Homeಕರ್ನಾಟಕಸರ್ವಾಧಿಕಾರ ಧೋರಣೆಯ ಪುರುಷಹಂಕಾರ ಸಾಮಾನ್ಯರಿಗೂ ಸೋಂಕಿದಾಗ..

ಸರ್ವಾಧಿಕಾರ ಧೋರಣೆಯ ಪುರುಷಹಂಕಾರ ಸಾಮಾನ್ಯರಿಗೂ ಸೋಂಕಿದಾಗ..

- Advertisement -
- Advertisement -

ಚುನಾವಣೆಗಳ ಪ್ರಚಾರ ಭೌತಿಕ ಜಗತ್ತನ್ನು ಮೀರಿ ಡಿಜಿಟಲ್ ಜಗತ್ತನ್ನು ಆವರಿಸಿಕೊಂಡು ಹಲವು ವರ್ಷಗಳೇ ಕಳೆದವು. ಇನ್ನು, ಪ್ರಚಾರದಲ್ಲಿನ ಡೀಸೆನ್ಸಿ ಹಿಂದಿನ ವರ್ಷಗಳಿಗಿಂತಲೂ ಕುಸಿದು ಪಾತಾಳವನ್ನು ಕಂಡಿದೆ. ಚುನಾವಣೆ ಗೆಲುವಿಗಾಗಿ ಧರ್ಮ-ಜಾತಿಗಳ ಆಧಾರದಲ್ಲಿ ಹಾಗೂ ಸಾಮಾಜಿಕ-ಆರ್ಥಿಕ ಸಿದ್ಧಾಂತಗಳ ಮೇಲೆ ತೀವ್ರ ಧ್ರುವೀಕರಣದ ಪ್ರಾಜೆಕ್ಟ್ ಆರಂಭವಾಗಿ ಚುರುಕು ಪಡೆದಿರುವುದು ಕೆಲವು ವರ್ಷಗಳಿಂದೀಚೆಗೆ ಬಿಜೆಪಿ ಗಳಿಸಿರುವ ಯಶಸ್ಸಿನ ಫಲ. ಈ ಧ್ರುವೀಕರಣ ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ ರಾಜಕಾರಣಕ್ಕಾಗಿ ಮನೆಮನಗಳನ್ನು ಒಡೆದು ಬಿಸಾಕುವ ಮಟ್ಟಕ್ಕೆ. ಇಂತಹ ಅನಪೇಕ್ಷಿತ ಸಾಂಸ್ಕೃತಿಕ ಪಲ್ಲಟ ಎಷ್ಟು ವೇಗವಾಗಿ ಗತಿಸಿತೆಂದರೆ, ಇದಕ್ಕೆ ಪರಿಹಾರಗಳನ್ನು ಹುಡುಕುವುದಿರಲಿ, ಸ್ಪಷ್ಟವಾದ ಕಾರಣಗಳನ್ನು ಪಟ್ಟಿ ಮಾಡಲೂ ಆಗದ ರೀತಿಯಲ್ಲಿ ಬೆಳೆಯಿತು. ಇದಕ್ಕೆ ಡಿಜಿಟಲ್ ಮಾಧ್ಯಮದ ಕೊಡುಗೆಯೂ ಅಪಾರ. ಅಂತಹ ಒಡಕನ್ನು ಬಿಂಬಿಸುವ ಮತ್ತು ಮೆಜಾರಿಟೇರಿಯನ್ ರಾಜಕಾರಣ ತಳ್ಳುವ ದುಸ್ಥಿತಿಯನ್ನು ಸೂಚಿಸುವ ಕೆಲವು ಸಂಗತಿಗಳು ಈ ಚುನಾವಣೆಯಲ್ಲಿಯೂ ಕಂಡುಬಂದವು. ಸಾರ್ವಜನಿಕ ಸಜ್ಜನಿಕೆಯಲ್ಲಿ ಬಿಟ್ಟಿರುವ ಭಾರಿ ಬಿರುಕನ್ನು ಅನಾವರಣಗೊಳಿಸಿತು. ಇಂತಹುದನ್ನು ಬಿಂಬಿಸುವ ಕೆಲವು ವೈರಲ್ ವಿಡಿಯೋಗಳ ವಿಷಯ-ವಸ್ತುವನ್ನು ಇಲ್ಲಿ ಚರ್ಚಿಸುವ ಮೂಲಕ, ಮೇ 13ರಂದು ಸುಧಾರಿತ ಸರ್ಕಾರವೊಂದು ಬರುವುದಕ್ಕೆ ಸಾಧ್ಯವಾಗುವುದಾದರೆ, ಯಾವ ರೀತಿಯ ಸಾಂಸ್ಕೃತಿಕ ಕ್ರಾಂತಿಗೆ-ಬದಲಾವಣೆಗೆ ನಾಗರಿಕ ಸಮಾಜ ಮುಂದಾಗಬೇಕು ಮತ್ತು ಅದಕ್ಕೆ ಅಧಿಕಾರ ಹೇಗೆ ಸಹಕರಿಸಬೇಕೆಂಬುದನ್ನು ಚರ್ಚಿಸಬಹುದೇನೋ!

