Homeಮುಖಪುಟದಲಿತ ದಮನದ ಮನಃಸ್ಥಿತಿ ಬದಲಾಗುವುದೇ ಇಲ್ಲವೆ?

ದಲಿತ ದಮನದ ಮನಃಸ್ಥಿತಿ ಬದಲಾಗುವುದೇ ಇಲ್ಲವೆ?

- Advertisement -
- Advertisement -

ಜಾತಿಯೆಂಬ ‘ಸಾಮಾಜಿಕ ಅನಿಷ್ಠ’ ರೋಗದಿಂದ ನಡೆಯುತ್ತಲೇ ಇರುವ ಹಿಂಸಾಚಾರಕ್ಕೆ ಕೊನೆಯೇ ಇಲ್ಲದಾಗಿದೆ. ಅತ್ಯಂತ ಆಳವಾಗಿ ಬೇರೂರಿರುವ ‘ಜಾತಿ ವ್ಯವಸ್ಥೆ’ ಅಸಂಖ್ಯಾತ ಹಲ್ಲೆ, ಹತ್ಯೆ, ಅತ್ಯಾಚಾರ, ಹಿಂಸಾಚಾರಗಳಿಗೆ ಇನ್ನೂ ಕಾರಣವಾಗುತ್ತಲೇ ಇದೆ. ‘ಜಾತಿ ತಾರತಮ್ಯ’, ‘ಜಾತಿ ಹಿಂಸಾಚಾರ’ಗಳನ್ನು ಖಂಡಿಸಿದರೆ ಸಾಲದು, ತ್ವರಿತ ಮತ್ತು ನಿಷ್ಪಕ್ಷಪಾತವಾಗಿ ತನಿಖೆಗೊಳಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದು ಮುಖ್ಯ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಮುಂದಾಳತ್ವದಲ್ಲಿ ಭಾರತದ ಸಂವಿಧಾನ ಬಂದು ಹಲವು ದಶಕಗಳೇ ಉರುಳಿದ್ದರೂ, ಆದಿವಾಸಿಗಳು, ದಲಿತರು, ಅಲೆಮಾರಿಗಳು, ಅರೆ ಅಲೆಮಾರಿಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಎರಡನೇ ದರ್ಜೆ ನಾಗರಿಕರಂತೆ ಬದುಕುತ್ತಿದ್ದಾರೆ. ಚುಂಡೂರು, ಕರಮ್‌ಚೇಡು, ಕುಮ್ಮೇರು, ಶಂಕರಬೈಗ್ಲಾ, ಲಕ್ಷ್ಮಣಪುರ ಬಾತೆ, ಖೈರ್ಲಾಂಜಿ ಒಳಗೊಂಡಂತೆ ಎಲ್ಲಾ ದಲಿತ ನರಮೇಧ ಪ್ರಕರಣಗಳಲ್ಲೂ ಅಂತಿಮ ತೀರ್ಪು ಬಂದಿಲ್ಲ. ‘ಹತ್ರಾಸ್ ಪ್ರಕರಣ’ ಬೆಳಕಿಗೆ ಬಂದ ನಂತರ, ಸಂತ್ರಸ್ತ ಕುಟುಂಬವನ್ನೇ ಅಪರಾಧಿಯನ್ನಾಗಿಸಲು ಪ್ರಯತ್ನಿಸಿದ್ದು ಅತ್ಯಂತ ಹೇಯಕರವಾಗಿದೆ.

ಹೀಗಾಗಿಯೇ ಜಾತೀಯತೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗೆದ್ದಲು ಹುಳುವಿನಂತೆ ತಿನ್ನುತ್ತಿದೆ. ‘ಜಾತಿ ಸಮಸ್ಯೆ ಹಿಂದೂಗಳನ್ನು ಮಾತ್ರ ಕಾಡದೆ ಸಿಖ್, ಮುಸಲ್ಮಾನ, ಕ್ರೈಸ್ತ, ಜೈನರನ್ನೂ ಹಿಂಸಿಸುತ್ತಿದೆ. ಎಲ್ಲಾ ಧರ್ಮದ ಜಾತಿಯ ಜನರಲ್ಲೂ ‘ಜಾತಿ ವ್ಯವಸ್ಥೆ’ಯ ಕುರುಹು ಇದೆ.

