೆ?” ಎಂದು ಅವರು ಪ್ರಶ್ನಿಸಿದರು.
“ಅಮೆರಿಕಾದವರು ಪಾಕಿಸ್ತಾನಕ್ಕೆ ಆಹಾರ ಸರಬರಾಜು ಮಾಡುತ್ತದೆ. ಅಲ್ಲಿನ ಮಾಜಿ ಅಧ್ಯಕ್ಷ ಒಬಾಮ ಪುಸ್ತಕ ಭಾರತದಲ್ಲಿ ರಾರಾಜಿಸುತ್ತದೆ. ಟ್ರಂಪ್ ಬಗ್ಗೆಗಿನ ಪುಸ್ತಕಗಳು ಓಡಾಡುತ್ತಿದೆ. ಅವರಿಗೆ ಭಾರತದಲ್ಲಿ ದೇವಸ್ಥಾನವನ್ನೇ ಕಟ್ಟಿದ್ದಾರೆ. ಇವೆಲ್ಲಾ ಏನು? ಸಂಘಪರಿವಾರದ ಈ ನಡೆ ಸಪೂರ್ಣವಾಗಿ ಸರಿಯಲ್ಲ” ಎಂದು ಜಸ್ಟಿಸ್ ನಾಗಮೋಹನ್ ದಾಸ್ ಅವರು ತಿಳಿಸಿದರು.
ಸಂಘಪರಿವಾದ ವಿರೋಧದ ಬಗ್ಗೆ ಮಾತನಾಡಿದ ಜಸ್ಟಿಸ್ ನಾಗಮೋಹನ್ ದಾಸ್ ಅವರು,“ಬಲಪಂಥೀಯರು ದೂರು ನೀಡಿದ್ದ ಹಿನ್ನಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಲಾಗ್ರಾಮಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ರದ್ದಾಗಿದೆ ಎಂದು ಬೋರ್ಡ್ ಹಾಕಿದ್ದರು. ಈ ನಂತರ ಆಯೋಜಕರು ಲೇಖಕರ ಮನೆಯ ಅಂಗಳಲ್ಲೇ ಪುಸ್ತಕ ಬಿಡುಗಡೆ ಮಾಡಲಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಎಷ್ಟು ಬೆಂಕಿ ಹಚ್ಚಬಲ್ಲಿರಿ ನೀವು?
“ಯಾರೂ ಪುಸ್ತಕ ಓದದೇ, ಅದರಲ್ಲಿನ ವಿಚಾರಗಳನ್ನು ತಿಳಿದುಕೊಳ್ಳದೆ, ಇಮ್ರಾನ್ ಖಾನ್ ಒಬ್ಬ ಮುಸ್ಲಿಂ ಮತ್ತು ಪಾಕಿಸ್ತಾನಿ ಎಂಬ ಕಾರಣಕ್ಕೆ ವಿರೋಧ ಮಾಡುವಂತದ್ದು ಸರಿಯಲ್ಲ. ಇದು ಮೂರ್ಖರು ಮಾಡುವ ಕೆಲಸ. ಪುಸ್ತಕದಲ್ಲಿ ರಾಜಕೀಯದ ಬಗ್ಗೆ, ಧರ್ಮದ ಬಗ್ಗೆ ಯಾವುದೇ ವಿಚಾರವಿಲ್ಲ. ಇಮ್ರಾನ್ ಖಾನ್ ಅವರ ತಾಯಿಗೆ ಕ್ಯಾನ್ಸರ್ ಬಂದು ತೀರಿಹೋಗುತ್ತಾರೆ. ಅವರ ಊರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದಿದ್ದಕ್ಕೆ ಅವರು ಜಗತ್ತಿನ ಇರುವ ತನ್ನ ಎಲ್ಲಾ ಸ್ನೇಹಿತರಿಂದ ಹಣವನ್ನು ದೇಣಿಗೆ ಪಡೆದು ಆಸ್ಪತ್ರೆ ಕಟ್ಟಿದ್ದಾರೆ. ಈ ಆಸ್ಪತ್ರೆ ಕಟ್ಟಲು ಭಾರತೀಯ ಕ್ರಿಕೆಟಿಗರು ಸಹಾಯ ಮಾಡಿದ್ದಾರೆ. ಚಿತ್ರ ನಟ ಅಮಿತಾಬ್ ಬಚ್ಚನ್ ಕೂಡಾ ಆ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ. ಈ ಕತೆಯನ್ನು ಪುಸ್ತಕ ಹೇಳಿದೆ” ಎಂದು ಅವರು ತಿಳಿಸಿದರು.
