Homeಚಳವಳಿಜೆಎನ್‌ಯುವೆಂಬ ಸಂಭ್ರಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ!!

ಜೆಎನ್‌ಯುವೆಂಬ ಸಂಭ್ರಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ!!

ವ್ಯವಸ್ಥೆ ವಿರೋಧಿ ಹಾಗೂ ವ್ಯವಸ್ಥೆ-ಪರ ಬುದ್ಧಿಜೀವಿಗಳನ್ನು ಏಕಕಾಲಕ್ಕೆ ಸೃಷ್ಟಿಸಿದ ಹೆಗ್ಗಳಿಕೆ ಜೆಎನ್‌ಯುಗಿದೆ.

- Advertisement -
- Advertisement -

– ಜಾನಕಿ ನಾಯರ್

ಅನುವಾದ: ರಾಜಶೇಖರ್‌ ಅಕ್ಕಿ

ಯಾವುದೇ ಸಂಸ್ಥೆಯ ಸುವರ್ಣ ಮಹೋತ್ಸವವು ಸದ್ದಿಲ್ಲದೇ ಆಗುವ ವಿಷಯವಾಗಿರಬಾರದು. ಆದರೂ ಜೆಎನ್‌ಯು ಸಂಶೋಧನೆ ಮತ್ತು ಅಂತರ್‌ಬೋಧನೆಯ ವಿಶಿಷ್ಟ ಮಾದರಿಯ ಅತ್ಯುನ್ನತ ವಿಶ್ವವಿದ್ಯಾಲಯವಾಗಿ ತನ್ನ ಐದು ದಶಕಗಳ ಸುವರ್ಣ ಮಹೋತ್ಸವ ನಡೆದ ರೀತಿ ಮಾತ್ರ ಬೇರೆ. ಅದನ್ನು ಸಂಭ್ರಮಾಚರಣೆ ಎಂದು ಹೇಳಲಾಗದು. ಒಂದು ಸದ್ದಿಲ್ಲದೇ ಆಗಿ ಹೋದ ವಿಷಯ ಎಂದಷ್ಟೇ ಹೇಳಬಹುದಾಗಿದೆ. ಕೆಲವು ಮಂಕಾದ ಮತ್ತು ರಾಜಕೀಯವಾಗಿ ಪ್ರಶ್ನಾರ್ಹವಾದ ಕಾರ್ಯಕ್ರಮಗಳನ್ನು (ಸುವರ್ಣ ಮಹೋತ್ಸವದ ಲೋಗೋವನ್ನು ಪೆಟ್ ಕಂಪೆನಿಯೊಂದು ಪ್ರಾಯೋಜಿಸಿದ ಕಾರ್ಯಕ್ರಮಕ್ಕೆ ನೀಡುವುದನ್ನೂ ಒಳಗೊಂಡು) ಬಿಟ್ಟರೆ ಈ ವರ್ಷವು ಸಂಭ್ರಮಾಚರಣೆಗಿಂತ ಗೊಂದಲ ಮತ್ತು ಪ್ರಕ್ಷುಬ್ದತೆಯಲ್ಲೇ ಕಳೆದುಹೋಯಿತು. ಆದಾಗ್ಯೂ ಅಧಿಕೃತ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಪಟ್ಟಿಯ ಪ್ರಕಾರ, ನವೆಂಬರ್ ತಿಂಗಳನ್ನು ‘ಜಶ್ನ್-ಏ-ಜೆಎನ್‌ಯು’ (ಜೆಎನ್‌ಯು ಒಂದು ಸಂಭ್ರಮ) ಎಂದೇ ನಮೂದಿಸಲಾಗಿತ್ತು.

ಜೆಎನ್‌ಯುಅನ್ನು ಸಮರ್ಥಿಸಿ, ಉಳಿಸಿಕೊಳ್ಳಲು ಪಣತೊಟ್ಟಿರುವವರ ಮತ್ತು ಈ ಸಾರ್ವಜನಿಕ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನೇ ಬದಲಾಯಿಸಲು ಪಣತೊಟ್ಟವರ ಮಧ್ಯದ ಹಿಂಸಕ ಘರ್ಷಣೆಯೊಂದಿಗೆ ಐದು ದಶಕಗಳ ಇತಿಹಾಸ ಕೊನೆಗೊಳ್ಳುತ್ತಿರುವುದು ಒಂದು ವಿಪರ್ಯಾಸವೇ ಸರಿ. ಎಮ್.ಸಿ.ಚಾಗ್ಲಾ ಅವರು ಜೆಎನ್‌ಯುದಂತಹ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಮಸೂದೆಯನ್ನು ರಚಿಸಲು ಕಾರಣವಾದ ವ್ಯಕ್ತಿ. ಅವರು ಇದು ‘ಸಂಪೂರ್ಣವಾಗಿ ಭಿನ್ನವಾಗಿರುವ ಮತ್ತು ಹೊಸತಾಗಿರುವ’ ವಿಶ್ವವಿದ್ಯಾಲಯ ಆಗುವುದೆಂದು ಸೂಚಿಸಿದ್ದರು. ಮುಂದುವರೆದು ‘ವಿದ್ಯಾರ್ಥಿಗಳು ತನಿಖೆ ಮಾಡಲು, ವಿಚಾರಿಸಲು, ಪ್ರತಿಯೊಂದು ಸಿದ್ಧಾಂತ ಮತ್ತು ಪಠ್ಯನಿಷ್ಠತೆಗೆ ಸವಾಲೆಸೆಯಲು ಬೇಕಾದ ಮುಕ್ತ ವಾತಾವರಣವನ್ನು ಅದು ಹೊಂದಿರಬೇಕು ಹಾಗೂ ಅವಿಷ್ಕಾರದ ಒಂದು ಪಯಣವನ್ನು ಪ್ರಾರಂಭಿಸಬೇಕು. ಒಂದು ವಿಶ್ವವಿದ್ಯಾಲಯವು ಜೀವಿಸುವ ಅವಕಾಶದೊಂದಿಗೆ ಜೀವನದ ಅನುಭವವನ್ನೂ ನೋಡುವಂತಾಗಿರಬೇಕು’ ಎಂದಿದ್ದರು.