ಕಳೆದ ವಾರ ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟದ ಹೋಟೆಲ್ ಒಂದರಲ್ಲಿ ‘ಜಗ್’ನಲ್ಲಿ ನೀರು ಕುಡಿದ ಕಾರಣಕ್ಕೆ 20 ದಿನಗಳ ಕಾಲ ಕಾದು ನಾಗರಾಜ್ ಮತ್ತು ರಾಮಯ್ಯ ಅವರಿಗೆ ಕಾರು ಗುದ್ದಿಸಿ ಜೀವ ತೆಗೆಯಲಾಗಿದೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಮೃತ ದುರ್ದೈವಿಗಳು ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿ ನಿವಾಸಿಗಳು. ಭರತ್, ನಿಶಾಂತ್, ವಿನಯ್ ಎಂಬುವವರನ್ನು ಈ ದುಷ್ಕೃತ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ. ಇಲ್ಲಿ ಗಲಭೆಯಾದ ಕೂಡಲೇ ಠಾಣೆಗೆ ಕರೆಸಿ ಅವರನ್ನು ಎಚ್ಚರಿಸಿದ್ದರೆ, ಬಹುಶಃ ಪಾಪದ ಜೀವಗಳು ಉಳಿಯಬಹುದಿತ್ತು. ಕನಿಷ್ಠ ‘ಸಾಮರಸ್ಯ’ ಬೆಸೆಯುವ ಕೆಲಸವನ್ನಾದರೂ ಮಾಡಬೇಕಿತ್ತು. ಇಂತಹ ‘ರಕ್ತಸಿಕ್ತ ದೌರ್ಜನ್ಯ’ಕ್ಕೆ ದೊಡ್ಡ ಇತಿಹಾಸವಿದೆ.

ಅದು ಕಿಲ್‌ವೇನ್‌ಮಣಿ ಗ್ರಾಮ. 1968ರ ಡಿಸೆಂಬರ್ 25ರಂದು ಒಂದೇ ಕುಟುಂಬದ 44 ಜನ ಭೂರಹಿತ ದಲಿತರನ್ನು ಭೂಧಣಿಗಳು ಬೆಂಕಿ ಇಟ್ಟು ಕೊಂದುಹಾಕಿದ್ದರು. ಹತ್ಯೆಗೀಡಾದವರಲ್ಲಿ 6ರಿಂದ 50 ವಯೋಮಾನದವರೆಗೂ ಇದ್ದಾರೆ. ಹತ್ಯಾಕಾಂಡದ ರೂವಾರಿ ಗೋಪಾಲಕೃಷ್ಣ ನಾಯುಡು ಒಂದೇ ತಿಂಗಳಲ್ಲಿ ಜೈಲಿನಿಂದ ಹೊರಬಂದಿದ್ದ. ಇವರ ಭೂಮಿಯಲ್ಲಿ ಕೂಲಿ ಮಾಡಲು ಹೋಗದ ಕಾರಣ ಅಮಾಯಕ ದಲಿತರನ್ನು ‘ಅಗ್ನಿಪಾಲು’ ಮಾಡಲಾಯಿತು. ಉತ್ತರ ಪ್ರದೇಶದ ಸೋನಾ ಭದ್ರಾದಲ್ಲಿ ಗೊಂಡಾ ಸಮುದಾಯದ 10 ಜನರನ್ನು ‘ಭೂಮಿಹಕ್ಕು’ ಸಂಬಂಧ ಕೊಚ್ಚಿ ಕೊಲೆಮಾಡಲಾಗಿತ್ತು. 2018ರ ಮೇ 28ರಂದು ಶಿವಗಂಗೆ ಜಿಲ್ಲೆಯ ಖಚನಾಥನ್ ಗ್ರಾಮದಲ್ಲಿರುವ ಷಣ್ಮುಗನಾಥನ್, ಆರ್ಮುಗಂ, ಚಂದ್ರಶೇಖರನ್ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಇವೆಲ್ಲವೂ ‘ಭೂಮಿ’ಯ ಹಕ್ಕಿಗಾಗಿ ಹೋರಾಟ ನಡೆಸಿದ್ದಕ್ಕೆ ಪ್ರತಿಯಾಗಿ ನಡೆಸಿದ ನರಮೇಧಗಳಾಗಿವೆ.

ಇಲ್ಲಿ ಗಮನಿಸಬೇಕಾದ ಪ್ರಮುಖ ವಿಚಾರವೆಂದರೆ, ಮೃಗೀಯ ದೌರ್ಜನ್ಯ ಅನಕ್ಷರಸ್ಥ ದಲಿತರಿಗೆ ಮಾತ್ರ ಸೀಮಿತವಾಗಿಲ್ಲ. ಹಾಗೆಯೇ ಭೂಮಿಯ ಹಕ್ಕಿಗಾಗಿ ನಡೆದ ಹೋರಾಟಗಳ ವಿರುದ್ಧ ಮಾತ್ರ ಈ ದೌರ್ಜನ್ಯಗಳು ನಡೆದಿವೆ ಎಂದೇನಲ್ಲ. ಈ ದೌರ್ಜನ್ಯದ ಕೆನ್ನಾಲಿಗೆ ಅಕ್ಷರಸ್ಥ ದಲಿತ, ಆದಿವಾಸಿ, ಅಲ್ಪಸಂಖ್ಯಾತ, ಅಲೆಮಾರಿ, ಅರೆ ಅಲೆಮಾರಿ, ಹಿಂದುಳಿದ ವರ್ಗಗಳನ್ನು ಬಿಡದೆ ಆವರಿಸಿದೆ. ಆದರೂ ಅಧಿಕಾರವರ್ಗ ರಾಜಕಾರಣಿಗಳು ಇದನ್ನು ಬೇರೆಯದೇ ದೃಷ್ಟಿಯಲ್ಲಿ ನೋಡುತ್ತಿದ್ದಾರೆ.

