“ಮಾಂಸ ತಿನ್ನದವರು ಟಿವಿಗಳಲ್ಲಿ ಯಕ್ಷಗಾನ ಮಾಡುತ್ತಿದ್ದಾರೆ. ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬಾರದು ಎನ್ನಲು ಇವರ್‍ಯಾರು? ಇವರಿಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ, ಸಕಲೆಂಟು ಜಾತಿ ಸಹಬಾಳ್ವೆ ಸಂಘ ಸಹಯೋಗದಲ್ಲಿ ಮೈಸೂರಿನ ಶಾಂತಿನಗರದಲ್ಲಿ ಮುಸ್ಲಿಂ ಮಟನ್ ಸ್ಟಾಲ್‌ಗಳಲ್ಲಿ ಹಲಾಲ್ ಕಟ್ ಮಾಂಸ ಖರೀದಿಸುವ ಮೂಲಕ ಶಾಂತಿ, ಸೌಹಾರ್ದತೆ, ಸಹಬಾಳ್ವೆಯ ಸಂದೇಶ ಸಾರುವ ಕಾರ್ಯಕ್ರಮದಲ್ಲಿ ಇಂದು ಭಾಗಿಯಾಗಿ ಅವರು ಮಾತನಾಡಿದರು.
ಧರ್ಮದ ಮುಖವಾಡದಲ್ಲಿ ಅಧರ್ಮ ಕುಣಿದು ಕುಪ್ಪಳಿಸುತ್ತಾ ಇದೆ. ಜನಸಮುದಾಯದ ವಿವೇಕವನ್ನು ಕಡಿಮೆ ಮಾಡುತ್ತಿದ್ದಾರೆ. ಅಧರ್ಮ ನಿರ್ಲಜ್ಜವಾಗಿ ಕುಪ್ಪಳಿಸುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದೆಯಲ್ಲ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಇದೆಯಾ? ಸುವ್ಯವಸ್ಥೆ ಇದ್ದಿದ್ದರೆ, ತಾನು ನಿರ್ವಹಿಸಬೇಕಿದ್ದ ಕೆಲಸವನ್ನು ನೀಯಾಕೆ ಕೈಗೆತ್ತಿಕೊಂಡೆ ಎಂದು ಕೇಳಬೇಕಾಗಿತ್ತು. ಅದರ ಯಾವ ಲಕ್ಷಣವೂ ಕಾಣುತ್ತಿಲ್ಲ. ಸರ್ಕಾರ ಇಲ್ಲ ಅಥವಾ ಸರ್ಕಾರವೇ ಇದಕ್ಕೆಲ್ಲ ಕುಮ್ಮಕ್ಕು ನೀಡುತ್ತಿದೆ ಎಂದು ತಿಳಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಹೊಟ್ಟೆಗೆ ಹೊಡೆಯಬಾರದೆಂಬ ಮಾತು ಹಳ್ಳಿಗಾಡಿನಲ್ಲಿದೆ. ಮಾರಮ್ಮನ ಜಾತ್ರೆಯಲ್ಲಿ ಮುಸ್ಲಿಮರು ವ್ಯಾಪಾರ ಮಾಡಬಾರದೆಂದು ಇವರು ಹೇಳುತ್ತಾರೆ. ದೇವಸ್ಥಾನ ಕಟ್ಟಿಕೊಟ್ಟವರೇ ಮುಸ್ಲಿಮರು. ಅಂತಹ ದೇವಸ್ಥಾನದಲ್ಲಿ ವ್ಯಾಪಾರ ಮಾಡಬಾರದೆನ್ನುವುದು ಹೊಟ್ಟೆಗೆ ಹೊಡೆಯುವ ಕೆಲಸ. ನಮ್ಮ ಹಳ್ಳಿಗಾಡಿನ ಅನುಭವದ ಮಾತಿನ ಹಿನ್ನೆಲೆಯೇನು? ‘ಇದು ಧರ್ಮ ಅಲ್ಲ. ವ್ಯಾಪಾರ ಮಾಡ್ತಾ ಹೊಟ್ಟೆಯಾಪ್ತಿ ಮಾಡೋ ಜನರ ಹೊಟ್ಟೆಮೇಲೆ ಹೊಡೆಯುವುದೂ ಧರ್ಮವಲ್ಲ’ ಎಂದು ವಿವರಿಸಿದರು.
