ಹಿರಿಯ ಪತ್ರಕರ್ತ ಮತ್ತು 2016 ರ ನಾರದ ಪ್ರಕರಣದ ದೂರುದಾರ ಮ್ಯಾಥ್ಯೂ ಸ್ಯಾಮ್ಯುಯೆಲ್ ಅವರು ತೃಣಮೂಲದ ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್‌ರಂತಹ ಕೆಲವು ರಾಜಕಾರಣಿಗಳನ್ನು ಕುಟುಕು ಕಾರ್ಯಾಚರಣೆಯ ಆಧಾರದಲ್ಲಿ ಸಿಬಿಐ ಬಂಧಿಸಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಬಿಜೆಪಿ ನಾಯಕ ಸುವೆಂದು ಅಧಿಕಾರಿಯಂತಹ ಇತರರ ವ್ಯಕ್ತಿಗಳ ವಿರುದ್ಧ ಅದೇ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಹೊರತಾಗಿಯೂ ಸಿಬಿಐ ಯಾವುದೇ ಕ್ರಮ ಕೈಗೊಳ್ಳದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಇದು ಸಂತೋಷದ ದಿನ. ಇದೀಗ ತುಂಬಾ ವರ್ಷಗಳಾಗಿವೆ. ಕುಟುಕು ಕಾರ್ಯಾಚರಣೆಯನ್ನು 2016 ರಲ್ಲಿ ಬಿಡುಗಡೆ ಮಾಡಲಾಯಿತು. ರಾಜಕಾರಣಿಗಳನ್ನು ಸಿಬಿಐ ಮುಟ್ಟಲಾಗಲಿಲ್ಲ. ಅದರಲ್ಲೂ ಚಾರ್ಜ್‌ಶೀಟ್ ಮೂರು ವರ್ಷಗಳ ಹಿಂದೆಯೆ ಸಿದ್ಧವಾಗಿತ್ತು” ಎಂದು ತನಿಖಾ ಪತ್ರಕರ್ತ ಸ್ಯಾಮ್ಯುಯೆಲ್ ಮತ್ತು ನಾರದ ನ್ಯೂಸ್ ಸಂಸ್ಥಾಪಕ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!
ತೃಣಮೂಲ ಕಾಂಗ್ರೆಸ್‌ನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡು ಪತ್ರಕರ್ತ ಮ್ಯಾಥ್ಯೂ ಸ್ಯಾಮ್ಯುಯೆಲ್ ನಡೆಸಿದ ಕುಟುಕು ಕಾರ್ಯಾಚರಣೆಯಾಗಿದೆ ‘ನಾರದಾ ಕುಟುಕು ಕಾರ್ಯಾಚರಣೆ’. ಈ ಕಾರ್ಯಾಚರಣೆಯ ಮೂಲಕ ಹಲವಾರು ರಾಜಕಾರಣಿಗಳು ಮತ್ತು ಉನ್ನತ ದರ್ಜೆಯ ಪೊಲೀಸ್ ಅಧಿಕಾರಿಯೊಬ್ಬರು ಕಂಪನಿಗೆ ಅನಧಿಕೃತವಾಗಿ ಬೆಂಬಲಿಸುತ್ತೇವೆ ಎಂದು ನಗದು ಲಂಚ ಪಡೆದೂದನ್ನು ಬಯಲಿಗೆಳೆದಿತ್ತು. 2016 ರ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆ ಮಾಡಲಾದ ಈ ಕುಟುಕು ಕಾರ್ಯಾಚರಣೆಯನ್ನು 2014 ರಲ್ಲಿ ಚಿತ್ರೀಕರಿಸಲಾಗಿತ್ತು.
ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್, ಮದನ್ ಮಿತ್ರ, ಮತ್ತು ಸೋವನ್ ಚಟರ್ಜಿಯನ್ನು ಸಿಬಿಐ ಇಂದು ಬಂಧಿಸಿದೆ. ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್ ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದಲ್ಲಿ ಕ್ಯಾಬಿನೆಟ್ ಮಂತ್ರಿಗಳಾಗಿದ್ದಾರೆ. ಮದನ್ ಮಿತ್ರಾ ಆಡಳಿತ ಪಕ್ಷವಾದ ಟಿಎಂಸಿಯ ಶಾಸಕರಾಗಿದ್ದಾರೆ. ಸೋವನ್ ಚಟರ್ಜಿ ತೃಣಮೂಲ ಪಕ್ಷದ ಮಾಜಿ ಶಾಸಕರಾಗಿದ್ದು, ನಂತರ ಬಿಜೆಪಿ ಸೇರಿಕೊಂಡಿದ್ದಾರೆ. ಪ್ರಸ್ತುತ ಅವರು ಎರಡು ಪಕ್ಷದ ಸಂಪರ್ಕ ಕಡಿದುಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಾವಿನ ಸುನಾಮಿ ಮತ್ತು ಸರ್ಕಾರದ ವೈಫಲ್ಯವೆಂಬ ವೈರಸ್
“ನಾರದಾ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯ ಮಾಜಿ ಆಪ್ತ ಸಹಾಯಕರಾದ, ಪ್ರಸ್ತುತ ಬಿಜೆಪಿಯಲ್ಲಿರುವ ಮುಕುಲ್ ರಾಯ್ ಮತ್ತು ಸುವೆಂಧು ಅಧಿಕಾರಿ ಅವರ ಹೆಸರು ಕೂಡಾ ಇತ್ತು. ಆದರೆ ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಕ್ರಮಗಳು ನಡೆದಿಲ್ಲ” ಎಂದು ಸ್ಯಾಮ್ಯುಯೆಲ್ ತಮ್ಮ ಸಂದೇಶದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನಾನೇ ಸುವೆಂಧು ಅಧಿಕಾರಿ ಅವರ ಕಚೇರಿಗೆ ತೆರಳಿ ಅವರಿಗೆ ಹಣ ನೀಡಿದ್ದೆ. ಅವರ ಹೆಸರು ಪಟ್ಟಿಯಲ್ಲಿಲ್ಲ. ಏನಾಯಿತು? ವಿಧಿವಿಜ್ಞಾನ ವರದಿಯಲ್ಲೂ ಅದು ಸಾಬೀತಾಗಿದೆ… ಸಿಬಿಐ ನನ್ನಿಂದಲೂ ಹೇಳಿಕೆ ತೆಗೆದುಕೊಂಡಿದೆ” ಎಂದು ಅವರು ಹೇಳಿದ್ದಾರೆ.
ಸುವೆಂಧು ಅಧಿಕಾರಿ ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳಲು ಸಿಬಿಐ ಅಧಿಕಾರಿಗಳಿಂದ ಅನುಮತಿಗಾಗಿ ಕಾಯುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಅವರು ಕೆಳಮನೆಯ ಸದಸ್ಯರಾಗಿದ್ದರಿಂದ ಸಿಬಿಐ 2019 ರ ಏಪ್ರಿಲ್ 6 ರಂದು ಲೋಕಸಭಾ ಸ್ಪೀಕರ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಿತ್ತು.
ಇದನ್ನೂ ಓದಿ: ಸಾಂಕ್ರಾಮಿಕ ಪಿಡುಗುಗಳ ಬಗ್ಗೆ ಮೂರು ಪುಸ್ತಕಗಳು ನುಡಿಯುವ ಎಚ್ಚರಿಕೆ ಮತ್ತು ಸತ್ಯ!
“ಅನುಮೋದನೆ ದೊರೆತ ನಂತರ, ಕಾನೂನು ತನ್ನ ಕರ್ತವ್ಯ ನಿರ್ವಹಿಸುತ್ತದೆ” ಎಂದು ಸಿಬಿಐ ಮೂಲಗಳು ತಿಳಿಸಿವೆ, ಈ ವಿಷಯದ ಬಗ್ಗೆ ಸಿಬಿಐ ಜ್ಞಾಪನೆಯನ್ನು ಸಹ ಕಳುಹಿಸಿದೆ ಎಂದು ತಿಳಿದು ಬಂದಿದೆ.
ನಾರದಾ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ತೃಣಮೂಲ ಕಾಂಗ್ರೆಸ್ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೋಲ್ಕತಾ ಕಚೇರಿಯಲ್ಲಿ ವಶಕ್ಕೆ ಸೋಮವಾರ ತೆಗೆದುಕೊಂಡಿದೆ.
‘ನಾರದಾ’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಮ್ ಮತ್ತು ಮದನ್ ಮಿತ್ರಾ ಮತ್ತು ಮಾಜಿ ಟಿಎಂಸಿ, ಬಿಜೆಪಿ ನಾಯಕ ಸೋವನ್ ಚಟರ್ಜಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಿಬಿಐ ಕೋರಿಕೆಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಕರ್ ಅನುಮೋದಿಸಿದ ಕೆಲವೇ ದಿನಗಳಲ್ಲಿ ಈ ಬಂಧನ ನಡೆದಿದೆ.
ಇದನ್ನೂ ಓದಿ: ಕೊಪ್ಪಳ ಜಿಲ್ಲೆ 5 ದಿನ ಸಂಪೂರ್ಣ ಲಾಕ್‌ಡೌನ್: ರಾಜ್ಯ ಲಾಕ್‌ಡೌನ್‌ಗೆ ಅರ್ಥವೇನು?