ಓರ್ವ ಆಟಗಾರನ ಕಾಲನ್ನು ದಲಿತ ಎಂಬ ಕಾರಣಕ್ಕೆ ಮುರಿದು ಹಾಕಲಾಗುತ್ತದೆ. ಕಾರಣ ಮೇಲ್ವರ್ಗದ ಓಟಗಾರರನ್ನು ಹಿಂದಿಕ್ಕಿ ಅವನು ವಿಜಯಶಾಲಿಯಾಗಿರುತ್ತಾನೆ. ಮಿರ್ಜಾಪುರದ ಗೋಹನಾದಲ್ಲಿ ಕೇರಿಯೊಂದಕ್ಕೆ ಬೆಂಕಿ ಇಟ್ಟು ಸುಡಲಾಗಿದೆ. ಇದಕ್ಕೂ ಕಾರಣ ಅಲ್ಲಿ ದಲಿತರು ವಾಸಮಾಡುತ್ತಿದ್ದುದು.

ರಾಜಸ್ತಾನದ ಅಲ್ವಾರ್ ಜಿಲ್ಲೆಯ ರಾಜೇಶ್ ಕುಮಾರ್ ಮೇಘ್ವಾಲ್ ಅವರು ‘ದಿ ಕಾಶ್ಮೀರಿ ಫೈಲ್ಸ್’ ಸಿನಿಮಾ ಟೀಕಿಸಿ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದರು. ’ದೌರ್ಜನ್ಯ ಪಂಡಿತರ ಮೇಲಷ್ಟೆ ಜರುಗಿದೆಯೇ? ದಲಿತರ ಮೇಲೆ ನಡೆದಿಲ್ಲವೇ?’ ಎಂಬ ಪ್ರಶ್ನೆ ಎತ್ತಿದ್ದರು. ವಿರೋಧ ಕಂಡುಬಂದಾಗ ಮೇಘ್ವಾಲ್ ಕ್ಷಮಾಪಣೆಯನ್ನು ಕೋರಿದ್ದರು. ಇದ್ಯಾವುದಕ್ಕೂ ಬಗ್ಗದ ಗುಂಪೊಂದು ಮೇಘ್ವಾಲ್ ಅವರನ್ನು ದೇಗುಲದ ಬಳಿ ಎಳೆದೊಯ್ದು ಬಲವಂತದಿಂದ ಮೂಗನ್ನು ಜಗುಲಿಗೆ ತಿಕ್ಕಿಸಿದ್ದಾರೆ. ಇದೇ ರಾಜ್ಯದ ಬಂಡಿ ಜಿಲ್ಲೆಯ ಪರಮ್‌ಜಿತ್ ಸಿಂಗ್ 1 ಲಕ್ಷ ಕೊಟ್ಟು ದಲಿತ ರಾಧೇಶ್ಯಾಮ್‌ನನ್ನು ಹೊಲದ ಕೆಲಸಕ್ಕೆ ಇಟ್ಟುಕೊಂಡಿದ್ದ. 50 ಸಾವಿರದಷ್ಟು ದುಡಿದು ಸಾಲ ತೀರಿಸಿದ್ದರೂ, ಇನ್ನೂ 1 ಲಕ್ಷ 10 ಸಾವಿರ ಬಾಕಿ ಕೊಡಬೇಕೆಂದು ಬೆದರಿಸಿ 31 ಗಂಟೆಗಳ ಕಾಲ ರಾಧೇಶ್ಯಾಮ್‌ನನ್ನು ದನದ ಕೊಟ್ಟಿಗೆಯಲ್ಲಿ ಪರಮ್‌ಜಿತ್ ಸಿಂಗ್ ಕೂಡಿಹಾಕಿದ್ದ.

ಉತ್ತರ ಪ್ರದೇಶದ ಜಗತ್‌ಪುರದಲ್ಲಿ 10ನೇ ತರಗತಿ ಓದುತ್ತಿದ್ದ ದಲಿತ ವಿದ್ಯಾರ್ಥಿಯನ್ನು ಥಳಿಸಿ ಕಾಲು ನೆಕ್ಕಿಸಲಾಗಿತ್ತು. ದೇಶದ ಪ್ರತಿಷ್ಠಿತ ಏಮ್ಸ್‌ನಲ್ಲಿ ಅಧ್ಯಾಪಕ ಹುದ್ದೆಗೆ ಎಸ್.ಸಿ.-ಎಸ್.ಟಿ. ಸಮುದಾಯದ ಅಭ್ಯರ್ಥಿಗಳಿದ್ದರೂ ಹುದ್ದೆ ನಿರಾಕರಿಸಲಾಗುತ್ತಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ (ಎಸ್.ಸಿ.-ಎಸ್.ಟಿ.) ತನ್ನ ವರದಿಯಲ್ಲಿ ಹೇಳಿತ್ತು. ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್ ಕೂತಿದ್ದರು. ಆದರೆ ಪ್ರಧಾನಿಯವರಿಗೆ ದೂರದಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಖರ್ಗೆ ಅವರ ಸ್ಥಾನಮಾನಕ್ಕೆ ತಕ್ಕುದಾದ ಆಸನ ನೀಡಿರಲಿಲ್ಲ. ಇದು ಶಿಷ್ಠಾಚಾರಕ್ಕೆ ವಿರುದ್ಧವಾದದ್ದು ಹಾಗೂ ಬೇಕೆಂದೇ ಅವಮಾನ ಮಾಡಲಾಗಿದೆ ಎಂದು ವಿಪಕ್ಷಗಳ ಸಂಸದರು ದೂರಿದ್ದರು.