ವಿಡಿಯೋ-1: ಈ ವಿಡಿಯೋವನ್ನು ಮೇ 6ರಂದು ಸುಮಾರು ಬಿಜೆಪಿ ಮುಖಂಡರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡರು. ಕಾಂಗ್ರೆಸ್‌ನ ಕೆಲವು ಕಾರ್ಯಕರ್ತರು ಬೀದಿಯೊಂದರಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ಮಾಡಿಕೊಂಡು ತೆರಳುವಾಗ, ಸುಮಾರು 10-12 ವರ್ಷದ ಬಾಲಕಿಯೊಬ್ಬಳು ಜೈ ಮೋದಿ-ಜೈ ಮೋದಿ ಎಂದು ಆ ಕಾರ್ಯಕರ್ತರೆಡೆಗೆ ಕೂಗಿ ಹೇಳುತ್ತಾಳೆ. ಅವರ ಮನೆಯ ಸದಸ್ಯರು ಸಂಭ್ರಮದಿಂದ ಕೇಕೆ ಹಾಕಿಕೊಂಡು ಕುಣಿಯುವುದು ವಿಡಿಯೋದಲ್ಲಿ ದಾಖಲಾಗಿದೆ.

ಆ ಮುಗ್ಧ ಮಗುವಿಗೆ ಬಹುಶಃ ಕಾಂಗ್ರೆಸ್ ಆಗಲೀ, ಬಿಜೆಪಿ ಪಕ್ಷವಾಗಲೀ ಏನನ್ನು ಪ್ರತಿನಿಧಿಸುತ್ತದೆಂದು ತಿಳಿದಿರುವುದು ಬಹುತೇಕ ಅಸಾಧ್ಯ. ಇನ್ನು ಭಾರತ ದೇಶದ ಚರಿತ್ರೆ, ವಿವಿಧ ಸೈದ್ಧಾಂತಕ ತಿಕ್ಕಾಟಗಳ ಬಗೆಗಿನ ತಿಳಿವಳಿಕೆಯಂತೂ ಸಿದ್ಧಿಸಿರಲಿಕ್ಕೆ ಸಾಧ್ಯವೇ ಇಲ್ಲ. ಇಂತಹ ಸನ್ನಿವೇಶದಲ್ಲಿ ಅವರ ಮನೆಯ ಹಿರಿಯರು ಹೀಗೆ ರಾಜಕೀಯ ರ್‍ಯಾಲಿಯೊಂದಕ್ಕೆ ವಿರೋಧವಾಗಿ ಮೋದಿ ಘೋಷಣೆ ಕೂಗಲು ಬಿಟ್ಟಿರುವುದು ಪಿಚ್ಚೆನಿಸಿತು. ಇನ್ನು ತಮ್ಮ ನಾಯಕನನ್ನು ಹೊಗಳಿಕೊಳ್ಳಲು ರಾಜೀವ್ ಚಂದ್ರಶೇಖರ್‌ನಂತಹ ಹಿರಿಯ ಬಿಜೆಪಿ ಮುಖಂಡನಿಂದ ಹಿಡಿದು ಕಿರಿ-ಪರಿ ತಲೆಗಳೆಲ್ಲಾ ಆ ವಿಡಿಯೋವನ್ನು ಹಂಚಿಕೊಂಡಿದ್ದು, ಇಂತಹ ಅಸೂಕ್ಷ್ಮವನ್ನು ತಮ್ಮ ಬುದ್ಧಿಯಲ್ಲಿ ತುಂಬಿಕೊಂಡಿರುವ ಈ ರಾಜಕೀಯ ಮುಖಂಡರು, ಮುಂದೆ ನಾಡಿನ ಹಿತವನ್ನು ನಿಜವಾಗಿಯೂ ಕಾಯಬಲ್ಲರೇ ಎಂಬ ಕಳವಳ ಹುಟ್ಟಿಸಿತು.

ವಿಡಿಯೋ-2: ’ಲಯನ್ ನ್ಯೂಸ್ ಕನ್ನಡ’ ಎಂಬ ಫೇಸ್ಬುಕ್‌ನ ಅಕೌಂಟ್ ಹಂಚಿಕೊಂಡಿದ್ದ ಒಂದು ವಿಡಿಯೋ. ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗಾಗಿ ಬೆಂಗಳೂರಿನ ಒಂದು ಭಾಗದಲ್ಲಿ ಕಾಯ್ತಾ ಇರುವ ಜನರನ್ನು ಈ ಯುಟ್ಯೂಬ್ ಮಾಧ್ಯಮದ ಆಂಕರ್ ಮಾತನಾಡಿಸುತ್ತಾ ಇದಾನೆ. ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಅತ್ಯಂತ ವ್ಯಗ್ರನಾಗಿ “ಗಂಡಸ್ರು ಲೀಡರ್ ಆಗ್ಬೇಕು ಕಣ್ರಿ” ಈ ದೇಶದಲ್ಲಿ ಅಂತ ಹೇಳ್ತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಅದೇ ಉಗ್ರತೆಯಿಂದ ಹೊಗಳುತ್ತಾ ಹೋಗುತ್ತಾನೆ. ನಡುವೆ ಆಂಕರ್ “ರಾಹುಲ್ ಗಾಂಧಿ ಬಗ್ಗೆ ಏನು ಹೇಳ್ತೀರಿ” ಅಂದದ್ದಕ್ಕೆ ಆ ವ್ಯಕ್ತಿ ವ್ಯಗ್ರನಾಗಿ ಇನ್ನಷ್ಟು ಅತ್ಯುಗ್ರತೆಯಿಂದ “ಗಂಡಸರ ಬಗ್ಗೆ ಮಾತನಾಡ್ರಿ, ಅವರ ಬಗ್ಗೆ ಯಾಕೆ ಹೇಳ್ತೀರ್ರಿ” ಅನ್ನುತ್ತಾರೆ. ಸುತ್ತಮುತ್ತ ನೆರೆದಿರುವ ನಾಲ್ಕೈದು ಹೆಂಗಸರು ಗೊಳ್ಳೆಂದು ನಗುತ್ತಾರೆ! ಇದನ್ನು ಯಾವುದೇ ರೀತಿ ಎಡಿಟ್ ಮಾಡಿಕೊಳ್ಳದೆ, ಇಂಟರ್‌ಪ್ರಿಟೇಶನ್ ಇಲ್ಲದೆ ಹಾಗೆಯೇ ಪ್ರಸಾರ ಮಾಡಲಾಗುತ್ತದೆ. ಎಷ್ಟೋ ಜನ ಉತ್ಸಾಹದಿಂದ ಶೇರ್ ಮಾಡಕೊಳ್ತಾರೆ. ಅದರಲ್ಲಿ ಮಹಿಳೆಯರು ಕೂಡ ಇದ್ದಾರು!

ಈ ವಿಷಕಾರಿ ಮ್ಯಾಸ್ಕುಲಾನಿಟಿ ಏನನ್ನು ಸೂಚಿಸುತ್ತದೆ? ಈ ದೇಶದ ಸಮಸ್ಯೆಯನ್ನು ನಿವಾರಿಸಲು ಒಬ್ಬನೇ ಸರ್ವಶಕ್ತ ಎಂದು ನೋಡುವ ವ್ಯಕ್ತಿ (ಇಂತಹ ಜನರು) ಸಂಘಟಿತ ವಿವೇಕವನ್ನೇ ನುಚ್ಚುನೂರು ಮಾಡುತ್ತಿದ್ದಾನೆ. ಅವಿವೇಕದ ಪುರುಷಹಂಕಾರವನ್ನು ಒಬ್ಬ ಸರ್ವಾಧಿಕಾರಿ ಧೋರಣೆಯ ವ್ಯಕ್ತಿಯಲ್ಲಿ ನೋಡಿ ಸಂತೃಪ್ತಿಯಾಗಿದ್ದಾರೆ. ತನ್ನ ಸುತ್ತಮುತ್ತಲಿನ ಮಹಿಳೆಯರನ್ನೇ ಆತ ಅವಮಾನಿಸುತ್ತಿದ್ದಾನೆ ಎಂಬುದನ್ನು ತಿಳಿಯದಷ್ಟೂ ಅಂಧನಾಗಿದ್ದಾನೆ. ಪರಸ್ಪರ ಪ್ರೀತಿಗೌರವಗಳಿಲ್ಲದ ಸಮಾಜದಲ್ಲಿ ಬದುಕುವುದು ನರಕಸದೃಶ ಎಂದು ಈ ವ್ಯಕ್ತಿಗೆ ಅರ್ಥವಾಗಲು ಸಾಧ್ಯವೇ?

