Homeಮುಖಪುಟಸುಪ್ರೀಂಕೋರ್ಟ್ ಆದೇಶದ ನಂತರ ಸಿಎಎ ವಿರುದ್ಧದ ಮುಂದಿನ ಹೋರಾಟ ಹೇಗಿರಬೇಕು? -ಯೋಗೇಂದ್ರ ಯಾದವ್

ಸುಪ್ರೀಂಕೋರ್ಟ್ ಆದೇಶದ ನಂತರ ಸಿಎಎ ವಿರುದ್ಧದ ಮುಂದಿನ ಹೋರಾಟ ಹೇಗಿರಬೇಕು? -ಯೋಗೇಂದ್ರ ಯಾದವ್

- Advertisement -
- Advertisement -

ಕೃಪೆ: ದಿ ಪ್ರಿಂಟ್‌

-ಯೋಗೇಂದ್ರ ಯಾದವ್

ಅನುವಾದ: ನಿಖಿಲ್ ಕೋಲ್ಪೆ

ಸುಪ್ರೀಂಕೋರ್ಟಿನ ಆದೇಶವು ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರೋಧಿ ಹೋರಾಟದ ಮೊದಲ ಹಂತದ ಮುಕ್ತಾಯವನ್ನು ಸೂಚಿಸುತ್ತದೆ. ಭಾರತೀಯರು ಎರಡನೇ ಹಂತದಲ್ಲಿ ಏನು ಮಾಡಬೇಕು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
….
ಗಣರಾಜ್ಯೋತ್ಸವದ 70ನೇ ವರ್ಷಾಚರಣೆಯ ಕೆಲವೇ ದಿನಗಳ ಮೊದಲು ಸುಪ್ರೀಂಕೋರ್ಟ್ ಒಂದು ಗಂಭೀರವಾದ ನೆನಪನ್ನು ಮಾಡಿಕೊಟ್ಟಿದೆ. ಅದೆಂದರೆ, ಗಣರಾಜ್ಯವನ್ನು ಮರಳಿಪಡೆಯುವ ಹೋರಾಟವನ್ನು ಜನರೇ ಮಾಡಬೇಕೆಂಬುದು.

ಪೌರತ್ವ (ತಿದ್ದುಪಡಿ) ಕಾಯಿದೆ ಅಥವಾ ಸಿಎಎಯನ್ನು ವಿರೋಧಿಸುವ ಅರ್ಜಿಗಳ ಬಹು ನಿರೀಕ್ಷಿತ ವಿಚಾರಣೆಯು, ಅನೇಕ ಕಾನೂನು ತಜ್ಞರು ಭಯಪಟ್ಟಂತೆಯೇ ಒಂದು ಮಾಮೂಲಿ ಮತ್ತು ಯಾವುದೇ ಮಹತ್ವವಿಲ್ಲದ ಪ್ರಕ್ರಿಯೆಯಾಗಿಬಿಟ್ಟಿತು. ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್ ಅವರು 143 ಅರ್ಜಿಗಳಿಗೆ ಪ್ರತಿಕ್ರಿಯಿಸಲು ಇನ್ನಷ್ಟು ಕಾಲಾವಕಾಶ ಕೇಳಿದರು. ನ್ಯಾಯಾಲಯವು ನರೇಂದ್ರ ಮೋದಿ ಸರಕಾರಕ್ಕೆ ಇನ್ನೂ ನಾಲ್ಕು ವಾರಗಳ ಕಾಲಾವಕಾಶ ಕೊಟ್ಟಿತು. ಸಿಎಎ ಮತ್ತು ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ (ಎನ್‌ಪಿಆರ್) ಕಾರ್ಯಾಚರಣೆಗೆ ತಡೆಯಜ್ಞೆ ನೀಡುವಂತೆ, ಅಥವಾ ಕೊನೆಯ ಪಕ್ಷ ಕೆಲವು ತಿಂಗಳುಗಳ ಕಾಲ ಅದನ್ನು ಮುಂದೂಡುವಂತೆ ಅರ್ಜಿದಾರರು ಕೋರಿದ್ದರು. ಸದ್ಯಕ್ಕೆ ಈ ವಿಷಯವನ್ನು ಮುಟ್ಟುವ ಇರಾದೆ ತನಗಿಲ್ಲವೆಂದು ಸುಪ್ರೀಂಕೋರ್ಟ್ ತೋರಿಸಿಕೊಟ್ಟಿತು.

