ಪ್ರಸ್ತುತ ತಮಿಳುನಾಡಿನಲ್ಲಿ ಆಡಳಿತದಲ್ಲಿರುವ ಡಿಎಂಕೆ ಸೇರಿದಂತೆ ಹಿಂದೆ ಆಡಳಿತ ನಡೆಸಿದ ಎಐಎಡಿಎಂಕೆ ಪ್ರಾದೇಶಿಕ ಪಕ್ಷಗಳನ್ನು ಸಿನಿಮಾ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದವರು ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ. ನಟ ಕಮಲ್ ಹಾಸನ್ ಕೂಡ ‘ಮಕ್ಕಳ್ ನೀದಿ ಮೈಯಂ’ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ಆ ಸಾಲಿಗೆ ಮತ್ತೋರ್ವ ತಮಿಳು ನಟ ವಿಜಯ್ ಸೇರಿಕೊಂಡಿದ್ದು, ತಮಿಳುನಾಡಿನಲ್ಲಿ ತಮ್ಮದೇ ರಾಜಕೀಯ ಪಕ್ಷ ಆರಂಭಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಎನ್‌ಡಿಟಿವಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
‘ವಿಜಯ್ ಅವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ನಾವು ಭಾರತೀಯ ಚುನಾವಣಾ ಆಯೋಗದಲ್ಲಿ ಪಕ್ಷವನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ’ ಎಂದು ನಟನ ತಂಡದ ಪ್ರಮುಖ ಸದಸ್ಯರು ಹೇಳಿದ್ದಾರೆ.
ನೋಂದಣಿಗೆ ಮುನ್ನ ನಡೆದ ಪಕ್ಷದ ಸಾಮಾನ್ಯ ಮಂಡಳಿಯ ಸಭೆಯಲ್ಲಿ ಸುಮಾರು 200 ಸದಸ್ಯರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಖಜಾಂಚಿಯನ್ನೂ ನೇಮಿಸಲಾಗಿದೆ. ಕೇಂದ್ರ ಕಾರ್ಯಕಾರಿ ಸಮಿತಿಯನ್ನು ಸಹ ರಚಿಸಲಾಗಿದೆ. ಪಕ್ಷದ ಹೆಸರು ಮತ್ತು ನೋಂದಣಿಯನ್ನು ನಿರ್ಧರಿಸಲು ಮತ್ತು ಚುನಾವಣಾ ರಾಜಕೀಯಕ್ಕೆ ಧುಮುಕಲು ವಿಜಯ್ ಅವರಿಗೆ ಪರಿಷತ್ತು ಅಧಿಕಾರ ನೀಡಿದೆ ಎನ್ನಲಾಗಿದೆ.
ವಿಜಯ್ ಯಾವಾಗ ರಾಜಕೀಯಕ್ಕೆ ಧುಮುಕುತ್ತಾರೆ ಎಂಬುದರ ಕುರಿತು ನಿಖರವಾಗಿ ತಿಳಿದಿಲ್ಲವಾದರೂ, ತಮಿಳುನಾಡಿನಲ್ಲಿ 2026ರ ರಾಜ್ಯ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅವರು ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂದು ತಿಳಿದುಬಂದಿದೆ. ತಮಿಳುನಾಡಿನ ರಾಜಕೀಯ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಪಕ್ಷವೂ ಖಂಡಿತವಾಗಿಯೂ ‘ಕಳಗಂ’ ಅನ್ನು ಹೊಂದಿರುತ್ತದೆ ಎಂದು ವಿಜಯ್ ಆಪ್ತರು ಹೇಳಿದ್ದಾರೆ.
ತಮಿಳು ಚಿತ್ರರಂಗದ ಮುಂದಿನ ರಜನಿಕಾಂತ್ ಎಂದು ಹೇಳುವ ವಿಜಯ್ ಅವರು ಈವರೆಗೆ 68 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕಳೆದ ಒಂದು ದಶಕದಿಂದ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಪೋಷಿಸುತ್ತಿದ್ದಾರೆ ಎನ್ನಲಾಗಿದೆ. ಉಚಿತ ಆಹಾರ ಕಿಟ್ ವಿತರಣೆ, ಶೈಕ್ಷಣಿಕ ವಿದ್ಯಾರ್ಥಿವೇತನಗಳು, ಗ್ರಂಥಾಲಯಗಳು, ಸಂಜೆಯ ಟ್ಯೂಷನ್ ಮತ್ತು ಕಾನೂನು ಸಹಾಯ ಸೇರಿದಂತೆ ಹಲವಾರು ಚಾರಿಟಿ, ಕಲ್ಯಾಣ ಕ್ರಮಗಳಲ್ಲಿ ಅವರು ತಮ್ಮ ಅಭಿಮಾನಿ ಸಂಘಗಳನ್ನು ತೊಡಗಿಸಿದ್ದಾರೆ.
ಇತ್ತೀಚೆಗೆ ಅವರು ಪಬ್ಲಿಕ್ ಪರೀಕ್ಷೆಗಳಲ್ಲಿ ಟಾಪರ್ ಆದ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಕ್ಷೇತ್ರವಾರು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆಗ ಅವರು ವಿದ್ಯಾರ್ಥಿಗಳಿಗೆ “ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂತಹ ನಾಯಕರ ಬಗ್ಗೆ ಓದಿ, ಒಳ್ಳೆಯದನ್ನು ತೆಗೆದುಕೊಳ್ಳಿ ಮತ್ತು ಉಳಿದದ್ದನ್ನು ಬಿಡಿ” ಎಂದು ಸಲಹೆ ನೀಡಿದ್ದರು.
ವಿಜಯ್ ಅವರ ತಂದೆ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಚಂದ್ರಶೇಖರ್. ವಿಜಯ್ ಅವರ ಚಲನಚಿತ್ರಗಳು ಸಾಮಾನ್ಯವಾಗಿ ಸೂಕ್ಷ್ಮ ಮತ್ತು ಪ್ರಮುಖ ಸಾರ್ವಜನಿಕ ಹಿತಾಸಕ್ತಿ ವಿಷಯಗಳನ್ನು ಒಳಗೊಂಡಿರುತ್ತವೆ. ಅವರು ರಾಜ್ಯದಲ್ಲಿ ಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ; ಇಂಡಿಯಾ ಬಣಕ್ಕೆ ಆರಂಭಿಕ ಆಘಾತ; ಚಂಡೀಗಢ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು


