Homeಅಂಕಣಗಳುನಮ್ಮ ತೋಟದ ಸಾಲಿಗೆ ನೀವೂ ಬನ್ನಿನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಮ್ಮ ತೋಟದ ಸಾಲಿಗೆ ನೀವೂ ಬನ್ನಿ-2: ಈ ಹಕ್ಕಿಗಳು ಎಲ್ಲಿರುತ್ತವೋ ಏನೋ?

ನಮ್ಮ ತೋಟದ ಖಾಯಂ ವಾಸಿಗಳೆಂದರೆ ಕೆಂಬೂತ ಎಂದು ಕರೆಯಲ್ಪಡುವ ಸಾಂಬಾರ್ಗಾಗೆಗಳು. ಈ ಸುಂದರ ಪಕ್ಷಿಗಳನ್ನು ಯಾಕೆ ಕೆಂಬೂತ ಎಂದು ಕರೆದರೋ ಎನ್ನುತ್ತಾರೆ ಕೃಷ್ಣಮೂರ್ತಿ ಬಿಳಿಗೆರೆಯವರು...

- Advertisement -
- Advertisement -

ಗ್ರಾಸ್‌ ಕಟರ್‌ನಿಂದ ಹುಲ್ಲು ಹೊಡೆಯುತ್ತಿದ್ದರೆ ಕೊಕ್ಕರೆಗಳು ಹೇಳಿ ಕಳಿಸಿದಂತೆ ನನ್ನ ಹಿಂದೆ ಹಾಜರಿರುತ್ತವೆ. ಅವು ನನ್ನನ್ನು ಸದರ ಮಾಡಿಕೊಂಡು ಯಾವ ಭಯವೂ ಇಲ್ಲದೆ ಸುತ್ತ ನೆರೆದಿರುತ್ತವೆ. ಅವುಗಳಿಗೆ ಈ ಹುಲ್ಲು ಹೊಡೆಯುವ ಸದ್ದು ಊಟದ ಕರೆ ಗಂಟೆಯಂತೆ ಕೇಳಿಸುವುದು ರೂಢಿಯಾಗಿರಬೇಕು. ಹಕ್ಕಿಗಳು ಮನುಷ್ಯರಿಗೆ ಹೆದರುತ್ತವೆ. ಅದಕ್ಕೆ ಅವು ಹಾರುವುದನ್ನು ಕಲಿತಿರುವುದು. ಆದರೆ ನೇಗಿಲಲ್ಲಿ ಉಳುಮೆ ಮಾಡುವ ಮನುಷ್ಯರಿಗೆ ಅವು ಹೆದರುವುದಿಲ್ಲ. ಉಳುಮೆ ಮಾಡುತ್ತಾ ಮುಂದೆ ಸಾಗುತ್ತಿದ್ದಂತೆ ಅವು ನೇಗಿಲ ಗೆರೆಯಲ್ಲಿ ಪ್ರತ್ಯಕ್ಷವಾಗಿಬಿಡುವ ಎರೆಹುಳು, ಗೆದ್ದಲು, ಗೊಣ್ಣೆಹುಳ ಇನ್ನಿತರ ಜೀವ ಜಂತುಗಳ ಸವಿಯೂಟ ಮಾಡುತ್ತಾ ಸಾಗುವವು.