ವಿಡಿಯೋ 3: ಇದು ಮಂಗಳೂರಿನಲ್ಲಿ ನಡೆದದ್ದು ಎಂದು ಕೆಲವರು ಹಂಚಿಕೊಂಡಿದ್ದಾರೆ; ಯಾವ ಜಾಗದಲ್ಲಿ ನಡೆಯಿತು ಎಂಬುದರ ನಿಖರವಾದ ಮಾಹಿತಿ ಇಲ್ಲದಿದ್ದರೂ, ಈ ವಿಡಿಯೋವನ್ನು ಮೇಲಿನ ಎರಡು ವಿಡಿಯೋಗಳಿಗೆ ಹೋಲಿಸಿದರೆ, ಕಾಂಗ್ರೆಸ್ ಪಕ್ಷದವರು ಹೆಚ್ಚು ಹಂಚಿಕೊಂಡಿದ್ದಾರೆ. ಪ್ರಸಕ್ತ ರಾಜ್ಯ ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಒಬ್ಬ ಮಹಿಳೆ ಪಟ್ಟಿಮಾಡತೊಡಗಿದಂತೆ ಕೆಲವು ಗಂಡಸಲು ಆಕೆಯ ಸುತ್ತ ನೆರೆದು ಜೈ ಮೋದಿ ಎಂದು ಕಿರುಚಲಾರಂಭಿಸುತ್ತಾರೆ. ಆಕೆಗೆ ಮಾತನಾಡಲು ಅವಕಾಶವನ್ನೂ ನೀಡದಂತೆ ಅಡ್ಡಿಪಡಿಸುತ್ತಾರೆ. ಮಹಿಳೆಯ ಧೈರ್ಯವನ್ನು ಕೊಂಡಾಡಿಕೊಂಡು, ಕಾಂಗ್ರೆಸ್ ಪಕ್ಷದ ಕೆಲವರು ಇದನ್ನು ಹಂಚಿಕೊಂಡಿದ್ದಾರದರೂ, ಆ ಮಹಿಳೆಯನ್ನು ಹೊಗಳುವ ಭರದಲ್ಲಿ ಮತ್ತು ಜೈ ಮೋದಿ ಘೋಷಣೆಯನ್ನು ಕೂಗಿದವರನ್ನು ನಿಂದಿಸುವುದರಲ್ಲಿ ಅದೇ ಪುರುಷ ಅಹಂಕಾರದ ಟೋನ್ ಕಾಣದೆ ಇರದು. ಅದೂ ಕೂಡ ಟ್ಯಾಕಲ್ ಮಾಡಬೇಕಿರುವ ವಿಷಯವೇ!

ಮುಕ್ತವಾಗಿ ಮತ್ತು ಗಾಂಭೀರ್ಯದಿಂದ ಒಂದು ಟೀಕೆಯನ್ನು ಹಂಚಿಕೊಳ್ಳಲಾಗದ ಪರಿಸ್ಥಿತಿಯನ್ನು ಈ ಬಲಪಂಥೀಯ ಅಭಿಮಾನಿಗಳು ಈ ಮಟ್ಟದಲ್ಲಿ ಸೃಷ್ಟಿಸಲು ಹವಣಿಸುತ್ತರುವುದೇಕೆ? ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ನೈತಿಕತೆಯ ಬಗ್ಗೆ ಇಷ್ಟು ಅಸಡ್ಡೆ ಬೆಳೆದರೆ ಮುಂದೆ ದೇಶದ ಗತಿಯೇನು?

