ಮಾಜಿ ಸಚಿವ ಮುರುಗೇಶ್ ನಿರಾಣಿಯವರ ಅಧಿಕೃತ ವಾಟ್ಸಾಪ್ ನಂಬರ್‌ನಿಂದ ಹಿಂದೂ ದೇವರುಗಳನ್ನು ಅವಹೇಳನ ಮಾಡಲಾಗುತ್ತಿದೆ ಎಂಬ ವಾಟ್ಸಾಪ್ ಸಂದೇಶವೊಂದು ಕೆಲ ಗ್ರೂಪ್‌ಗಳಲ್ಲಿ ಫಾರ್ವಾಡ್ ಆಗಿ ವಿವಾದ ಭುಗಿಲೆದ್ದಿದೆ.
ಮಗಳನ್ನೇ ಮದುವೆಯಾದ ಬ್ರಹ್ಮ ನಮಗೆ ದೇವರು, 16 ಸಾವಿರ ಹೆಂಡಂದಿರನ್ನು ಮದುವೆಯಾದ ದನಕಾಯುವ ಕೃಷ್ಣ ದೇವರು, ತುಂಬು ಗರ್ಭಿಣಿಯನ್ನು ಕಾಡಿಗಟ್ಟಿದ ರಾಮ ನಮಗೆ ದೇವರು… ಹೀಗೆ ಉದ್ದದ ವಾಟ್ಸಾಪ್ ಸಂದೇಶವೊಂದನ್ನು ಫಾರ್ವಾಡ್ ಮಾಡಲಾಗಿದೆ.
ಸುದ್ದಿ ಮಾಧ್ಯಮಗಳಲ್ಲಿ ಈ ಸಂದೇಶ ಪ್ರಕಟಗೊಂಡು ಮುರುಗೇಶ್ ನಿರಾಣಿಯವರು ವಿರುದ್ಧ ಹಲವರು ಕಿಡಿ ಕಾರಿದ್ದಾರೆ.
ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಹಿಂದೂ ದೇವರುಗಳ ಬಗ್ಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾದ ವಿಚಾರ ಮಾಧ್ಯಮಗಳ ಮೂಲಕ ಗಮನಕ್ಕೆ ಬಂತು. ಇದು ನಿಜವಾಗಿದ್ದರೆ, ಬಹಳ ಕೆಟ್ಟ ನಡೆ-ನುಡಿ ಎಂದು ಹೇಳಬೇಕಾಗುತ್ತದೆ. ದೇವರು ಮತ್ತು ಧರ್ಮ ಅವರವರ ನಂಬಿಕೆ, ಅದನ್ನು ನಾವು ಗೌರವಿಸಬೇಕು ಅವಹೇಳನ ಮಾಡಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ದೇವರು ಧರ್ಮದ ಹೆಸರಲ್ಲಿ ಮುಗ್ಧರ ಶೋಷಣೆ, ಮೂಢನಂಬಿಕೆಯ ಆಚರಣೆ ಮಾಡುವುದು ತಪ್ಪು. ರಾಜಕೀಯ ಇಲ್ಲವೇ ಇನ್ನಾವುದೋ ಸ್ವಾರ್ಥಸಾಧನೆಗಾಗಿ ದೇವರು- ಧರ್ಮವನ್ನು ದುರ್ಬಳಕೆ ಮಾಡುವುದುಕೂಡಾ ತಪ್ಪು ಆದರೆ.. ದೇವರನ್ನು ಗೇಲಿ-ಅವಹೇಳನ ಮಾಡುವುದು ವಿಕೃತಿ. ಇದನ್ನು ಯಾರು ಮಾಡಿದರೂ ಖಂಡನೀಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕ್ಷಮೆಯಾಚಿಸಿದ ನಿರಾಣಿ
ವಿವಾದ ಭುಗಿಲೇಳುತ್ತಲೇ ಎಚ್ಚೆತ್ತುಕೊಂಡ ಮುರುಗೇಶ್ ನಿರಾಣಿಯವರು ವಿಡಿಯೋ ಒಂದನ್ನು ಮಾಡಿ ಕ್ಷಮೆ ಕೇಳಿದ್ದಾರೆ. “ಸಂದೇಶವೊಂದು ಫಾರ್ವಾಡ್ ಆಗಿರುವ ನಂಬರ್ ನನ್ನದೇ ಆಗಿದೆ. ಆ ಮೊಬೈಲ್ ನಂಬರ್ ಅನ್ನು ಸಾರ್ವಜನಿಕ ಸಂಪರ್ಕಕ್ಕಾಗಿ ನನ್ನ ಪಿಎ ಮತ್ತು ಗನ್ ಮ್ಯಾನ್ ಬಳಸುತ್ತಾರೆ. ನಿನ್ನೆ ರಾತ್ರಿ ಆ ಮೊಬೈಲ್ ನನ್ನ ಪಿಎ ಬಳಿಯಿತ್ತು. ಇಂದು ಬೆಳಿಗ್ಗೆ ಬಂದ ಸಂದೇಶವೊಂದನ್ನು ಅಜಾಗರೂಕತೆಯಿಂದ ಫಾರ್ವಾಡ್ ಆಗಿ ಅವಾಂತರ ಸೃಷ್ಠಿಯಾಗಿದೆ. ತಪ್ಪು ಯಾರೇ ಮಾಡಿದರೂ ಸಹ ತಪ್ಪು. ಈ ತಪ್ಪಿಗಾಗಿ ಅವರು ನನ್ನ ಬಳಿ ಕ್ಷಮೆ ಕೇಳಿದ್ದಾರೆ. ಅವರು ಉದ್ದೇಶ ಪೂರ್ವಕವಾಗಿ ಆ ಸಂದೇಶವನ್ನು ಫಾರ್ವಾಡ್ ಮಾಡಿಲ್ಲ. ಇದಕ್ಕಾಗಿ ನಾಡಿನ ಜನತೆಯಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ” ಎಂದು ನಿರಾಣಿ ತಿಳಿಸಿದ್ದಾರೆ.
ನಾನು ಸರ್ವಧರ್ಮ ಸಹಿಷ್ಣುವಾಗಿದ್ದೇನೆ. ಧರ್ಮ ನಂಬಿಕೆಗಳ ಬಗ್ಗೆ ಹಗುರವಾಗಿ ಎಂದೂ ಮಾತನಾಡಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬಿಗಳು ಮತ್ತು ಜಾಟ್‌ಗಳಿಗೆ ಮಿದುಳಿಲ್ಲ ಹೇಳಿಕೆ: ಕ್ಷಮೆ ಕೇಳಿದ ಸಿಎಂ ಬಿಪ್ಲಬ್ ದೇಬ್