ಹಾಗೆ ನಾನು ಹುಲ್ಲು ಹೊಡೆಯತ್ತಾ ಮುಂದೆ ಸಾಗಿದಂತೆ ಉಣ್ಣೆಗೊರವ ಮತ್ತು ಕೊಕ್ಕರೆಗಳು ಹುಲ್ಲೊಳಗೆ ಕುಂತ, ನಿಂತ, ಮಲಗಿಕೊಂಡಿದ್ದ ಮಿಡತೆ, ಹುಲ್ಲುನೊಣ, ಗೊಣ್ಣೆಹುಳ, ಕಂಬಳಿಹುಳು, ಬಸವನಹುಳು, ಅಂಗುಲದುಳವೇ ಮುಂತಾದ ಕೀಟಗಳು ದಿಢೀರ್‌ ಒದಗಿದ ಆಪತ್ತಿನಿಂದ ತಪ್ಪಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ನೆಗೆನೆಗೆದು ಓಡತೊಡಗಿದರೆ ಅವುಗಳಲ್ಲಿ ಕೆಲವನ್ನಾದರೂ ಈ ಹಕ್ಕಿಗಳು ಕುಕ್ಕಿ ಕಬಳಿಸುತ್ತವೆ. ಆ ಊಟದ ಆಟ ಅಥವ ಕೀಟದ ಪೀಕಲಾಟ ಸಾಗುತ್ತಿರುತ್ತದೆ. ಒಮ್ಮೊಮ್ಮೆ ಈ ಆಟಕ್ಕೆ ಒಂದೆರಡು ನಾಯಿಗಳು ಸೇರಿಕೊಳ್ಳುತ್ತವೆ. ಅವು ತೋಟದೊಳಗೆ ಇಲಿ ಮತ್ತು ಅಳಿಲುಗಳನ್ನು ಸಾಧ್ಯವಾದರೆ ಮೊಲಗಳನ್ನೂ ಹುಡುಕುತ್ತವೆ. ಅವು ಸಿಗದಿದ್ದಾಗ ಅಲ್ಲಿಯೇ ಕೈಯ್ಯಳತೆಯಲ್ಲಿ ಸಿಗಬಹುದೆಂದು ಭ್ರಮೆ ಹುಟ್ಟಿಸುವ ಕೊಕ್ಕರೆಗಳ ಕತ್ತಿಗೂ ಬಾಯಿ ಹಾಕಲು ವಿಫಲ ಯತ್ನ ನಡೆಸಿ ತಮ್ಮ ಬೇಟೆಯ ಚಟ ತೀರಿಸಿಕೊಳ್ಳುತ್ತವೆ.

ಇನ್ನು ತೋಟದಲ್ಲಿನ ಸೀಬೇ ಮರಗಳು ಕಾಯಿಬಿಟ್ಟು ಸಂಭ್ರಮಿಸುತ್ತಿರುವಾಗ ಹೇಳಿಕಳಿಸಿದಂತೆ ಬರುವ ಗಿಣಿಗಳು ಮರಗಳ ಮೊದಲ ಹಣ್ಣಿನ ರುಚಿ ನೋಡುವುದು ಮಾಮೂಲಿಯಾಗಿದೆ. ಇವು ತಿಂದು ಬಿಟ್ಟ ಗಿಣಿಗಡಕಗಳು ನಮಗೆ. ಗಿಣಿಗಳು ಒಂಟಿಯಾಗಿರುವುದಿಲ್ಲ ಯಾವಾಗಲು ದಂಡು ಕಟ್ಟಿಕೊಂಡೇ ಇರುವುದು, ಬರುವುದು ದಾಳಿ ಮಾಡುವುದು. ಇವು ಮೆಣಸಿನ ಗಿಡಗಳಿಗೆ ಬಿದ್ದರೆ ಅವುಗಳ ಕತೆ ಮುಗಿದಂತೆ, ಆ ಹಸಿರು ಮೆಣಸಿನ ಕಾಯಿಗಳನ್ನು ಸರಿಯಾಗಿ ಅರ್ಧಕ್ಕೆ ಸೀಳಿ ಒಳಗಿನ ಬೀಜಗಳನ್ನು ಸ್ವಾಹ ಮಾಡುವುದು ಇವುಗಳ ವೈಶಿಷ್ಟ್ಯ. ಮೆಣಸಿ ಕಾಯಿ ಮನುಷ್ಯರಿಗೆ ಖಾರವೆನಿಸಿದರೆ ಈ ಗಿಣಿಗಳಿಗೆ ಸಿಹಿ ಜೇನಿರಬಹುದು ಯಾರಿಗೆ ಗೊತ್ತು?