ಇದನ್ನೂ ಓದಿರಿ: ಮೈಸೂರು: ಬಿಜೆಪಿ ಬೆಂಬಲಿತ ಸಂಘಟನೆಗಳ ಕರೆ ಬಹಿಷ್ಕರಿಸಿ ಮುಸ್ಲಿಮರ ಅಂಗಡಿಯ ಹಲಾಲ್ ಮಾಂಸ ಖರೀದಿಸಿದ ಸಾಹಿತಿ ದೇವನೂರ ಮಹದೇವ
ಮುಸ್ಲಿಂ ಸಮುದಾಯ ಹಿಜಾಬ್ ತೀರ್ಪು ವಿರೋಧಿಸಿ ನಡೆಸಿದ ಸಾಂಕೇತಿಕ ಬಂದ್‌ನ ಕರಪತ್ರ ಓದಿ ಮಾತನಾಡಿದ ಅವರು,”ನಿಮಗೇನು ಕಣ್ಣುರಿ?” ಎಂದು ಪ್ರಶ್ನಿಸಿದರು.
“ಬಂದ್ ಸತ್ಯಾಗ್ರಹ: ಮುಸ್ಲಿಂ ಸಂಘಟನೆಗಳ ಒಕ್ಕೂಟ. ನಾಗರಿಕ ಬಂಧುಗಳೇ, ಇಂದು ನಡೆಯುತ್ತಿರುವ ಬಂದ್ ಯಾರ ವಿರುದ್ಧವೂ ಅಲ್ಲ, ಯಾರಿಗಾದರೂ ತೊಂದರೆ ಕೊಡುವಂತದ್ದೂ ಅಲ್ಲ. ನಾವು ಬಂದ್ ಸತ್ಯಾಗ್ರಹ ನಡೆಸುತ್ತಿದ್ದೇವೆ ಅಷ್ಟೇ. ನಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ನಮಗಾಗಿರುವ ನೋವನ್ನು ಅಭಿವ್ಯಕ್ತಪಡಿಸುತ್ತಿದ್ದೇವೆ. ಯಾರಿಗೂ ಬಲವಂತ ಮಾಡುತ್ತಿಲ್ಲ. ಬೀದಿಗೆ ಇಳಿಯುತ್ತಿಲ್ಲ. ಘೋಷಣೆ ಹಾಕುತ್ತಿಲ್ಲ. ನಾವು ಬಹಳ ನೊಂದಿದ್ದೇವೆ ಎಂದಷ್ಟೇ, ಎಲ್ಲ ಬಂಧುಗಳಿಗೆ ನಮಸ್ಕಾರ. ಸಲಾಂ.- ಇದು ಬಂದ್. ನಾಡಿಗೆ ಮಾದರಿಯಾದ ಬಂದ್ ವ್ಯವಸ್ಥೆಯನ್ನು ಕೊಟ್ಟಿದ್ದಾರೆ. ನೀವು ಎಲ್ಲರೂ ಮಾಡಬೇಕಾದ ಕೆಲಸವಿದು. ಆದರೆ ನಿಮಗೇನು ಕಣ್ಣುರಿ?” ಎಂದು ಕೇಳಿದರು.
ಮಾಧ್ಯಮ ಪ್ರತಿನಿಧಿಯೊಬ್ಬರು, “ಪ್ರಶ್ನೆ ಅದಲ್ಲ, ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲಾಗಿದೆ. ಆದರೂ ಬಂದ್ ಮಾಡಬಾರದಿತ್ತೆಂಬ ವಾದವಿದೆ” ಎಂದಾಗ, ದೇವನೂರರು, “ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು. ಇದನ್ನೆಲ್ಲ ಯಾರ್‍ರೀ ಹೇಳುತ್ತಿದ್ದಾರೆ? ಮಾಂಸ ತಿನ್ನದೇ ಇರುವವರು ಹೇಳುತ್ತಿದ್ದಾರೆ” ಎಂದು ಕಟುವಾಗಿ ಪ್ರತಿಕ್ರಿಯೆ ನೀಡಿದರು.