ಇವು ಕೆಲವೇ ಕೆಲವು ಉದಾಹರಣೆಗಳು. ಇದನ್ನು ಬರೆಯುತ್ತಿರುವ ಹೊತ್ತಿಗೆ ಮತ್ತೊಂದು ವಿಡಿಯೋವನ್ನು ಕೆಲವರು ಹಂಚಿಕೊಳ್ಳುತ್ತಿದ್ದರು. ಈದಿನ.ಕಾಂ ವರದಿಗಾರ್ತಿಯೊಬ್ಬರು ಬೆಂಗಳೂರಿನ ಮೋದಿ ರೋಡ್ ಶೋ ವೇಳೆ ಜನಸಾಮಾನ್ಯರಿಗಾಗಿರುವ ಸಮಸ್ಯೆಗಳ ಬಗ್ಗೆ ದ್ವಿಚಕ್ರವಾಹನದಲ್ಲಿ ಚಲಿಸುತ್ತಿರುವ ಇಬ್ಬರನ್ನು ಕೇಳುತ್ತಾರೆ. ಒಬ್ಬಾತ ’ತೊಂದರೆಯಾಗುತ್ತಿದೆ’ ಎಂದು ಹೇಳುತ್ತಿದ್ದಂತೆಯೇ ಕೇಸರಿ ಪಕ್ಷದ ಅಭಿಮಾನಿಯೊಬ್ಬ, ಅವರ ಸಂಭಾಷಣೆಗೆ ಅಡ್ಡಿಪಡಿಸುವುದಲ್ಲದೆ, ’ಎಂತೆಂಥ ವ್ಯಕ್ತಿಗಳನ್ನು ಪ್ರಶ್ನೆ ಮಾಡುತ್ತೀರ್ರಿ’ ಅಂತ ಆ ವರದಿಗಾರ್ತಿಗೆ ದಬಾಯಿಸುತ್ತಾರೆ. ಇದನ್ನು ಪ್ರಶ್ನಿಸಲು ನೀವ್ಯಾರು, ನಾವು ಎಲ್ಲರನ್ನೂ ಮಾತನಾಡಿಸುತ್ತೇವೆ ಎಂದು ಆಕೆ ಪ್ರತಿರೋಧ ತೋರಿಸಿದಾಕ್ಷಣ, ’ಕ್ರಾಸ್ ಕೊಶ್ಚನ್ ಮಾಡಬೇಕ್ರಿ’ ಎಂದು ಪತ್ರಿಕೋದ್ಯಮದ ಪಾಠ ಹೇಳಲು ಪ್ರಾರಂಭಿಸುತ್ತಾರೆ!

ಇದನ್ನೂ ಓದಿ: ‘ರಾಜ್ಯದಲ್ಲಿ ಬಿಜೆಪಿ ಸೋತರೆ ಕೇಂದ್ರದಿಂದ ಬರುವ ಎಲ್ಲ ಯೋಜನೆಗಳು ಬಂದ್ ಆಗಲಿವೆ’: ಜೆಪಿ ನಡ್ಡಾ ಹೇಳಿಕೆ

ಪತ್ರಿಕೋದ್ಯಮದ ಪಾಠ ಹೇಳುವ ಈ ವ್ಯಕ್ತಿಯ ಥರದವರೇ ದಿನಬೆಳಗಾದರೇ ಮೋದಿ ಮತ್ತು ಅಮಿತ್ ಶಾರವರನ್ನು ದೈವೀಕರಿಸುವ ಕನ್ನಡ ನ್ಯೂಸ್ ಚಾನೆಲ್‌ಗಳನ್ನು ನೋಡುತ್ತಾ ಮುಳುಗುವವರು. ಅಲ್ಲಿ ಅಧಿಕಾರವನ್ನು ಪ್ರಶ್ನಿಸಿ, ಅಧಿಕಾರಕ್ಕೆ ಸತ್ಯ ನುಡಿಯುವ ಕಾರ್ಯಕ್ರಮಗಳನ್ನು ಮಾಡಿ ಎಂದು ಹೇಳಲು ಇವರಿಗೆ ಏಕೆ ಆಗುವುದಿಲ್ಲ?

ಮೇಲೆ ಚರ್ಚಿಸಿದ ಕೆಲವು ವಿಡಿಯೋಗಳಲ್ಲಿ ನೋಡಿದ ಜನಸಾಮಾನ್ಯರ ಅನುಚಿತ ವರ್ತನೆಗೆ ಈ ಮುಖ್ಯವಾಹಿನಿ ಮಾಧ್ಯಮಗಳು ಕೂಡ ದೊಡ್ಡ ಕೊಡುಗೆ ನೀಡಿವೆ. ಮೇ 6 ಮತ್ತು 7ನೇ ತಾರೀಖಿನಂದು ಪ್ರಧಾನಮಂತ್ರಿಗಳು ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವಾಗ ಈ ಸುವರ್ಣ, ಪಬ್ಲಿಕ್, ಟಿವಿ9 ಮುಂತಾದ ಟಿವಿ ಚಾನೆಲ್‌ಗಳು ಅಕ್ಷರಶಃ ಬಿಜೆಪಿ ಪಕ್ಷದ ಚಾನೆಲ್‌ಗಳಂತೆ ಇಡೀ ಸಮಯ ನೇರಪ್ರಸಾರ ಮಾಡಿಕೊಂಡು, ಮೋದಿ ಭಜನೆ ಮಾಡಿಕೊಂಡು ಕಾಲ ಕಳೆದವು. ಒಂದು ಕ್ರಿಟಿಕಲ್ ಆದ ನೋಟವೂ ಬರಲಿಲ್ಲ. ಇನ್ನು ಆ ರೋಡ್ ಶೋಗಾಗಿ ನೆರೆದ ಜನರ ಉನ್ಮಾದದ ಅಭಿಪ್ರಾಯಕ್ಕೆ ಈ ಚಾನೆಲ್‌ಗಳು ಸೀಮಿತವಾಗಿದ್ದವೇ ಹೊರತು, ಇದರಿಂದ ತೊಂದರೆಗೊಳಗಾದ ಅಸಂಖ್ಯಾತ ಜನಸಾಮಾನ್ಯರ ಅಭಿಪ್ರಾಯಗಳಿಗೆ ಬೆನ್ನುತರುಗಿಸಿ ಕೂತಿದ್ದವು.

