ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯ ಸರ್ಕಾರದ ಹಲವು ಮಸೂದೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡು ಒಪ್ಪಿಗೆ ನೀಡದೆ, ಅವುಗಳಲ್ಲಿ ಕೆಲವನ್ನು ರಾಷ್ಟ್ರಪತಿಗಳಿಗೆ ಉಲ್ಲೇಖಿಸುವುದಾಗಿ ಘೋಷಿಸಿದ್ದೇಕೆ? ಎಂದು ಸುಪ್ರೀಂ ಕೋರ್ಟ್ ಗುರುವಾರ(ಫೆ.6) ಪ್ರಶ್ನಿಸಿದೆ.
ಮಸೂದೆಗಳ ಕುರಿತು ನಿರ್ಧರಿಸಲು ರಾಜ್ಯಪಾಲರು “ತಮ್ಮದೇ ಕಾರ್ಯವಿಧಾನ ಅಳವಡಿಸಿಕೊಂಡಂತೆ ಕಾಣುತ್ತಿದೆ” ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಟೀಕಿಸಿದ್ದಾರೆ.
2020 ಮತ್ತು 2023ರ ನಡುವೆ ಅಂಗೀಕರಿಸಲಾದ 10 ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಿದೆ ಹಾಗೆಯೇ ಉಳಿಸಿಕೊಂಡಿರುವ ಹಿನ್ನೆಲೆ, ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ರಿಟ್ ಅರ್ಜಿಗಳ ವಿಚಾರಣೆಯನ್ನು ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ.
“ರಾಜ್ಯಪಾಲರು ಮೂರು ವರ್ಷಗಳನ್ನು ತೆಗೆದುಕೊಂಡು ಕಂಡುಕೊಂಡ ಮಸೂದೆಗಳಲ್ಲಿನ ಅಂತಹ ಅಸಹ್ಯಕರವಾದ ವಿಷಯ ಯಾವುದು?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ರಾಜ್ಯಪಾಲರನ್ನು ತೆಗೆದು ಹಾಕುವ ನಿಬಂಧನೆಗಳನ್ನು ಒಳಗೊಂಡ 10 ಪುನರ್-ಜಾರಿಗೊಳಿಸಲಾದ ಮಸೂದೆಗಳನ್ನು ನವೆಂಬರ್ 18, 2023 ರಂದು ರಾಷ್ಟ್ರಪತಿಗಳಿಗೆ ಕಳುಹಿಸಲಾಗಿದೆ. ರಾಷ್ಟ್ರಪತಿಗಳು ಒಂದನ್ನು ಅನುಮೋದಿಸಿದ್ದು, ಏಳನ್ನು ತಿರಸ್ಕರಿಸಿದ್ದಾರೆ ಮತ್ತು ಎರಡನ್ನು ಹಾಗೆಯೇ ಇಟ್ಟಿದ್ದಾರೆ.
ರಾಜ್ಯಪಾಲರು ಅತ್ತ ಮಸೂದೆಗಳಿಗೆ ಒಪ್ಪಿಗೆ ನೀಡದೆ, ಇತ್ತ ವಿಧಾನಸಭೆಗೆ ಹಿಂದಿರುಗಿಸದೆ
ಸಂವಿಧಾನದ 200ನೇ ವಿಧಿಯ ವಿರುದ್ದ ನಡೆದುಕೊಂಡಿದ್ದಾರೆ. ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವ ಅಥವಾ ತಿರಸ್ಕರಿಸುವ ರಾಜ್ಯಪಾಲರ ಅಧಿಕಾರವು ಸಾಂವಿಧಾನಿಕ ನಿಬಂಧನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯಪಾಲರು ಮಸೂದೆಗಳಿಗೆ ಏಕೆ ಅಂಕಿತ ಹಾಕಿಲ್ಲ ಎಂಬುವುದನ್ನು ವಾಸ್ತವಿಕವಾಗಿ ಅಥವಾ ನಿರ್ಧಿಷ್ಟವಾಗಿ ತೋರಿಸಬೇಕು ಎಂದು ರಾಜ್ಯಪಾಲ ರವಿ ಅವರನ್ನು ಪ್ರತಿನಿಧಿಸಿದ್ದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಮೂರ್ತಿ ಪರ್ದಿವಾಲಾ ಅವರು ಸೂಚಿಸಿದ್ದಾರೆ.
