Homeಮುಖಪುಟಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

ಜನ ಏನ್‌ ಮಾಡ್ಬೇಕು ಅಂತ ಹೇಳ್ತಿರೋ ಸರ್ಕಾರ ತಾನೇನು ಮಾಡಿದೀನಿ ಅಂತನೇ ಹೇಳ್ತಿಲ್ಲ?

- Advertisement -

ಒಂದಾನೊಂದು ಕಾಲದಾಗ ಜಾನ್ ಕೆನಡಿ ಅಂತ ಒಬ್ಬರು ಇದ್ದರು. ಅವರು ಅಮೆರಿಕದ ಅಧ್ಯಕ್ಷರಾಗಿದ್ದರು. ಅವರು ತಮ್ಮ ಸಣ್ಣ ಜೀವನ ಕಾಲದಾಗ ಅನೇಕ ಒಳ್ಳೆ ಕೆಲಸ ಮಾಡಿದರು.

ಅವರು 1960ರೊಳಗ ತಮ್ಮ 43ನೇ ವಯಸ್ಸಿಗೆ ಅಧ್ಯಕ್ಷೀಯ ಚುನಾವಣೆ ಗೆದ್ದು ಅತಿಕಮ್ಮಿ ವಯಸ್ಸಿನ ಅಧ್ಯಕ್ಷ ಅಂತ ಅಮೆರಿಕದ ಇತಿಹಾಸದಾಗ ದಾಖಲು ಮಾಡಿದರು. ಆರ್ಥಿಕ ಹಿಂಜರಿಕೆಯಿಂದ ಹೊಡೆತ ತಿಂದಿದ್ದ ಅಮೆರಿಕಾವನ್ನು ಬೆಳವಣಿಗೆಯ ದಾರಿಯೊಳಗ ದೂಡಿದರು. ವಿಶ್ವಾದ್ಯಂತ ಶಾಂತಿ ಹಾಗೂ ಅಭಿವೃದ್ಧಿ ಸ್ಥಾಪಿಸಲಿಕ್ಕೆ ಪೀಸ್‍ಕೋರ್ ಅನ್ನೋ ಸಂಸ್ಥೆ ಸುರು ಮಾಡಿದರು. ರಷಿಯಾ ಒಕ್ಕೂಟದ ಅಧ್ಯಕ್ಷ ಕ್ರುಷೇವ ಅವರ ಜೊತೆಗೆ ಶಾಂತಿ ಒಪ್ಪಂದ ಸಹಿ ಮಾಡಿ ಪರಮಾಣು ಯುದ್ಧ ತಪ್ಪಿಸಿದರು. ನಿರುದ್ಯೋಗಿಗಳಿಗೆ ಭತ್ಯೆ, ಕೌಶಲ್ಯ ತರಬೇತಿ ಮುಂತಾದ ಯೋಜನೆಗಳನ್ನು ಆರಂಭ ಮಾಡಿದರು. ಕರಿಯರು ಹೆಚ್ಚಾಗಿ ಇದ್ದ ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಕರಿಯರ ಶಿಕ್ಷಣದ ಸಲುವಾಗಿ ತೆರೆಯಲಾದ ವಿಶೇಷ ಕಾಲೇಜುಗಳನ್ನು ಬೆಳೆಸಲು ಅನುದಾನ ನೀಡಿದರು. ಮಹಿಳಾ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯ ಅನುವಾಗಿ ಹೆಚ್ಚಿನ ಕೂಲಿ ಸಿಗುವಂತೆ ಕಾನೂನು ಮಾಡಿದರು, ಇತ್ಯಾದಿ.

ಜಾನ್ ಕೆನಡಿ

ತಮ್ಮ ಚುನಾವಣೆಯ ಗೆಲುವನ್ನು ಅವರು ಇದು `ಒಂದು ಪಕ್ಷದ ಗೆಲುವು ಅಲ್ಲ. ಸ್ವಾತಂತ್ರ್ಯದ ಉತ್ಸವ’ ಅಂತ ಬಣ್ಣಿಸಿದರು. ಇದು ಮನುಷ್ಯರೆಲ್ಲರ ಉತ್ಥಾನದ ಅವಕಾಶದ ದಾರಿ. ಎಲ್ಲ ರೀತಿಯ ಬಡತನವನ್ನೂ, ಗುಲಾಮಗಿರಿಯನ್ನು ತೊಡೆದುಹಾಕುವ ಅವಕಾಶ ಈಗ ನಮ್ಮ ಮುಂದೆ ಇದೆ ಎಂದವರು. ಆದರ ಅವರ ಒಂದು ಮಾತು ಭಾಳ ಫೇಮಸ್ಸು. ಅದು ನಮಗೆಲ್ಲರಿಗೂ ಗೊತ್ತು. ನಿಮಗಾಗಿ ಈ ದೇಶ ಏನು ಮಾಡುತ್ತದೆ ಎಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ನೀಡಬಲ್ಲಿರಿ ಎನ್ನುವುದನ್ನು ಕೇಳಿಕೊಳ್ಳಿರಿ.