ರಾಜಕೀಯ ಧ್ರುವೀಕರಣಕ್ಕೆ, ಸಮಾಜವನ್ನು ವಿಘಟನೆ ಮಾಡಲಾಗುತ್ತಿದೆ. ದ್ವೇಷ ಬೆಳೆಸಲಾಗುತ್ತಿದೆ. ಅಧಿಕಾರಕ್ಕೆ ಬರಬೇಕು ಅಂತ ಇಷ್ಟೊಂದು ಅಮಾನವೀಯವಾಗಿ ಒಂದು ಸರ್ಕಾರ ನಡೆದುಕೊಳ್ಳುವುದೇ? ಒಂದು ವಿನಂತಿ ಮಾಡುತ್ತೇನೆ. ಸಕಲೆಂಟು ಜಾತಿಗಳಲ್ಲೂ ಕೂಡ ವಿವೇಕ ವಿವೇಚನೆ ಇರುವವರು ಮಾತನಾಡಬೇಕು. ಇವರು ಸ್ವಲ್ಪ ಕ್ರಿಯಾಶೀಲರಾದರೆ ಸಮಸ್ಯೆ ಬಗೆಹರಿಯುತ್ತದೆ. ಸಾಂಕೇತಿಕವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಇದು ನಾಡಿನಾದ್ಯಂತ ಹಬ್ಬಬೇಕು ಎಂದರು.
ಇದನ್ನೂ ಓದಿರಿ: ಬಿಜೆಪಿ ಸರ್ಕಾರ ಪ್ರಾಯೋಜಿತ ದ್ವೇಷ ರಾಜಕಾರಣದ ಮಧ್ಯೆ ‘ಸೌಹಾರ್ದ ಯುಗಾದಿ’ ಆಚರಿಸಿದ ರಾಜ್ಯದ ಜನತೆ
ವಿರೋಧ ಪಕ್ಷಗಳು ಮಂಕಾಗಿ ಕೂತಿವೆ. ಮತ್ತೊಂದೆಡೆ ಒಂದು ಮಿಷನರಿ ಥರ ಕೆಲಸ ಆಗುತ್ತಿದೆ. ಹೀಗೆ ಒಡೆದರೆ ಹೀಗೆ ದಾಳ ಬೀಳುತ್ತದೆ ಎಂದು ನಿರಂತರವಾಗಿ ಒಡೆಯಲಾಗುತ್ತಿದೆ. ಆಯ್ಕೊಂಡು ತಿನ್ನೋ ಕೋಳಿಗೆ ಕಾಲು ಮುರಿಯಬಾರದು ಎಂಬ ಮತ್ತೊಂದು ಮಾತಿದೆ. ಇವತ್ತು ಹೆಚ್ಚುಕಮ್ಮಿ ಇದೇ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಸುಮಾರು ದಿನಗಳಿಂದ ಹಳೇ ಪೇಪರ್, ಖಾಲಿ ಬಾಟಲಿ ಕೊಳ್ಳುವವರಿಗಾಗಿ ಕಾಯುತ್ತಿದ್ದೇನೆ. ಯಾರೂ ಬರುತ್ತಿಲ್ಲ. ಈ ಕಲುಷಿತ ವಾತಾವರಣದಿಂದ ಅವರು ನಿಶಬ್ದರಾಗಿದ್ದಾರೆ. ಇಂದು ನಮ್ಮ ಸಮಾಜ ತಲೆತಗ್ಗಿಸಿಬಿಟ್ಟಿದೆ. ಅವರು ಹೊಟ್ಟೆಪಾಡು ಮಾಡುತ್ತಿದ್ದರೆಂದು ನಾವು ಅಂದುಕೊಂಡಿದ್ದೇವೆ. ಆದರೆ ಹಳೇಪೇಪರ್, ಖಾಲಿ ಬಾಟಲ್‌ಗಳು ಈ ಜನರಿಂದಾಗಿ ಪುನರ್ ಬಳಕೆಯಾಗುತ್ತಿದ್ದವು. ಅದರಿಂದ ಕಾಡು ಉಳಿಯುತ್ತಿತ್ತು. ಪರಿಸರದ ರಕ್ಷಣೆಯಾಗುತ್ತಿತ್ತು. ಇದು ನಿಜಕ್ಕೂ ದೇಶಸೇವೆ. ತಾವು ಮಾಡುತ್ತಿರುವುದು ದೇಶ ಸೇವೆ ಎಂದು ಈ ಹೊಟ್ಟೆಪಾಡಿನ ಜೀವಿಗಳಿಗೂ ಗೊತ್ತಿಲ್ಲ. ದುರಂತ ಎಂದರೆ ನಮ್ಮ ಸಮಾಜಕ್ಕೂ ಗೊತ್ತಿಲ್ಲ ಎಂದು ಹೇಳಿದರು.
ದ್ವೇಷ ಹುಟ್ಟಿಸಿ, ಜನಸಮುದಾಯವನ್ನು ಒಡೆದು ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ. ದ್ವೇಷವೇ ಇವರಿಗೆ ಎನರ್ಜಿ ಡ್ರಿಂಕ್. ಅದಕ್ಕಾಗಿ ಸುಳ್ಳನ್ನು ಹಬ್ಬಿಸುತ್ತಾರೆ. ಅವರ್‍ಯಾರು ಅಪ್ಪಣೆ ಕೊಡಿಸಲು? ಹಂಗೆ ಕಟ್ ಮಾಡಬೇಕು, ಹಿಂಗ್ ಕಟ್ ಮಾಡಬೇಕು ಅನ್ನೋದು ಮಾನವೀಯತೆಯಾ? ಪ್ರಾಣಿ ವಧೆ ಮಾಡಿ ಮಾಂಸ ತಿನ್ನುತ್ತಿದ್ದೇವೆ. ಇಲ್ಲಿ ಮಾನವೀಯತೆಯ ಪ್ರಶ್ನೆ ಎಲ್ಲಿ ಬರುತ್ತದೆ? ಎಂದು ಕೇಳಿದರು.
ಪ್ರೊ.ಸುಮಿತ್ರಾಬಾಯಿ, ಸಮಾಜವಾದಿ ಚಿಂತಕರಾದ ಪ.ಮಲ್ಲೇಶ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ, ದಸಂಸ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು, ದಸಂಸ ಮೈಸೂರು ಜಿಲ್ಲಾ ಸಂಚಾಲಕರಾದ ಆಲಗೂಡು ಶಿವಕುಮಾರ್, ಶಂಭುಲಿಂಗ ಸ್ವಾಮಿ, ಮಲ್ಲಹಳ್ಳಿ ನಾರಾಯಣ್, ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಲ್ಲಹಳ್ಳಿ ಕುಮಾರ್, ರೈತ ಸಂಘದ ತಾಲೂಕು ಅಧ್ಯಕ್ಷರಾದ ಮರಂಕಯ್ಯ, ಹೆಜ್ಜಿಗೆ ಪ್ರಕಾಶ್, ಮಂಟಗಳ್ಳಿ ಮಹೇಶ್, ವಿಜಯೇಂದ್ರ, ನಾಗನಹಳ್ಳಿ ಮಂಜು, ಕೆ.ಆರ್.ಗೋಪಾಲ್, ಕರುಣಾಕರ್, ಗಂಜಾಂ ರವಿಚಂದ್ರ, ಮಹದೇವಸ್ವಾಮಿ, ಕುಮಾರ್ ಸ್ವಾಮಿ, ಶಿವಲಿಂಗಯ್ಯ, ಗುರುಸ್ವಾಮಿ, ಅಭಿರುಚಿ ಗಣೇಶ, ರಜನಿ, ಮಾವಿನಹಳ್ಳಿ ಕುಮಾರ್, ನಾಗರಾಜ್, ಲಿಂಗರಾಜು ಹಾಜರಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹50 ₹100 ₹500 ₹1000 Others
ಇದನ್ನೂ ಓದಿರಿ: ‘ಹಲಾಲ್ ವಿಚಾರದಲ್ಲಿ ನಾವು ಸಂಘಟನೆಗಳ ಪರವಾಗಿದ್ದೇವೆ’: ಕಿಡಿಗೇಡಿ ಕೃತ್ಯಗಳನ್ನು ಸಮರ್ಥಿಸಿಕೊಂಡ ಸಚಿವೆ ಜೊಲ್ಲೆ



ಹಲಾಲ್ ಎಕಾನಮಿಯನ್ನು ಪ್ರೋತ್ಸಾಹಿಸಬೇಡಿ. ಅದರ ಹಣ ದೇಶ ವಿರೋಧಿ ಚಟುವಟಿಕೆಗಳಿಗೆ ಹೋಗುತ್ತಿದೆ.
Halaal economy Andre yenri…. Ivattu Ambani, adani, nimma lala(baba) Ramdev, intaha anekaru halaal certificate padkonde business maadtirodu …. Modlu ivara bagge yechara irli …
Ivarella seri Bharata na kondukolluttiddaare… Nimmantahavarannu permanent gulaamarannagiskolodakke… Be careful