ಯಾವ ತರಹದ ಅಸಾಧಾರಣತೆಯ ಬಗ್ಗೆ ಅವರು ಸೂಚಿಸುತ್ತಿದ್ದರು? ಮೊದಲನೆಯದಾಗಿ, ಆಗ ಅಸ್ತಿತ್ವದಲ್ಲಿದ್ದ ಸುಮಾರು 70 ವಿಶ್ವವಿದ್ಯಾಲಯಗಳಂತೆ ಇದು ಆಗಬಾರದು. ಇದರ ಸ್ಥಾಪನೆಯ ಸಮಯದಲ್ಲಿ ‘ಈ ದಿಟ್ಟ ಪ್ರಯೋಗ’ದ ಕುರಿತು ತೀವ್ರ ಚರ್ಚೆಯಾಯಿತು; ಇದೊಂದು ಶ್ರೇಷ್ಠತೆಯನ್ನು ಸೃಷ್ಟಿಸುವ ಜಾಗವಾಗಬೇಕೇ ಅಥವಾ ಭಾರತದ ಪ್ರಜಾಪ್ರಭುತ್ವದ ಎಲ್ಲಾ ವಿಧಗಳಿಗೆ ಅನುಗುಣವಾಗಿದ್ದುಕೊಂಡು ಪ್ರವೇಶಾವಕಾಶದಲ್ಲಿ ಸಮಾನತೆಯನ್ನು ಖಾತರಿಗೊಳಿಸುವ ಜಾಗೆಯಾಗಬೇಕೆ? ಇವೆರಡನ್ನೂ ಸರಿದೂಗಿಸಲು ಸಾಧ್ಯವೇ? ಒಂದು ಡಾಕ್ಟೋರಲ್ ಪದವಿ ಸಾರ್ವತ್ರಿಕ ಹಕ್ಕಾಗಿರಬೇಕೇ ಅಥವಾ ಒಂದು ನಿರ್ಬಂಧಿತ ಸೌಲಭ್ಯವಾಗಿರಬೇಕೇ? ಅಥವಾ ಇವೆರಡೂ ಆಗಿರಬೇಕೆ? ಇವು ಚರ್ಚೆಯ ಸಂಗತಿಗಳಾಗಿದ್ದವು.