ಇನ್ನು ಹೀರೇ ಹಕ್ಕಿಗಳು ರಾತ್ರಿ ಪಾಳಿಯಲ್ಲಿ ಬಂದು, ಕತ್ತಲ ಬೆಳಕಲ್ಲಿ ಒಳ್ಳೊಳ್ಳೆಯ ಹಣ್ಣುಗಳನ್ನು ಹುಡುಕಿ, ಕೊಕ್ಕಿನಿಂದ ಕಚ್ಚಿ ತಂದು ತೆಂಗಿನ ಮರದ ಗರಿಗಳ ವಾಕವಾದ ಜಾಗಕ್ಕೆ ಕೂತು ತಿಂದು ಹೋಗುತ್ತವೆ. ಕೆಲವು ಹಣ್ಣುಗಳು ಅವುಗಳ ಕೊಕ್ಕಿನ ಹಕ್ಕಿನಿಂದ ತಪ್ಪಿಸಿಕೊಂಡು ಉದುರಿ ಕೆಳಗೆ ಬಿದ್ದ ಹಣ್ಣುಗಳು ನಮಗೆ ಸಿಗುತ್ತವೆ. ನಾವು ಸೀಬೆ ಮರದಡಿಯಲ್ಲಿ ಸೀಬೇ ಹಣ್ಣು ಹುಡುಕುವುದಕ್ಕಿಂತ ತೆಂಗಿನ ಮರದಡಿಯಲ್ಲಿ ಹುಡುಕುವುದೇ ಹೆಚ್ಚು ಫಲಪ್ರದವಾಗಿರುತ್ತದೆ. ಬೆಳಗಾಗುವ ಮುನ್ನವೇ ಹೋಗಿ ಮನುಷ್ಯರ ಮಧ್ಯದ ಆಲದ ಮರಗಳಿಗೆ ತಲೆಕೆಳಗಾಗಿ ನೇತೇ ಬೀಳುವ ಈ ಹಕ್ಕಿಗಳಿಗೆ ಅದೆಷ್ಟು ಧೈರ್ಯವೋ ತಿಳಿಯದು

PC : Pinterest

ನಿಜ ಹೇಳಬೇಕೆಂದರೆ ಈ ಸೀಬೇ ಗಿಡಗಳು ಯಾವುವೂ ನಾವು ನೆಟ್ಟ ಮರಗಳಲ್ಲ. ಅವು ಇದೇ ತೆರನಾಗಿ ಹಕ್ಕಿಗಳೇ ಇಟ್ಟ ಹಿಕ್ಕೆಯ ಜೊತೆಯಲ್ಲಿ ಹುಟ್ಟಿದ ಮರಗಳು. ಅವು ಹಕ್ಕಿಗಳ ಹಕ್ಕಿನ ಮರಗಳು.

ನಮ್ಮ ತೋಟದ ಖಾಯಂ ವಾಸಿಗಳೆಂದರೆ ಕೆಂಬೂತ ಎಂದು ಕರೆಯಲ್ಪಡುವ ಸಾಂಬಾರ್ಗಾಗೆಗಳು. ಈ ಸುಂದರ ಪಕ್ಷಿಗಳನ್ನು ಯಾಕೆ ಕೆಂಬೂತ ಎಂದು ಕರೆದರೋ.

