ಪ್ರತಿ ವರ್ಷ ರಾಜ್ಯ ಸರ್ಕಾರ ದೇವರಾಜ ಅರಸು ಹೆಸರಿನಲ್ಲಿ ಕೊಡುತ್ತಿದ್ದ ಪ್ರಶಸ್ತಿಯನ್ನು ಈ ಬಾರಿಯಿಂದ ರಾಜ್ಯ ಬಿಜೆಪಿ ಸರಕಾರ ನಿಲ್ಲಿಸಿಬಿಟ್ಟಿದೆ. ಇದಕ್ಕಾಗಿ ಅದು ಕೊಡುತ್ತಿರುವ ಕಾರಣ, ರಾಜ್ಯದಲ್ಲಿ ನೆರೆಹಾವಳಿಯಿಂದಾಗಿ ಪ್ರಶಸ್ತಿ ಕೊಡಲು ಸರ್ಕಾರದ ಬಳಿ ಹಣವಿಲ್ಲವಂತೆ. ಅದು ಎಷ್ಟು? ಕೇವಲ ಐದು ಲಕ್ಷ…!
ಆದರೆ ನಿಜವಾಗಿ ಇದು ಅಪ್ಪಟ ಸುಳ್ಳು. ಏಕೆಂದರೆ ಈ ಸರಕಾರದ ಕೆಲವು ನಿರ್ಧಾರಗಳು ಅದೆಲ್ಲಿಂದಲೋ ಬರುತ್ತವೆ. ಅವು ಅಧಿಕಾರಿಗಳ ಮುಖಾಂತರ ಜಾರಿಯಾಗುತ್ತವೆ. ಅರಸು ಪ್ರಶಸ್ತಿ ವಿಷಯದಲ್ಲೂ ಕೂಡ ಜನಪ್ರತಿನಿಧಿಗಳ ಬದಲು ಅಧಿಕಾರಿಗಳೇ ಪ್ರಶಸ್ತಿ ನೀಡಬಾರದೆಂದು ನಮಗೆ ಮೌಖಿಕ ಸಂದೇಶವಿದೆ ಎನ್ನುತ್ತಾರೆ. ಯಾರಿಂದ ಎಂದರೆ ಬಾಯಿಬಿಡುವುದಿಲ್ಲ. ನಿಜಕ್ಕೂ ಸಾಮಾಜಿಕ ಕಳಕಳಿ ಇದ್ದ ಅಧಿಕಾರಿಗಳು ಕೂಡ ಅಸಹಾಯಕರಾಗಿ ವರ್ತಿಸುತ್ತಿದ್ದಾರೆ.
ಇದನ್ನೂ ಓದಿ: ವರ್ಷ ಕಳೆದರೂ ದೇವರಾಜ ಅರಸು ಪ್ರಶಸ್ತಿ ಪ್ರಕಟಿಸದ ಬಿಜೆಪಿ ಸರ್ಕಾರ : ಏನಿರಬಹುದು ಹುನ್ನಾರ?
ಇದು ಹೇಳಿಕೇಳಿ ಬಿಜೆಪಿ ಸರಕಾರ. ಸಾಮಾಜಿಕ ಪರಿವರ್ತನೆಯ ವಿರೋಧಿ ಆದ್ದರಿಂದ ಸ್ಥಗಿತಗೊಂಡ ಸಮಾಜವನ್ನ ಸಾಮಾಜಿಕ ನ್ಯಾಯದಿಂದ ಮುಂದೆ ನೂಕಿದ ಅರಸು ಕಂಡರೆ ಬಿಜೆಪಿಗಳಿಗಾಗುವುದಿಲ್ಲ. ಆದ್ದರಿಂದ ಒಂದು ವ್ಯವಸ್ಥಿತ ಸಂಚಿನಿಂದ ಅರಸು ಪ್ರಶಸ್ತಿಯನ್ನು ಆಯ್ಕೆಮಾಡಲು ನೇಮಕವಾಗುವ ಸಮಿತಿಯನ್ನೇ ರಚಿಸಿಲ್ಲ. ಜೊತೆಗೆ ಆ ಪ್ರಸ್ತಾಪವೇ ನಡೆಯದಂತೆ ನೋಡಿಕೊಂಡಿದೆ.
ಹಾಗೆ ನೋಡಿದರೆ ಈ ಸರಕಾರದ ಅಜೆಂಡಾಗಳು ನಿಗೂಢವಾಗಿದೆ. ಅದನ್ನ ಜಾರಿ ಮಾಡುವುದರಲ್ಲಿ ಅದು ಸದ್ದುಗದ್ದಲವಿಲ್ಲದೆ ನಡೆದುಕೊಳ್ಳುತ್ತದೆ. ಅದಕ್ಕೊಂದು ಉದಾಹರಣೆ ಎಂದರೆ ಈ ಅರಸು ಪ್ರಶಸ್ತಿ. ಅದಕ್ಕಾಗಿ ಕೊಡಲು ಸರಕಾರದಲ್ಲಿ ಐದು ಲಕ್ಷ ಹಣವಿಲ್ಲ ಎನ್ನುವುದಾದರೆ, ರಾಜ್ಯೋತ್ಸವ ಪ್ರಶಸ್ತಿಯಂತೆ ಈ ಪ್ರಶಸ್ತಿಯ ಮೊತ್ತವನ್ನ ಸಹ ಒಂದು ಲಕ್ಷಕ್ಕೆ ಇಳಿಸಬಹುದಿತ್ತಲ್ಲವೇ? ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರದ ಬಳಿ ಒಂದು ಲಕ್ಷ ಹಣವಿಲ್ಲವೆಂದರೆ ಜನ ನಂಬುತ್ತಾರೆಯೇ? ದರಿದ್ರ ಸರಕಾರಕ್ಕೆ ಇವು ಅವಮಾನದ ಸಂಗತಿಗಳಾಗುವುದಿಲ್ಲ.
ಈ ಮೊದಲು ಎರಡು ಲಕ್ಷವಿದ್ದ ಪ್ರಶಸ್ತಿಯ ಬೆಲೆಯನ್ನ ಸಿದ್ದರಾಮಯ್ಯನವರ ಸರಕಾರ ಐದು ಲಕ್ಷಕ್ಕೆ ಏರಿಸಿತ್ತು. ಒಂದು ಸರಕಾರ ಪ್ರಶಸ್ತಿ ಮೊತ್ತ ಏರಿಸಿದರೆ ಮತ್ತೊಂದು ಸರಕಾರ ಆ ಮೊತ್ತವನ್ನ ಇಳಿಸಿದರೆ ಯಾರಿಗೂ ಅವಮಾನವಾಗುವುದಿಲ್ಲ. ನಮ್ಮ ನಡುವಿನ ಸಮಾಜ ಸುಧಾರಕರು ಹಣಕ್ಕಾಗಿ ಸೇವೆ ಮಾಡುವವರಲ್ಲ. ಆದರೆ ಬಿಜೆಪಿಯ ಉದ್ದೇಶವೇ ಅರಸುರವರನ್ನ ಜನಮನದಿಂದ ಮರೆಯಾಗಿಸುವುದು. ಅದಕ್ಕಾಗಿ ಈ ಸೇಡಿನ ಕ್ರಮ ಕೈಗೊಂಡಿದ್ದಾರೆ.
ಬಿಜೆಪಿಗಳು ಅರಸು ಪ್ರಶಸ್ತಿಯಂತಹ ವಿಷಯಗಳನ್ನ ತಣ್ಣಗೆ ಜಾರಿ ಮಾಡಿ ಪರಿಣಾಮ ನೋಡುತ್ತವೆ. ಪ್ರತಿಕ್ರಿಯೆ ಇಲ್ಲದಿದ್ದರೆ ಅದು ಮುಂದಿನ ವರ್ಷದಿಂದ ಮೂಲೆಗೆ ಬೀಳುವುದು ಗ್ಯಾರಂಟಿ. ಈಗಾಗಲೇ ಅಂಬೇಡ್ಕರ್ ಸಂವಿಧಾನ ರೂಪಿಸಿರಲಿಲ್ಲ, ಕ್ರೂಡೀಕರಿಸಿದರು ಎಂಬ ಸುದ್ದಿ ಮಾಡಿ ಅದರ ಪರಿಣಾಮ ಗ್ರಹಿಸತೊಡಗಿದ್ದಾರೆ. ಅಂಬೇಡ್ಕರ್ ವಿಷಯ ದಲಿತರಿಗೆ ಸಂಬಂಧಿಸಿದ್ದೆಂದು ಹಲವರು ಸುಮ್ಮನಿದ್ದಾರೆ. ಇದೇ ಬಿಜೆಪಿಗಳಿಗೆ ಸಂತಸದ ಸುದ್ದಿ.
ಇದನ್ನೂ ಓದಿ: ಸಂವಿಧಾನ ದಿನ: ಅಂಬೇಡ್ಕರ್ ಬದಲಿಗೆ ಶ್ಯಾಂ ಪ್ರಸಾದ್ ಮುಖರ್ಜಿ ಫೋಟೋ ಹಾಕಿದ್ದಕ್ಕೆ ಛೀಮಾರಿ, ನಂತರ ಬದಲಾವಣೆ.
ಆದರೆ ಅಂಬೇಡ್ಕರ್ ಕೆಣಕಿದ ಕಾರಣಕ್ಕೆ ನಾಡಿನ ಪ್ರಜ್ಞಾವಂತ ಸಮಾಜ ಕ್ರೋಧಗೊಂಡಿದೆ. ಪ್ರತಿಭಟನೆ ಮಾಡಿದವರು ಮಾತ್ರ ತಳಸಮುದಾಯದವರು. ಆದ್ದರಿಂದ ಅವರ ಹೆಸರಲ್ಲಿ ಕೊಡಮಾಡುವ ಪ್ರಶಸ್ತಿ ನಿಲ್ಲಿಸಿದ್ದರ ಬಗ್ಗೆ ಎಲ್ಲೂ ಸೊಲ್ಲೆತ್ತಿಲ್ಲ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅರಸು ತರದ ಸಾಮಾಜಿಕ ಪರಿವರ್ತನೆಯ ಹರಿಕಾರ ಹಿಂದೆ ಬಂದಿಲ್ಲ. ಮುಂದೆ ಬರುವುದೂ ಅಸಂಭವ. ಆದ್ದರಿಂದ ಸತ್ತಂತಿರುವ ಫಲಾನುಭವಿಗಳು ಎಚ್ಚೆತ್ತು ತಮ್ಮ ದನಿ ಗುರುತಿಸಿಕೊಳ್ಳದಿದ್ದರೆ ಇಲ್ಲಿ ಗೋಳ್ವಾರ್ಕರ್ ಪ್ರಶಸ್ತಿ ಜಾರಿಗೆ ಬರುತ್ತದೆ.



ಅಹಿಂದ ವರ್ಗದ ನಾಯಕರಾಗಿದ್ದ ಅರಸುರವರ ಹೆಸರು ಚಾಲ್ತಿಯಲ್ಲಿರದಂತೆ ಮಾಡುವುದೇ ಮನುವಾದಿಗಳ ಹುನ್ನಾರ.