ರಾಜಕೀಯ ಮುಖಂಡರ ಹದ್ದುಮೀರಿದ ಮಾತುಗಳ ಬಗ್ಗೆಯೂ ಮಾಧ್ಯಮಗಳು ಪಕ್ಷಪಾತಿ ಧೋರಣೆ ತೋರಿದವು. ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರು ಮೋದಿಯವರನ್ನು ಟೀಕಿಸಿದ್ದನ್ನು ಖಂಡಿಸುವುದಕ್ಕೆ ಸಾಕಷ್ಟು ಸಮಯವನ್ನು ಈ ಟಿವಿ ಮಾಧ್ಯಮಗಳು ನಿಗದಿಪಡಿಸಿದರೆ, ಖರ್ಗೆ ಕುಟುಂಬವನ್ನು ’ಸಾಫ್’ ಮಾಡುತ್ತೇನೆಂದು ಬೆದರಿಕೆ ಹಾಕಿದ ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠರನ್ನು ಅದೇ ನಿಷ್ಠೆಯಿಂದ ಖಂಡಿಸುವ ಗೋಜಿಗೆ ಹೋಗಲಿಲ್ಲ. ಸೋನಿಯಾ ಗಾಂಧಿಯವರ ಬಗ್ಗೆ ಬೈಗುಳದ ಮಳೆ ಹರಿಸಿದ ಬಸವರಾಜ ಯತ್ನಾಳರ ಮಾತುಗಳಿಗೆ ಜಾಣ ಕಿವುಡಾದರು. ಇಂತಹ ಪಕ್ಷಪಾತಗಳನ್ನು ಲಿಸ್ಟ್ ಮಾಡುತ್ತಾ ಹೋದರೆ ಪುಟಗಳು ಸಾಲದಾದೀತು.

ಇನ್ನೊಂದು ಉದಾಹರಣೆಯೆಂಬಂತೆ, ಸುವರ್ಣ ಮತ್ತು ಪಬ್ಲಿಕ್ ಟಿವಿಯ ಸಂಪಾದಕರಾದ ಅಜಿತ್ ಹನುಮಕ್ಕನವರ ಮತ್ತು ರಂಗನಾಥ್ ಅವರು ಈ ಚುನಾವಣೆಯ ಪ್ರಚಾರದ ಸಮಯದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಸಂದರ್ಶನ ಮಾಡಿ ಕಾರ್ಯಕ್ರಮವನ್ನು ಪ್ರಸಾರ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡರನ್ನು ಮನಸ್ಸಿಗೆ ಬಂದಂತೆ ತರಾಟೆಗೆ ತೆಗೆದುಕೊಳ್ಳುವ, ಕೆಲವೊಮ್ಮೆ ಬಿಜೆಪಿ ರಾಜ್ಯ ನಾಯಕರನ್ನೂ ಏರುದನಿಯಲ್ಲಿ ಪ್ರಶ್ನಿಸುವ ಇವರುಗಳು ಅಮಿತ್ ಶಾ ಮುಂದೆ ಶರಣಾದವರಂತೆ, ದೈನೇಸಿಯಾಗಿ ಮ್ಯಾಚ್ ಫಿಕ್ಸ್ ಮಾಡಿಕೊಂಡವರಂತೆ ಸೌಮ್ಯ ಸ್ವಭಾವದ ಮೂರ್ತ ರೂಪಗಳಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರನ್ನು, ಅವರ ಆಡಳಿತವನ್ನು ಮುಜುಗರಕ್ಕೆ ಸಿಕ್ಕಿಸುವ ಒಂದು ಪ್ರಶ್ನೆಯೂ ಇವರ ಬಾಯಿಯಿಂದ ಉದುರಲಿಲ್ಲ. ಭ್ರಷ್ಟಾಚಾರದ ಬಗೆಗಾಗಲೀ, ಪರಿವಾರವಾದದ ಬಗೆಗಾಗಲಿ ಅಮಿತ್ ಶಾ ಕೊಟ್ಟ ವ್ಯಾಖ್ಯಾನಗಳನ್ನು ಮತ್ತು ಉತ್ತರಗಳನ್ನು ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸುತ್ತಿದ್ದರು. ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ ಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸುವಾಗ ಏರುವ ಈ ’ಪತ್ರಕರ್ತರ’ ಧ್ವನಿ ಅಮಿತ್ ಶಾ ಮುಂದೆ ಕಮರಿ ಹೋಗುವುದೇಕೆ?

