Homeಕರ್ನಾಟಕಕರ್ನಾಟಕ ರಾಜ್ಯೋತ್ಸವ: ತ್ರೈವರ್ಣೀಕತೆಯ ಅಟ್ಟಹಾಸ

ಕರ್ನಾಟಕ ರಾಜ್ಯೋತ್ಸವ: ತ್ರೈವರ್ಣೀಕತೆಯ ಅಟ್ಟಹಾಸ

- Advertisement -
- Advertisement -

ಕರ್ನಾಟಕವು ತನ್ನ 67ನೆಯ(1956-2022) ರಾಜ್ಯೋತ್ಸವವನ್ನು ರೂಢಿಯಂತೆ ನವೆಂಬರ್ 1ರಿಂದ ತಿಂಗಳೆಲ್ಲ ಆಚರಿಸಿಕೊಳ್ಳುತ್ತಿದೆ. ನಾಡಿನ ಏಕೀಕರಣವನ್ನು ನಾವು ರಾಜ್ಯೋತ್ಸವವಾಗಿ ಆಚರಿಸಿಕೊಂಡು ಬಂದಿದ್ದೇವೆ. ಏಕೀಕರಣ ಎನ್ನುವುದು ಕೇವಲ ಭಾಷೆಯ ಒಂದು ಪ್ರಕ್ರಿಯೆಯಾಗಿರಲಿಲ್ಲ. ಅದು ಭಾಷೆಯ ಜೊತೆಗೆ ಜನರ ಬದುಕನ್ನು ಒಳಗೊಂಡಿತ್ತು. ಇಂದು ಭಾಷೆಯೂ ಸಮಸ್ಯೆಯನ್ನು ಎದುರಿಸುತ್ತಿದೆ, ಜನರ ಬದುಕೂ ಸಂಕಷ್ಟದಲ್ಲಿದೆ. ಸಾಮಾಜಿಕ ಸೌಹಾರ್ದತೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್ಥಿಕ ಅಸಮಾನತೆಯೂ ಮಿತಿಮೀರಿ ಬೆಳೆಯುತ್ತಿದೆ. ಉದಾ: ಕೃಷಿಯನ್ನು ಒಳಗೊಂಡ ಪ್ರಾಥಮಿಕ ವಲಯದ ತಲಾ ಜಿಎಸ್‌ಡಿಪಿ 2020-21ರಲ್ಲಿ (ಚಾಲ್ತಿ ಬೆಲೆಗಳಲ್ಲಿ) ರೂ.29502ರಷ್ಟಿದ್ದರೆ ಪ್ರಾಥಮಿಕೇತರ ವಲಯಗಳಲ್ಲಿನ ತಲಾ ಜಿಎಸ್‌ಡಿಪಿ ರೂ. 193921. ಅಂದರೆ ಪ್ರಾಥಮಿಕ ವಲಯವನ್ನು ಅವಲಂಬಿಸಿರುವ ಶೇ.50ರಷ್ಟು ಜನರ ತಲಾ ವರಮಾನವು ಪ್ರಾಥಕಿಕೇತರ ವಲಯದಲ್ಲಿನ ಶೇ.50ರಷ್ಟು ಜನರ ತಲಾ ವರಮಾನಕ್ಕಿಂತ 6.57 ಪಟ್ಟು ಕೆಳಮಟ್ಟದಲ್ಲಿದೆ. ಭಾಷೆಯ ಸಮಸ್ಯೆಯು ಹಿಂದಿ ಭಾಷೆಯ ಹೇರಿಕೆ ಮಾತ್ರವಲ್ಲ; ಇದು ರಾಜ್ಯದ ಸ್ವಾಯತ್ತತೆಯ ಮೇಲಿನ, ಅದರ ಅನನ್ಯತೆಯ ಮೇಲಿನ ಆಕ್ರಮಣವಾಗಿದೆ. ಒಂದು ಕಾಲಕ್ಕೆ ಕನ್ನಡವನ್ನು ಸಂಸ್ಕೃತದ ಹಿಡಿತದಿಂದ ಬಿಡಿಸುವ ಬಗ್ಗೆ ವಾಗ್ದಾದಗಳು ನಡೆದವು. ಇಲ್ಲಿನ ವಿಚಿತ್ರವನ್ನು ಗಮನಿಸಬೇಕು. ಇಂಗ್ಲಿಷ್ ವಸಾಹತುಶಾಹಿ ಭಾಷೆಯಾಗಿದ್ದರೂ ಅದು ನಮಗೆ ಯಾವತ್ತೂ ಹೇರಿಕೆಯಾಗಿ ಕಾಣಲಿಲ್ಲ.