“ಇಮ್ರಾನ್ ಖಾನ್ ಅವರ ರಾಜಕೀಯ ವಿಚಾರಗಳು ಸೇರಿದಂತೆ ಅವರ ಹಲವಾರು ವಿಚಾರಗಳನ್ನು ನಾನು ಒಪ್ಪಲ್ಲ. ಅಷ್ಟಕ್ಕೆ ಅವರ ಮೇಲೆ ದ್ವೇಷ ಬೆಳೆಸಿಕೊಳ್ಳಬಹುದೆ? ನಮ್ಮ ದೇಶದಲ್ಲಿ ಧರ್ಮ, ಜಾತಿ, ಭಾಷೆ, ಆಹಾರ ಹೀಗೆ ಎಲ್ಲಾ ವಿಚಾರದಲ್ಲೂ ಅಸಹಿಷ್ಣುತೆ ಜಾಸ್ತಿಯಾಗುತ್ತಿದೆ. ಸಹಿಷ್ಣುತೆ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಾದ ಒ.ಚಿನ್ನಪ್ಪ ರೆಡ್ಡಿ 1993ರ ಒಂದು ತೀರ್ಪಿನಲ್ಲಿ, ‘ನಮ್ಮ ಸಂಪ್ರದಾಯ, ನಮ್ಮ ತತ್ವಗಳು, ನಮ್ಮ ಸಂವಿಧಾನ ಸಹಿಷ್ಣುತೆಯನ್ನು ಭೋಧಿಸುತ್ತದೆ ಮತ್ತು ಪಾಲಿಸುತ್ತದೆ, ಅದನ್ನು ದುರ್ಬಲಗೊಳಿಸಬಾರದು’ ಎಂದು ಬರೆಯುತ್ತಾರೆ” ಎಂದು ಅವರು ನಾನುಗೌರಿ.ಕಾಂ ಜೊತೆಗೆ ಮಾತನಾಡುತ್ತಾ ಹೇಳಿದರು.
ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಬಗ್ಗೆಗಿನ, “ಇಮ್ರಾನ್ ಖಾನ್-ಒಂದು ಜೀವಂತ ದಂತಕಥೆ” ಪುಸ್ತಕವನ್ನು ಗುರುವಾರ ಬೆಂಗಳೂರಿನ ನಾಗರಬಾವಿಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಲೇಖಕರಾದ ಸುಧಾಕರ್ ಎಸ್.ಬಿ. ಅವರ ನಿವಾಸದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅವರು ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: ಅಜಾತಶತ್ರು? ಆಹಾ ಗೆಳೆಯನೇ ಇದು ಅತ್ಯಂತ ಕೆಟ್ಟ ಬಿರುದು!- ‘ಭಗತ್ ಸಿಂಗ್ ಜೈಲ್ ಡೈರಿ’
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಐನಕೈ, ಮಾಜಿ ಸಚಿವರಾದ ಡಾ.ಲೀಲಾದೇವಿ ಆರ್ ಪ್ರಸಾದ್, ಪುಸ್ತಕದ ಲೇಖಕ ಸುಧಾಕರ್ ಎಸ್ ಬಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಟಿ.ಎನ್. ಕಮ್ಮರಡಿ, ಪ್ರೊ. ರಾಜಪ್ಪ ದಳವಾಯಿ, ವಿ.ಎನ್. ವೀರನಾಗಪ್ಪ ಹಾಗೂ ಡಾ. ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರು ಉಪಸ್ಥಿತರಿದ್ದರು.



ಸಂಘಿಗಳು ತೀವ್ರ ಮನೋವಿಕಾರಿಗಳು. ಇವರ ಅಪ್ಪಂದಿರು ಅಡ್ವಾಣಿ, ಮೋದಿಗಳೆಲ್ಲಾ ಪಾಕಿಸ್ತಾನಕ್ಕೆ ಹೋದವರೆ.ಮೋದಿ ಮಿತ್ರ ಆಜಿತ್ ಧೋವಲನ ಮಕ್ಕಳು ಸೌದಿಯಲ್ಲಿ ಪಾಕಿಸ್ತಾನಿಗಳ ಜೊತೆ ವ್ಯಾವಹಾರಿಕ ಪಾಲುದಾರರು ಎಂದು ಓದಿದ ನೆನಪು.