ಮಹಾರಾಷ್ಟ್ರದ ನಾಟಕೀಯ ಬೆಳವಣಿಗೆಗಳು ಒಂದು ಹಂತಕ್ಕೆ ಮುಗಿದಿದ್ದರೂ ಮುಂದೆ ಏನೇನಾಗಲಿದೆ ಎಂಬ ಕುತೂಹಲ ಮಾತ್ರ ಎಲ್ಲರಲ್ಲಿದೆ. ಈ ನಡುವೆ ಡಿಸೆಂಬರ್ 1 ರಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವಿಕರಿಸಲಿದ್ದು ಕಾರ್ಯಕ್ರಮಕ್ಕೆ ಯಾರೆಲ್ಲ ಭಾಗವಹಿಸುತ್ತಾರೆ ಎಂಬುದು ನಿಗೂಢವಾಗಿದೆ.
ಮಹಾರಾಷ್ಟ್ರ ವಿಕಾಸ್ ಅಘಾಡಿಯ ಮೂವರು ಪ್ರತಿನಿಧಿಗಳು ನಿನ್ನೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಇಂದು ಬೆಳಿಗ್ಗೆಯೇ ಉದ್ಧವ್ ಠಾಕ್ರೆಯವರು ಸಹ ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಡಿಸೆಂಬರ್ 1 ರಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.
ಆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಯವರನ್ನು ಆಹ್ವಾನಿಸುತ್ತೀರಾ? ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್‌ರವರನ್ನು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಅದಕ್ಕವರು ಹೌದು ಮೋದಿಯವರನ್ನು ಜೊತೆಗೆ ಗೃಹ ಸಚಿವ ಅಮಿತ್ ಶಾರವರನ್ನು ಆಹ್ವಾನಿಸುತ್ತೇವೆ. ನಾವು ಎಲ್ಲರನ್ನು ಕರೆಯುತ್ತೇವೆ ಎಂದು ಸಂಜಯ್ ರಾವತ್ ಉತ್ತರಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ ವಿಕಾಸ್ ಅಘಾಡಿ ಅಸ್ತಿತ್ವಕ್ಕೆ: ಡಿಸೆಂಬರ್ 1 ರಂದು ಸಿಎಂ ಆಗಿ ಉದ್ಧವ್ ಠಾಕ್ರೆ ಪ್ರಮಾಣ ವಚನ..
ಇದೇ ಸಮಯದಲ್ಲಿ ಉದ್ಧವ್ ಠಾಕ್ರೆಯವರು “ನಾನು ಮಹಾರಾಷ್ಟ್ರವನ್ನು ಮುನ್ನೆಡೆಸುತ್ತೇನೆ ಎಂದು ಊಹಿಸಿರಲಿಲ್ಲ. ಇದಕ್ಕಾಗಿ ನಾನು ಸೋನಿಯಾ ಗಾಂಧಿ ಮತ್ತು ಇತರರಿಗೆ ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ” ಎಂದು ತಿಳಿಸಿದ್ದಾರೆ.
ಹಾಗಾದರೆ ಸೋನಿಯಾ ಗಾಂಧಿ, ಶರದ್ ಪವಾರ್ ಸೇರಿದಂತೆ ಹಲವು ಜನ ಭಾಗವಹಿಸುವ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮೋದಿ-ಶಾ ಬರಲಿದ್ದಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿವೆ.
ಇನ್ನೊಂದೆಡೆ ಬಿಜೆಪಿ ಜೊತೆ ಸೇರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ನಂತರ ರಾಜಿನಾಮೆ ನೀಡಿದ ಅಜಿತ್ ಪವಾರ್‌ರವರು ಸಹ ಎನ್‌ಸಿಪಿ ಪಕ್ಷಕ್ಕೆ ಮರಳಿದ್ದಾರೆ. ಅವರನ್ನು ಶರದ್ ಪವಾರ್ ಪುತ್ರಿ ಸುಪ್ರಿಯ ಸುಳೆ ಪ್ರೀತಿಯಿಂದ ಅಪ್ಪಿಕೊಳ್ಳುವ ಮೂಲಕ ಸ್ವಾಗತಿಸಿ ಅವರ ಪಾದಕ್ಕೆರಗಿ ಆರ್ಶಿವಾದ ಕೂಡ ಪಡೆದಿದ್ದಾರೆ.
ಹಾಗಾಗಿ ಅಜಿತ್ ಪವಾರ್ ಕೂಡ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವ ನೀರಿಕ್ಷೆ ಇರುವುದರಿಂದ ಆಗಲೂ ಮೋದಿ-ಶಾ ಭಾಗವಹಿಸುವರೆ ಎಂಬ ಪ್ರಶ್ನೆಗಳು ಎದ್ದಿವೆ.