ಇಂಗ್ಲಿಷ್ ಕಲಿಕೆಯು ಬಹಳಷ್ಟು ಜನರಿಗೆ ಸಮಸ್ಯೆಯಾಗಿರುವುದು ನಿಜ. ಆದರೆ ಅದು ನಾಡಿನ ಅನೇಕರಿಗೆ ಬಿಡುಗಡೆಯ ಭಾಷೆಯಾಯಿತು. ಅದರಲ್ಲೂ ’ಇಂಗ್ಲಿಷ್ ಶಿಕ್ಷಣ’ವು ಶತಶತಮಾನಗಳಿಂದ ನಿರಾಕರಣೆಗೆ ಒಳಗಾಗಿದ್ದ ಹಿಂದುಳಿದ ವರ್ಗಗಳಿಗೆ, ದಲಿತರಿಗೆ, ಆದಿವಾಸಿಗಳಿಗೆ ವಿಮೋಚನೆ ನೀಡಿತು. (ಇಂಗ್ಲಿಷ್ ಶಿಕ್ಷಣ ಎನ್ನುವುದನ್ನು ಇಲ್ಲಿ ವ್ಯಾಪಕ ಅರ್ಥದಲ್ಲಿ ಬಳಸಲಾಗಿದೆ. ಅದು ಇಂಗ್ಲಿಷ್‌ನಲ್ಲಿ ನಡೆಯುವ ಶಿಕ್ಷಣ-ಕಲಿಕೆ ಎಂಬ ಅರ್ಥವಲ್ಲ. ಇದನ್ನು ಇಲ್ಲಿ ಎಲ್ಲರಿಗೂ ಶಿಕ್ಷಣ ಎಂಬ ಅರ್ಥವ್ಯಾಪ್ತಿಯಲ್ಲಿ, ಪಶ್ಷಿಮದ ಅರಿವು ಎಂಬ ಅರ್ಥದಲ್ಲಿ, ವಿಜ್ಞಾನ-ವೈಚಾರಿಕತೆ ಎಂಬ ಅರ್ಥದಲ್ಲಿ ಬಳಸಲಾಗಿದೆ). ಅಕ್ಷರ ಸಂಸ್ಕೃತಿಯನ್ನು ಗುತ್ತಿಗೆ ಹಿಡಿದಿದ್ದ ತ್ರೈವರ್ಣೀಕರಿಗೆ ನಿಜಕ್ಕೂ ಇದೊಂದು ಆಕ್ರಮಣದಂತೆ ಕಂಡಿತು. ಇಂಗ್ಲಿಷ್ ಶಿಕ್ಷಣದಿಂದ ಪಡೆದ ಅರಿವಿನಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ವಿಮೋಚನಾತ್ಮಕ ಸಂವಿಧಾನವನ್ನು ರಚಿಸುವುದು ಸಾಧ್ಯವಾಯಿತು. ಇಂಗ್ಲಿಷ್ ಶಿಕ್ಷಣ ತಂದ ಕ್ರಾಂತಿಯ ಮುಂದುವರಿದ ಭಾಗವೇ ನಮ್ಮ ಸಂವಿಧಾನ. ಅಸ್ಪೃಶ್ಯತೆ ಎನ್ನುವುದು ಮಾನವ ಹಕ್ಕಿನ ನಿರಾಕರಣೆ ಎನ್ನುವುದು ಮುಂಚೂಣಿಗೆ ಬರಲು ಸಾಧ್ಯವಾದದ್ದು ಪಶ್ಚಿಮದ ಅರಿವಿನಿಂದ. ನಮ್ಮ ಪರಂಪರೆಯಲ್ಲಿ ಬುದ್ಧ, ಬಸವ ಮುಂತಾದವರು ಒಂದು ಸೀಮಿತ ನೆಲೆಯಲ್ಲಿ ಅಸ್ಪೃಶ್ಯತೆಯ ಕೊಲೆಗಡುಕತನದ ಬಗ್ಗೆ ಜನರನ್ನು ಎಚ್ಚರಿಸಿದ್ದರು, ಅದರ ನಿವಾರಣೆಗೆ ಪ್ರಯತ್ನ ಪಟ್ಟಿದ್ದರು. ಅದರಲ್ಲಿ ಅವರು ಯಶಸ್ವಿಯಾದರೆ – ಇಲ್ಲವೇ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ನಮ್ಮನ್ನು ಕಾಡುತ್ತಿದೆ.

ಇಂಗ್ಲಿಷ್ ಶಿಕ್ಷಣ ನೀಡಿದ ಬಿಡುಗಡೆ

ಇಂಗ್ಲಿಷ್ ಶಿಕ್ಷಣವು ಅಸ್ಪೃಶ್ಯತೆಯ ನಿವಾರಣೆಗೆ ಸಂವಿಧಾನದ ಮೂಲಕ ಒಂದು ವೈಜ್ಞಾನಿಕ-ವೈಚಾರಿಕ-ಪ್ರಜಾತಾಂತ್ರಿಕ ಚೌಕಟ್ಟನ್ನು ನೀಡಿತು. ಈ ಎಲ್ಲ ಬಗೆಯ ಬಿಡುಗಡೆಯ ಕ್ರಮಗಳ ಬಗ್ಗೆ ತ್ರೈವರ್ಣೀಕರಿಗೆ ಸಮಾಧಾನವಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿಯೂ ಇಂಗ್ಲಿಷ್ ಶಿಕ್ಷಣದ ಬಿಡುಗಡೆ ಪ್ರಣಾಳಿಕೆಯ ಬಗ್ಗೆ ಅನೇಕರಿಗೆ (ಉದಾ: ತಿಲಕ್) ಸಮಾಧಾನವಿರಲಿಲ್ಲ. ಈ ಇಂಗ್ಲಿಷ್ ಶಿಕ್ಷಣ ತಂದ ಬಿಡುಗಡೆಯ ಬಗ್ಗೆ, ಅದರ ಮುಂದುವರಿದ ಭಾಗವಾದ ಸಂವಿಧಾನದ ವಿಮೋಚನಾ ಪ್ರಣಾಳಿಕೆಯ ಬಗ್ಗೆ ’ಸಮಾಧಾನವಿರದ’ ತ್ರೈವರ್ಣೀಕರ ಗುಂಪು ಮತ್ತು ತ್ರೈವರ್ಣೀಕ ಮನೋಭಾವವನ್ನು ತಲೆಯಲ್ಲಿ ತುಂಬಿಕೊಂಡಿರುವ ಕೆಲವು ಶೂದ್ರರ, ದಲಿತರ, ಆದಿವಾಸಿಗಳ, ಮಹಿಳೆಯರ ಗುಂಪುಗಳು ಇಂದು ಕರ್ನಾಟಕದಲ್ಲಿ ಅತ್ಯಂತ ಸಕ್ರಿಯವಾಗಿವೆ – ಕ್ರಿಯಾಶೀಲವಾಗಿವೆ (ಡಾ. ಅಂಬೇಡ್ಕರ್ ಪ್ರಣೀತ ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ನ ಮೂಲ ಮುಖಂಡರು ವಿರೋಧಿಸಿ ಮಾತನಾಡಿದ್ದಾರೆ). ಶಾಲಾ ಪಠ್ಯಗಳ ಪರಿಷ್ಕರಣವೆಂಬ ಕಾರ್ಯಾಚರಣೆಯು ಮೂಲತಃ ತ್ರೈವರ್ಣೀಕವಾಗಿದ್ದರೆ ಹಿಜಾಬ್-ಹಲಾಲ್, ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ, ದೇವಾಲಯದ ಅಂಗಳಕ್ಕೆ ಬಂದ ಪ.ಜಾ. ಮಗುವಿನ ಕುಟುಂಬಕ್ಕೆ ದಂಡ, ದೈವಕೋಲನ್ನು ಮುಟ್ಟಿದ್ದಕ್ಕೆ ದಲಿತ ಸಮುದಾಯದ ಮೇಲೆ ಬಹಿಷ್ಕಾರ, ದಲಿತರಿಗೆ-ಮುಸ್ಲಿಮರಿಗೆ ನಗರಗಳಲ್ಲಿ ಮನೆ ಬಾಡಿಗೆ ನಿರಾಕರಿಸುವುದು ಮುಂತಾದವು ’ತ್ರೈವರ್ಣೀಕ ಮನೋಭಾವ’ದಿಂದ ಪ್ರೇರಿತವಾದವುಗಳು.