“ಕೆಲವು ಮೂಲ ಕಡತಗಳಿಂದ ಅಥವಾ ಇತರ ಕೆಲವು ದಾಖಲೆಗಳಿಂದ, ರಾಜ್ಯಪಾಲರ ಕಚೇರಿಯಲ್ಲಿ ಲಭ್ಯವಿರುವ ಕೆಲವು ಸಮಕಾಲೀನ ದಾಖಲೆಗಳಿಂದ ಏನನ್ನು ಪರಿಶೀಲಿಸಲಾಗಿದೆ, ಏನು ಚರ್ಚಿಸಲಾಗಿದೆ, ಏನೆಲ್ಲಾ ಲೋಪಗಳಿವೆ ಎಂಬುವುದರ ಕುರಿತು ನಮಗೆ ತೋರಿಸಿ” ಎಂದು ನ್ಯಾಯಾಧೀಶರು ಎಜಿಗೆ ಹೇಳಿರುವುದಾಗಿ ಲೈವ್ ಲಾ ವರದಿ ಮಾಡಿದೆ.
ಪಂಜಾಬ್ ರಾಜ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ, ಮಸೂದೆಗಳನ್ನು ತಡೆ ಹಿಡಿಯುವ ಮೂಲಕ ವಿಧಾನಸಭೆಯನ್ನು ವೀಟೋ ಮಾಡಲು ಸಾಧ್ಯವಿಲ್ಲ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ತಮಿಳುನಾಡು ರಾಜ್ಯಪಾಲರು ಮಸೂದೆಗಳನ್ನು ತಡೆ ಹಿಡಿದಿದ್ದಾರೆ ಎಂಬುವುದನ್ನು ನ್ಯಾಯಮೂರ್ತಿ ಪರ್ದಿವಾಲಾ ಗಮನಿಸಿದ್ದಾರೆ.
ನವೆಂಬರ್ 2023ರಲ್ಲಿ ಸುಪ್ರೀಂ ಕೋರ್ಟ್ ಆಗಿನ ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರಿಗೆ ತಮ್ಮ ಮುಂದೆ ಬಾಕಿ ಇರುವ ನಾಲ್ಕು ಮಸೂದೆಗಳ ಬಗ್ಗೆ ನಿರ್ಧರಿಸುವಂತೆ ನಿರ್ದೇಶಿಸಿತ್ತು. ಸಂಸದೀಯ ಪ್ರಜಾಪ್ರಭುತ್ವದಲ್ಲಿ ನಿಜವಾದ ಅಧಿಕಾರ ಚುನಾಯಿತ ಪ್ರತಿನಿಧಿಗಳ ಕೈಯಲ್ಲಿ ಇರುತ್ತದೆ. ರಾಜ್ಯಪಾಲರು ರಾಜ್ಯದ ನಾಮಮಾತ್ರ ಮುಖ್ಯಸ್ಥರು ಎಂದಿತ್ತು.
ರಾಜ್ಯಪಾಲರು ಮಸೂದೆಗಳಿಗೆ ಅನಿರ್ದಿಷ್ಟಾವಧಿಗೆ ಒಪ್ಪಿಗೆ ನೀಡದೆ ತಡೆಹಿಡಿಯುವ ಮೂಲಕ ರಾಜ್ಯವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ತಮಿಳುನಾಡು ರಾಜ್ಯ ಸರ್ಕಾರ ಗುರುವಾರ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಸುಪ್ರೀಂ ಕೋರ್ಟ್-ಹೈಕೋರ್ಟ್ ನ್ಯಾಯಾಧೀಶರ ವೇತನ ಹೆಚ್ಚಿಸುವ ಯಾವುದೇ ಪ್ರಸ್ತಾಪವಿಲ್ಲ: ಕೇಂದ್ರ ಸರ್ಕಾರ