ಇದನ್ನು ಓದುವ ಹೊತ್ತಿಗೆ ಮತದಾನ ಮುಗಿದುಹೋಗಿರುತ್ತದೆ. ಚುನಾವಣಾ ಫಲಿತಾಂಶಗಳು ಹೊರಬೀಳುವುದಕ್ಕೂ ಆರಂಭವಾಗಿರಬಹುದು. ಹಲವು ಚುನಾವಣಾ ಪೂರ್ವ ಅಭಿಪ್ರಾಯ ಸಮೀಕ್ಷೆಗಳು ಸೂಚಿಸಿರುವಂತೆ ಈಗಿರುವ ಬಿಜೆಪಿ ಸರ್ಕಾರ ಬದಲಾಗಬೇಕಿದೆ. ಒಂದು ಪಕ್ಷ ಬಿಜೆಪಿ ಅಧಿಕಾರವನ್ನು ಮರಳಿ ಪಡೆಯಲು ಸಾಧ್ಯವಾಗಿದ್ದರೆ ಮೇಲೆ ಚರ್ಚಿಸಿದ ಕಳವಳಕಾರಿ ಸಂಗತಿಗಳ ಬಗ್ಗೆ ಆ ಪಕ್ಷವಾಗಲೀ ಆ ಪಕ್ಷದ ಮುಖಂಡರಾಗಲೀ ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಒಂದು ಪಕ್ಷ ಒಪಿನಿಯನ್ ಪೋಲ್ಸ್ ನಿಜವಾಗಿ ಬಲಪಂಥೀಯತೆ ಮತ್ತು ಮೆಜಾರಟೇರಿಯನ್ ಧೋರಣೆಯ ವಿರುದ್ಧವಾದ ಪಕ್ಷ ಅಥವಾ ಪಕ್ಷಗಳ ಮೈತ್ರಿ ಅಧಿಕಾರ ಹಿಡಿದಿದ್ದರೆ ಮೇಲಿನ ಕಳವಳಗಳನ್ನು ಅಡ್ರೆಸ್ ಮಾಡುವಂತಹ ನಿರ್ಣಾಯಕ ಸಾಂಸ್ಕೃತಿಕ ಸಮರಕ್ಕೆ ಅದು ಮುಂದಾಗಬೇಕಾಗುತ್ತದೆ. ಮನಸ್ಸುಗಳನ್ನು ಬೆಸೆಯಬೇಕಿರುವಾಗ, ತಿಳಿವಳಿಕೆ-ವಿವೇಕವನ್ನು ಮರುಗಳಿಸಿಕೊಳ್ಳಬೇಕಿರುವಾಗ ’ಸಮರ’ ಪದ ಅನುಚಿತವಾಗಿ ಕಂಡರೂ, ಸರ್ಕಾರ ಈ ನಿಟ್ಟಿನಲ್ಲಿ ಗೆಲ್ಲುವ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಂಡೇ ತೀರಬೇಕಿದೆ. ನಮ್ಮ ಪ್ರಜಾಪ್ರಭುತ್ವದ ಉಳಿವಿಗಾಗಿ. ಕೆಲವು ಸದ್ಯದ ಸಮಸ್ಯೆಗಳ ಬಗ್ಗೆ ತುರ್ತಾಗಿ ಕ್ರಮವಹಿಸಬೇಕಿದೆ.