ಕರ್ನಾಟಕದಲ್ಲಿ ನಡೆದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ಎನ್ನುವುದು ಇಂಗ್ಲಿಷ್ ಶಿಕ್ಷಣದಿಂದ ಬಂದ ಅರಿವಿನ ವಿರುದ್ಧ ತ್ರೈವರ್ಣೀಕತೆಯು ನಡೆಸಿದ ಆಕ್ರಮಣವಾಗಿದೆ. ದಲಿತರ, ಹಿಂದುಳಿದ ವರ್ಗಗಳ ಪಾಠಗಳಿಗೆ ಬದಲಾಗಿ ತ್ರೈವರ್ಣೀಕರ ಪಾಠಗಳನ್ನು ಮಾತ್ರವೇ ನಿಯಮಿಸಲು ನಡೆಸಿದ ಕುತಂತ್ರವನ್ನು – ಹುನ್ನಾರವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಇಂಗ್ಲಿಷ್ ಶಿಕ್ಷಣದಿಂದ ಮತ್ತು ಅದರ ಮುಂದುವರಿದ ಭಾಗವಾಗಿರುವ ನಮ್ಮ ಸಂವಿಧಾನದ ಮೌಲ್ಯಗಳಿಂದ ಅಧಿಕಾರವನ್ನು ಪಡೆದ ಕರ್ನಾಟಕದ ಹಿಂದುಳಿದ ವರ್ಗಗಳ, ದಲಿತರ, ಆದಿವಾಸಿಗಳ ಮತ್ತು ಮಹಿಳೆಯರ – ಈ ಸಮುದಾಯಗಳ ಅಭಿವೃದ್ಧಿ-ಮೇಲುಚಲನೆ ತ್ರೈವರ್ಣೀಕರಿಗೆ ಸಹಿಸಲಾರದ ಒಂದು ಬೆಳವಣಿಗೆಯಾಗಿದೆ. ಇಂಗ್ಲಿಷ್ ಶಿಕ್ಷಣ ಮತ್ತು ನಮ್ಮ ಸಂವಿಧಾನಗಳಿಗೆ ಸಮಾನತೆಯು ಆತ್ಯಂತಿಕ ಮೌಲ್ಯವಾದರೆ ತ್ರೈವರ್ಣೀಕರಿಗೆ ಚಾತುರ್ವರ್ಣ ಪ್ರಣೀತ ಅಸಮಾನತೆಯು ವೈಜ್ಞಾನಿಕವೂ ವೈಚಾರಿಕವೂ ಆದ ಮೌಲ್ಯವಾಗಿದೆ. ಕರ್ನಾಟಕದಲ್ಲಿ ಸುಮ್ಮಸುಮ್ಮನೆ ಈ ವರ್ಗ ಮನುಸ್ಮೃತಿಯ ಬಗ್ಗೆ, ಭಗವದ್ಗೀತೆಯ ಬಗ್ಗೆ, ಸಂಸ್ಕೃತದ ಬಗ್ಗೆ ಮಾತನಾಡುತ್ತಿಲ್ಲ. ಸುಮ್ಮಸುಮ್ಮನೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಘೋಷಿಸುತ್ತಿಲ್ಲ.

