Homeಮುಖಪುಟಏನಾಗಿದೆ ಈ ಮಠಾಧಿಪತಿಗಳಿಗೆ!?

ಏನಾಗಿದೆ ಈ ಮಠಾಧಿಪತಿಗಳಿಗೆ!?

- Advertisement -
- Advertisement -

ತಮ್ಮ ಜಾತಿ ಮೀಸಲಾತಿಗಾಗಿ, ಸಚಿವ ಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿಬಾಯಿ ಬಿಡುವ ಮಠಾಧಿಪತಿಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ?

ಧರ್ಮ ಮಾನವನನ್ನು ಸೃಷ್ಟಿಸಲಿಲ್ಲ. ಮಾನವ ಧರ್ಮವನ್ನು ಸೃಷ್ಟಿಸಿದ. ಧರ್ಮಗಳು ಬೆಳೆದಂತೆ ಧರ್ಮಗುರುಗಳು, ಮೌಲ್ವಿಗಳು, ಪಾದ್ರಿಗಳು, ಮೌಢ್ಯ ಕಂದಾಚಾರದ ಕಟ್ಟುಪಾಡುಗಳನ್ನು ಹೇರುತ್ತಾ ಬಂದರಲ್ಲದೆ ಯಾವಾಗ ಧರ್ಮ ರಾಜಕಾರಣದಲ್ಲಿ ಬೆರೆಯಿತೋ ಕೋಮುವಾದದ ರೂಪ ಪಡೆಯಿತು. ಏನಾಗಿದೆ ಕೆಲವು ಮಠಾಧೀಶರಿಗೆ? ತಮ್ಮ ಸ್ಥಾನಮಾನ ಪೀಠದ ಗೌರವವನ್ನು ಒತ್ತೆಯಿಟ್ಟು ತಮ್ಮ ತಮ್ಮ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡಲು ಬಹಿರಂಗವಾಗಿಯೇ ಪ್ರಭಾವ ಬೀರುತ್ತಾ ಧಮಕಿಹಾಕುವ ಮಟ್ಟಕ್ಕೆ ಇಳಿದಿದ್ದಾರೆ. ತಮ್ಮ ಜಾತಿಗೆ ಇಷ್ಟೇ ಮೀಸಲಾತಿ ಕೊಡಬೇಕೆಂಬ ಹಕ್ಕೊತ್ತಾಯಕ್ಕಿಳಿಯುವುದು ಇಲ್ಲವಾದರೆ ನಮ್ಮ ಜಾತಿಯ ಮಂತ್ರಿಗಳು ಶಾಸಕರೆಲ್ಲರಿಂದ ರಾಜೀನಾಮೆ ಕೊಡಿಸಿದರೆ ಸರ್ಕಾರ ಉರುಳುತ್ತದೆಯೇ ಎಂಬ ಬಗ್ಗೆ ಅರಿವಿರಲಿ, ಎಂದೆಲ್ಲಾ ಪ್ರಶ್ನಿಸುವ ಅಧೋಗತಿಗೆ ಇಳಿಯುತ್ತಿದ್ದಾರೆ. ಯಾವುದೇ ಒಂದು ಜಾತಿಯಿಂದ ಯಾವ ರಾಜಕಾರಣಿಯೂ ಗೆಲ್ಲಲು ಸಾಧ್ಯವಿಲ್ಲವೆಂಬ ಪರಿವೇ ಇಲ್ಲದೆ ಗುಟುರುಹಾಕುವ ಇಂಥವರು ಮತದಾರರನ್ನು