ಹಾಗೆ ನೋಡಿದರೆ ಖಂಡಿವಾಗಿಯೂ ಸುಪ್ರೀಂಕೋರ್ಟ್ ಆದೇಶದಲ್ಲಿ ತಪ್ಪೇನಿಲ್ಲ. ನ್ಯಾಯಾಲಯವು ತನ್ನನ್ನು ತಾನು ಪ್ರಕ್ರಿಯಾತ್ಮಕ ವಿಷಯಗಳಿಗೆ ಸೀಮಿತಗೊಳಿಸಿಕೊಂಡು, ಈ ವಿಷಯದ ಪೂರ್ವತೀರ್ಮಾನ ಮಾಡದಂತಹ ಆದೇಶ ಹೊರಡಿಸಿತು. ಸುಪ್ರೀಂಕೋರ್ಟ್ ಸಿಎಎ ವಿರೋಧಿ ಅರ್ಜಿಗಳ ವಿಚಾರಣೆಯನ್ನು ಸಾಂವಿಧಾನಿಕ ಪೀಠಕ್ಕೆ ಒಪ್ಪಿಸುವ ಇಂಗಿತ ವ್ಯಕ್ತಪಡಿಸಿದ್ದರೂ, ಈ ವಿಷಯವು ಅದಕ್ಕೆ ಅರ್ಹವಾದುದಲ್ಲ. 140ಕ್ಕೂ ಹೆಚ್ಚು ಅರ್ಜಿಗಳಿಗೆ ಉತ್ತರಿಸಲು ಮೋದಿ ಸರಕಾರಕ್ಕೆ ಕಾಲಾವಕಾಶ ಬೇಕಿತ್ತು. ಸಿಎಎ ಮತ್ತು ಎನ್‌ಪಿಆರ್‌ಗಳಿಗೆ ತಡೆಯಾಜ್ಞೆ ಕೋರುವ ಅರ್ಜಿಯನ್ನು ತಿರಸ್ಕರಿಸಲಾಗಿಲ್ಲ. ಬದಲಾಗಿ ಮುಂದಿನ ವಿಚಾರಣೆಗೆ ಮುಂದೂಡಲಾಗಿದೆ ಅಷ್ಟೇ. ಸುಪ್ರೀಂಕೋರ್ಟ್ ಈ ವಿಷಯವನ್ನು ಪರಿಶೀಲಿಸುತ್ತಿರುವುದರಿಂದ ಹೈಕೋರ್ಟ್‌ಗಳು ಈ ಕುರಿತ ಅರ್ಜಿಗಳ ವಿಚಾರಣೆ ನಡೆಸದಂತೆ ಸೂಚಿಸುವುದು ತಾರ್ಕಿಕವೇ ಆಗಿದೆ.

ನಾಗರಿಕರ ಭಯದ ಅವಗಣನೆ

ಆದರೆ ಇದು ಮಾಮೂಲಿ ವಿಷಯವೇನಲ್ಲ. ಸಿಎಎ ವಿರುದ್ಧದ ಕಾನೂನು ಸಮರವು ಭಾರತೀಯ ಸಂವಿಧಾನದ ಸ್ವರೂಪ, ಆಶಯ ಮಾತ್ರವಲ್ಲ, ಅದರ ಆತ್ಮವನ್ನೇ ರಕ್ಷಿಸುವ ಕುರಿತಾಗಿದೆ. ನಾನೇನೂ ವಕೀಲನಲ್ಲ. ಆದರೆ, ಭಾರತೀಯ ಸಂವಿಧಾನವನ್ನು ಅಧ್ಯಯನ ಮಾಡಿರುವ ಒಬ್ಬ ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿ, ಸಿಎಎಯು ಸಂವಿಧಾನವು ಪ್ರತಿಪಾದಿಸುವ ಪ್ರತಿಯೊಂದರ ಮಾನಗೇಡಿ  ಉಲ್ಲಂಘನೆಯ ಸರಳ ಪ್ರಕರಣ ಎಂದು ಊಹಿಸಬಲ್ಲೆ. ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಬೇರೆಯೇ ನಿಲುವು ತೆಗೆದುಕೊಳ್ಳುವ ನಿರೀಕ್ಷೆ ನನ್ನದಾಗಿತ್ತು.

