ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಗಡೀಪಾರು ಮಾಡಿದ ರೀತಿಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. “ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯದ ಬಗ್ಗೆ ಉತ್ತರಿಸಬೇಕು” ಎಂದು ಒತ್ತಾಯಿಸಿದರು.
104 ಜನ ಅಕ್ರಮ ಭಾರತೀಯ ವಲಸಿಗರನ್ನು ಹೊತ್ತೊಯ್ಯುವ ಯುಎಸ್ ಮಿಲಿಟರಿ ವಿಮಾನ ಬುಧವಾರ ಅಮೃತಸರದಲ್ಲಿ ಇಳಿಯಿತು. ಅಕ್ರಮ ವಲಸಿಗರ ವಿರುದ್ಧದ ಕ್ರಮದ ಭಾಗವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರವು ಗಡೀಪಾರು ಮಾಡಿದ ಭಾರತೀಯರ ಮೊದಲ ಬ್ಯಾಚ್ ಇದು. ಪ್ರಯಾಣದುದ್ದಕ್ಕೂ ತಮ್ಮ ಕೈಗಳು ಮತ್ತು ಕಾಲುಗಳನ್ನು ಬಂಧಿಸಲಾಗಿತ್ತು, ಅಮೃತಸರ ವಿಮಾನ ನಿಲ್ದಾಣದಲ್ಲಿ ಇಳಿದ ನಂತರವೇ ಅವರ ಸಂಕೋಲೆಗಳನ್ನು ಬಿಚ್ಚಲಾಯಿತು ಎಂದು ಗಡೀಪಾರಾದ ಭಾರತೀಯರೊಬ್ಬರು ಹೇಳಿಕೊಂಡರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿ, “ಮೋದಿ ಜಿ ಮತ್ತು ಟ್ರಂಪ್ ಜಿ ತುಂಬಾ ಒಳ್ಳೆಯ ಸ್ನೇಹಿತರು ಎಂದು ಬಹಳಷ್ಟು ಹೇಳಲಾಗಿತ್ತು. ಆದರೂ ಅವರ ಕೈಗೆ ಕೋಳ ಹಾಕಲು ಮೋದಿ ಜಿ ಅವಕಾಶ ನೀಡಿದದ್ದು ಯಾಕೆ? ಅವರನ್ನು ಕರೆತರಲು ನಾವು ನಮ್ಮ ವಿಮಾನವನ್ನು ಕಳುಹಿಸಬಹುದಿತ್ತಲ್ಲವೇ ಮನುಷ್ಯರೊಂದಿಗೆ ವರ್ತಿಸಬೇಕಾದ ರೀತಿ ಇದೇನಾ” ಎಂದು ಅವರು ಹೇಳಿದರು.
ವಿದೇಶಾಂಗ ಸಚಿವರು ಉತ್ತರ ನೀಡಬೇಕೇ ಎಂದು ಕೇಳಿದಾಗ, “ಅವರು ಉತ್ತರಿಸಬೇಕು, ಪ್ರಧಾನಿಯೂ ಉತ್ತರ ನೀಡಬೇಕು. ಇದೇನಾ ದಾರಿ?” ಎಂದು ಅವರು ಹೇಳಿದರು.
ಭಾರತೀಯರ ಘನತೆಗೆ ಮಾಡಿದ ಅವಮಾನ: ಶಶಿ ತರೂರ್
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರನ್ನು ಗಡೀಪಾರು ಮಾಡುವ ವಿಧಾನವು “ಭಾರತ ಮತ್ತು ಭಾರತೀಯರ ಘನತೆಗೆ ಮಾಡಿದ ಅವಮಾನ” ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಗುರುವಾರ ಹೇಳಿದ್ದಾರೆ.
ಸರ್ಕಾರವು ಅಮೆರಿಕಕ್ಕೆ ಸಂದೇಶವನ್ನು ನೀಡಬೇಕಾಗಿದೆ. ಅವಮಾನಕರ ರೀತಿಯಲ್ಲಿ ಗಡೀಪಾರು ಮಾಡಲು ಯಾವುದೇ ಹಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಭಾರತೀಯರ ಗಡೀಪಾರು ಬಗ್ಗೆ ಕೇಳಿದಾಗ, “ಗಡೀಪಾರು ಮಾಡಿದ ರೀತಿಯ ಬಗ್ಗೆ ನಾವು ಪ್ರತಿಭಟಿಸುತ್ತಿದ್ದೇವೆ. ಅವರ ದೇಶದಲ್ಲಿ ಅಕ್ರಮವಾಗಿ ವಾಸಿಸುವ ಜನರನ್ನು ಗಡೀಪಾರು ಮಾಡಲು ಅವರಿಗೆ ಎಲ್ಲಾ ಕಾನೂನುಬದ್ಧ ಹಕ್ಕಿದೆ. ಅವರು ಭಾರತೀಯರು ಎಂದು ಸಾಬೀತಾದರೆ, ನಾವು ಅವರನ್ನು ಸ್ವೀಕರಿಸುವ ಬಾಧ್ಯತೆಯನ್ನು ಹೊಂದಿದ್ದೇವೆ. ಆದರೆ, ಅವರನ್ನು ಈ ರೀತಿ ಹಠಾತ್ತನೆ ಮಿಲಿಟರಿ ವಿಮಾನದಲ್ಲಿ ಮತ್ತು ಕೈಕೋಳದಲ್ಲಿ ಕಳುಹಿಸುವುದು ಭಾರತಕ್ಕೆ ಮಾಡಿದ ಅವಮಾನ, ಇದು ಭಾರತೀಯರ ಘನತೆಗೆ ಮಾಡಿದ ಅವಮಾನ ಮತ್ತು ನಾವು ಖಂಡಿತವಾಗಿಯೂ ಪ್ರತಿಭಟಿಸಬೇಕು” ಎಂದು ತರೂರ್ ಪ್ರತಿಪಾದಿಸಿದರು.
ಇದನ್ನೂ ಓದಿ; ಗಡೀಪಾರಾದವರನ್ನು ಬಂಧಿಸುವುದು ಭಾರತಕ್ಕೆ ಮಾಡಿದ ಅವಮಾನ: ಪಂಜಾಬ್ ಸಿಎಂ ಮಾನ್