“ಕೆಳಜಾತಿಯ ವಿದ್ಯಾರ್ಥಿನಿಯರಿಗೆ ಚಾಪೆಯ ಮೇಲೆ, ನೆಲದ ಮೇಲೆ ಮಲಗುವಂತೆ ಸೂಚಿಸುತ್ತಾರೆ. ತಿನ್ನಲು ಹಳಸಿದ ಅನ್ನ ನೀಡುತ್ತಾರೆ. ಶೌಚಾಲಯ ತೊಳೆಯಲು ಹೇಳುತ್ತಾರೆಂದು” ಜಾರ್ಖಂಡ್‌ನ ಚಾಯಿಬಾಸಾ ಜಿಲ್ಲೆಯ ಖುಂಟ್‌ಪಾನಿಯ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ದೂರುನೀಡಿದ್ದರು. ದೂರು ನೀಡಲು 60ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ರಾತ್ರಿಯಿಡೀ, ನಿರ್ಜನ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೇ ತೆರಳಿ ಪಶ್ಚಿಮ ಸಿಂಗ್‌ಭೂಮ್ ಜಿಲ್ಲಾಧಿಕಾರಿ ಅನನ್ಯ ಮಿತ್ತಲ್ ಅವರ ಬಳಿ ದೂರು ದಾಖಲಿಸಿದ್ದರು.

ಇನ್ನೂ ಟೋಕಿಯೋದಲ್ಲಿ ಜರುಗಿದ ಒಲಿಂಪಿಕ್ಸ್‌ನ ಹಾಕಿ ಕ್ರೀಡೆಯಲ್ಲಿ ಮಹಿಳಾ ತಂಡ ಸೆಮಿಫೈನಲ್ ತಲುಪಿದ್ದು ಸಣ್ಣ ಸಾಧನೆಯಲ್ಲ. ಅದೊಂದು ಅಭೂತಪೂರ್ವ ಇತಿಹಾಸ. ಮಹಿಳಾ ತಂಡ ನಂತರ ಸೋಲಿಗೆ ಗುರಿಯಾದಾಗ ಸಂತೈಸಬೇಕಾದವರು ನಾಯಕಿ ವಂದನಾ ಕಟಾರಿಯಾ ಕುಟುಂಬವನ್ನು ಜಾತಿ ಹಿಡಿದು ನಿಂದಿಸುತ್ತಿದ್ದರು. ನಾನೊಬ್ಬ ದಲಿತಳು. ಬುದ್ಧನ ‘ಜ್ಞಾನೋದಯ’, ಅಂಬೇಡ್ಕರ್ ಅವರ ‘ಅಮರತ್ವ’, ಕಾನ್ಶಿರಾಂ ಅವರ ಧೀಮಂತಿಕೆಯಿಂದಾಗಿ ‘ಮಾನವೀಯತೆಯ ಸಾರ’ ನನ್ನಲ್ಲಿದೆ ಎಂದು ಅವರು ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: ಜಾತಿ ದಬ್ಬಾಳಿಕೆ – ದೌರ್ಜನ್ಯಕ್ಕೆ ಕೊನೆಯೇ ಇಲ್ಲವೇ?: ಡಾ. ಎಂ. ಎಸ್. ಮಣಿ

ಇನ್ನೂ ಡಾ. ಪಾಯಲ್ ತಡವಿ ಅವರ ‘ಆತ್ಮಹತ್ಯೆ’ ಪ್ರಕರಣ ದಲಿತರಲ್ಲಿ ಮಡುಗಟ್ಟಿದ ಆಕ್ರೋಶವನ್ನು ಹೊರಹಾಕಿತ್ತು. ’ವಂಚಿತ್ ಬಹುಜನ್ ಅಗಾಧಿ’ ಸೇರಿದಂತೆ ದಲಿತ ಸಂಘಟನೆಗಳೆಲ್ಲವೂ ಕೂಡಿ ಪ್ರತಿಭಟನೆಯನ್ನು ನಡೆಸಿದ್ದವು. ಡಾ. ಪಾಯಲ್ ಅವರ ಸಾವನ್ನು 2016ರಲ್ಲಿ ಸಾವಿಗೀಡಾದ ಪಿಎಚ್.ಡಿ. ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣದೊಂದಿಗೆ ಹೋಲಿಸಿ ನೋಡಲಾಗಿತ್ತು. ವೇಮುಲಾ ಸಾವು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಲ್ಲೂ ಪ್ರತಿಧ್ವನಿಸಿತ್ತು.