ಅವರ ವಿಚಾರಗಳನ್ನು, ಸಿದ್ಧಾಂತಗಳನ್ನು ಮನಸೋ ಇಚ್ಛೆ ಪಾಲಿಸುವವರಿಗೆ ಕೆನಡಿಯನ್ ಅಂತ ಕರೀತಾರ. ಹಂಗಂದರ ಕೆನಡಾದಿಂದ ಬಂದವರು ಅಂತ ಅಲ್ಲ. ಜಾನ್ ಕೆನಡಿಯವರ ವಿಚಾರಗಳನ್ನ, ಕಾರ್ಯಕ್ರಮ- ಯೋಜನೆಗಳನ್ನು ಒಪ್ಪಿಕೊಂಡು ನಡೆಯುವವರು ಅಂತ. ಈಗಿನ ನಮ್ಮ ನಾಯಕರನ್ನು ಕೆನೆಡಿಯನ್ ಅಂತ ಕರೀಬಹುದು ಅಂತೀರೇನು?

ಒಂದು ರೀತಿಯಿಂದ ಅನಬಹುದೋ ಏನೋ. ಅದು ಏನಪಾ ಅಂದರ `ನೀವು ದೇಶಕ್ಕೆ ಏನು ಮಾಡಬಲ್ಲಿರಿ’ ಅನ್ನೋ ಮಾತು. ಇಡೀ ಜಗತ್ತಿನ 177 ದೇಶಗಳಲ್ಲಿ ಈ ಕೊರೊನಾ ವ್ಯಾಧಿ ಹೊಡಕೊಂಡದ. ದೊಡ್ಡ ಸಾಹುಕಾರ ಟ್ರಂಪಣ್ಣನವರಿಂದಾ ಹಿಡಕೊಂಡು ಸಣ್ಣಂಗಡಿ ಶೆಟ್ಟರಾದ ಉಗಾಂಡಾದ ಯಾವೋರಿ ಮುಸೇವಿನಿ ಅವರ ತನಕಾ ಎಲ್ಲಾರೂ ಜನರಿಗೆ `ಹಿಂಗ ಮಾಡರಿ, ಹಂಗ ಮಾಡರಿ, ಹಂಗಂತ ಹಂಗ ಮಾಡಬ್ಯಾಡ್ರಿ’ ಅಂತ ಹೇಳಲಿಕ್ಕೆ ಹತ್ಯಾರ. ಯಾರೂ ನಿಮ್ಮ ಸಲುವಾಗಿ ನಾವು ಏನು ಮಾಡತೇವಿ ಅನ್ನೋದನ್ನ ಹೇಳಲಿಕ್ಕೆ ಒಲ್ಲರು. ಊರು ಮುಂದಿನ ಹಣಮಂತನದೇವರ ಗುಡಿ ಸ್ವಾಮಿ ವಾರಕ್ಕೊಮ್ಮೆ ನೀತಿಪಾಠ ಹೇಳಿದಂಗ ಅವರು ಹೇಳಲಿಕ್ಕೆ ಹತ್ಯಾರ.

ಅವರು ಹೇಳಿದ್ದನ್ನ ನಾವು ಜೀ ಹುಜೂರ್ ಅಂತ ಕೇಳಲಿಕ್ಕೆ ಹತ್ತೇವಿ. ತಿರುಗಿ ಮಾತನಾಡಲಿಕ್ಕೆ ಹತ್ತಿಲ್ಲ. ಪ್ರಶ್ನೆ ಕೇಳಲಿಕ್ಕೆ ನಮಗ ಬರಂಗಿಲ್ಲ.