PC : Freepik

ಇವು ಯಾಕಿಷ್ಟು ನಾಚಿಕೆಯನ್ನು ಬೆಳೆಸಿಕೊಂಡಿವೆಯೋ ಗೊತ್ತಿಲ್ಲ. ಅವು ನಮ್ಮ ಕಣ್ಣಿಗೆ ಬಿದ್ದರೆ, ನಾವು ಅವುಗಳ ಕಣ್ಣಿಗೆ ಬಿದ್ದರೆ ಒಡನೆಯೇ ಅವಿತುಕೊಳ್ಳಲು ಹಾತೊರೆಯತ್ತವೆ. ಏನೇ ಇರಲಿ ನಮ್ಮ ತೋಟದೊಳಗೆ ಇವುಗಳನ್ನು ನೋಡದ ದಿನವಿಲ್ಲ. ಅಂದರೆ ಈ ತೋಟ ಸಾಂಬಾರ್ಗಾಗೆಯದು ಎಂಬುದನ್ನು ಒಪ್ಪಲೇಬೇಕು. ಇತರ ಹಕ್ಕಿಗಳಂತೆ ಇವು ಜೋಡಿಯಾಗಿರುವುದಿಲ್ಲ, ಯಾವಾಗಲೂ ಒಂಟಿ. ಆದರೆ ಸ್ವಲ್ಪ ದೂರದಲ್ಲೆ ಅದರ ಸಂಗಾತಿ  ಇರುವುದನ್ನು ಅವುಗಳ ಕೂಗುಗಳಿಂದ ಗುರ್ತಿಸಬಹುದು. ಇವು ಇಲಿ ಪ್ರಿಯ ಹಕ್ಕಿಗಳು, ತೆಂಗಿನ ನೆತ್ತಿ ಸುಳಿಯಲ್ಲಿ ಇಲಿ ಗೂಡುಗಳನ್ನು ಹುಡುಕಿ, ಬೆದಕಿ ಇಲಿ ಮರಿಗಳನ್ನು ಹೆಕ್ಕಿ ತಿನ್ನುತ್ತವೆ. ಈ ಹಕ್ಕಿಗಳು ಹಣ್ಣುಗಳನ್ನು ಅಷ್ಟಾಗಿ ಇಷ್ಟಪಡುವುದಿಲ್ಲ. ಇವು ಹೀಗೆ ಇಲಿಗಳನ್ನು ನಮ್ಮ ತೆಂಗಿನ ತೋಟಗಳಲ್ಲಿ ನಿಯಂತ್ರಿಸದಿದ್ದರೆ ಒಂದು ಎಳನೀರನ್ನು ಕಾಣಲಾಗುತ್ತಿರಲಿಲ್ಲವೇನೋ. ಇಷ್ಟಾಗಿಯೂ ಇಲಿ ಬುಲ್ಡೆಗಳು ಮರದ ಬುಡದಲ್ಲಿ ಇಟ್ಟಾಡುತ್ತಿರುವುದು ಇಲಿಗಳ ಬುದ್ಧಿವಂತಿಕೆಗೆ ಸಾಕ್ಷಿ. ಎಲ್ಲಾ ಕಡೆಯೂ ಹಕ್ಕಿಗಳು ಹಾರಡುತ್ತವೆ, ಆದರೆ ನಮ್ಮ ತೋಟದಲ್ಲಿ ವಾಸಮಾಡುತ್ತವೆ.

ಸೋಬಾನೆ ಹಕ್ಕಿಗಳು ಬೆಳಗು, ಸಂಜೆ ಬೇಲಿ ಸಾಲುಗಳಲ್ಲಿ ಆಡುವುದನ್ನು ನೋಡಬೇಕು,  ತಿಂಡಿ ತಿಂದು ಅರ್ಜೆಂಟಾಗಿ ಎಲ್ಲಿಗೋ ಹೋಗಬೇಕು ಎನ್ನುವಂತೆ ಚಡಪಡಿಸುತ್ತಿರುತ್ತವೆ. ಅವುಗಳು ಬೇಲಿ ಸಾಲಿನಲ್ಲಿ ನಿಖರವಾಗಿ ಏನೇನು ತಿನ್ನುತ್ತವೆ ಎಂದು ಕಂಡುಹಿಡಿಯುವುದು ನನಗಿನ್ನೂ ಸಾಧ್ಯವಾಗಿಲ್ಲ. ಕೀಟಗಳು ಅವುಗಳ ಮುಖ್ಯ ಆಹಾರವೆಂಬುದು ನಿಜ, ಅವು ಎಳೆ ಹುಲ್ಲನ್ನು, ಹುಲ್ಲಿನ ಬೀಜಗಳನ್ನು ತಿನ್ನುತ್ತವೆ ಎನ್ನುವುದು ನನ್ನ ಅನುಮಾನ. ಗುಂಪು ಗುಂಪಾಗಿಯೆ ಇರುವ ಈ ಸೋಬಾನೆ ಹಕ್ಕಿಗಳು ಅವುಗಳ ಚಲನೆಯಲ್ಲಿ ಸ್ವಲ್ಪ “ಮದ್ದ” ಅನಿಸಿದರೂ ತಮ್ಮ ತಮ್ಮಲ್ಲಿ ಅತಿ ಎನ್ನಿಸುವಷ್ಟು ಮಾತಾಡುತ್ತಿರುತ್ತವೆ. ಈ ವಿಷಯದಲ್ಲಿ ಇವು ಮೇಷ್ಟ್ರರ ಜಾತಿ.