ಇದೇ ಬಗೆಯಲ್ಲಿ ಉತ್ತರಾಖಂಡದ ಭಾಗೇಶ್ವರ ಜಿಲ್ಲೆಯ ಚಾರ್ಸನ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ‘ಜಾತಿ ಆಧಾರ’ದ ಮೇಲೆ ವಿದ್ಯಾರ್ಥಿಗಳನ್ನು ಹಿಂಸಿಸಿದ್ದಾನೆ. ತನ್ನ ಮಗನನ್ನು ‘ಜಾತಿ’ ಹಿಡಿದು ನಿಂದಿಸಬಾರದೆಂದು ಮತ್ತು ದೈಹಿಕವಾಗಿ ಬಡಿಯಬಾರದೆಂದು ಮಂಜುದೇವಿ ಮನವಿ ಮಾಡಿದ್ದರು. “ದುಡ್ಡು ಕೊಟ್ಟು ಖಾಸಗಿ ಶಾಲೆಯಲ್ಲಿ ಓದಿಸಲು ನನಗೆ ಸಾಧ್ಯವಿಲ್ಲ. ಸರ್ಕಾರಿ ಶಾಲೆಯೇ ನನಗಿರುವ ದಿಕ್ಕು. ಇಲ್ಲಿ ‘ತಾರತಮ್ಯ’ ಎಸಗುತ್ತಿರುವುದರಿಂದ ನನ್ನ ಮಗನ ‘ಕಲಿಕೆ’ಯ ಗತಿಯೇನು” ಎಂದು ಅವಲತ್ತುಕೊಂಡಿದ್ದರು.

ಇವತ್ತಿಗೂ ಬಹುತೇಕ ಹಳ್ಳಿಯಲ್ಲಿ ಕುಡಿಯುವ ನೀರು, ಬಳಸುವ ನೀರು, ದೇಗುಲಗಳು ಮೇಲ್ಜಾತಿಗೊಂದು, ಕೆಳಜಾತಿಗೊಂದಿವೆ. ದೇಗುಲದಲ್ಲಿ ಮಂಗಳಾರತಿ ಇಲ್ಲ. ಪ್ರಸಾದಕ್ಕೆ ಪ್ರತ್ಯೇಕ ಸಾಲಿರುತ್ತದೆ. ಜಾತ್ರೆಗಳಿಗೂ ಪ್ರವೇಶ ಇರುವುದಿಲ್ಲ. ಎಂತಹ ರೋಗ ಬಂದರೂ ದವಾಖಾನೆಯ ಒಳಗೆ ಪ್ರವೇಶವಿಲ್ಲ. ಹೊರಗೆ ನಿಂತು ಔಷಧ ಪಡೆಯುವ ಸ್ಥಿತಿ ಇದೆ. ಐಐಟಿ ಬಾಂಬೆಯಲ್ಲಿ ದಲಿತ ಸಮುದಾಯದ ದರ್ಶನ್ ಸೋಲಂಕಿ ‘ಜಾತಿ ಆಧಾರ’ದ ಮೇಲೆ ಅಸಹನೀಯ ಅವಮಾನ ಅನುಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ.

ಡಾ. ಪಾಯಲ್ ತಡವಿ

ಇದಕ್ಕಿಂತಲೂ ಹೇಯ ಪ್ರಕರಣ ಪುದುಕೋಟೈ ಜಿಲ್ಲೆಯ ವೆಂಗೈವಾಯಲ್‌ನಲ್ಲಿ ನಡೆದಿದ. ಇಲ್ಲಿನ ದಲಿತ ನಿವಾಸಿಗಳು ಕುಡಿಯುವ ನೀರಿಗೆ ಮಾನವ ಮಲವನ್ನು ಮಿಶ್ರಣ ಮಾಡಿ ಪೈಪ್ ಮೂಲಕ ಬಿಡಲಾಗಿತ್ತು. ಮಲ ಮಿಶ್ರಿತ ನೀರು ಕುಡಿದು ಕೆಲವರು ಆಸ್ಪತ್ರೆಗೂ ಸೇರಿದ್ದರು. ಪ್ರಕರಣ ಬೆಳಕಿಗೆ ಬಂದು ತಿಂಗಳಾದರೂ ದುಷ್ಕರ್ಮಿಗಳನ್ನು ಪತ್ತೆ ಮಾಡಿರಲಿಲ್ಲ. ಮದ್ರಾಸ್ ಹೈಕೋರ್ಟು ಮಧ್ಯೆ ಪ್ರವೇಶಿಸಿ ಮಾಜಿ ನ್ಯಾಯಾಧೀಶ ಎಂ. ಸತ್ಯನಾರಾಯಣನ್ ಅವರನ್ನು ವರದಿ ಮಾಡಲು ನೇಮಿಸಿತ್ತು. ಇವರು 18 ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ನಂತರ ಸುಮಾರು 10 ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 3 ಜನರನ್ನು ಡಿಎನ್‌ಎ ಪರೀಕ್ಷೆಗೂ ಒಳಪಡಿಸಲಾಗಿತ್ತು.