1. ಮಕ್ಕಳ ಶಿಕ್ಷಣದಲ್ಲಿ ಸಮಾನತೆ, ಪ್ರತಿನಿಧಿತ್ವದಂತಹ ಮಹತ್ವವನ್ನು ಹೇಳಿಕೊಡುವ ಪಠ್ಯಗಳು ಸೇರಬೇಕು. ಅದರ ಮೂಲಕ ಸಹಜೀವಿಗಳನ್ನು ಗೌರವಿಸುವ, ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೆಚ್ಚೆಚ್ಚು ಪಸರಿಸುವ ಶಿಕ್ಷಣ ನೀಡಿ, ನಾಡಿನ ಬಹುತ್ವದ ರಕ್ಷಣೆಯ ಜವಾಬ್ದಾರಿಯನ್ನು ಅವರ ಮೇಲೆ ಹೊರಿಸಬೇಕು.

2. ಜನಪರ ಮಾಧ್ಯಮಗಳು ಹೆಚ್ಚುವಂತೆ ನೋಡಿಕೊಳ್ಳಬೇಕು. ಹಾಗೆ ಮಾಡುವಾಗ ಎಲ್ಲ ಅಧಿಕಾರವನ್ನೂ ಪ್ರಶ್ನಿಸುವ ಸ್ವಾತಂತ್ರ್ಯ ಆ ಮಾಧ್ಯಮಗಳಿಗೆ ಇರುವಂತೆ ಕಾಯಲು ನೀತಿನಿರೂಪಣೆಯನ್ನು ರಚಿಸಬೇಕು. ಒಂದು ದೊಡ್ಡ ರೀತಿಯಲ್ಲಿ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಶಿಕ್ಷಣವನ್ನು ನೀಡುವ (ಮಾಧ್ಯಮಕರ್ತರಿಗೂ ಮತ್ತು ಜನ ಸಾಮಾನ್ಯರಿಗೂ) ಯೋಜನೆಗಳನ್ನು ರೂಪಿಸಬೇಕು. ಸಮಾಜದಲ್ಲಿ ಒಡಕು ತರಲು ಬಯಸುವ ಪತ್ರಕರ್ತರಿಗೆ ಸಂವಿಧಾನದ ಪಾಠ ಹೇಳಿ ಆ ಮಾರ್ಗದಲ್ಲಿ ನಡೆಯುವ ಒತ್ತಡ ಅವರ ಮೇಲೆ ಹಾಕಬೇಕು.

3. ಜನಸಾಮಾನ್ಯರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸಬೇಕು; ಅದು ಸರ್ವಾಧಿಕಾರಿ ಮನೋಧೋರಣೆಯನ್ನು ಪ್ರಶ್ನಿಸುವಂತಿರಬೇಕು. ಪ್ರಜಾಪ್ರಭುತ್ವದಲ್ಲಿ ಬಹುತ್ವ, ವೈವಿಧ್ಯತೆ ಏಕೆ ಮುಖ್ಯ ಎಂಬುದನ್ನು ಮನಗಾಣಿಸುವಂತಿರಬೇಕು. ಈಗಿರುವ ಅಕಾಡೆಮಿಗಳು ತಮ್ಮತಮ್ಮ ಕ್ಷೇತ್ರದಲ್ಲಿ ಇಂತಹ ರಾಜಕೀಯ ಪ್ರಜ್ಞೆಯನ್ನು ಎಚ್ಚರಿಸುವಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕು.

4. ಸಂಘ ಪರಿವಾರದ ಆರ್‌ಎಸ್‌ಎಸ್, ಬಜರಂಗದಳ ಮುಂತಾದ ಸಂಸ್ಥೆಗಳ ಬಗ್ಗೆ ಜನರು ನಿಖರ ತಿಳಿವಳಿಕೆಯನ್ನು ಪಡೆದು, ಬಹುತ್ವ ಮತ್ತು ಸಂವಿಧಾನ ವಿರೋಧಿ ಸಂಘಟನೆಗಳನ್ನು ಜನ ಸ್ವಯಂಪ್ರೇರಿತವಾಗಿ ವಿರೋಧಿಸುವ ಸಾಂಸ್ಕೃತಿಕ ಕ್ರಾಂತಿಗೆ ಮುಂದಿನ ಅಧಿಕಾರ ಅವಕಾಶ ಸೃಷ್ಟಿಸಬೇಕು.

5. ಧರ್ಮದ ಆಧಾರದಲ್ಲಿ ಧ್ರುವೀಕರಣಗೊಂಡಿರುವ ಜನರನ್ನು ಬೆಸೆಯಲು, ಅದರಲ್ಲಿಯೂ ದಾರಿತಪ್ಪಿರುವ ಬಹುಸಂಖ್ಯಾತರನ್ನು ವಿವೇಕದ ಹಳಿಗೆ ತರಲು ಸರ್ಕಾರದ ನೀತಿಗಳು ಸಹಕರಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...