ಈ ನವಿಲುಗಳನ್ನು ಪಕ್ಷಿ ಎನ್ನಬೇಕೋ ಪ್ರಾಣಿ ಎನ್ನಬೇಕೋ ಹಾಗಿರುತ್ತದೆ ಅವುಗಳ ನಡೆ ನುಡಿ. ನಡೆದಾಡುವ ಪಕ್ಷಿಗಳು ಎಂದರೆ ಸ್ವಲ್ಪ ಸರಿ. ಹಾರುವ ಪ್ರಾಣಿ ಎಂದರೆ ಅದೂ ಸ್ವಲ್ಪ ಸರಿ. ಕೂಗುವುದು ಪ್ರಾಣಿಗಳ ಹಾಗೆ, ಕಾಣುವುದು ಪಕ್ಷಿಗಳ ಹಾಗೆ. ಇತ್ತೀಚೆಗೆ ಇವು ನಮ್ಮ ಬಯಲು ಸೀಮೆಯಲ್ಲಿ ಅತಿ ಎನ್ನಿಸುವಷ್ಟು ಹೆಚ್ಚಿವೆ. ಇವುಗಳನ್ನು ಬೇಟೆಯಾಡುವ ಪ್ರಾಣಿಗಳು ಕಾಡು ಮೇಡು ತೊರೆದು ಹಗಲು ಹೊತ್ತಲ್ಲಿ ತೋಟದ ಸಾಲಿಗೆ ಬರದಿರುವುದು ಇದಕ್ಕೆ ಕಾರಣವಿರಬಹುದು.

ಈ ನವಿಲುಗಳು ಹುಲ್ಲಿನ ಪೊದೆಗಳಲ್ಲಿ ಯಾವ ಭಯವೂ ಇಲ್ಲದೆ ಮೊಟ್ಟೆ ಇಟ್ಟು ಮರಿಮಾಡಿಕೊಂಡು ಹೋಗುವುದನ್ನು ರೂಢಿಮಾಡಿಕೊಂಡಿವೆ. ಮನುಷ್ಯರಿಗೆ ಇವುಗಳನ್ನು ಬೇಟೆಯಾಡಲು ಆಸೆ ಆದರೆ ಜೈಲು ಸೇರುವ ಭಯದಲ್ಲಿ ಅವುಗಳನ್ನು ನೋಡಿ, ಎಷ್ಟು ಕೇಜಿ ಮಾಂಸ ಬರಬಹುದು ಎಂದು ಊಹಿಸಿಕೊಂಡು ಜೊಲ್ಲು ಸುರಿಸಿ ಸುಮ್ಮನಾಗುತ್ತಾರೆ. ಹೊಲದಲ್ಲಿ ಬಿತ್ತಿದ ತೊಗರಿ, ಅವರೆ ಕಾಳುಗಳನ್ನು ಸಾಲು ಹಿಡಿದು ತಿನ್ನುವ ಈ ನವಿಲುಗಳನ್ನು ಕಂಡರೆ ನಮ್ಮ ರೈತರಿಗೀಗ ಅಭಿಮಾನವಿಲ್ಲ, ಕೊಲ್ಲುವಷ್ಟು ಸಿಟ್ಟು ಬಂದಿದೆ. ಇವು ಈಗ ಮಾಡುತ್ತಿರುವ ಹಾನಿ ಅತಿಯಾಗಿದೆ. ಎಳೆಯ ಪೈರುಗಳನ್ನು ಸ್ವಾಹ ಮಾಡುತ್ತವೆ. ಆಹಾರದ ಕೊರತೆಯಾದಾಗ ಅವು ಊರೊಳಕ್ಕು ಬರುವುದನ್ನು ರೂಢಿ ಮಾಡಿಕೊಳ್ಳುತ್ತಿವೆ. ರಾಷ್ಟ್ರಪಕ್ಷಿಯಾದ ನವಿಲು ಎಂಜಲು ಮುಸುರೆಯನ್ನು ಕುಡಿಯುವ ವಾಸ್ತವ ನಮ್ಮ ಕಣ್ಣ ಮುಂದಿದೆ. ಕಾಡುಗಳನ್ನು ಇನ್ನಿಲ್ಲದಂತೆ ಸವರಿ ಹಾಕಿ ಒತ್ತುವರಿ ಮಾಡಿದ್ದು, ಬೆಟ್ಟ ಗುಡ್ಡಗಳೆಲ್ಲೆಡೆಯಲ್ಲಿನ ಗಣಿಗಾರಿಕೆ ನೆಪದಲ್ಲಿ ಸಿಡಿಸುವ ಡೈನಾಮೈಟ್‌ ಸಾವಿನ ಸದ್ದು, ಹುಲ್ಲುಗಾವಲುಗಳ ಕಣ್ಮರೆ, ನವಿಲಷ್ಟೇ ಅಲ್ಲ ಇತರ ಕಾಡು ಪ್ರಾಣಿಗಳ ಅಬ್ಬೇಪಾರಿತನ್ನಕ್ಕೆ ಕಾರಣವಾಗಿದೆ.