ಭಾರತದಾದ್ಯಂತ ನಡೆಯುತ್ತಿರುವ ಸಿಎಎ ವಿರೋಧಿ ಬೃಹತ್ ಚಳವಳಿಗೆ ನ್ಯಾಯಾಂಗ ಪ್ರತಿಕ್ರಿಯಿಸಬೇಕು ಎಂಬ ನಿರೀಕ್ಷೆಯಾಗಲೀ, ಆಶಯವಾಗಲೀ ನನ್ನದಲ್ಲ. ಆದರೆ, ದೇಶದ ಸಾಮಾಜಿಕ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಕೋಟಿಗಟ್ಟಲೆ ಭಾರತೀಯರ ಮನಸ್ಸಿನಲ್ಲಿ ಸಿಎಎ ಹುಟ್ಟುಹಾಕಿರುವ ಭಯವನ್ನು ಪರಿಹರಿಸಲು ನ್ಯಾಯಾಧೀಶರುಗಳು  ಒಂದು ದಾರಿಯನ್ನು ಹುಡುಕಬೇಕೆಂಬ ನಿರೀಕ್ಷೆಯನ್ನು ಮಾಡುವುದು ಅನಪೇಕ್ಷಿತವೆ? ಯಾವತ್ತಿನಂತೆ, ಮಾಮೂಲಿ ಎಂಬಂತೆ ವಿಚಾರಣೆ ನಡೆಸುವ ವಿಧಾನವು, ಜನರು ಹತಾಶೆಯಿಂದ ಒಂದು ಸಾಂವಿಧಾನಿಕ ಆದೇಶದ ಭರವಸೆಯನ್ನು ಎದುರುನೋಡುತ್ತಿರುವ ಸಂದರ್ಭದಲ್ಲಿ, ಯಾವುದೇ ವಿಶ್ವಾಸವನ್ನು ಹುಟ್ಟಿಸದು.

ಖಂಡಿತವಾಗಿಯೂ ನಾವು ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬರುವ ಮೊದಲು ಮುಂದಿನ ಕಲಾಪಗಳಿಗಾಗಿ ಕಾಯಬೇಕು. ಆದರೆ, ಒಂದು ಪಾಠ ಸ್ಪಷ್ಟವಾಗಿದೆ. ಸುಪ್ರೀಂಕೋರ್ಟ್- ಯಾವ ಸಂವಿಧಾನವನ್ನು ರಕ್ಷಿಸುವ ಉದ್ದೇಶದಿಂದ ರಚಿಸಲಾಗಿದ್ದ ಒಂದು ಕಾವಲುಗೋಪುರವಾಗಿತ್ತೋ, ಇಂದಿನ ಸುಪ್ರೀಂಕೋರ್ಟ್ ಅದಾಗಿ ಉಳಿದಿಲ್ಲ. ಇನ್ನೂ ಕೂಡಾ ಅದು ಆಗಾಗ ಸಣ್ಣಮಟ್ಟಿನ ಪರಿಹಾರಗಳನ್ನು ಒದಗಿಸಬಹುದು. ಆದರೆ, ಅದು ಆಕ್ರಮಣಕಾರಿಯಾದ ಈ ಮೋದಿ ಆಡಳಿತದ ಎದುರು ಸಂವಿಧಾನವನ್ನು ರಕ್ಷಿಸಲು ಏನು ಬೇಕೋ, ಅದನ್ನು ಹೊಂದಿಲ್ಲ. ಇತ್ತೀಚಿನ ಅದರ ಕೆಲವು ತೀರ್ಮಾನಗಳನ್ನು ಪರಿಗಣಿಸಿದರೆ, ಈಗಿನ ಸುಪ್ರೀಂಕೋರ್ಟ್ ಸಂವಿಧಾನದ ರಕ್ಷಣೆಯ ಯುದ್ಧದಲ್ಲಿ ಒಲ್ಲದ ಮನಸ್ಸಿನ ಸೈನಿಕನಂತೆ ಕಾಣುತ್ತಿದೆ. ಕೆಲವೊಮ್ಮೆ ಈ ಮಾನನೀಯ ನ್ಯಾಯಾಧೀಶರುಗಳು ಈ ಯುದ್ಧದಲ್ಲಿ ಯಾರ ಪಕ್ಷದಲ್ಲಿ ಇದ್ದಾರೆ ಎಂದು ಹೇಳುವುದೇ ಕಷ್ಟವಾಗುತ್ತಿದೆ ಎಂದು ಕಾನೂನು ವೀಕ್ಷಕರು ಹೇಳಿದ್ದಾರೆ.