ಇಂತಹ ಹಲವಾರು ವಿರೋಧಾಭಾಸಗಳ ಮೌಲ್ಯಗಳನ್ನು ಸಮತೋಲನದಿಂದ ಕಾಯ್ದುಕೊಳ್ಳಬಹುದು ಎಂದು ಕಳೆದ ಐದು ದಶಕಗಳ ಜೆಎನ್‌ಯು ಸಾಬೀತುಪಡಿಸಿದೆ; ಪ್ರಜಾತಾಂತ್ರಿಕ ಆದರ್ಶಗಳ ಒಳಗೊಳ್ಳುವಿಕೆಗೆ ತನ್ನ ಬದ್ಧತೆಯನ್ನು ಎತ್ತಿಹಿಡಿಯುತ್ತಲೇ ಶ್ರೇಷ್ಠತೆಯನ್ನೂ ಸಾಧಿಸಿದೆ. ಒಂದು ಸಾರ್ವಜನಿಕ ವಿಶ್ವವಿದ್ಯಾಲಯವು ಶ್ರೇಷ್ಠತೆಯ ಆದರ್ಶಗಳನ್ನು ಅನುಸರಿಸುತ್ತ, ಅದೇ ಸಮಯದಲ್ಲಿ ಶತಕಗಳಿಂದ ಇಂತಹ ಅವಕಾಶಗಳಿಂದ ವಂಚಿತಗೊಳಿಸಲಾದವರಿಗೆ ಚಿಂತನೆಯ ವಿಶ್ವದ ಬಾಗಿಲನ್ನು ತೆರೆದಿಡುವ ಬದ್ಧತೆಯನ್ನೂ ಹೇಗೆ ಪೂರ್ಣಗೊಳಿಸುವುದು? ಜೆಎನ್‌ಯು ಮಸೂದೆಯ ಚರ್ಚೆಯಲ್ಲಿ ಪಾಲ್ಗೊಂಡವರು ಆಶಿಸಿದಂತೆ ‘ಜವಾಹರಲಾಲ್ ಅವರ ನಿಜವಾದ ಸ್ಮಾರಕವು ಒಂದು ‘ಚರ್ಚು’ ಅಥವಾ ಒಬ್ಬ ಪ್ರವಾದಿಯ ಆರಾಧನೆಯಲ್ಲಿ ಅಥವಾ ಯಾವುದೇ ಶ್ರೇಷ್ಠ ವ್ಯಕ್ತಿಯ ಆರಾಧನೆಯಲ್ಲಿ ಆಗುವಂತೆ ಬಂದಿಯಾಗಬಾರದು’. ಆದಾಗ್ಯೂ, ನೆಹರು ಅವರಿಗೆ ಆತ್ಮೀಯವಾದ ವಿಷಯಗಳನ್ನು ಮೊದಲನೆಯ ಶೆಡ್ಯೂಲ್‌ನಲ್ಲಿ ನಮೂದಿಸಲಾಗಿದೆ; ‘ರಾಷ್ಟ್ರೀಯ ಒಗ್ಗೂಡಿಕೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾತಾಂತ್ರಿಕ ಜೀವನ ವಿಧಾನ, ಸಮಾಜದ ಸಮಸ್ಯೆಗಳಿಗೆ ವೈಜ್ಞಾನಿಕ ವಿಧಾನ ಮತ್ತು ಅಂತರರಾಷ್ಟ್ರೀಯ ತಿಳವಳಿಕೆ’. ‘ಪ್ರೀತಿಯಿಂದ ಪ್ರಭಾವಿತಗೊಂಡ ಮತ್ತು ಜ್ಞಾನದಿಂದ ದಾರಿ ಕಾಣುವ, ಒಳ್ಳೆಯ ಜೀವನದ ಮತ್ತು ಕಲಿಕೆಯ ಕಾರ್ಯಗಳಿಗೆ ಸಮರ್ಪಿಸಿದ ಮನಸ್ಸುಗಳ ನಿರಂತರ ಭಾಗೀದಾರಿಕೆ (Continuos membership)’. ಇವೆಲ್ಲದರಲ್ಲಿ ಒಂದು ಹೊಸ ಸಮುದಾಯವನ್ನು ಕಟ್ಟುವ ಬದ್ಧತೆ ಇತ್ತು.

ಇದರರ್ಥ ಮೊದಲನೆಯದಾಗಿ, ಈ ವಿಶ್ವವಿದ್ಯಾಲಯ ಬರೀ ಒಂದು ಸರಕಾರದ ಇಲಾಖೆಯಾಗಿರುವುದಿಲ್ಲ ಎಂದು. ಖಾಸಗಿ ವಿಶ್ವವಿದ್ಯಾಲಯಗಳು ಎನ್ನುವುದು ಗೊತ್ತೇ ಇರದ ಸಮಯದಲ್ಲಿ ರಾಧಾಕೃಷ್ಣನ್ ಸಮಿತಿ(1948)ಯ ವರದಿಯಲ್ಲಿ ಸಾರ್ವಜನಿಕ ವಿಶ್ವವಿದ್ಯಾಲಯದ ಕಡ್ಡಾಯ ಸ್ವಾಯತ್ತತೆ ಮತ್ತು ಸ್ವಾಯತ್ತತೆಗೆ ಇರಬೇಕಾದ ಬದ್ಧತೆ ನಿರ್ಣಾಯಕ ಅಡಿಪಾಯವೆಂದು ಹೇಳಲಾಗಿತ್ತು. “ನಮ್ಮ ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಶಿಕ್ಷಣದ ಪ್ರಕ್ರಿಯೆಯಲ್ಲಿ ಸರಕಾರಿ ಪ್ರಾಬಲ್ಯವನ್ನು ನಾವು ಪ್ರತಿರೋಧಿಸಬೇಕು. ಉನ್ನತ ಶಿಕ್ಷಣವು ನಿಸ್ಸಂಶಯವಾಗಿಯೂ ಸರಕಾರದ ಜವಾಬ್ದಾರಿ, ಆದರೆ ಸರಕಾರದಿಂದ ಬರುವ ಧನಸಹಾಯವನ್ನು ಶೈಕ್ಷಣಿಕ ನೀತಿಗಳು ಮತ್ತು ನಡೆಗಳೊಂದಿಗೆ ತಳಕು ಹಾಕಬಾರದು. ಬೌದ್ಧಿಕ ಪ್ರಗತಿಗೆ ಮುಕ್ತ ವಿಚಾರಣೆಯ ಮನೋಭಾವವನ್ನು ಉಳಿಸಿಕೊಳ್ಳಬೇಕಾಗುತ್ತದೆ”.