ಕರ್ನಾಟಕತ್ವದ ರಕ್ಷಣೆ

ಈ ಬೆಳವಣಿಗೆಗಳು ಕರ್ನಾಟಕದ ಅಸ್ತಿತ್ವವನ್ನು, ಅದರ ಅಸ್ಮಿತೆಯನ್ನು ಮತ್ತು ಅದರ ವಿಶಿಷ್ಟತೆಯನ್ನು ನಾಶ ಮಾಡಲು ಹವಣಿಸುತ್ತಿವೆ. ಕರ್ನಾಟಕದ ವಿಶಿಷ್ಟತೆಯನ್ನು 10ನೆಯ ಶತಮಾನದಲ್ಲಿಯೇ ಕವಿರಾಜಮಾರ್ಗಕಾರ ’ವಸುಧಾ ವಲಯ ವಿಲೀನ ವಿಷದ ವಿಷಯ ವಿಶೇಷಂ’ ಎಂಬ ಸೂತ್ರದಲ್ಲಿ ಗುರುತಿಸಿದ್ದಾನೆ. ಕನ್ನಡ ನಾಡು ವಿಶಾಲವಾದ ವಸುಧೆಯಲ್ಲಿ ವಿಲೀನವಾಗಿದೆ. ಆದರೆ ಅಲ್ಲಿ ಅದು ತನ್ನ ’ವಿಶಿಷ್ಟತೆ’ಯನ್ನು ಮೆರೆದಿದೆ. ಈ ’ಕರ್ನಾಟಕದ ವಿಶಿಷ್ಟತೆ’ಗೆ ಇಂದು ಅಪಾಯ ಬಂದಿದೆ. ರಾಜ್ಯೋತ್ಸವವನ್ನು ಆಚರಿಸುತ್ತಿರುವ ಇಂದಿನ ಸಂದರ್ಭದಲ್ಲಿ ಈ ’ಅಪಾಯ’ಗಳ ಬಗ್ಗೆ ತೀವ್ರವಾಗಿ ಆಲೋಚಿಸುವುದು ಮತ್ತು ಅವನ್ನು ತಡೆಯುವುದರ ಬಗ್ಗೆ ಕಾರ್ಯಾಚರಣೆ ಕೈಗೊಳ್ಳುವುದು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ತುರ್ತಿನ ಸಂಗತಿಯಾಗಿದೆ.

ಇದನ್ನೂ ಓದಿ: ಕನ್ನಡ ರಾಜ್ಯೋತ್ಸವದಂದು ‘ಪುನೀತ್ ರಾಜ್‌ಕುಮಾರ್‌‌’ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ

ಇಂದಿನ ನಮ್ಮ ಡಬಲ್ ಎಂಜಿನ್ ಸರ್ಕಾರ ತನ್ನ ಗುರಿ ’ನವ ಭಾರತಕ್ಕಾಗಿ ನವ ಕರ್ನಾಟಕ’ ಎಂದು ಹೇಳುತ್ತಿದೆ. ನವ ಭಾರತ ಎನ್ನುವುದು ಇಂದು ಬ್ಯಾಹ್ಮಣಿಕೆಯ ಆಳ್ವಿಕೆಯಾಗಿದೆ. ಅದು ಪ್ರತಿನಿಧಿಸುವ ನೀತಿ-ಮೌಲ್ಯಗಳನ್ನು ಕರ್ನಾಟಕ ಅನುಕರಿಸಬೇಕೆ? ಅದರ ನೀತಿ-ಮೌಲ್ಯಗಳಾವುವು? ಬ್ರಾಹ್ಮಣರು ಅತ್ಯಾಚಾರ ಮಾಡಲು ಸಾಧ್ಯವಿಲ್ಲ (ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಗುಜರಾತಿನ ನಿದರ್ಶನ), ಬ್ರಾಹ್ಮಣರು ಎಲ್ಲರಿಗಿಂತ ಶೇಷ್ಠರು (ಲೋಕಸಭಾ ಸ್ಪೀಕರ್ ಒಂ ಬಿರ್ಲಾ 2019), ದೇವಾಲಯಗಳನ್ನು ಕಟ್ಟಿಸುವುದು ಸರ್ಕಾರದ ಜವಾಬ್ದಾರಿಯಾಗಿರುವುದು (ಅಯೋಧ್ಯ ಮಂದಿರ- ಸರ್ವೋಚ್ಛ ನ್ಯಾಯಾಲಯದ ತೀರ್ಪು) ಮುಂತಾದವು. ಈ ಮೌಲ್ಯಗಳನ್ನು, ಇಂತಹ ವಿಷಮ ಸಿದ್ಧಾಂತಗಳನ್ನು ಚಾರಿತ್ರಿಕವಾಗಿ ಕರ್ನಾಟಕ ದೂರವಿಟ್ಟುಕೊಂಡು ಬೆಳೆಯುತ್ತಾ ಬಂದಿದೆ. ’ಲಿಂಗ ಪ್ರತಿಷ್ಠೆಯ ಮಾಡಿದವರಿಗೆ ನಾಯಕ ನರಕ’ ಎಂದರು ಅಲ್ಲಮಪ್ರಭುಗಳು. ’ವೇದ ನಡನಡುಗಿತ್ತು. ಏಕೆ? ನಮ್ಮ ಕೂಡಲಸಂಗಮದೇವರು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ’ ಎಂದರು ಬಸವಣ್ಣನವರು. ’ಕೂಡಲಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡರೆ’ ವೇದಗಳೇಕೆ ನಡುಗಬೇಕು? ಏಕೆಂದರೆ ಚಾತುರ್ವರ್ಣ ಪ್ರಣೀತ ವೇದಾಂಗಗಳು ದಲಿತರನ್ನು ಸಾಮಾಜಿಕ ವ್ಯವಸ್ಥೆಯ ಭಾಗವೆಂದು ಪರಿಗಣಿಸುವುದಿಲ್ಲ. ಇದೊಂದು ಅಪ್ಪಟ ಅಸಮಾನತೆಯ ಪ್ರಣಾಳಿಕೆ. ಇದು ಕರ್ನಾಟಕಕ್ಕೆ ಆದರ್ಶವಾಗಬೇಕೆ? ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ನಾಡಿಗೆ, ಸಮಾಜಕ್ಕೆ, ಜನರಿಗೆ ಯಾವುದು ಆದರ್ಶವಾಗಬೇಕು ಎಂಬುದರ ಬಗ್ಗೆ ಜನರು ಆಲೋಚಿಸಬೇಕು. ಸಮಾಜದ ಬ್ರಾಹ್ಮಣೀಕರಣವನ್ನು ತಡೆಯಬೇಕು. ನಮಗೆ ಬಸವ-ಕನಕ-ಕುವೆಂಪು ಸಂಸ್ಕೃತಿ ದಾರಿದೀಪವಾಗಬೇಕೆ ವಿನಾ ಚಾತುರ್ವರ್ಣವಲ್ಲ.

