ಎರಡು ಸಂಸ್ಥೆಗಳ (ವಿಕಿಮೀಡಿಯ-ಎಎನ್‌ಐ) ನಡುವಿನ ಕಾನೂನು ವಿವಾದದ ಬಗ್ಗೆ ವಿವರಗಳನ್ನು ಹೊಂದಿರುವ ‘ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ vs ವಿಕಿಮೀಡಿಯ ಫೌಂಡೇಶನ್’ ಎಂಬ ಶೀರ್ಷಿಕೆಯ ವಿಕಿಪೀಡಿಯಾ ಪುಟವನ್ನು ತೆಗೆದು ಹಾಕುವಂತೆ ವಿಕಿಮೀಡಿಯ ಫೌಂಡೇಶನ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಸುಪ್ರೀಂ ಕೋರ್ಟ್ ಗುರುವಾರ (ಮೇ.8) ರದ್ದುಗೊಳಿಸಿದೆ ಎಂದು barandbench.com ವರದಿ ಮಾಡಿದೆ.
ದೆಹಲಿ ಹೈಕೋರ್ಟ್‌ನಲ್ಲಿ ವಿಕಿಪೀಡಿಯಾ ವಿರುದ್ಧ ಎಎನ್‌ಐ ಸುದ್ದಿ ಸಂಸ್ಥೆ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ಸೇರಿದಂತೆ ಇತರ ಮಾಹಿತಿಗಳನ್ನು ವಿವಾದಕ್ಕೀಡಾಗಿದ್ದ ವಿಕಿಪೀಡಿಯಾ ಪುಟ ಹೊಂದಿದೆ.
“ಕಳೆದ ವರ್ಷದ ಈ ಪುಟಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದ ದೆಹಲಿ ಹೈಕೋರ್ಟ್, ನ್ಯಾಯಾಲಯದ ಅವಲೋಕನಗಳ ಕುರಿತ ಚರ್ಚೆಯು ನ್ಯಾಯಾಂಗ ನಿಂದನೆಗೆ ಕಾರಣವಾಗುತ್ತದೆ” ಎಂದು ಹೇಳಿತ್ತು.
ಹೈಕೋರ್ಟ್ ವಿಕಿಪೀಡಿಯ ಪುಟ ತೆಗೆದು ಹಾಕುವಂತೆ ಹೊರಡಿಸಿದ್ದ ಆದೇಶದ ವಿರುದ್ಧ ವಿಕಿಮೀಡಿಯಾ ಫೌಂಡೇಶನ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ನ್ಯಾಯಪೀಠ ಗುರುವಾರ ಪುರಸ್ಕರಿಸಿದೆ.
“ಹೈಕೋರ್ಟ್ ಹೊರಡಿಸಿದ ನಿರ್ದೇಶನವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಲು ನಮಗೆ ಯಾವುದೇ ಹಿಂಜರಿಕೆಯಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ಮಾಧ್ಯಮಗಳಿಗೆ ವಿಷಯವನ್ನು ಅಳಿಸಲು ಅಥವಾ ತೆಗೆದುಹಾಕಲು ಹೇಳುವುದು ನ್ಯಾಯಾಂಗದ ಕೆಲಸವಲ್ಲ. ಅಂತಹ ಆದೇಶವನ್ನು ಸೂಕ್ತ ಕ್ರಮಗಳಲ್ಲಿ ಪ್ರಶ್ನಿಸಲು ಮಾಧ್ಯಮಗಳಿಗೆ ಮುಕ್ತ ಅವಕಾಶವಿದೆ” ಎಂದಿದೆ.
“ಉದಾರವಾದಿ ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ಮತ್ತು ಮಾಧ್ಯಮಗಳು ಪರಸ್ಪರ ಬೆಂಬಲಿಸಬೇಕು” ಎಂದು ನ್ಯಾಯಾಲಯವು ಒತ್ತಿ ಹೇಳಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಖಿಲ್ ಸಿಬಲ್, ಟ್ರೈಲೀಗಲ್‌ನ ವಕೀಲರಾದ ನಿಖಿಲ್ ನರೇಂದ್ರನ್ ಮತ್ತು ಟೈನ್ ಅಬ್ರಹಾಂ ಜೊತೆಗೆ ಎಝೆಡ್‌ಬಿ & ಪಾರ್ಟ್‌ನರ್ಸ್‌ನ ವಕೀಲರಾದ ವಿಜಯೇಂದ್ರ ಪ್ರತಾಪ್ ಸಿಂಗ್ ಮತ್ತು ಅಭಿಜ್ಞಾನ್ ಝಾ ವಿಕಿಪೀಡಿಯಾ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಕೀಲ ಸಾಹಿಲ್ ತಗೋತ್ರ ಅವರೊಂದಿಗೆ ವಕೀಲ ಸಿದ್ಧಾಂತ್ ಕುಮಾರ್ ಅವರು ಎನ್‌ಎನ್‌ಐ ಪರವಾಗಿ ವಾದ ಮಂಡಿಸಿದ್ದರು.
ವಿಕಿಪೀಡಿಯಾ ಪುಟವನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಈ ಹಿಂದೆ ಟೀಕಿಸಿದ್ದ ಸುಪ್ರೀಂ ಕೋರ್ಟ್, “ನ್ಯಾಯಾಧೀಶರು ಇಷ್ಟಪಡುವುದಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಪ್ರಕ್ರಿಯೆಗಳ ಕುರಿತಾದ ಮಾಹಿತಿಯನ್ನು ತೆಗೆದುಹಾಕುವಂತೆ ಆದೇಶಿಸಲು ಸಾಧ್ಯವಿಲ್ಲ” ಎಂದಿತ್ತು.
ಎಎನ್‌ಐ ಕುರಿತಾದ ವಿಕಿಪೀಡಿಯಾ ಪುಟದಲ್ಲಿ, ‘ಅದು (ಎಎನ್‌ಐ) ಪ್ರಸ್ತುತ ಕೇಂದ್ರ ಸರ್ಕಾರದ ಪ್ರಚಾರ ಸಾಧನ’ ಎಂದು ಮಾಹಿತಿ ಎಡಿಟ್ ಮಾಡಲು ವಿಕಿಮೀಡಿಯಾ ಫೌಂಡೇಶನ್ ಅನುಮತಿಸಿದೆ ಎಂದು ಆರೋಪಿಸಿ ಎಎನ್‌ಐ ಮಾನನಷ್ಟ ಮೊಕದ್ದಮೆ ಹೂಡಿರುವುದು ಈ ಪ್ರಕರಣದ ಮೂಲ.
ಎಎನ್‌ಐ ಹೂಡಿರುವ ಮೊಕದ್ದಮೆ ಸಂಬಂಧ ಜುಲೈ 9, 2024 ರಂದು ವಿಕಿಪೀಡಿಯಾದ ಮಾತೃ ಸಂಸ್ಥೆ ವಿಕಿಮೀಡಿಯಾ ಫೌಂಡೇಶನ್‌ಗೆ ಸಮನ್ಸ್ ಜಾರಿ ಮಾಡಿದ್ದ ದೆಹಲಿ ಹೈಕೋರ್ಟ್, ಎಎನ್‌ಐನ ವಿಕಿಪೀಡಿಯಾ ಪುಟದಲ್ಲಿ ವಿಷಯಗಳನ್ನು ಎಡಿಟ್ ಮಾಡಿದ ಮೂವರ ಮಾಹಿತಿ ಬಹಿರಂಗಪಡಿಸುವಂತೆ ಆದೇಶಿಸಿತ್ತು.
ನಂತರ, ಹೈಕೋರ್ಟ್ ಆದೇಶವನ್ನು ವಿಕಿಮೀಡಿಯಾ ಪಾಲಿಸಿಲ್ಲ ಎಂದು ಆರೋಪಿಸಿದ್ದ ಎಎನ್‌ಐ, ಹೈಕೋರ್ಟ್‌ನ ಏಕ ಸದಸ್ಯ ಪೀಠದ ಮುಂದೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು.
ಸೆಪ್ಟೆಂಬರ್ 5, 2024ರಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು ವಿಕಿಮೀಡಿಯಾದ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಕ್ಟೋಬರ್ 25ರಂದು ವಿಕಿಮೀಡಿಯಾದ ಅಧಿಕೃತ ಪ್ರತಿನಿಧಿಯೊಬ್ಬರು ನ್ಯಾಯಾಲಯದಲ್ಲಿ ವೈಯಕ್ತಿಕವಾಗಿ ಹಾಜರಿರಬೇಕು ಎಂದು ಆದೇಶಿಸಿದ್ದರು. ನಂತರ ವಿಕಿಮೀಡಿಯಾ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಈ ವಿಷಯ ವಿಭಾಗೀಯ ಪೀಠದ ಮುಂದೆ ಬಂದಾಗ, ಪ್ರಕರಣದ ಬಗ್ಗೆಯೇ ಒಂದು ಪುಟವನ್ನು ರಚಿಸಲಾಗಿದೆ ಎಂದು ಪೀಠ ಗಮನಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟವನ್ನು ಪ್ರಕಟಿಸಲು ಅನುಮತಿಸಿದ್ದಕ್ಕೆ ಹೈಕೋರ್ಟ್ ವಿಕಿಪೀಡಿಯಾ ವಿರುದ್ದ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಮುಖ್ಯ ನ್ಯಾಯಮೂರ್ತಿ ಮನಮೋಹನ್ (ಈಗ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದಿದ್ದಾರೆ) ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ಪೀಠವು ‘ಏಷ್ಯನ್ ನ್ಯೂಸ್ ಇಂಟರ್ನ್ಯಾಷನಲ್ vs ವಿಕಿಮೀಡಿಯ ಫೌಂಡೇಶನ್’ ಎಂಬ ಶೀರ್ಷಿಕೆಯ ಪುಟವನ್ನು ತೆಗೆದು ಹಾಕುವಂತೆ ವಿಕಿಪೀಡಿಯಾಗೆ ಆದೇಶಿಸಿತ್ತು.
ವಿಕಿಪೀಡಿಯಾ ಆದೇಶವನ್ನು ಪಾಲಿಸಿದರೂ, ಅದು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ನಡುವೆ, ಎಎನ್‌ಐ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಎಎನ್‌ಐನ ವಿಕಿಪೀಡಿಯಾ ಪುಟದಲ್ಲಿ ಸೇರಿಸಲಾದ ಮಾನನಷ್ಟಕರ ಮಾಹಿತಿಗಳನ್ನು ತೆಗೆದು ಹಾಕುವಂತೆ ವಿಕಿಪೀಡಿಯಾಗೆ ಏಪ್ರಿಲ್ 2ರಂದು ಮಧ್ಯಂತರ ಆದೇಶ ಆದೇಶ ನೀಡಿತ್ತು.
ಈ ಆದೇಶವನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 17 ರಂದು ರದ್ದುಗೊಳಿಸಿದೆ. ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಾಧೀಶರು ಹೊಸದಾಗಿ ವಿಚಾರಣೆ ನಡೆಸಲಿದ್ದಾರೆ.
ಹೊಸ ವಿಚಾರಣೆ ಆರಂಭ
ಎಎನ್‌ಐ ಮತ್ತು ವಿಕಿಮೀಡಿಯಾ ನಡುವಿನ ಮಾನನಷ್ಟ ಪ್ರಕರಣದ ಹೊಸ ವಿಚಾರಣೆ ಗುರುವಾರ ದೆಹಲಿ ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಾಧೀಶರ ಪೀಠ ಆರಂಭಿಸಿದೆ.
ವಿಕಿಪೀಡಿಯಾದಲ್ಲಿ ತನ್ನ ಬಗ್ಗೆ ಇರುವ ಮಾನನಷ್ಟಕರ ಮಾಹಿತಿಗೆ ಎಎನ್‌ಐ ಮಧ್ಯಂತರ ತಡೆಯಾಜ್ಞೆ ಕೋರಿದೆ. ಈ ಹಿನ್ನೆಲೆ, ವಿಕಿಪೀಡಿಯಾದ ಮಾತೃ ಸಂಸ್ಥೆ ವಿಕಿಮೀಡಿಯಾ ಫೌಂಡೇಶನ್‌ಗೆ ಶುಕ್ರವಾರ (ಮೇ.8) ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಜ್ಯೋತಿ ಸಿಂಗ್ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದು, ಜುಲೈ 7ಕ್ಕೆ ಮುಂದಿನ ವಿಚಾರಣೆ ನಿಗದಿ ಮಾಡಿದ್ದಾರೆ.
ವಿಕಿಮೀಡಿಯಾದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಖಿಲ್ ಸಿಬಲ್, ನೋಟಿಸ್‌ಗೆ ಉತ್ತರಿಸಲು ಹೆಚ್ಚಿನ ಕಾಲವಕಾಶ ಕೋರಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಸಿಂಗ್ ಅವರು, ಎಎನ್‌ಐ ಆರೋಪ ನಿಜವೆಂದು ಕಂಡುಬಂದರೆ ಅದರ ಪರಿಣಾಮವನ್ನು ಯಾರು ಎದುರಿಸಬೇಕು? ಎಂದು ಪ್ರಶ್ನಿಸಿದ್ದಾರೆ.
ಎಎನ್‌ಐ ಪರ ವಕೀಲ ಸಿದ್ಧಾಂತ್ ಕುಮಾರ್ ಅವರು ವಾದ ಮಂಡಿಸಿ, ವಿಕಿಪೀಡಿಯಾ ಮಧ್ಯವರ್ತಿಯಾಗಿರುವುದರಿಂದ (ಮಾಹಿತಿ ಎಡಿಟ್ ಮಾಡಿದವರು ಪಕ್ಷಕಾರರು ಎಂದರ್ಥ) ಅರ್ಹತೆಯ ಆಧಾರದ ಮೇಲೆ ಈ ವಿಷಯವನ್ನು ಪ್ರಶ್ನಿಸಲು ಯಾವುದೇ ಅರ್ಹತೆ ಇಲ್ಲ ಎಂದಿದ್ದಾರೆ.
ಭಾರತ – ಪಾಕ್ ಸಂಘರ್ಷ ಹಿನ್ನಲೆ | ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುತ್ತಿರುವ ಸುಳ್ಳುಗಳು