ಇದನ್ನು ಆ ಸಮಯದಲ್ಲಿ ಅಸ್ತಿತ್ವದಲ್ಲಿ ಇರದಂತಹ, ಕಲಿಸುವುದರೊಂದಿಗೆ ಬರಹ ಮತ್ತು ಸಂಶೋಧನೆಗೂ ಬದ್ಧವಾಗಿರುವ ಒಂದು ಸ್ನಾತಕೋತ್ತರ ಸಂಸ್ಥೆ ಎಂದು ಯೋಜಿಸಲಾಗಿತ್ತು, ಆದರೆ, ಅಸ್ತಿತ್ವಕ್ಕೆ ಬಂದ ಮೊದಲ ಕೆಲವು ವರ್ಷಗಳಲ್ಲೆ ಅದರ ಕಟು ವಿಮರ್ಶಕರೊಬ್ಬರು ಈ ವಿಶ್ವವಿದ್ಯಾಲಯವನ್ನು ಆಳುವ ವರ್ಗಕ್ಕೆ ಸೇವೆ ಸಲ್ಲಿಸುವ ‘ಸರಕಾರದ ಥಿಂಕ್ ಟ್ಯಾಂಕ್’ ಎಂದು ಕರೆದದ್ದು ಸರಿಯೇ? ಅಥವಾ ಆ ಟೀಕೆ ಒಂದು ಸಕಾರಾತ್ಮಕ ವಿಮರ್ಶೆಯಾಗಿ, ಕ್ರಿಯಾಶೀಲರಾಗಲು ಪ್ರಚೋದಿಸಿತ್ತೆ? ಅಥವಾ ಈ ಎರಡೂ ಇದ್ದವೇ?

ವ್ಯವಸ್ಥೆ ವಿರೋಧಿ ಹಾಗೂ ವ್ಯವಸ್ಥೆ-ಪರ ಬುದ್ಧಿಜೀವಿಗಳನ್ನು ಏಕಕಾಲಕ್ಕೆ ಸೃಷ್ಟಿಸಿದ ಹೆಗ್ಗಳಿಕೆ ಜೆಎನ್‌ಯುಗಿದೆ. ಅನೇಕ ಉನ್ನತ ಸರಕಾರಿ ಅಧಿಕಾರಿಗಳು, ಶಿಕ್ಷಕರು ಮತ್ತು ಪತ್ರಕರ್ತರೊಂದಿಗೆ ಎಲ್ಲಾ ರೀತಿಯ ರಾಜಕಾರಣಿಗಳು, ಆಕ್ಟಿವಿಸ್ಟುಗಳು, ವಿದ್ವಾಂಸರು ಹಾಗೂ ವಿಶ್ಲೇಷಣಕಾರರೂ ಇಲ್ಲಿಂದ ಬಂದಿದ್ದಾರೆ. ಈ ವಿರೋಧಾಭಾಸದ ಪ್ರವೃತ್ತಿಗಳು- ಅಂದರೆ, ಸಾಮಾಜಿಕ ರಚನೆಗಳನ್ನು ಉಳಿಸಿಕೊಳ್ಳಲು ಇರುವ ಬದ್ಧತೆ ಮತ್ತು ಅದರೊಂದಿಗೆ ಈ ರಚನೆಗಳ ಪರ್ಯಾಯಗಳನ್ನು ಹುಡುಕುವ ಪ್ರಕ್ರಿಯೆಗಳು- ಜೆಎನ್‌ಯುಗೆ ತನ್ನ ಉದ್ದೇಶ ಮತ್ತು ದಾರಿಯನ್ನು ಕಲ್ಪಿಸಿದೆ.

ವಿದ್ಯಾರ್ಥಿಗಳಿಗೆ ನಮ್ಮ ವಿಶ್ವವಿದ್ಯಾಲಯ ವಾತಾರಣದಲ್ಲಿ ವಿರಳವಾಗಿರುವ ಪಾರದರ್ಶಕತೆ ಮತ್ತು ನ್ಯಾಯಪರತೆಯ ಭರವಸೆಯನ್ನು ನೀಡಿ, ಅತ್ಯಂತ ದೀರ್ಘ ಪ್ರಕ್ರಿಯೆಯೊಂದಿಗೆ ಈ ಕೆಂಪು ಇಟ್ಟಿಗೆಗಳ ಭಿನ್ನವಾದ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿತ್ತು. ಜೆಎನ್‌ಯುನ ಮೊದಲ ವರ್ಷಗಳಲ್ಲಿ ಅಲ್ಲಿನ ವಿದ್ಯಾರ್ಥಿಗಳು (1974ರಲ್ಲಿ) ಆಗತಾನೆ ಚಾಲ್ತಿಗೆ ಬರುತ್ತಿದ್ದ ಪ್ರಾದೇಶಿಕ, ವರ್ಗ ಮತ್ತು ಜಾತಿಗಳ ಕಾರಣದಿಂದ ವಂಚಿತವಾಗಿದ್ದವರಿಗೆ ನೀಡಲಾಗುತ್ತಿದ್ದ ‘ವಂಚಿತರಾಗಿದ್ದಕ್ಕೆ ಅಂಕಗಳು’ ನೀತಿಯಿಂದ ವಿಶಿಷ್ಟತೆಯನ್ನು ಪಡೆದುಕೊಂಡಿದ್ದರು. 1984ರಲ್ಲಿ ವಿದ್ಯಾರ್ಥಿ-ಶಿಕ್ಷಕರ ಘರ್ಷಣೆಯ ಅಪರೂಪದ ದುರಂತದ ಸಮಯದಲ್ಲಿ ಅದನ್ನು ಹಿಂತೆಗೆಯಲಾಯಿತು. ವಿದ್ಯಾರ್ಥಿ ಸಂಘಟನೆಗಳ ನಿರಂತರ ಸಂಘರ್ಷದಿಂದ 1994ರಲ್ಲಿ ಅದನ್ನು ಮರುಸ್ಥಾಪಿಸಲಾಯಿತು. ಇಂದು ನೆಲಸಮ ಮಾಡುತ್ತಿರುವ ಹಿಂದಿನ ವಿಶಿಷ್ಟ ಸಾಧನೆಗಳಲ್ಲಿ ಅದು ಒಂದಾಗಿದೆ.