ಗುಚ್ಚಕ್ಕಿ ತೋಟಕ್ಕೆ ಬರುವುದಿಲ್ಲ. ಅವು ಊರೊಳಗೆ ಮಾತ್ರ ತಮ್ಮ ವಸತಿ ಮಾಡಿಕೊಂಡಿರುತ್ತವೆ. ಅದಕ್ಕೆ ಅವು ಬೇಗ ರೋಗ ರುಜಿನಗಳಿಗೆ ತುತ್ತಾಗಿ ಈಗ ಅಲ್ಪ ಸಂಖ್ಯಾತವಾಗಿವೆ. ಕಾಗೆಗಳು ಉಭಯವಾಸಿಗಳು ತೋಟ ಹೊಲ ಮತ್ತು ಊರೊಳಗೆ ಎರಡೂ ಕಡೆ ತಮ್ಮ ನೆಲೆ ಕಂಡುಕೊಂಡಿವೆ. ನಮ್ಮ ತೋಟದಲ್ಲಿ ಅವು ಕಾ ಕಾ ಎಂದು ಕೂಗಿದವೆಂದರೆ ಪರಂಗಿ ಗಿಡದಲ್ಲಿ ಹಣ್ಣುಗಳು ರೆಡಿ ಇವೆ ಎಂದೇ ಅರ್ಥ. ಅವು ಇಲಿಗಳನ್ನು ಹಿಡಿದು ತಿನ್ನುವುದು ನಿಜವಾದರೂ ಅವಕ್ಕೆ ಪರಂಗಿ, ಹಲಸು, ಸತ್ತ ಪ್ರಾಣಿಗಳು, ಮೆಣಸಿನಕಾಯಿ ಎಂದರೆ ಬಲು ಇಷ್ಟ.

ಮರಕುಟುಕ ಹಕ್ಕಿಗಳು ಯಾಕೋ ಕಮ್ಮಿಯಾದಂತೆ ಅನಿಸಿದೆ. ಎಲ್ಲೋ ಒಂದೊಂದು ಮರಕುಟುಕ ಮಿಡತೆ, ಜೇನುಹುಳ, ಕಡಜ ಮುಂತಾದ ಕೀಟಗಳನ್ನು ಕೊಕ್ಕಲ್ಲಿ ಹಿಡಿದು ಮರಕ್ಕೆ ಬಡಿದು ಸಾಯಿಸಿ ತಿನ್ನುವ ದೃಶ್ಯವನ್ನು ನೋಡಬಹುದಾಗಿದೆ. ಈ ಮೊದಲು ಅವು ಮರದ ಟೊಳ್ಳು ಭಾಗವನ್ನು ತಮ್ಮ ಕೊಕ್ಕಿನಿಂದ ಟಪ್‌ ಟಪ್‌ ಎಂದು ಕುಕ್ಕುತ್ತಾ, ಆ ಕುಕ್ಕಿದ ಭಾಗದಿಂದ ಈಚೆ ಹೊರಡುವ ಅಮಾಯಕ ಹುಳುಗಳನ್ನು ಕಬಳಿಸುವ ದೃಶ್ಯವನ್ನು ತೋಟದ ಅನೇಕ ಭಾಗಗಳಲ್ಲಿ ನೋಡಬಹುದಾಗಿತ್ತು. ಅಂಥಾ ಚೂಟಿ ಹಕ್ಕಿಗಳು ಎಲ್ಲಿ ಹೋದವೋ ಯಾರಿಗೆ ಗೊತ್ತು.

  • ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್‌ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ. ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)


ಇದನ್ನೂ ಓದಿ: ನಮ್ಮ ತೋಟದ ಸಾಲಿಗೆ ನೀವೂ ಬನ್ನಿ: ಕೋಟಿ ಕೀಟಗಳ ಉಳುಮೆ, ಹುಲ್ಲು ಬೇರಿನ ಮಹಿಮೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...