ಉಡುಪುಗಳು ಮಹಿಳೆಯರ ಆಯ್ಕೆಯಾಗಿದೆ, ಹಿಜಾಬ್ ಸೇರಿದಂತೆ ಮಹಿಳೆಯರ ಆಯ್ಕೆಯ ಉಡುಪುಗಳನ್ನು ಗೌರವಿಸಬೇಕು, ಅದನ್ನು ಒಬ್ಬ ವ್ಯಕ್ತಿ ನಿರ್ದೇಶಿಸಬಾರದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ಉತ್ತರಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದದ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಸಂವಾದದ ಸಮಯದಲ್ಲಿ ವಿದ್ಯಾರ್ಥಿನಿಯೋರ್ವರು ಕರ್ನಾಟಕದಲ್ಲಿನ ಇತ್ತೀಚಿನ ಹಿಜಾಬ್ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಮತ್ತು ರಾಹುಲ್ ಗಾಂಧಿ ಅವರಲ್ಲಿ ಪ್ರಧಾನಿಯಾಗಿದ್ದರೆ ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೇಳಿದ್ದಾರೆ.
ಮಹಿಳೆ ಏನು ಧರಿಸಬೇಕೆಂದು ಬಯಸುತ್ತಾಳೆ. ಆಕೆಗೆ ಅವಕಾಶ ನೀಡಬೇಕು. ಇದು ನನ್ನ ಅಭಿಪ್ರಾಯ. ನೀವು ಏನು ಧರಿಸುತ್ತೀರಿ ಎಂಬುವುದು ನಿಮ್ಮ ಜವಾಬ್ದಾರಿ. ಏನು ಧರಿಸಬೇಕು ಎಂಬುವುದು ನಿಮ್ಮ ನಿರ್ಧಾರ. ನೀವು ಏನು ಧರಿಸಬೇಕೆಂದು ಬೇರೆಯವರು ನಿರ್ಧರಿಸಬೇಕು ಎಂದು ನಾನು ಭಾವಿಸುವುದಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಹಿಜಾಬ್ ವಿವಾದ:
2022ರ ಜನವರಿಯಲ್ಲಿ ಕರ್ನಾಟಕದ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಿದ್ದಕ್ಕಾಗಿ ಕಾಲೇಜಿನ ಸಮವಸ್ತ್ರ ನೀತಿಯ ಉಲ್ಲಂಘನೆಯನ್ನು ಉಲ್ಲೇಖಿಸಿ ಪ್ರವೇಶವನ್ನು ನಿರಾಕರಿಸಿದಾಗ ಹಿಜಾಬ್ ಸಮಸ್ಯೆ ಸ್ಫೋಟಗೊಂಡಿತ್ತು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.
ಆಗಿನ ಬಿಜೆಪಿ ಸರ್ಕಾರವು ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗಳನ್ನು ನಿಷೇಧಿಸಿತ್ತು. ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು ಮತ್ತು ಮಾರ್ಚ್ 15, 2022ರಂದು ಕರ್ನಾಟಕ ಹೈಕೋರ್ಟ್ ನಿಷೇಧವನ್ನು ಎತ್ತಿಹಿಡಿದಿತ್ತು. ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಮತ್ತು ಆದ್ದರಿಂದ ಒಬ್ಬರ ಧರ್ಮವನ್ನು ಮುಕ್ತವಾಗಿ ಆಚರಿಸುವ ಮೂಲಭೂತ ಹಕ್ಕನ್ನು ಖಾತರಿಪಡಿಸುವ ಭಾರತೀಯ ಸಂವಿಧಾನದ 25ನೇ ವಿಧಿಯ ರಕ್ಷಣೆಯ ಅಡಿಯಲ್ಲಿ ಬರುವುದಿಲ್ಲ ಎಂದು ನ್ಯಾಯಾಲಯವು ತೀರ್ಪು ನೀಡಿತ್ತು.
ಅಕ್ಟೋಬರ್ 2022ರಲ್ಲಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ಗಳ ಮೇಲಿನ ನಿಷೇಧವನ್ನು ರದ್ದುಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಪೀಠ ವಿಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿತ್ತು. ಒಬ್ಬ ನ್ಯಾಯಾಧೀಶರು ಶಾಲೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ಜಾರಿಯನ್ನು ಬೆಂಬಲಿಸಿದರೆ, ಮತ್ತೊಬ್ಬ ನ್ಯಾಯಾಧೀಶರು ಹಿಜಾಬ್ ಧರಿಸುವುದು ವೈಯಕ್ತಿಕ ಆಯ್ಕೆಯ ವಿಷಯ ಎಂದು ವಾದಿಸಿದರು ಮತ್ತು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ನ್ನು ನಿಷೇಧಿಸುವ ಆದೇಶವನ್ನು ತಮ್ಮ ಸರ್ಕಾರ ಹಿಂಪಡೆಯುವುದಾಗಿ ಘೋಷಿಸಿದ್ದರು.
ಇದನ್ನು ಓದಿ: ಪ್ಯಾಲೆಸ್ತೀನ್ ನಾಗರಿಕರಿಗೆ ಗಡಿಯನ್ನು ತೆರೆಯಲು ಈಜಿಪ್ಟ್ ನಿರಾಕರಿಸುತ್ತಿರುವುದೇಕೆ?