ಮುಂಚೆಯಿಂದಲೂ ಜೆಎನ್‌ಯು ಇತರ ವಿಶ್ವವಿದ್ಯಾಲಯಗಳಿಗಿಂದ ಭಿನ್ನವಾದ ಸಂಸ್ಥೆಯಾಗಿದೆ. ಅದಕ್ಕೆ ಭಾಗಶಃ ಕಾರಣ, ಸಾಂಸ್ಥಿಕ ಜೀವನವನ್ನು ನಿರ್ಧರಿಸುವಲ್ಲಿ ವಿದ್ಯಾರ್ಥಿ ಸಂಘಟನೆಗಳು ವಹಿಸುವ ಪ್ರಮುಖ ಪಾತ್ರ. ವಿಶ್ವವಿದ್ಯಾಲಯದ ಹೊರಗೆ ಇರುವ ಜೀವನದ ಕೆಲವು ಆಯಾಮಗಳಿಗೆ ನಿಜವಾದ ಪರ್ಯಾಯವನ್ನು ಹುಡುಕಿ, ಕಳೆದ ಐದು ದಶಕಗಳಿಂದ ಅದನ್ನು ಉಳಿಸಿಕೊಂಡು ಬಂದಿರುವುದು ಇದರ ಹೆಗ್ಗಳಿಕೆ. ಈ ಪರ್ಯಾಯ ಮೌಲ್ಯಗಳನ್ನು ಸೃಷ್ಟಿಸಿ, ಉಳಿಸಿಕೊಂಡು ಬಂದಿರುವುದಕ್ಕೆ ಎರಡು ಸಾಧನೆಗಳು ಸಾಕ್ಷಿಯಾಗಿವೆ; ಮೊದಲನೆಯದು, ಲಿಂಗ ಶ್ರೇಣೀಕರಣವನ್ನು ಬದಲಿಸಿರುವುದು. ಇದು ಸ್ತ್ರೀದ್ವೇಷ ತುಂಬಿರುವ, ಪ್ರತಿನಿತ್ಯ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಸಮಾಜದಲ್ಲಿ ವಿರಳವಾದದ್ದು ಮತ್ತು ಊಹಿಸುವುದೂ ಕಷ್ಟ. ಜೆಎನ್‌ಯು ಕ್ಯಾಂಪಸ್‌ನಲ್ಲಿ ತರಗತಿಗಳ ಒಳಗೆ, ಹೊರಗೆ, ಹಾಸ್ಟೆಲ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವಿದ್ಯಾರ್ಥಿನಿಯರು ಸಾಪೇಕ್ಷವಾಗಿ ಮುಕ್ತತೆಯಿಂದ ವ್ಯವಹರಿಸಲು ಸಾಧ್ಯವಾಗಿಸಿದೆ. ಈ ಸ್ವಾತಂತ್ರ್ಯಕ್ಕೆ ಜೆಎನ್‌ಯು ಬೆಲೆಯನ್ನು ತೆರಬೇಕಾಯಿತು; ಈ ಸಾಧನೆಯ ವಿರುದ್ಧದ ಹೋರಾಟವು ಇದನ್ನು ಅತೀ ‘ಹಗುರವಾಗಿ ಪರಿಗಣಿಸಬಹುದು (Permissive)’ ಎನ್ನುವ ಕುಖ್ಯಾತಿಯನ್ನು ನೀಡಿತು. ಈ ‘ಮುಕ್ತತೆ’ಯ ವಿರುದ್ಧ ಬೆಳೆಯುತ್ತಿರುವ ಅಸಮಾಧಾನವು ಲಿಂಗ ಶ್ರೇಣೀಕರಣವನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಲೇ ಇದೆ.