ಈ ಎಲ್ಲಾ ಹತ್ಯೆ, ದೌರ್ಜನ್ಯ, ತಾರತಮ್ಯ ಘಟನೆಗಳು ಮೇಲ್ವರ್ಗ ಮತ್ತು ತಳವರ್ಗಗಳ ನಡುವಿನ ಕಂದರವನ್ನು ಹೆಚ್ಚಾಗಿಸುತ್ತಿವೆ. ಇಂದು ದಲಿತರು, ಆದಿವಾಸಿಗಳು, ಅಲೆಮಾರಿ, ಅರೆ ಅಲೆಮಾರಿ, ಅಲ್ಪಸಂಖ್ಯಾತ, ಹಿಂದುಳಿದವರ ಮೇಲಿನ ದೌರ್ಜನ್ಯ ‘ಸಾಮಾನ್ಯ’ವಾಗಿಬಿಟ್ಟಿದೆ. ಅಸಡ್ಡೆ, ನಿರ್ಲಕ್ಷ್ಯವೂ ಹೆಚ್ಚಾಗಿದೆ. ಹೀಗಾಗಿ ಎನ್‌ಸಿಆರ್‌ಬಿ 2016ರ ಪ್ರಕಾರ ದಲಿತರ ಮೇಲಿನ ದೌರ್ಜನ್ಯ ಶೇ.25ರಷ್ಟು ಏರಿಕೆ ಕಂಡಿದೆ. ಹಾಗೆಯೇ ಬಂಧಿತರಲ್ಲಿ ಶೇ.32ರಷ್ಟು ಜನರಿಗೆ ಶಿಕ್ಷೆಯಾಗಿದೆ. ಶೇ.94ರಷ್ಟು ಪ್ರಕರಣಗಳು ಬಾಕಿ ಉಳಿದಿವೆ. 2019ರಲ್ಲಿ 45,961 ಪ್ರಕರಣಗಳು ಘಟಿಸಿದ್ದರೆ, 2021ರಲ್ಲಿ 50,900ರಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಇನ್ನು ಕಛನಾಥನ್ ಗ್ರಾಮದಲ್ಲಿ ನಡೆದಿದ್ದೇನೆಂದರೆ, 240 ಎಕರೆ ಭೂಮಿ ಒಂದೇ ಸಮುದಾಯದ, ಒಂದೇ ಕುಟುಂಬದ ಕೈಯಲ್ಲಿತ್ತು. ಇವರು ಗ್ರಾಮಕ್ಕೆ ಹರಿಯುವ ನೀರನ್ನು ಯಾರಿಗೂ ಬಿಡದೆ, ತಮ್ಮ ಭೂಮಿಗೆ ಮಾತ್ರ ಬಳಸಿಕೊಳ್ಳುತ್ತಿದ್ದರು. ಕನಿಷ್ಟ ಕುಡಿಯಲು ನೀರನ್ನು ಕೂಡ ಕೊಡುತ್ತಿರಲಿಲ್ಲ. ನೀರು ಬಯಸಿ ಬರುವ ಜನರನ್ನು ಹೆದರಿಸಿ, ಬೆದರಿಸಿ ಓಡಿಸುತ್ತಿದ್ದರು. ಇವರ ಭೂಮಿಯಲ್ಲಿ ಕನಿಷ್ಟ ಕೂಲಿಗೆ ದಲಿತರು ದುಡಿಯುತ್ತಿದ್ದರು. ಕೂಲಿ ಮಾಡದವರ ಮೇಲೆ ದೌರ್ಜನ್ಯ ಎಸಗುತ್ತಿದ್ದರು. ಹೆಣ್ಣುಮಕ್ಕಳು ಶೌಚಕ್ಕೆ, ಸ್ನಾನಕ್ಕೆ ನೀರು ತರಲು ಕೆರೆ, ಬಾವಿ, ಕಾಲುವೆಗಳ ಬಳಿ ತೆರಳುವಾಗ ಬೆತ್ತಲೆ ನಿಂತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಜೊತೆಗೆ ಪ್ರೀತಿ-ಪ್ರೇಮ ಎಂಬುದು ಗೊತ್ತಾದಾಗ ಕಠಿಣವಾಗಿ ಶಿಕ್ಷಿಸುತ್ತಿದ್ದರು. ಕೊಲೆಗಳೂ ನಡೆದುಹೋದವು. ದೂರು ದಾಖಲು ಆದಾಗ ಕೊಲೆಗಾರರನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಕ್ಷಿಸುತ್ತಿದ್ದನಂತೆ. ಇದಕ್ಕೂ ಮುನ್ನ ಕೊಲೆಗಾರರು ದೇಗುಲದ ಮುಂದೆ ನಿಂತು ಆ ಪಂಚಾಯತಿ ಮಾಜಿ ಅಧ್ಯಕ್ಷನಿಗೇ ಮತ ಚಲಾಯಿಸುವೆನೆಂದು ಪ್ರಮಾಣ ಮಾಡಿದ್ದರಂತೆ. ಇದೇ ಬಗೆಯಲ್ಲಿ ಶಿಕಾರಿಪುರದ ಮಾಯತಮ್ಮನ ಮುಚುಡಿ ಗ್ರಾಮದಲ್ಲೊಂದು ಪ್ರಕರಣ ಬೆಳಕಿಗೆ ಬಂದಿತ್ತು. ಇಲ್ಲಿ ದಲಿತರು ಭೂಮಿ ಹಕ್ಕು ಕೇಳಿದ್ದರಿಂದ ಬಲಿಷ್ಠ ಸಮುದಾಯ ನಿರಂತರವಾಗಿ ಹಲ್ಲೆ ನಡೆಸುತ್ತಿದೆ ಎಂದು ವಿರೇಶ್ ನೋವು ತೋಡಿಕೊಂಡಿದ್ದರು. ಇವರಿಗೆ ಕೂಲಿ ಕೆಲಸ ಕೊಟ್ಟರೆ 25 ಸಾವಿರ ದಂಡ ವಿಧಿಸಲು ನಿರ್ಣಯಿಸಲಾಗಿತ್ತಂತೆ.

ವಿಚಿತ್ರ ಎಂದರೆ, ಹತ್ರಾಸ್‌ಗೆ ಹೋಗಿ ನೈತಿಕ ಬೆಂಬಲ ಕೊಟ್ಟು, ಒಗ್ಗಟ್ಟು ಪ್ರದರ್ಶಿಸಿ, ಹಣಕಾಸು ನೆರವು ನೀಡಲು ಮುಂದಾಗಿದ್ದ ಗ್ವಾಲಿಯರ್‌ನ ವೈದ್ಯೆ ಡಾ. ರಾಜ್‌ಕುಮಾರಿ ಬನ್ಸಾಲ್‌ಳಿಗೆ ‘ನಕ್ಸಲೈಟ್’ ಪಟ್ಟ ಕಟ್ಟಿ ಬಲಿಪಶು ಮಾಡಲಾಗಿತ್ತು.

ಇವೆಲ್ಲ ಪ್ರಕರಣಗಳ ಕಾರಣದಿಂದ ‘ಜಾತಿವಾದ’ದ ಪಾತ್ರ ಕುರಿತಂತೆಯೂ ಅರ್ಥೈಸಿಕೊಳ್ಳುವ ಅಗ್ಯವಿದೆ. ‘ಜಾತಿ’ ಎಂಬುದು ‘ಸಾಮಾಜಿಕ ವಾಸ್ತವ.’

ರೋಹಿತ್ ವೇಮುಲಾ

ಆಂಗ್ಲರು 1971ರಲ್ಲಿ ಜಾತಿ ಕುರಿತಂತೆ ಜನಗಣತಿಯನ್ನು ನಡೆಸಿದ್ದರು. ಇದು ದೇಶದೊಳಗಿನ ‘ಜಾತಿವ್ಯವಸ್ಥೆ’ಯನ್ನು ಅರಿಯಲು ಮತ್ತು ವರ್ಗೀಕರಿಸಲು ಸಾಧನವಾಯಿತು. ಹಾಗೆಯೇ ‘ಜಾತಿವ್ಯವಸ್ಥೆ’ಯನ್ನು ಬ್ರಿಟಿಷರು ಒಡೆದಾಳಲು ಬಳಸಿಕೊಂಡರು. ಒಂದು ಹಂತದಲ್ಲಿ ‘ಜಾತಿವ್ಯವಸ್ಥೆ’ಯನ್ನು ಬೆಂಬಲಿಸಿದರು. ಉದ್ಯೋಗಗಳಲ್ಲಿ ಕೆಲ ಜಾತಿಗಳಿಗೆ ಮಾತ್ರ ಆದ್ಯತೆ ನೀಡಿದರು; ಕೆಲವು ಸಮುದಾಯಗಳನ್ನು ಅಪರಾಧಿಗಳಂತೆ ಬಿಂಬಿಸಿದರು. ಕೆಲವು ಜಾತಿಗಳನ್ನು ಬ್ರಿಟಿಷ್ ಸರ್ಕಾರದ ಮಿತ್ರವರ್ಗದಂತೆ ಕಾಣಲಾಯಿತು. ಇದರ ಪರಿಣಾಮದಿಂದಾಗಿ ‘ಜಾತಿಪ್ರಜ್ಞೆ’ ಹೆಚ್ಚಿತು. ಆಗ ಜನನವಾದ ಜಾತಿ ಸಂಘಟನೆಗಳು ಬ್ರಿಟಿಷ್ ಸರ್ಕಾರದಿಂದ ರಿಯಾಯಿತಿಯನ್ನು ಬಯಸಿದವು. ರಾಷ್ಟ್ರೀಯ ಹೋರಾಟದಲ್ಲಿ ತಾರತಮ್ಯ ಹೋಗಲಾಡಿಸುವ ಮತ್ತು ಸಾಮಾಜಿಕ ನ್ಯಾಯವನ್ನು ಬಳಸಿಕೊಳ್ಳಲು ಪ್ರಯತ್ನವಾಯಿತಾದರೂ ಯಶಸ್ವಿಯಾಗಲಿಲ್ಲ. ‘ವಸಾಹತುಶಾಹಿ’ ಆಡಳಿತದಲ್ಲಿ ಜಾತಿ ಗುಂಪುಗಳು ಗುರುತಿನ ಪ್ರಜ್ಞೆ ಮತ್ತು ಸಂಘಟಿತ ಮನೋಭಾವವನ್ನು ಹೊಂದಿದ್ದವು. ನಮ್ಮ ಸಂವಿಧಾನ ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಸಮತಾವಾದಿ, ನ್ಯಾಯವಾದ, ಭಾತೃತ್ವದ ಪ್ರಾಮಾಣಿಕ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾರೆ.