ಮೆಜಾರಿಟೇರಿಯನ್ ರಾಜಕಾರಣ

ದಲಿತರಿಗೆ, ಅಲ್ಪಸಂಖ್ಯಾತರಿಗೆ ಮತ್ತು ಉದಾರವಾದಿಗಳಿಗೆ ಸಮಾಜದಲ್ಲಿ ಅವಕಾಶವನ್ನು ನಿರಾಕರಿಸಲಾಗುತ್ತಿದೆ. ತ್ರೈವರ್ಣೀಕರ ಅಡಿಯಾಳಾಗಿ ಉಳಿದವರು ಬದುಕಬೇಕು ಎಂಬ ಮೆಜಾರಿಟೇರಿಯನ್ ರಾಜಕಾರಣವನ್ನು ನವಭಾರತ ಪ್ರತಿನಿಧಿಸುತ್ತದೆ. ಇದು ಕರ್ನಾಟಕದ ಮೂಲ ಸತ್ವಕ್ಕೆ ವಿರುದ್ಧವಾದುದು ಮತ್ತು ವಿನಾಶಕಾರಿಯಾದುದು. ಭಾಷೆ, ಸಂಸ್ಕೃತಿ, ಆಹಾರ, ಉಡುಪು, ಕೃಷಿ, ವ್ಯಾಪಾರ ಮುಂತಾದವು ಲಾಗಾಯ್ತಿನಿಂದ ಕರ್ನಾಟಕದಲ್ಲಿ ವೈವಿಧ್ಯಮಯವಾಗಿ, ಬಹುವಚನಕಾರಿಯಾಗಿ ಮತ್ತು ಬಹುತ್ವದ ನೆಲೆಯಲ್ಲಿ ಬದುಕುತ್ತಾ ಬೆಳೆಯುತ್ತಾ ಬಂದಿವೆ. ’ಒಂದು ದೇಶ: ಒಂದು ತೆರಿಗೆ, ಒಂದು ದೇಶ: ಒಂದು ಕೃಷಿ, ಒಂದು ದೇಶ: ಒಂದು ಭಾಷೆ’ ಮುಂತಾದ ನವ ಭಾರತವು ಅನುಸರಿಸುತ್ತಿರುವ ರಾಜಕೀಯ ಪ್ರಣಾಳಿಕೆಯು ಕರ್ನಾಟಕತ್ವಕ್ಕೆ ತೀರ ವಿರುದ್ಧವಾದುದಾಗಿದೆ. ಕನ್ನಡ, ತೆಲುಗು, ತಮಿಳು, ಮರಾಠಿ, ಉರ್ದು, ತುಳು, ಕೊಂಕಣಿ, ಅರಭಾಷೆ ಮುಂತಾದವು, ಮಾಂಸಾಹಾರ-ಸಸ್ಯಾಹಾರ ಎನ್ನುವ ಬಹುತ್ವದ ಆಹಾರ ಸಂಸ್ಕೃತಿ, ಜೋಳ, ರಾಗಿ, ಭತ್ತ, ತೊಗರಿ, ಶೇಂಗ, ಬಾಳೆ, ಅಡಿಕೆ, ಕಾಫಿ ಮುಂತಾದ ವೈವಿಧ್ಯ ಕೃಷಿಗಾರಿಕೆ, ತಲೆಮೇಲೆ ಹೊತ್ತು ಮಾರಾಟ ಮಾಡುವವರು, ನೂಕುವ ಗಾಡಿ ವ್ಯಾಪಾರಿಗಳು, ಸಣ್ಣ-ಪುಟ್ಟ ಅಂಗಡಿಗಳು, ಹೊಟೇಲುಗಳು, ಸಗಟು ಮಾರಾಟ ಮಂಡಿಗಳು, ವಿವಿಧ ಜಾತಿಗಳ ಧರ್ಮಗಳ ಜನರು ಹಿಂದಿಲಿಂದಲೂ ಒಟ್ಟಾಗಿ, ಸೌಹಾರ್ದಯುತವಾಗಿ, ನೋವು-ನಲಿವುಗಳನ್ನು ಉಣ್ಣುತ್ತಾ ಕರ್ನಾಟಕದ ಸಂಕರ ಸಂಸ್ಕೃತಿಗಳಿಂದ ನಾಡನ್ನು ಸಮೃದ್ಧಗೊಳಿಸುತ್ತಾ ಬಂದಿವೆ. ಈ ಬಹುತ್ವಕ್ಕೆ, ಬಹುಳಾಕಾರಕ್ಕೆ, ಸೌಹಾರ್ದತೆಗೆ ಕರ್ನಾಟಕದಲ್ಲಿ ನವ ಭಾರತವನ್ನು ಪ್ರತಿನಿಧಿಸುವ ತ್ರೈವರ್ಣೀಕರ ಗುಂಪುಗಳು ಪೆಟ್ಟು ನೀಡಲು ಪ್ರಯತ್ನಸುತ್ತಿವೆ. ಈ ಆಕ್ರಮಣದ ಬಗ್ಗೆ ನಾವು ರಾಜ್ಯೋತ್ಸವದ ಸಂದರ್ಭದಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ.