ಇದನ್ನೂ ಓದಿ: ಶಿಕ್ಷಣವು ಸಾಂವಿಧಾನಿಕ ಹಕ್ಕು: JNU ಹೋರಾಟಕ್ಕೆ ಬೆಂಬಲ ಸೂಚಿಸಿದ ಬಾಲಿವುಡ್‌ ನಟಿ ಸ್ವರ ಭಾಸ್ಕರ್ 

ಎರಡನೆಯದಾಗಿ, ವಿಶ್ವವಿದ್ಯಾಲಯದ ಆಡಳಿತದ ಎಲ್ಲಾ ಸ್ತರಗಳಲ್ಲಿ ವಿದ್ಯಾರ್ಥಿ ಸಂಘದ ಪಾಲ್ಗೊಳ್ಳುವಿಕೆಯಿಂದ ಈ ಸಾಧನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಸಾಂವಿಧಾನಿಕ ಪ್ರಕ್ರಿಯೆಗಳ ಮುಖಾಂತರ ನಡೆಸಲಾಗುತ್ತದೆ. ಹಾಗಾಗಿ, ದೇಶದ ಮತ್ತು ದೆಹಲಿಯ ಇತರ ವಿಶ್ವವಿದ್ಯಾಲಯಗಳಲ್ಲಿ ಕಂಡುಬರುವಂತೆ ತೋಳ್ಬಲ, ಹಿಂಸೆ, ಹಣಬಲದ ಬಳಕೆ ಕಂಡುಬರುವುದಿಲ್ಲ. ಹೆಚ್ಚಿನ ವಿವಾದಗಳಿಲ್ಲದ ಚುನಾವಣೆ ಪ್ರಕ್ರಿಯೆಯಲ್ಲಿ ಖರ್ಚೂ ಕಡಿಮೆ ಹಾಗೂ ಇದನ್ನು ವಿದ್ಯಾರ್ಥಿಗಳೇ ರಚಿಸಿದ ಚುನಾವಣಾ ಆಯೋಗವು ನಡೆಸುತ್ತದೆ. ಹಾಗೂ ಇದರಿಂದಾಗಿ ಪ್ರತೀ ರಾಜಕೀಯ ನಿಲುವುಗಳಿಗೂ ಸಮಾನಾವಕಾಶ ನೀಡಿಲಾಗುತ್ತದೆ. ಇಂದು ಇದನ್ನೂ ನೆಲಸಮ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ.

ಜೆಎನ್‌ಯುನ ಸಾಧನೆಗಳ ಹಾಗೂ ಅದರ ಸ್ವಾಯತ್ತತೆಯ ಮೇಲಿನ ದಾಳಿಗಳು ಈ ಮುಂಚೆಯೂ ಆಗಿವೆ. ಮೊರಾರ್ಜಿ ದೇಸಾಯಿ ಸರಕಾರವು ಇದರ ಮೇಲೆ ಒಂದು ವಿಚಾರಣೆಯನ್ನು ಆದೇಶಿಸಿತ್ತು. ಆ ಸಂಪೂರ್ಣ ಪ್ರಕ್ರಿಯೆಯು ವಿಶ್ವವಿದ್ಯಾಲಯದೊಂದಿಗೆ ಪ್ರಧಾನ ಮಂತ್ರಿಯ ಕಛೇರಿಯ ಒಬ್ಬ ಜಂಟಿ ಕಾರ್ಯದರ್ಶಿಯ ಪತ್ರವ್ಯವವಹಾರದ ಮುಖೇನ ನಡೆದಿತ್ತು. ಈ ವಿಚಾರಣೆಯ ವರದಿ ಎಂದೂ ಪ್ರಕಟಗೊಳ್ಳಲಿಲ್ಲ; ಆದರೆ ಜೆಎನ್‌ಯು ಅನ್ನು ಮುಚ್ಚಿಹಾಕಬೇಕು ಎನ್ನುವ ಸಲಹೆ ಆ ವರದಿಯಲ್ಲಿತ್ತಂತೆ. ಒಂದು ಸಂಸ್ಥೆಯಾಗಿ ಜೆಎನ್‌ಯು ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಹೋರಾಡಿದೆ. ಆದರೆ ಕಳೆದ ಕೆಲವು ವರ್ಷಗಳಿಂದ, ಇದರ ಮೇಲಿನ ನಾಳಿ ಸತತವಾಗಿದೆ ಹಾಗೂ ತೀವ್ರವೂ ಆಗಿದೆ. ನಿವೃತ್ತ ಮೇಜರ್ ಜನರಲ್‌ಗಳೂ ಕ್ಯಾಂಪಸ್‌ನಲ್ಲಿ ಬಂದಿಳಿದಿದ್ದಾರೆ. ಬಿಜೆಪಿಯ ತ್ರಿಪುರ ಇನ್‌ಚಾರ್ಜ್ ಸುನಿಲ್ ದೇವಧರ್ ಅವರು ವಿಶ್ವವಿದ್ಯಾಲಯದ ಬೆನ್ನೆಲುಬನ್ನೇ ಮುರಿಯುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು.