ಅಪಮಾನಿಸುತ್ತಿದ್ದಾರೆ. ಇದೆಲ್ಲಾ ಏಕೆ ಹೇಳಬೇಕಾಯಿತು ಎಂದರೆ ಇತ್ತೀಚೆಗೆ ಪಂಚಮಸಾಲಿ ಮಠಾಧೀಶರೊಬ್ಬರು ಬಹಿರಂಗವಾಗಿಯೇ ವೇದಿಕೆಯಲ್ಲಿ ನಮ್ಮವರು ಹದಿಮೂರು ಜನ ಶಾಸಕರಲ್ಲಿ ಮೂವರಿಗಾದರೂ ಸಚಿವ ಸ್ಥಾನ ಕೊಡಿ, ಇಲ್ಲವಾದರೆ ಕೆಳಗಿಳಿಯಬೇಕಾಗುತ್ತದೆಂದು ಮುಖ್ಯಮಂತ್ರಿಗೆ ಉರಿಗಣ್ಣು ಬಿಡುತ್ತಾ ಕೆಂಡಕಾರಿದ್ದನ್ನು ಮಾಧ್ಯಮಗಳು ತೋರಿಸಿವೆ. ಮರುದಿನದ ಸಭೆಯಲ್ಲಿ ವಾಲ್ಮೀಕಿ ಮಠದ ಸ್ವಾಮೀಜಿಯೊಬ್ಬರು ನಾವೂ ನಿಮ್ಮ ಬೆಂಬಲಕ್ಕಿದ್ದೇವೆಯೆಂದು ಬೆಂಬಲ ವ್ಯಕ್ತಪಡಿಸಿದರೆ, ಉಳಿದ ಮಠಾಧಿಪತಿಗಳು ಕಾವಿ ತೊಟ್ಟಿದ್ದೇವೆಂದು ಮರೆತು ಪರ ವಿರೋಧದ ಡಿಬೇಟ್‍ಗೆ ಇಳಿದಿರುವುದು ಧಾರ್ಮಿಕ ದುರಂತವಲ್ಲವೆ?

ಕುಂಚಿಟಿಗರ ಸ್ವಾಮಿಯ ನೇತೃತ್ವದಲ್ಲಿ ಕೆಲವು ಓಬಿಸಿಗಳ ಜೊತೆ ಮಾದಾರಪೀಠದ ಸ್ವಾಮಿಗಳು ಮುಖ್ಯಮಂತ್ರಿಗಳ ಧವಳಗಿರಿ ನಿವಾಸಕ್ಕೆ ತೆರಳಿ ಅವರ ಕಣ್ಣೊರೆಸಿ ಬೆಂಬಲಿಸಿ, ಸೆಡ್ಡು ಹೊಡೆದು ಹೊರ ಬಂದಿದ್ದಾರೆ. ಈ ಮಠಾಧಿಪತಿಗಳಿಗೇನಾಗಿದೆ? ಬಿಜೆಪಿ ಸರ್ಕಾರ ಬರುತ್ತಲೇ ಗುಂಪು ಕಟ್ಟಿಕೊಂಡು ಹೋಗಿ ನಮ್ಮ ಮಠಕ್ಕೆ ಇಷ್ಟೇ ಕೋಟಿ ಅನುದಾನ ಕೊಡಿರೆಂದು ವಸೂಲಿಗೆ ಇಳಿದು ಬಿಡುತ್ತಾರೆ. ಇದಕ್ಕೂ ಕಾರಣವಿಲ್ಲದಿಲ್ಲ ರಾಜಕಾರಣಿಗಳೂ ಅಷ್ಟೇ. ತಮ್ಮ ಗೆಲುವಿಗಾಗಿ ಜಾತಿ ಸ್ವಾಮಿಗಳ ಬೆನ್ನು ಬಿದ್ದು ಕೋಟಿಗಟ್ಟಲೆ ಕಾಣಿಕೆ ನೀಡಿ, ಮತಗಳನ್ನು ರಿಸರ್ವ್ ಮಾಡಿಸಿಕೊಳ್ಳಲು ಆರಂಭಿಸಿದ್ದರ ಫಲವೇ ಇದು. ನೀನನಗಿದ್ದರೆ ನಾನಿನಗೆ ಎಂಬಂತಹ ಒಡಂಬಡಿಕೆಯ ವ್ಯಾಪಾರ ನಡೆಯುತ್ತಿದೆ.