ಇದೀಗ ಜನರಿಗೆ ಬಿಟ್ಟ ವಿಷಯ

ಆದುದರಿಂದ, ತತ್ವಶಃ ಗಣರಾಜ್ಯವನ್ನು ಮರಳಿಪಡೆಯುವ ಈ ಯುದ್ಧವು ನ್ಯಾಯಾಲಯಗಳು, ಸಂಸತ್ತು ಅಥವಾ ಅದಕ್ಕೆಂದೇ ರಚಿತವಾದ ಸಂಸ್ಥೆಗಳ ಅಂಗಣದಲ್ಲಿ ನಡೆಯದು. ಹೋರಾಟವನ್ನು ಪ್ರಜಾಸತ್ತಾತ್ಮಕ ಮತ್ತು ಅಹಿಂಸೆಯ ಹಾದಿಯನ್ನು ಅನುಸರಿಸುವ ಮೂಲಕ ಬೀದಿಗೆ ಕೊಂಡೊಯ್ಯಬೇಕಾಗಿದೆ. ನಮಗೆ ನಾವೇ ಕೊಟ್ಟುಕೊಂಡಿರುವ ಈ ಸಂವಿಧಾನವನ್ನು ರಕ್ಷಿಸಲು ನಾವು, ಭಾರತದ ಜನರೇ ಮುಂದೆ ಬರಬೇಕಾಗಿದೆ.

ಸಮಾನ ಪೌರತ್ವಕ್ಕಾಗಿ ನಡೆಯುತ್ತಿರುವ ಚಳುವಳಿಯೆಂದರೆ ಇದುವೇ ಅಲ್ಲದೆ, ಬೇರಲ್ಲ. ಈಗ ನ್ಯಾಯಾಲಯದ ವಿಚಾರಣೆ ನಮ್ಮ ಹಿಂದಿದ್ದು, ದೀರ್ಘವಾದ ಕಾನೂನು ಸಮರ ನಮ್ಮ ಮುಂದಿರುವಾಗ, ಸ್ವಲ್ಪ ವಿರಮಿಸಿ, ಈ ರಾಷ್ಟ್ರವ್ಯಾಪಿ ಚಳವಳಿಯ ಮುಂದಿನ ಹಾದಿಯ ಕುರಿತು ಚಿಂತಿಸಬೇಕಾದ ಕ್ಷಣವಿದು. ಒಂದು ರೀತಿಯಲ್ಲಿ ಈ ಕ್ಷಣವು ಸಿಎಎ- ಎನ್‌ಆರ್‌ಸಿ-ಎನ್‌ಪಿಆರ್ ವಿರೋಧಿ ಚಳವಳಿಯ ಮೊದಲ ಹಂತದ ಮುಕ್ತಾಯವನ್ನು ಗುರುತಿಸುತ್ತದೆ.

ದೇಶದ ಬಹುತೇಕ ಭಾಗಗಳಿಗೆ ಈ ಹಂತವು ಜನವರಿ 30ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಮಾನವ ಸರಪಳಿಯೊಂದಿಗೆ ಮುಕ್ತಾಯವಾಗಲಿದೆ. ಉತ್ತರ ಪ್ರದೇಶ ಇದಕ್ಕೆ ಹೊರತಾಗಿರಬಹುದು. ಏಕೆಂದರೆ, ಯಾವುದೇ ರೀತಿಯ ಪ್ರತಿಭಟನೆಗಳ ಮೇಲೆ ಒಂದು ತಿಂಗಳ ಕಾಲದ ಪೊಲೀಸ್ ದಮನದ ಬಳಿಕ ಅಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಗಳು ಈಗತಾನೇ ಪುನರಾರಂಭಗೊಂಡಿವೆ. ಇದು ಎರಡನೇ ಹಂತದ ಚಳವಳಿಯ ಕುರಿತು ಯೋಚಿಸಬೇಕಾದ ಕಾಲ.

ಮೊದಲ ಹಂತದ ಚಳವಳಿಯು ಒಂದು ತಿಂಗಳ ಹಿಂದೆ ಊಹಿಸಲೂ ಸಾಧ್ಯವಿಲ್ಲದಿದ್ದ ಯಶಸ್ಸನ್ನು ಸಾಧಿಸಿದೆ. ಎಲ್ಲದ್ದಕ್ಕಿಂತ ಮೊದಲಾಗಿ ಅದು, ಆರು ವರ್ಷಗಳಿಂದ ತೀವ್ರ ಆತಂಕದಿಂದ ಕಳೆದ ಮುಸ್ಲಿಂ ಸಮುದಾಯದ ಮೌನವನ್ನು ಮುರಿದಿದೆ. ಆ ಸಮುದಾಯವು ಈಗ ತನ್ನ ಧ್ವನಿ ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆದಿದೆ. ಎರಡನೆಯದಾಗಿ, ಸಿಎಎ ವಿರೋಧಿ ಚಳವಳಿಯು ಈ ತನಕದ ಯಾವುದೇ ಚಳವಳಿಯು ತುಳಿಯದ ಹಾದಿಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ಮೂರನೆಯದಾಗಿ, ಅದು ಜನರಲ್ಲಿ ಸ್ವಯಂಸ್ಫೂರ್ತಿಯನ್ನು ಮೂಡಿಸಿದ್ದು, ರಾಜಕೀಯ ನಾಯಕರು ಮತ್ತು ಸಂಘಟನೆಗಳು ಅವರನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಮಹಿಳೆಯರು ಮತ್ತು ಯುವಜನರ ಭಾಗವಹಿಸುವಿಕೆಯು ಗಮನಾರ್ಹವಾಗಿದ್ದು, ದೀರ್ಘಕಾಲೀನ ಮಹತ್ವವನ್ನು ಹೊಂದಿದೆ. ನಾಲ್ಕನೆಯದಾಗಿ, ಸ್ಥಾಪಿತ ರಾಜಕೀಯ ಮತ್ತು ಧಾರ್ಮಿಕ ನಾಯಕರನ್ನು ಬದಿಗೆ ಸರಿಸಿ, ಹೊಸ ನಾಯಕರ ಗಡಣವೇ ಹೊರಹೊಮ್ಮಿದೆ. ಐದನೆಯದಾಗಿ, ಚಳವಳಿಯು ಸಂವಹನ- ಸಂಪರ್ಕ ಮತ್ತು ತಳಮಟ್ಟದ ಕಾರ್ಯಾಚರಣೆಯಲ್ಲಿ ಅಸಾಧಾರಣವಾದ ಸೃಜನಶೀಲತೆಗೆ ಕಾರಣವಾಗಿದೆ.

ವಿಲೀನ, ಹೊಂದಾಣಿಕೆ, ಚದರುವಿಕೆ, ಹೋರಾಟ

ಆದರೂ, ಸಂಭ್ರಮಕ್ಕಿದು ಕಾಲವಲ್ಲ. ಮೋದಿ ಸರಕಾರವು ಇನ್ನೂ ದೃಢವಾಗಿ ನಿಂತಿದೆ ಎಂದಾದರೆ, ಅದಕ್ಕೆ ಕಾರಣ, ಅದು ಈಗಾಗಲೇ ಕಳೆದುಕೊಂಡಿರುವ ವಿಶ್ವಾಸಾರ್ಹತೆಯನ್ನು ಮರಳಿ ಗಳಿಸುವ ಆಸೆಯನ್ನು ಹೊಂದಿರುವುದು. ಇಡೀ ಚಳವಳಿಯು ಮುಸ್ಲಿಮರ ಪುಂಡು ಗುಂಪುಗಳ ಕೆಲಸ ಎಂದು ಚಿತ್ರಿಸಲು ಮಾಡಿದ ಯತ್ನ ವಿಫಲವಾಗಿರುವಂತೆಯೇ, ಈಶಾನ್ಯ ರಾಜ್ಯಗಳ ಹೊರಗೆ ಪ್ರತಿಭಟನಕಾರರ ಬಹುದೊಡ್ಡ ಪಾಲು ಮುಸ್ಲಿಮರೇ ಆಗಿದ್ದರೆಂಬುದು ವಾಸ್ತವ. ಕೆಲವು ಭಾರೀ ಪ್ರತಿಭಟನೆಗಳು ನಡೆದಿರುವುದರಿಂದ, ಈ ಬಲಪ್ರದರ್ಶನವು ಸಹಾನುಭೂತಿಗಿಂತ ಹೆಚ್ಚಾಗಿ ಭಯವನ್ನೇ ಹುಟ್ಟಿಸುವ ಸಾಧ್ಯತೆಯಿದೆ. ಸ್ವಯಂಸ್ಫೂರ್ತಿಯು ಚಳವಳಿಯ ಬಲವಾಗಿದ್ದು, ಇನ್ನೂ ದಣಿವಿನ ಛಾಯೆ ಕಾಣದಿರುವುದರಿಂದ ಚಳವಳಿಯು ತದ್ವಿರುದ್ಧ ಉದ್ದೇಶಗಳಿಗೆ ಬಳಕೆಯಾಗಬಹುದು. ಚಳವಳಿಯ ಮೂರು ಎಳೆಗಳು- ಅಸ್ಸಾಮಿನ ಪ್ರತಿಭಟನೆ, ಮುಸ್ಲಿಮರ ಪ್ರತಿಭಟನೆ, ಮತ್ತು ಯುವಜನರ ಪ್ರತಿಭಟನೆ- ಇವುಗಳು ಇನ್ನೂ ಒಂದರೊಂದಿಗೆ ಇನ್ನೊಂದು ಸಮನ್ವಯ ಹೊಂದಿಲ್ಲ.

ಜನವರಿ 30ರ ರಾಷ್ಟ್ರವ್ಯಾಪಿ ಮಾನವ ಸರಪಳಿಯ ಬಳಿಕ ಸಿಎಎ ವಿರುದ್ಧದ ಚಳವಳಿಯು ಎರಡನೇ ಹಂತವನ್ನು ಪ್ರವೇಶಿಸುತ್ತದೆ. ಕಾರ್ಯಾಚರಣೆಯ ಗಮನವು ದೊಡ್ಡ ನಗರ-ಪಟ್ಟಣಗಳಲ್ಲಿ ಬೃಹತ್ ಸಭೆಗಳನ್ನು ಆಯೋಜಿಸುವುದರಿಂದ ಚಿಕ್ಕ ಪಟ್ಟಣಗಳು ಮತ್ತು ಹಳ್ಳಿಗಳತ್ತ ಪಲ್ಲಟಗೊಳ್ಳಬೇಕಾಗಿದೆ. ಸಂವಹನವು ಈಗಾಗಲೇ ಬದಲಾಗಿರುವವರು ಮತ್ತು ನೇರವಾಗಿ ಬಾಧಿತರಾಗುವವರಿಂದ ಇತರರ, ಮುಖ್ಯವಾಗಿ ತಮಗೆ ಹೊಸ ಕಾನೂನಿನಿಂದ ಯಾವುದೇ ಅಪಾಯವಿಲ್ಲ ಎಂದು ಭಾವಿಸುವ ಹಿಂದೂಗಳತ್ತ ಪಲ್ಲಟಗೊಳ್ಳಬೇಕಾಗಿದೆ. ದಲಿತರು, ಆದಿವಾಸಿಗಳು, ಅಲೆಮಾರಿ ಸಮುದಾಯಗಳತ್ತ ವಿಶೇಷವಾಗಿ ಗಮನಹರಿಸಬೇಕಾಗಿದೆ. ಯಾಕೆಂದರೆ ಹೊಸ ಕಾನೂನಿನಿಂದ ಬಹಳಷ್ಟು ಕಳೆದುಕೊಳ್ಳುವವರು ಅವರೇ. ಪ್ರತಿಭಟನೆಯ ವಿಧಾನವನ್ನು ಆಯ್ಕೆ ಮಾಡುವಾಗ ಶಹೀನ್‌ಬಾಗ್ ಮಾದರಿಯ ಪ್ರತಿಭಟನೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಅವು ಉಳಿದ ಭಾರತೀಯರಲ್ಲಿ ಸಹಾನುಭೂತಿ ಮೂಡಿಸಬಲ್ಲವು. ಚಳವಳಿಯು ಸಿಎಎ-ಎನ್‌ಆರ್‌ಸಿ- ಎನ್‌ಪಿಆರ್ ವಿರೋಧವನ್ನು ಮೀರಿದ ತನ್ನದೇ ಧನಾತ್ಮಕವಾದ ಕಾರ್ಯಕ್ರಮವನ್ನು ಕಂಡುಕೊಳ್ಳಬೇಕು. ಆದು ಜನರು ವ್ಯಾಪಕವಾಗಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಜೊತೆ ತಳಕುಹಾಕಿಕೊಂಡಿರಬೇಕು. ಸಮಾನ ಪೌರತ್ವದ ಚಳುವಳಿಯು ಭಾರತದ ಪರಿಕಲ್ಪನೆಯ ಪುನರುತ್ಥಾನದ ಚಳವಳಿಯೂ ಆಗಬೇಕು.

(ಲೇಖಕರು ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...