ಹಾಸ್ಟೆಲ್ ಶುಲ್ಕದ ಹೆಚ್ಚಳಕ್ಕೆ ವಿದ್ಯಾರ್ಥಿಗಳ ಪ್ರತಿರೋಧವನ್ನು ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಅನುಸರಿಸುವ ಜೆಎನ್‌ಯುನ ಶಾಸನಗಳ ಹಿನ್ನೆಲೆಯಲ್ಲಿ ಮಾತ್ರ ನೋಡಬಾರದು. ಹಾಸ್ಟೆಲ್‌ಗಳೆಂದರೆ ಐತಿಹಾಸಿಕವಾಗಿ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದವರಿಗೆ ಕಲಿಯುವ ಅವಕಾಶ ನೀಡುವ ಕೊಂಡಿ ಮತ್ತು ಆ ಕೊಂಡಿಯ ವಿರುದ್ಧ ಇರುವ ಇತಿಹಾಸದ ಹಿನ್ನೆಲೆಯಲ್ಲಿ ನೋಡಬೇಕಿದೆ. ಯಾವುದೇ ದಲಿತ ಆತ್ಮಚರಿತ್ರೆಯನ್ನು ಓದಿರಿ, ಅಲ್ಲಿ ಅವಕಾಶವನ್ನು ಮರುಸೃಷ್ಟಿಸುವುದರಲ್ಲಿ ಹಾಸ್ಟೆಲ್‌ಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ಉಲ್ಲೇಖವಿದ್ದೇ ಇರುತ್ತದೆ. ಮೈಸೂರು ಪ್ರಾಂತ್ಯದಲ್ಲಿ ಉನ್ನತ ವ್ಯಾಸಂಗ ಮಾಡುವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಾರಾನ್ನ ಎನ್ನುವ ಪದ್ಧತಿಯನ್ನು ರಚಿಸಲಾಗಿತ್ತು- ಅಂದರೆ ಆ ವಿದ್ಯಾರ್ಥಿಗಳಿಗೆ ವಾರದ ಬೇರೆ ಬೇರೆ ದಿನಗಳಲ್ಲಿ ತಮ್ಮ ಸಮುದಾಯದ ಬೇರೆ ಬೇರೆ ಮನೆಗಳಲ್ಲಿ ಇರಲು ಮತ್ತು ಉಣ್ಣಲು ಅವಕಾಶವಿತ್ತು. ಇತರ ಜಾತಿಗಳಿಗೆ ಇಂತಹ ಅವಕಾಶ ಇದ್ದಿರಲಿಲ್ಲ. ಲಿಂಗಾಯತರ ಮತ್ತು ಇತರರ ಮಠಗಳು ಬ್ರಾಹ್ಮಣೇತರರಿಗೆ ಈ ಅವಕಾಶವನ್ನು ಕಲ್ಪಿಸಿದರು ಆದರೆ ಇತರ ಕೆಳಜಾತಿಗಳಿಗೆ ಇಂತಹ ಯಾವುದೇ ಅವಕಾಶಗಳಿರಲಿಲ್ಲ. ಆದರೆ ಮೈಸೂರು ಸರಕಾರ ಹಿಂದೆ ಬೀಳಲಿಲ್ಲ. ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಸೂಚಿಸಿದ ಮಿಲ್ಲರ್ ಸಮಿತಿ ವರದಿಯು ಈ ರೀತಿ ಹೇಳುತ್ತದೆ.

ಇದನ್ನೂ ಓದಿ: ಶುಲ್ಕ ಹೆಚ್ಚಳದ ಆದೇಶ ಮರುಪರಿಶೀಲನೆಗೆ ಒಪ್ಪಿದ ಕೇಂದ್ರ : JNU ವಿದ್ಯಾರ್ಥಿ ಹೋರಾಟಕ್ಕೆ ಮೊದಲ ಗೆಲುವು..

‘ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಆದ್ಯತೆಯ ಮೇರೆಗೆ ಅವಕಾಶ ನೀಡಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ (ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಯವರೆಗೆ) ಸೇರಿಸಲು ಪ್ರೋತ್ಸಾಹಿಸಲು ಪ್ರತಿಯೊಂದು ತಾಲೂಕಿನಲ್ಲೂ ಹಾಸ್ಟೆಲ್ ನಿರ್ಮಿಸುವುದು ಅತ್ಯಗತ್ಯ ಎಂದು ತಿಳಿದಿದ್ದೇವೆ.’