’ನವ ಭಾರತ ನಿರ್ಮಾಣಕ್ಕೆ ನವ ಕರ್ನಾಟಕ’ ಎನ್ನುವ ನಮ್ಮ ಡಬಲ್ ಎಂಜಿನ್ ಸರ್ಕಾರವು ತ್ರೈವರ್ಣೀಕರ ಓಲೈಕೆಯ ರಾಜಕಾರಣದಲ್ಲಿ ಮುಳುಗಿದೆ. ಸರ್ಕಾರಕ್ಕೆ ನಮ್ಮ 100 ಲಕ್ಷಕ್ಕೂ ಮಿಕ್ಕು ಶಾಲಾಮಕ್ಕಳ ಬಗ್ಗೆ ಕಾಳಜಿಯಿಲ್ಲ, ಜನರ ಆರೋಗ್ಯದ ಬಗ್ಗೆ ಗಮನವಿಲ್ಲ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅದು ಓಗೊಡುತ್ತಿಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಮೊಟಕುಗೊಳಿಸಲಾಗುತ್ತಿದೆ. ಉದಾ: ಜಗ್ಗಿ ವಾಸುದೇವ ಎಂಬುವವರಿಗೆ ರೂ.100 ಕೋಟಿ ಅನುದಾನವನ್ನು ನೀಡಿದೆ. ಆನೆಗೊಂದಿಯ ಅಂಜನಾದ್ರಿ ಬೆಟ್ಟ-ದೇವಾಲಯದ ಅಭಿವೃದ್ಧಿಗೆ ರೂ.100 ಕೋಟಿ ಅನುದಾನವನ್ನು ಬಜೆಟ್ಟಿನಲ್ಲಿ ನೀಡಿದೆ. ಆದರೆ ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಯಲ್ಲಿರುವ ರಾಯಚೂರು ವಿಶ್ವವಿದ್ಯಾಲಯಕ್ಕೆ 2022-23ರಲ್ಲಿನ ಅನುದಾನ ರೂ.10 ಕೋಟಿ. ನಮ್ಮ ರಾಜ್ಯದ ಶಾಲಾ ಮಕ್ಕಳಿಂದ ಮಾಸಿಕ ಶಾಲಾ ನಿರ್ವಹಣೆ ವೆಚ್ಚಕ್ಕೆ ರೂ.100 ಶುಲ್ಕವನ್ನು ಸಂಗ್ರಹಿಸಿಕೊಳ್ಳಲಿ ಎಂದು ಆದೇಶಿಸುತ್ತದೆ (ವ್ಯಾಪಕ ಟೀಕಿಯ ನಂತರ ಆದೇಶವನ್ನು ಹಿಂಪಡೆದಿರುವ ವರದಿಗಳಿವೆ). ಕರ್ನಾಟಕದ ಪರಂಪರೆಯಲ್ಲದ ಕುಂಭಮೇಳಕ್ಕೆ (ತ್ರಿವೇಣಿ ಸಂಗಮ) ನೂರಾರು ಕೋಟಿ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಹೀಗೆ ಉತ್ತರ ಭಾರತದ ಆಚರಣೆಗಳ ಅನುಕರಣೆಗಳೆಲ್ಲವೂ ನವ ಭಾರತದ ಮೌಲ್ಯಗಳು. ಹನ್ನೆರಡನೆಯ ಶತಮಾದ ಹಡಪದ ಅಪ್ಪಣ್ಣ ಎಂಬ ಶರಣ ಇದರ ಬಗ್ಗೆ ಹೀಗೆ ಹೇಳುತ್ತಾನೆ

’ತೀರ್ಥಯಾತ್ರೆ, ಲಿಂಗ ದರುಶನವ ಮಾಡಿ, ಕರ್ಮವ ಹಿಂಗಿಸಿಕೊಂಬೆನೆಂಬ ಭಂಗಿತನ ಮಾತ ಕೇಳಲಾಗದು’ ಎಂದು ತೀರ್ಥಯಾತ್ರೆ-ಜ್ಯೋತಿರ್ಲಿಂಗ ದರ್ಶನಗಳನ್ನು ಅವನು ಹೀಗಳೆಯುತ್ತಾನೆ. ಆದರೆ ಇಂದು ಸರ್ಕಾರವೇ ಅನೇಕ ಧರ್ಮಗಳ ನೆಲೆವೀಡಾದ ಕರ್ನಾಟಕದಲಿ (ಭಾರತದಲ್ಲಿಯೂ) ಒಂದು ಧರ್ಮದ ಇಂತಹ ಆಚರಣೆಗಳ ನೇತೃತ್ವ ವಹಿಸುತ್ತದೆ ಎಂದರೆ ಸಂವಿಧಾನದ ಮೌಲ್ಯ ಜಾತ್ಯತೀತತೆ ಏನಾಯಿತು?