ಸಮ್ಮಿಶ್ರ ಸರ್ಕಾರವಿದ್ದಾಗಲೂ ಅಷ್ಟೇ. ನಮ್ಮ ಮುಖ್ಯಮಂತ್ರಿಯ ತಂಟೆಗೆ ಬಂದರೆ ಪರಿಣಾಮ ನೆಟ್ಟಗಿರಲ್ಲವೆಂದು ಆದಿಚುಂಚನಗಿರಿಯೇ ಗುಡುಗಿದ್ದುಂಟು. ಸಿದ್ಧರಾಮಯ್ಯನವರು ಸಿ.ಎಂ. ಆದಾಗ ಕಾಗಿನೆಲೆಯ ಮಠಾಧಿಪತಿಗಳು ರಕ್ಷಣೆಗೆ ಇಳಿದಿದ್ದುಂಟು. ರಾಜಕಾರಣದಲ್ಲಿ ಧರ್ಮಕಾರಣ ಬೆರೆತರೆ ಕೇಡಿಲ್ಲ. ಆದರೆ ಧರ್ಮದಲ್ಲಿ ರಾಜಕಾರಣ ಬೆರೆತರೆ ಒಳಿತಿಲ್ಲವೆಂಬುದು ಬಸವಣ್ಣನವರ ಕಾಲದಲ್ಲಿ ಸಾಬೀತಾಗಿದೆಯಾದರೂ ಅದರ ಬಗ್ಗೆ ರಾಜಕಾರಣಿಗಳು ಮಠಾಧೀಶರು ಮರೆತಂತೆ ಕಾಣುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಮಠಾಧಿಪತಿಗಳ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಸ್ವಾಮಿಗಳಾದರೂ ಘನತೆ ಹೆಚ್ಚಿಸಿಕೊಂಡಿದ್ದಾರೆಯೇ ಎಂದಾಲೋಚಿಸಿದರೆ ಕೆಲವರು ಜೈಲಿಗೆ ಹೋಗಿದ್ದಾರೆ. ಕೆಲವರ ಮೇಲಿನ ಅತ್ಯಾಚಾರದ ಕೇಸುಗಳು ಕೋರ್ಟಿನಲ್ಲಿ ಕೊಳೆಯುತ್ತಿವೆ. ಕೆಲವರು ನೆಲವನ್ನೇ ನುಂಗಿದ್ದಾರೆ. ಸ್ವಾಮೀಜಿಯೊಬ್ಬ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಗೋದ್ರಾ ಪ್ರಕರಣವನ್ನು ಮರುಕಳಿಸುತ್ತಿದ್ದಾನೆ. ಉತ್ತರದಲ್ಲಿ ಯೋಗಪಟು ಬಾಬಾ ರಾಮ್‍ದೇವ್, ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ (ಇಲ್ಲಿನ ದಿವಂಗತ ಪೇಜಾವರಶ್ರೀಗಳಂತವರು) ಬಹಿರಂಗವಾಗಿಯೇ ಬಿಜೆಪಿಯ ಹಾಗೂ ಮೋದಿಯವರ ಬೆಂಬಲಕ್ಕೆ ನಿಂತವರು. ನೀವೆಲ್ಲಾ ರಾಜಕೀಯದಲ್ಲೇಕೆ ಮೂಗು ತೂರಿಸುವಿರಿ ಎಂದರೆ, ನನಗೊಬ್ಬರು ಸಮಜಾಯಿಷಿ ನೀಡಿದ್ದುಂಟು. ನಮ್ಮ ಸನಾತನ ಧರ್ಮ, ಪುರಾಣಗಳಲ್ಲೇ ಇದೆಲ್ಲಾ ನಡೆದು ಬಂದಿದೆ ಎನ್ನುತ್ತಾರೆ. ದೇವತೆಗಳಿಗೆ ವಸಿಷ್ಠ ಗುರುಗಳಾಗಿದ್ದರು, ರಾಕ್ಷಸರಿಗೆ ಶುಕ್ಲಾಚಾರ್ಯರು ಸಲಹೆ ನೀಡಿದ್ದುಂಟು. ಸಾಮಾನ್ಯ ಬಾಲಕ ಚಂದ್ರಗುಪ್ತನಿಗೆ ಚಾಣಕ್ಯ, ಸಳನನ್ನು ಹೋಯ್ಸಳನನ್ನಾಗಿಸಿದ್ದ ಸುದತ್ತ, ಹಕ್ಕಬುಕ್ಕರನ್ನು ಬೆಂಬಲಿಸಿದ ವಿದ್ಯಾರಣ್ಯ, ಗ್ರಾಮವಾಸಿ ಯುವಕ ಭರಮಣ್ಣನಾಯಕನಿಗೆ ಮಾರ್ಗದರ್ಶನವಿತ್ತು. ದೊರೆಪದವಿಗೇರಿಸಿದ ಮುರುಗೇಸ್ವಾಮಿಗಳನ್ನು ಉದಾಹರಿಸುತ್ತಾರೆ. ಇರಬಹುದು ಆದರೆ ಇವರೆಲ್ಲಾ ಗುರುಗಳಾಗಿ ಧರ್ಮಕಾರಣ ಮಾಡಿ ಪ್ರಜಾಹಿತ ಬಯಸಿದರೆ ವಿನಃ ರಾಜಕಾರಣ ಮಾಡಲಿಲ್ಲ. ಬಹುಮುಖ್ಯವಾಗಿ ಇವರಾರು ದೊರೆಯಾದವನ “ಜಾತಿಗೆ” ಸೇರಿದವರಲ್ಲವಾಗಿದ್ದರಿಂದಲೇ ಜಗದ್ಗುರುಗಳು ಎನಿಸಿಕೊಂಡರು. ಈಗಿರುವ ಎಲ್ಲರೂ ಜಾತಿ ಗುರುಗಳು, ಇರುವುವೆಲ್ಲಾ ಜಾತಿಮಠಗಳು ಎಂಬುದನ್ನು ಅವರುಗಳೇ ಸಾಬೀತು ಪಡಿಸುತ್ತಿದ್ದಾರೆ. ಹಿಂದಿನವರೆಲ್ಲಾ ಭಕ್ತಾಧಿಗಳ ನೆರವಿನಿಂದ ಮಠ ಕಟ್ಟಿ ಬೆಳೆಸಿದ್ದವರಾದ್ದರಿಂದ ಅವರಿಗೆ ಯಾರ ಹಂಗೂ ಇರಲಿಲ್ಲ. ಐಷಾರಾಮಿ ಮಠಗಳಲ್ಲಿದ್ದು, ಯಾವಾಗ ಸರ್ವ ಸಂಗ ಪರಿತ್ಯಾಗವನ್ನೇ ಮರೆತರೋ, ಕೋಟಿಗಟ್ಟಲೆ ಹಣಕ್ಕಾಗಿ ರಾಜಕಾರಣಿಗಳ ಎದುರು ಸಲಾಮ್ ಹೊಡೆದರೋ ಆಗಲೇ ಕಾವಿ ತನ್ನ ಕಿಮ್ಮತ್ತು ಕಳೆದುಕೊಂಡಿದೆ. ಖಾದಿಗಳ ಹಿಂದೆ ನಿಂತು ದರ್ಬಾರ್ ನಡೆಸುವ ಬದಲು, ತಮಗೆ ಬೇಕಾದವರನ್ನು ವಿವಿಧ ಪಕ್ಷಗಳಿಂದ ನಿಲ್ಲಿಸಿ, ಗೆಲ್ಲಿಸುವ ಪಡಿಪಾಟಲು ಬಿಟ್ಟು ಕಾವಿ ಕಿತ್ತೆಸೆದು ನೇರಾ ನೇರ ತಾವೇ ರಾಜಕೀಯಕ್ಕಿಳಿಯುವುದು ಇಬ್ಬಂದಿತನಕ್ಕಿಂತ ಮೇಲಲ್ಲವೇ? ತಮ್ಮ ಜಾತಿ ಮೀಸಲಾತಿಗಾಗಿ, ಸಚಿವಸ್ಥಾನಕ್ಕಾಗಿ, ಮಠದ ಅನುದಾನಕ್ಕಾಗಿ ಬಾಯಿ ಬಾಯಿ ಬಿಡುವ ಇವರುಗಳು ದೇಶದಲ್ಲಿ ಭುಗಿಲೆದ್ದಿರುವ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತು ಜನಪರವಾಗಿ ದನಿ ಎತ್ತದಿರುವುದು ಸಾಮಾಜಿಕ ದುರಂತವಲ್ಲವೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...