ಎಲ್ಲರನ್ನೂ ಒಳಗೊಳ್ಳುವ ವಿಚಾರದಲ್ಲಿ ಮಾದರಿ ಸಂಸ್ಥೆಯಾಗಿ ಈ ಸಾರ್ವಜನಿಕ ವಿಶ್ವವಿದ್ಯಾಲಯವು ಹೊರಹೊಮ್ಮುತ್ತಿರುವ ಸಮಯದಲ್ಲೇ, ಇವುಗಳನ್ನು ಮುರಿಯಲು ಏಕೆ ಕರೆ ನೀಡಲಾಗುತ್ತಿದೆ ಎನ್ನುವುದರ ಬಗ್ಗೆ ಚಿಂತಿಸಬೇಕಿದೆ. ಕೆಳವರ್ಗದ ಮತ್ತು ಮೇಲ್ವರ್ಗದ ಎರಡಕ್ಕಿಂತ ಹೆಚ್ಚು ತಲೆಮಾರುಗಳು ಸಾರ್ವಜನಿಕ ವಿಶ್ವವಿದ್ಯಾಲಯಗಳ ವ್ಯವಸ್ಥೆಯಿಂದ ಲಾಭ ಪಡೆದ ನಂತರವೇಕೆ ಸರಕಾರ ಮತ್ತು ‘ತೆರಿಗೆ ನೀಡುವವರು’ ಇದನ್ನು ಮುಚ್ಚಿಹಾಕಲು ಹಾತೊರೆಯುತ್ತಿದ್ದಾರೆ? ಇದಕ್ಕೆ ಒಂದು ಕಾರಣ ಇದೂ ಆಗಿರಬಹುದೇ? ಕಳೆದ ಐದು ದಶಕಗಳಲ್ಲಿ ಉಚ್ಚ ವರ್ಗಕ್ಕೆ ಮಾತ್ರ ಅನುಕೂಲಕರವಾದ ರಚನೆಗಳಿಗಿಂತ ಭಿನ್ನವಾದ ಮತ್ತು ಅವರು ಬಯಸದ ಫಲಿತಾಂಶಗಳನ್ನು ನೀಡಿರುವ ಈ ವಿಶ್ವವಿದ್ಯಾಲಯದ ವ್ಯವಸ್ಥೆ ಮುರಿಯುತ್ತಿದೆಯೇ? ಅಥವಾ ಇದಕ್ಕೆ ಕಾರಣ ಕವಿ ‘ಶಿಖಾಮಣಿ’ಯ ‘ಉಕ್ಕಿನ ಪೆನ್ನುಗಳು ಚಿಗುರುತ್ತಿವೆ’ ಕವನದಲ್ಲಿರಬಹುದು.

ಎಂದೂ ಕಲಿಸದ ಪಾಠಕ್ಕಾಗಿ

ನಮ್ಮ ಹೆಬ್ಬೆರಳುಗಳನ್ನು ಕೇಳಿದಿರಿ

ಹೊಸದಾಗಿ ಇತಿಹಾಸವನ್ನು ಬರೆಯಲು

ಉಕ್ಕಿನ ಪೆನ್ನುಗಳು ಚಿಗುರುತ್ತಿವೆ

ಆಗ ನಮ್ಮ ಕಿವಿಗಳಲ್ಲಿ

ಕಾದ ಸೀಸ ಸುರಿದ ಜನರು

ನಮ್ಮ ಕಿವಿಗಳ ಕೂದಲು ಕೀಳಲೆಂದು

ಏಣಿ ಹತ್ತಿ ಬರಬೇಕಾಗುತ್ತದೆ

ಈ ‘ಕಲಿತ ಜನರ ಪುಟ್ಟ ನಗರವು’ ತನ್ನ ಐವತ್ತನೇ ವರ್ಷದ ಅಂತ್ಯದಲ್ಲಿ ಉಕ್ಕಿನ ಪೆನ್ನುಗಳು ಚಿಗುರುವಂತೆ ಮಾಡಲು ಸಣ್ಣ ಪಾತ್ರವನ್ನಾದರೂ ವಹಿಸಿದೆ.

ಎಲ್ಲರನ್ನೂ ಒಳಗೊಳ್ಳುವಂತಹ ಶಿಕ್ಷಣದ ಹಕ್ಕೊತ್ತಾಯಕ್ಕೆ ದೇಶದ ಮೂಲೆಮೂಲೆಯಿಂದ ಬರುತ್ತಿರುವ ಬೆಂಬಲದ ಧ್ವನಿಗಳು ಜೆಎನ್‌ಯುಗೆ ಮಾತ್ರವೇ ಸೀಮಿತವಾಗಿದ್ದ ಈ ವಿಶಿಷ್ಟತೆಯು ಇಂದು ಹೊಸ ರಾಷ್ಟ್ರೀಯ ಚಳವಳಿಯಾಗುತ್ತಿದೆ ಎನಿಸುವಂತೆ ಮಾಡಿವೆ.

(ಜಾನಕಿ ನಾಯರ್ ಅವರು ಜೆಎನ್‌ಯುನ ಇತಿಹಾಸ ಅಧ್ಯಯನ ವಿಭಾಗದ ಪ್ರಾಧ್ಯಾಪಕರು)

  • ಅತಿಥಿ ಬರಹಗಳಲ್ಲಿನ ಅಭಿಪ್ರಾಯಗಳು ಲೇಖಕರವು. ಅವು ನಾನುಗೌರಿ.ಕಾಂ ಸಂಪಾದಕೀಯ ಮಂಡಳಿಯ ಅಭಿಪ್ರಾಯಗಳು ಆಗಿರಬೇಕೆಂದೇನಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...