ಜಗತ್ತಿನಲ್ಲೇ ಅತಿ ಪ್ರಭಾವಿ ದೇಶ ನಮ್ಮದೆಂಬ ಕಲ್ಪನೆ ಹಲವರಲ್ಲಿದೆ. ನೆರೆಹೊರೆಯ ದೇಶಗಳಿಗೆ ನಾವೇ ಬಾಸು ಎಂಬ ಸುಂದರ ಕನಸು ಕಾಣುತ್ತಿದ್ದೇವೆ. ಈ ಕನಸುಗಳನ್ನು ಬದಿಗೆ ಸರಿಸಿ, ಜಾತಿ ರೋಗದ ಮೂಲವನ್ನು ಕಂಡುಹಿಡಿದು ಗುಣಪಡಿಸಬೇಕಿದೆ. ಸ್ವಾತಂತ್ರ್ಯಾನಂತರ ಅಳವಡಿಸಿಕೊಂಡ ಅಭಿವೃದ್ಧಿಯ ಮಾದರಿಯನ್ನು ಮತ್ತೆ ಅಳವಡಿಸಿಕೊಳ್ಳಬೇಕಿದೆ. ಭೂಸುಧಾರಣೆ, ಹಿಂದೂ ಕೋಡ್ ಬಿಲ್ ಸೇರಿದಂತೆ ಹಲವು ಕ್ರಮಗಳು ಬಹುಜನರ ಮತ್ತು ಮಹಿಳೆಯರ ಸಬಲೀಕರಣಕ್ಕೆ ಊರುಗೋಲಾಗಿವೆ. ಹಿಂದೂ ಕೋಡ್ ಬಿಲ್‌ಗೆ ತೀವ್ರ ವಿರೋಧ ಇತ್ತೆಂಬುದು ಎಲ್ಲರಿಗೂ ತಿಳಿದಿತ್ತು. ಹಿಂದೂ ಮಹಾಸಭಾ ನೇತೃತ್ವದಲ್ಲಿ ತೀವ್ರ ತೆರನಾದ ಒತ್ತಡ ಎದುರಾದಾಗ ಡಾ. ಬಿ.ಆರ್. ಅಂಡಬೇಡ್ಕರ್ ಅವರು ತಮ್ಮ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ವಿಪರ್ಯಾಸ ಎಂದರೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಅಂದು ವ್ಯಕ್ತಪಡಿಸಿದ ಆತಂಕವೆಲ್ಲವೂ ಸತ್ಯವಾಗಿದೆ. 1950 ಜನವರಿ 26ರಂದು ನಾವುಗಳು ವಿರೋಧಾಭಾಸದ ಜೀವನಕ್ಕೆ ಕಾಲಿಟ್ಟಿದ್ದೇವೆ. ಅಂದಿನಿಂದ, ಇಂದಿನವರೆಗೂ ರಾಜಕಾರಣದಲ್ಲಿ ಮಾತ್ರ ಸಮಾನತೆ ಕಾಣುತ್ತಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಅಸಮಾನತೆ ಹಾಗೆಯೇ ಉಳಿದುಕೊಂಡುಬಿಟ್ಟಿದೆ. ಇಂತಹ ವಿರೋಧಾಭಾಸ ಇನ್ನೆಷ್ಟು ಕಾಲ ಮುಂದುವರಿಯಬೇಕು?

ಡಾ. ಎಂ.ಎಸ್. ಮಣಿ

ಡಾ. ಎಂ.ಎಸ್. ಮಣಿ
ಸಾಮಾಜಿಕ ಮತ್ತು ಸಂಶೋಧನಾತ್ಮಕ ಲೇಖನಗಳನ್ನು ಬರೆಯುವ ಡಾ.ಎಂ.ಎಸ್.ಮಣಿ ಅವರು ಪತ್ರಕರ್ತರ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಲ್ಲಣ, ಹರಿವು, ಒಡಲಾಗ್ನಿ, ಭಾವಭಿತ್ತಿ, ಮನುಭಾರತ ಪುಸ್ತಕಗಳು ಪ್ರಕಟವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...