ಉದಾಹರಣೆಗೆ ಮಹಾಮಹಿಮ ಪ್ರಧಾನಿಗಳು ನೀವು ಕಫ್ರ್ಯೂ ಪಾಲಿಸಿರಿ, 14 ತಾಸು ಹೊರಗ ಬರಬ್ಯಾಡ್ರಿ, ಗಾಡಿ ಓಡಸಬ್ಯಾಡ್ರಿ, ಏನೂ ಖರೀದಿ ಮಾಡಬ್ಯಾಡ್ರಿ, ಒಬ್ಬರಿಗೊಬ್ಬರು ಮಾತು ಆಡಬ್ಯಾಡ್ರಿ, ಇತ್ಯಾದಿ ಇತ್ಯಾದಿ ಅಂತ ಫರಮಾನು ಹೊರಡಿಸಿದಾಗ, ನಾವು ಸುಮ್ಮನೇ ಇದ್ದಿವಿ. ಬೆಂದಕಾಳೂರಿನ ದಂಡಾಧಿಕಾರಿಗಳು ಹೊರಗ ಬಂದರ ಕೇಸು ಹಾಕತೇವಿ ಅಂದರು. ಅವಾಗನೂ ಸುಮ್ಮನೇ ಇದ್ದೆವಿ. ಸಂಜೀಕೆ ಐದಕ್ಕ ಮನೀ ಬಾಲ್ಕನಿಯೊಳಗ ಹೋಗಿ ಚಪ್ಪಾಳೆ ಹೊಡಿಯಿರಿ ಅಂದರ ನಾವು ಶಂಖ, ಜಾಗಟೆ, ತಾಳ, ಡಮರು, ತಾಟು, ತಂಬಿಗಿ ಎಲ್ಲಾನೂ ಬಾರಿಸಿದಿವಿ. ಗುಂಪು ಕಟಿಗೋಬ್ಯಾಡ್ರಿ ಅಂತ ಅವರು ಹೇಳಿದರ ನಾವು ಚಪ್ಪಾಳೆ ಹೊಡೆಯೋ ಪವಿತ್ರ ಕಾರ್ಯಕ್ಕಾಗಿ ಗುಂಪು ಕಟ್ಟಿಕೊಂಡು ಬಿಟ್ಟಿವಿ. ಅದು ಬ್ಯಾರೆ ಮಾತು.

ನಮ್ಮ ಪಂತ ಪ್ರಧಾನರು ನೀವು ಹಿಂಗ ಮಾಡ್ರಿ ಅಂದರು ಆದರ ನಾವು ಏನು ಮಾಡತೇವಿ ಅಂತ ಹೇಳಲಿಲ್ಲ. ಒಂದು ತಾಸು ಭಾಷಣ ಮಾಡಿದರೂ ಸಹಿತ ಕೊರೊನಾ ವಿರುದ್ಧ ಸರಕಾರದ ಯೋಜನೆಗಳು ಏನು ಅನ್ನೋದು ಬಾಯಿ ಬಿಡಲಿಲ್ಲ.

ಹಂಗಾರ ಅವರು ಏನು ಹೇಳಬಹುದಿತ್ತು?-
ಈ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಅಂತ ಘೋಷಿಸಿ ಅದರ ಪರಿಹಾರಕ್ಕ ಏನೇನು ಮಾಡಬಹುದು ಅಂತ ತಿಳಿಸಬಹುದಿತ್ತು. ಆದರ ಅವರು ಅದನ್ನು ಹೇಳಲಿಲ್ಲ. ಚುನಾವಣೆ ರಣತಂತ್ರಜ್ಞ ಪ್ರಶಾಂತ ಕಿಶೋರ ಅವರು ಮೋದಿ ಅವರು ಯಾವ ಕೆಟ್ಟ ಸುದ್ದಿಯನ್ನೂ ಕೊಡಬಾರದು. ಅವರು ಯಾವಾಗಲೂ ಬರೇ ಒಳ್ಳೆ ಸುದ್ದಿ ಕೊಡಬೇಕು ಅಂತ ಹೇಳಿಕೊಟ್ಟಿದ್ದರಂತ. ಇವರು ಅದನ್ನು ಚುನಾವಣೆ ಮುಗದ ಮ್ಯಾಲನೂ ಪಾಲಸಲಿಕ್ಕೆ ಹತ್ಯಾರ.

ಇದಕ್ಕ ಎಷ್ಟು ರೊಕ್ಕ ಇಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಗಿಂತ ಮುಂಚೆ ಹಣಕಾಸಿನ ಮಾತು ಹಗಲೆಲ್ಲಾ ಆಡಿದ ಮೋದಿ ಅವರು ಈಗ ಮಾತಾಡವಲ್ಲರು.

ಅದಕ್ಕೊಂದು ವಿಶೇಷ ತಂಡ ಕಟ್ಟೇವಿ ಅಂತ ಹೇಳಬಹುದಿತ್ತು. ಚುನಾವಣೆ ಕಾರ್ಯಕ್ಕೆ, ಪಕ್ಕದ ಕೆಲಸಕ್ಕೆ ತಂಡ ಕಟ್ಟೋರು ವಿಪತ್ತಿನ ನಿರ್ವಹಣೆಗೆ ಕಟ್ಟತಾರೋ ಇಲ್ಲವೋ, ಗೊತ್ತಿಲ್ಲ.

ಅದರ ಸಲುವಾಗಿ ಒಂದು ಆಸ್ಪತ್ರೆ, ಸಂಶೋಧನಾ ಕೇಂದ್ರ, ಪ್ರಯೋಗಾಲಯ ಇತ್ಯಾದಿ ಮೀಸಲು ಇಡತೇವಿ, ಹೊಸದಾಗಿ ಆರಂಭ ಮಾಡತೇವಿ ಅಂತ ಅನ್ನಬಹುದಿತ್ತು. ಅದನ್ನು ಅನ್ನಲಿಲ್ಲ. ರವಾಂಡಾ, ಸಿಯಾರಾ ಲಿಯೋನ್ ಮುಂತಾದ ಸಣ್ಣಸಣ್ಣ ದೇಶಗಳು ಮಾಡಲಿಕ್ಕೆ ಹತ್ಯಾವು.

ಚೀನಾದವರು ಹತ್ತು ದಿನದಾಗ ಹೊಸಾ ಆಸ್ಪತ್ರೆ ಕಟ್ಟಿದ್ದು ನಾವೆಲ್ಲಾ ನೋಡಿ ಚಪ್ಪಾಳೆ ತಟ್ಟೇವಿ. ಆದರ ಈಗ ನಾಯಕರು ಹೇಳಿದರು ಅಂತ ಚಪ್ಪಾಳೆ ತಟ್ಟಿದಿವಿ. ಅದಕ್ಕೂ ಇದಕ್ಕೂ ನಮಗ ವ್ಯತ್ಯಾಸ ಗೊತ್ತಿಲ್ಲ.

ಚೀನಾದ ಕೊರೊನಾ ಆಸ್ಪತ್ರೆ

ಈಗ ನಮ್ಮ ಮುಂದ ಇರೋದು ಏನು-ಯುದ್ಧನೋ? ಸರ್ಜಿಕಲ್ ಸ್ಟ್ರೈಕೋ? ಹೋರಾಟನೋ? ಅಥವಾ ವಿಪತ್ತೋ? ಕೊರೊನಾ ರೋಗದ ಜೊತೆ ಹೊಡೆದಾಟ ಅಂದರ ಜನರ ಹತ್ತರ ಮುಚ್ಚಿ-ಮುಚ್ಚಿ ಇಡುವಂಥಾ ಸೀಕ್ರೆಟ್ ಏನರ ಅದ ಏನು? ಇದನ್ನ ತಿಳಕೋಬೇಕಾರ ನೀವು ಏನು ಸೈನ್ಯದ ಅಧಿಕಾರಿ ಆಗಿರಬೇಕಿಲ್ಲ. ನಿಮಗ ಕನಿಷ್ಠ ಸಾಮಾನ್ಯ ಜ್ಞಾನ ಇದ್ದರ ಸಾಕು. ಆದರ ಈಗಿನ ಕಾಲ ಹೆಂಗಂದ ಅಂದರ ಬ್ಯಾರೆ ಬೇಕಾದ್ದು ಸಿಗತದ, ಸಾಮಾನ್ಯ ಜ್ಞಾನ ಸಿಗಂಗಿಲ್ಲ. ಅದು ಎಷ್ಟು ಅಪರೂಪ ಅಂದರ ರೊಕ್ಕ ಅಲ್ಲಾ, ಜೀವಾ ಕೊಟ್ಟರೂ ಸಿಗಂಗಿಲ್ಲ. ಇದನ್ನು ಸರಿಮಾಡುವುದು ಘಟಾನುಘಟಿ ನಾಯಕರ ಕಡೆನೂ ಸಾಧ್ಯ ಇಲ್ಲ, ಅಲ್ಲವೇ?

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

1
"ಪ್ರಜಾಪ್ರಭುತ್ವ ವಿರೋಧಿಗಳು, ಕೋಮುವಾದಿಗಳು ಕ್ರಿಯಾಶೀಲವಾಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ" ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್‌ ಹೇಳಿದರು. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಫೋಟೋವನ್ನು ಇಟ್ಟರೆ ಧ್ವಜಾರೋಹಣ ಮಾಡುವುದಿಲ್ಲ ಎಂದು ರಾಯಚೂರಿನ ಜಿಲ್ಲಾ...
Wordpress Social Share Plugin powered by Ultimatelysocial