“ಇತರ ಧರ್ಮಗಳ ಸಂಸ್ಥೆಗಳ ವಿರುದ್ಧ ಇದೇ ನಿಲುವನ್ನು ತೆಗೆದುಕೊಂಡಿದ್ದೀರಾ?” ಎಂದು ಮದ್ರಸಾ ಶಿಕ್ಷಣ ವ್ಯವಸ್ಥೆಯ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ (ಎನ್‌ಸಿಪಿಸಿಆರ್) ತೆಗೆದುಕೊಂಡ ನಿಲುವಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಮಂಗಳವಾರ (ಅ. 22) ಪ್ರಶ್ನಿಸಿದೆ.
ಇತರ ಧರ್ಮಗಳ ಮಕ್ಕಳು ಧಾರ್ಮಿಕ ಅಧ್ಯಯನ ಮತ್ತು ಪುರೋಹಿತಶಾಹಿ ತರಬೇತಿಗಾಗಿ ಸೇರುವ ಇದೇ ರೀತಿಯ ಸಂಸ್ಥೆಗಳಿವೆ ಎಂದು ಸೂಚಿಸಿದ ಸುಪ್ರೀಂ ಕೋರ್ಟ್, “ನಿಮಗೆ ಮದ್ರಸಾಗಳ ಮೇಲೆ ಮಾತ್ರ ಏಕೆ ಕಣ್ಣು ಅಥವಾ ಕಾಳಜಿ?” ಎಂದು ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿದ್ದಾಗ ಈ ಪ್ರಸಂಗ ನಡೆಯಿತು.
2004ರ ಉತ್ತರ ಪ್ರದೇಶದ ಮದರಸಾಗಳ ಕಾನೂನು ಜಾತ್ಯತೀತತೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದಿರುವ ಹೈಕೋರ್ಟ್, ಅದನ್ನು ಅಸಂವಿಧಾನಿಕ ಎಂದು ಘೋಷಿಸಿದೆ.
ಪ್ರಸ್ತುತ ವಿಷಯದಲ್ಲಿ ಮಧ್ಯಪ್ರವೇಶಿಸಿರುವ ಎನ್‌ಸಿಪಿಸಿಆರ್, ಮದ್ರಸಾ ವ್ಯವಸ್ಥೆಗೆ ವಿವಿಧ ಆಕ್ಷೇಪಣೆಗಳನ್ನು ಎತ್ತುವ ವರದಿಯನ್ನು ಸಲ್ಲಿಸಿದ್ದು, ಮದ್ರಸಾ ಶಿಕ್ಷಣ ವ್ಯವಸ್ಥೆಯ ಮಾನದಂಡಗಳು ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಐ) ಅನುಗುಣವಾಗಿಲ್ಲ” ಎಂದು ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿ ಪರ್ದಿವಾಲಾ ಅವರು, ಮದ್ರಸಾ ಪಠ್ಯಕ್ರಮದ ಕುರಿತು ಎನ್‌ಸಿಪಿಸಿಆರ್ ಆಳವಾದ ಅಧ್ಯಯನವನ್ನು ನಡೆಸಿದೆಯೇ? ಎಂದು ಪ್ರಶ್ನಿಸಿದ್ದಾರೆ.
“ಮದ್ರಸಾ ಪಠ್ಯಕ್ರಮವು ಧಾರ್ಮಿಕ ಬೋಧನೆಯ ಬಗ್ಗೆ ಮಾತನಾಡುತ್ತದೆಯೇ? ಧಾರ್ಮಿಕ ಬೋಧನೆ ಎಂದರೇನು? ನೀವು ಏನು ಅರ್ಥಮಾಡಿಕೊಂಡಿದ್ದೀರಿ? ನಿಮ್ಮ ವಾದದಲ್ಲಿ ‘ಧಾರ್ಮಿಕ ಭೋದನೆಗಳು’ ಎಂಬ ಪದವು ನಿಮ್ಮನ್ನು ಅತ್ತ ಸೆಳೆದಿರುವಂತೆ ಕಾಣುತ್ತಿದೆ. ಅದೇ ನಿಮ್ಮ ತಲೆಗೆ ಹೊಕ್ಕಿದೆ. ಅದಕ್ಕಾಗಿಯೇ ನೀವು ಅದರಿಂದ ಹೊರಬರುತ್ತಿಲ್ಲ. ನಿಮ್ಮ ವಾದವು ಸರಿಯಿಲ್ಲ” ಎಂದು ಚಾಟಿ ಬೀಸಿದ್ದಾರೆ.
ಇದನ್ನೂ ಓದಿ : ‘ಇಂಡಸ್ಟ್ರಿಯಲ್ ಆಲ್ಕೋಹಾಲ್’ ಮಾರಾಟದ ಮೇಲೆ ರಾಜ್ಯ ಸರ್ಕಾರಗಳು ಕಾನೂನು ರೂಪಿಸಬಹುದು: ಸುಪ್ರೀಂ ಕೋರ್ಟ್


