ಮಹಿಳೆಯರು, ವೃದ್ಧರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಬಗ್ಗೆ ವರದಿಗಳು ಪತ್ರಿಕೆಗಳಲ್ಲಿ ನಿತ್ಯ ಬರುತ್ತಿವೆ. ನಾನು ಇದನ್ನೆಲ್ಲಾ ಸಹಿಸುವುದಿಲ್ಲ. ನನ್ನ ಜನರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಎಚ್ಚರಿಕೆ ನೀಡಿದರು.
ರಾಜ್ಯದ ವಿವಿದೆಡೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಜನರು ಊರು ಬಿಟ್ಟು ಹೋಗುತ್ತಿರುವ ಹಿನ್ನೆಲೆ, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಪರಿಣಾಮಗಳ ಕುರಿತು ಶನಿವಾರ (ಜ.25) ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಸಭೆ ನಡೆಸಿದರು.

“ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ? ಅಂಥಾ ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ? ಎಂದು ನೋಂದಣಿ ಆಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಸಭೆಯಯಲ್ಲಿ ಸಿಎಂ ಖಾರವಾಗಿ ಪ್ರಶ್ನಿಸಿದರು.
ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರಾ? ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು? ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ? ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ? ಮರುಪಾವತಿಯ ಅರ್ಹತೆ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ? ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾರ್ ಕೆವೈಸಿ ಮಾಡಿಸುತ್ತಿಲ್ಲ ಏಕೆ? ಇದನ್ನು ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುವುದು ತಪ್ಪುತ್ತಿತ್ತು ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಸಿಎಂ ತರಾಟೆಗೆ ತೆಗೆದುಕೊಂಡರು.
ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದರು.

ಒಬ್ಬರೇ ಸಾಲಗಾರರು ಬೇರೆ ಬೇರೆ ಗುರಿತಿನ ಚೀಟಿ (ಐಡಿ ಕಾರ್ಡ್‌ಗಳು) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ, ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ ಎಂದು ಕೇಳಿದರು.
ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ? ಎಂದು ಇದೇ ಸಂದರ್ಭದಲ್ಲಿ ಆರ್‌ಬಿಐ ಅಧಿಕಾರಿಗಳಿಗೆ ಸಿಎಂ ಪ್ರಶ್ನಿಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಮೈಕ್ರೋ ಫೈನಾನ್ಸ್ ಕಂಪನಿ ಮುಖ್ಯಸ್ಥರು, ಆರ್‌ಬಿಐ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ. ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎಂದು ಹೇಳಿದರು.
ಇದಕ್ಕೆ ಸಚಿವರಾದ ಕೃಷ್ಣಬೈರೇಗೌಡ, ಹೆಚ್.ಕೆ ಪಾಟೀಲ್ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮಗೆ ಗ್ರೌಂಡ್ ರಿಪೋರ್ಟ್‌ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಾವು ನಿಯಮ ಉಲ್ಲಂಘಿಸುವ ಕಂಪನಿಗಳ ಎಂ.ಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಗುಡುಗಿದರು.

ಮೊದಲ ಹಂತದ ಸಭೆ ಬಳಿಕ ಬ್ಯಾಂಕಿಂಗ್, ಫೈನಾನ್ಸ್, ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳನ್ನು ಸಭೆಯಿಂದ ಹೊರಗಿರಲು ಹೇಳಿದ ಸಿಎಂ, ಕಾನೂನು, ಗೃಹ ಮತ್ತು ಕಂದಾಯ ಇಲಾಖೆಗಳ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಎರಡನೇ ಹಂತದ ಸಭೆ ನಡೆಸಿದರು.
ಬೆಂಗಳೂರು ಅರಮನೆ ಮೈದಾನದ ಭೂಮಿ ಬಳಕೆಗೆ ಸುಗ್ರಿವಾಜ್ಞೆ : ಸಚಿವ ಸಂಪುಟ ತೀರ್ಮಾನ