ಒಕ್ಕೂಟ ವ್ಯವಸ್ಥೆಯ ಹರಣ

ಇಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ನಮ್ಮ ಒಕ್ಕೂಟ ವ್ಯವಸ್ಥೆಗೆ ಉಂಟಾಗಿರುವ ಅಪಾಯದ ಬಗ್ಗೆ ತೀವ್ರವಾಗಿ ಚರ್ಚಿಸಬೇಕಾಗಿದೆ. ಕೃಷಿ, ಕೃಷಿ ಮಾರುಕಟ್ಟೆ, ವಿದ್ಯುತ್, ಶಿಕ್ಷಣ, ಆರೋಗ್ಯ, ತೆರಿಗೆ – ಹೀಗೆ ಎಲ್ಲ ವಲಯಗಳಲ್ಲಿಯೂ ಒಕ್ಕೂಟ ಸರ್ಕಾರವು ರಾಜ್ಯಗಳ ಸಂವಿಧಾನದತ್ತ ಅಧಿಕಾರಗಳ ಹರಣದ ಕೆಲಸದಲ್ಲಿ ತೊಡಗಿದೆ. ರಾಜ್ಯಗಳ ಅಧಿಕಾರಗಳು, ಹಕ್ಕುಗಳು, ಜವಾಬ್ದಾರಿಗಳ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ಗೌರವವಿಲ್ಲ, ವಿಶ್ವಾಸವಿಲ್ಲ. ತಾವು ಮಹಾಚಕ್ರವರ್ತಿಯಂತೆ ಮತ್ತು ರಾಜ್ಯಗಳು ಸಾಮಂತ ಘಟಕಗಳಂತೆ ಒಕ್ಕೂಟ ಸರ್ಕಾರ ನಡೆದುಕೊಳ್ಳುತ್ತಿದೆ. ಈ ಸಾಮಂತವಾದಿ ಧೋರಣೆಯನ್ನು ಕರ್ನಾಟಕದ ಜನರಿಂದ ಆಯ್ಕೆಯಾದ ಸರ್ಕಾರ ವಿರೋಧಿಸಬೇಕು. ಆದರೆ ನಮ್ಮ ಡಬಲ್ ಎಂಜಿನ್ ಸರ್ಕಾರವು ಅದಕ್ಕೆ ’ತಲೆ ಬಾಗಿದೆ’. ಈ ’ತಲೆ ಬಾಗಿದೆ’ ಎಂಬ ನುಡಿಗಟ್ಟು ಕೂಡ ನಮ್ಮ ಮುಖ್ಯಮಂತ್ರಿ ಟಂಕಿಸಿದ್ದಾಗಿದೆ. ಸಾಮಂತವಾದಿತನಕ್ಕೆ ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು?

ರಾಜ್ಯಗಳು ಸಂಕಷ್ಟದಲ್ಲಿದ್ದಾಗ ಅವುಗಳ ನೆರವಿಗೆ ಬರಬೇಕಾದುದು ಒಕ್ಕೂಟ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯ. ಈ ಜವಾಬ್ದಾರಿಯನ್ನು ಒಕ್ಕೂಟ ಸರ್ಕಾರ ನಿರ್ವಹಿಸುತ್ತಿಲ್ಲ. ಇಂದು ಕರ್ನಾಟಕದ ಅಧಿಕಾರಗಳನ್ನೆಲ್ಲ ಒಕ್ಕೂಟ ಕಸಿದುಕೊಳ್ಳುತ್ತಿದೆ. ಉದಾ: ದೇವರಾಜ್ ಅರಸರ ನೇತೃತ್ವದಲ್ಲಿ ’ಉಳುವವರಿಗೆ ಭೂಮಿ’ ಎಂಬುದನ್ನು ಜಾರಿಗೊಳಿಸಿ ಲಕ್ಷಾಂತರ ರೈತರಿಗೆ ಭೂಮಿ ದೊರೆಯುವಂತೆ ಮಾಡಲಾಗಿತ್ತು. ಆದರೆ ಈಗ ಒಕ್ಕೂಟ ಸರ್ಕಾರದ ನಿರ್ದೇಶನದಲ್ಲಿ ’ಉಳ್ಳವರಿಗೆ ಭೂಮಿ’ ಎಂಬ ನಿಯಮದ ಭೂಸುಧಾರಣೆ ತಿದ್ದುಪಡಿ ಕಾಯಿದೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಈ ಸರ್ಕಾರವು ಉಳುವವರ ಸರ್ಕಾರವಾಗಿ ಉಳಿದಿಲ್ಲ, ಉಳಿದವರ ಸರ್ಕಾರವಾಗಿಯೂ ಉಳಿದಿಲ್ಲ. ಕಾರ್ಪೊರೇಟ್‌ಗಳ-ಖಾಸಗಿ ಬಂಡವಾಳಿಗರ ಸರ್ಕಾರವಾಗಿ ಮಾರ್ಪಟ್ಟಿದೆ. ಇದನ್ನು ತಡೆಯುವಲ್ಲಿ ಕರ್ನಾಟಕ ದಿಟ್ಟ ಹೆಜ್ಜೆ ಇಡಬೇಕಾಗಿದೆ.

ಈ ಬಗೆಯ ನಿರ್ಧಾರ ತೆಗೆದುಕೊಳ್ಳಲು ರಾಜ್ಯೋತ್ಸವವು ಒಂದು ಅವಕಾಶವಾಗಿದೆ. ಇದು ಕೇವಲ ಉತ್ಸವ-ಸಂಭ್ರಮ-ಉತ್ಸಾಹದ ಆಚರಣೆಯಾಗಿ ಮುಗಿಯಬಾರದು.

ಕರ್ನಾಟಕದ ರಾಜಕೀಯ ಪರಂಪರೆ

ಕರ್ನಾಟಕ ರಾಜಕೀಯ ಪರಂಪರೆಯು ಅತ್ಯಂತ ಪ್ರಗತಿಪರವೂ, ಜನಪರವೂ, ಸಮಾನತೆ ಪರವೂ, ಉಳುವವರ ಪರವೂ, ದುಡಿಯುವ ಕಾರ್ಮಿಕರ ಪರವೂ ಆಗಿ ನಡೆದುಕೊಂಡು ಬಂದಿದೆ. ಕೆಂಗಲ್ ಹನುಮಂತಯ್ಯ ಮತ್ತು ಎಸ್. ನಿಜಲಿಂಗಪ್ಪ ಅವರು ಏಕೀಕರಣದ ರೂವಾರಿಗಳು. ದೇವರಾಜ ಅರಸ್ ಅವರ ಆಡಳಿತದಲ್ಲಿ ಉಳುವವರಿಗೆ ಭೂಮಿ ಎಂಬುದು ಸಾಕಾರವಾಯಿತು. ರಾಮಕೃಷ್ಣ ಹೆಗ್ಗಡೆ ಆಡಳಿತದಲ್ಲಿ ಪಂಚಾಯತ್ ರಾಜ್ ವಿಕೇಂದ್ರೀಕರಣ ಜಾರಿಗೆ ಬಂತು. ದೇವೇಗೌಡರ ಸರ್ಕಾರ ನೀರಾವರಿ ಬೆಳವಣಿಗೆಗೆ ಒತ್ತು ನೀಡಿತ್ತು. ಸಿದ್ದರಾಮಯ್ಯನವರ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಹೆಸರಾಗಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಸರ್ಕಾರ ಚರಿತ್ರೆಯಲ್ಲಿ ’ಅಕ್ರಮ ಗಣಿಗಾರಿಕೆ ಸರ್ಕಾರ’ ಎಂಬ ಅಭಿದಾನಕ್ಕೂ ಮತ್ತು ಬಸವರಾಜ್ ಬೊಮ್ಮಾಯಿ ಸರ್ಕಾರ ’ಬ್ರಾಹ್ಮಣ್ಯದ ಹೇರಿಕೆ ಸರ್ಕಾರ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಚರಿತ್ರೆಯಲ್ಲಿ ದಾಖಲಾಗುತ್ತವೆ. ಇವರಿಬ್ಬರೂ ಪ್ರತಿನಿಧಿಸುವ ಸರ್ಕಾರಗಳು ನಮ್ಮ ನಿಜಲಿಂಗಪ್ಪ-ಕೆಂಗಲ್‌ಹನುಮಂತಯ್ಯ-ದೇವರಾಜಅರಸ್-ರಾಮಕೃಷ್ಣಹೆಗಡೆ-ದೇವೇಗೌಡ ಪ್ರತಿನಿಧಿಸುವ ಕರ್ನಾಟಕ ರಾಜಕೀಯ ಪರಂಪರೆಗೆ ಒಂದು ಕಳಂಕ.

ಇದನ್ನೂ ಓದಿ: ರಾಷ್ಟ್ರೀಯ ಭಾಷೆಯ ಕಲ್ಪನೆ ಮತ್ತು ಕನ್ನಡದ ಅಸ್ಮಿತೆ

ನಮ್ಮ ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕಸ್ಥರೆಲ್ಲ ತೀವ್ರವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ನಮಗೆ ಬ್ಯಾಹ್ಮಣ್ಯ ಪ್ರಣೀತ ಸರ್ಕಾರ ಬೇಕೋ, ತ್ರೈವರ್ಣೀಕ ಪ್ರಣೀತ ಸಂಸ್ಕೃತಿ ಬೇಕೋ ಅಥವಾ ಬಸವ-ಕನಕ-ಕುವೆಂಪು ಕಟ್ಟಿದ ಸಮಾನತೆ-ಸಹಬಾಳ್ವೆಯ ’ಸರ್ವ ಜನಾಂಗದ ಶಾಂತಿಯ ತೋಟದ, ದಯವೇ ಧರ್ಮದ ಮೂಲವಾದ’ ಸಂಸ್ಕೃತಿ ಬೇಕೋ ಎಂಬುದನ್ನು; ನಿಜಲಿಂಗಪ್ಪ-ಕೆಂಗಲ್ ಹನುಮಂತಯ್ಯ-ದೇವರಾಜ್ ಅರಸ್-ರಾಮಕೃಷ್ಣ ಹೆಗಡೆ-ದೇವೇಗೌಡ ಪ್ರತಿನಿಧಿಸುವ ರಾಜಕೀಯ ಪರಂಪರೆ ಬೇಕೋ ಅಥವಾ ಯಾವತ್ತೂ ಬಹುಮತ ಪಡೆಯದೆ, ’ಆಪರೇಶನ್ ಕಮಲ’ ಎಂಬ ರಾಜಕೀಯ ಕೊಳಕು ಭ್ರಷ್ಠಾಚಾರದ ಪರಂಪರೆಯನ್ನು ಹುಟ್ಟು ಹಾಕುತ್ತಿರುವ ಡಬಲ್ ಎಂಜಿನ್- ಸಾಮಂತವಾದಿ ರಾಜಕೀಯ ಪರಂಪರೆ ಬೇಕೋ ಎಂಬುದನ್ನು ತೀರ್ಮಾನಿಸುವ ಸಂಧಿ ಕಾಲ ಇದಾಗಿದೆ. ಸಂವಿಧಾನಾತ್ಮಕ ಒಕ್ಕೂಟ ತತ್ವಕ್ಕೆ ಬಂದಿರುವ ಅಪಾಯವು ಕನರ್ಶಟಕದ ’ವಿಶಿಷ್ಟತೆ’ಗೆ ಅದರ ಅನನ್ಯತೆಗೆ, ಅದರ ಭಾಷಾ ಬಹುತ್ವಕ್ಕೆ, ಸಾಂಸ್ಕೃತಿಕ ಬಹುವಚನಕ್ಕೆ ಬಮದಿರುವ ಅಪಾಯವಾಗಿದೆ. ಇದನ್ನು ಪರಾಮರ್ಶಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಒಂದು ನಿರ್ಣಾಯಕ ಆತ್ಮಾವಲೋಕನ ನಡೆಯಲಿ ಎಂದು ಹಾರೈಸೋಣ.

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿ.ಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...